ಸೋಮವಾರ, ಏಪ್ರಿಲ್ 12, 2021
31 °C

ದ್ವೇಷದ ಕಿಚ್ಚು ನಿಯಂತ್ರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕದ ಗುರುದ್ವಾರದಲ್ಲಿ ಪ್ರಾರ್ಥನೆಗೆ ಸೇರಿದ್ದ ಸಿಖ್ ಧರ್ಮೀಯರ ಮೇಲೆ ನಡೆದ ಗುಂಡಿನ ದಾಳಿ ಒಂದು ಪೈಶಾಚಿಕ ಕೃತ್ಯ. ತಿಂಗಳ ಹಿಂದೆಯಷ್ಟೇ ಆ ದೇಶದ ಚಲನಚಿತ್ರಮಂದಿರದಲ್ಲಿ ದುಷ್ಕರ್ಮಿಗಳು ನಡೆಸಿದ್ದ ಗುಂಡಿನ ದಾಳಿಗೆ ಹನ್ನೆರಡು ಅಮಾಯಕರು ಬಲಿಯಾಗಿದ್ದರು. ಅದರ ನೆನಪು ಮಾಸುವ ಮೊದಲೇ ಇನ್ನೊಂದು ಭೀಕರ ಕೃತ್ಯ ನಡೆದಿದೆ.

 

ಇದೊಂದು ಸಾಮಾನ್ಯ ಅಪರಾಧ ಅಲ್ಲ, ಒಂದು ಜನಾಂಗವನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಹೇಯ ಅಪರಾಧ. ಇದರಲ್ಲಿ ಏಳು ಮಂದಿ ಮೃತಪಟ್ಟು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

 

ಈ ಘಟನೆಯಿಂದಾಗಿ ಅಮೆರಿಕದಲ್ಲಿರುವ ಭಾರತೀಯ ಮೂಲದ ಸುಮಾರು ಮೂರೂವರೆ ಲಕ್ಷ ಸಿಖ್ಖರು ದಿಗ್ಭ್ರಮೆಗೀಡಾಗಿದ್ದಾರೆ. ಸಾವು-ನೋವಿನ ದು:ಖಕ್ಕಿಂತಲೂ ಹೆಚ್ಚಾಗಿ ರಕ್ಷಣೆ ಇಲ್ಲದ ಅಸುರಕ್ಷತಾ ಭಾವನೆ ಅವರನ್ನು ಹೆಚ್ಚು ಘಾಸಿಗೊಳಿಸಿದಂತಿದೆ.ಕಳೆದ ಒಂದು ವರ್ಷದ ಅವಧಿಯಲ್ಲಿ ಈ ರೀತಿಯ ಘರ್ಷಣೆ-ಹಲ್ಲೆ ಪ್ರಕರಣಗಳು ಅಮೆರಿಕದ ಬೇರೆಬೇರೆ ನಗರಗಳಲ್ಲಿ ನಡೆದಿವೆ. 2001ರ ಸೆಪ್ಟೆಂಬರ್ 11ರಂದು ಅಮೆರಿಕದಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ಅಲ್ಲಿನ ಸಮಾಜದ ಧೋರಣೆ ಮತ್ತು ಸರ್ಕಾರದ ನೀತಿ-ನಿರ್ಧಾರಗಳು ಬದಲಾವಣೆಗೊಳಗಾಗಿವೆ.ಇದ್ದಕ್ಕಿದ್ದ ಹಾಗೆ ಮುಸ್ಲಿಂ ಸಮುದಾಯದ ಮೇಲೆ ದ್ವೇಷಬೆಳೆಸಿಕೊಂಡ ಅಮೆರಿಕದ ಜನ ಪಗಡಿ (ಮುಂಡಾಸು) ಮತ್ತು ಗಡ್ಡ ಹೊಂದಿರುವ ಸಿಖ್ಖರನ್ನು ಕೂಡಾ ಮುಸ್ಲಿಮರೆಂದು ತಪ್ಪಾಗಿ ತಿಳಿದು ಅಲ್ಲಲ್ಲಿ ದೌರ್ಜನ್ಯ ನಡೆಸಿದ್ದುಂಟು. ಇದನ್ನು  ಸಿಖ್ ಸಮುದಾಯದ ನಾಯಕರು ಸರ್ಕಾರದ ಗಮನಕ್ಕೂ ತಂದಿದ್ದರು. ಅಮೆರಿಕದ ಸರ್ಕಾರ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಈ ಅನಾಹುತವನ್ನು ತಪ್ಪಿಸಬಹುದಿತ್ತು.ಸಾಹಸ ಪ್ರವೃತ್ತಿ ಮತ್ತು ಉದ್ಯಮಶೀಲತೆಗೆ ಹೆಸರಾದವರು ಸಿಖ್ಖರು. ಭಾರತದಿಂದ ವಲಸೆಹೋಗಿ ವಿದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವವರೆಂದರೆ ಸಿಖ್ಖರು.ಬ್ರಿಟನ್, ಅಸ್ಟ್ರೇಲಿಯಾ, ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ ನೆಲೆ ಊರಿರುವ ಸಿಖ್ಖರು ಕಠಿಣಶ್ರಮದ ಮೂಲಕ ತಮ್ಮ ಬದುಕು ಕಟ್ಟಿಕೊಂಡವರು. ವಿಶಿಷ್ಟವಾದ ವೇಷಭೂಷಣ ಮತ್ತು ಆಚರಣೆಗಳ ಕಾರಣಕ್ಕಾಗಿ ಹಲವಾರು ಬಾರಿ ಸ್ಥಳೀಯರ ವಿರೋಧವನ್ನು ಎದುರಿಸಿದ್ದಾರೆ.ಪಗಡಿ ಧರಿಸಿಬಾರದೆಂಬ ನಿರ್ಬಂಧವನ್ನು ಪ್ರತಿಭಟಿಸಿ ಕೆನಡಾದಲ್ಲಿ ಸಿಖ್ಖರು ಬೀದಿಗಿಳಿದಿದ್ದರು. ಸಿಖ್ಖರು ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಬ್ರಿಟನ್‌ನಲ್ಲಿ ಆಗಾಗ ಘರ್ಷಣೆಗಳು ನಡೆಯುವುದುಂಟು.ಅದೇ ರೀತಿ ವಿಶ್ವದ ಅತ್ಯಂತ ಬಲಾಢ್ಯ ರಾಷ್ಟ್ರ ಎಂದು ತನ್ನನ್ನು ಬಿಂಬಿಸಿಕೊಳ್ಳುತ್ತಿರುವ ಅಮೆರಿಕದಲ್ಲಿಯೂ ಜನಾಂಗೀಯ ದ್ವೇಷದ ಘಟನೆಗಳು ನಡೆಯುತ್ತಿರುವುದು ಆ ದೇಶಕ್ಕೆ ಶೋಭೆ ತರುವಂತಹದ್ದಲ್ಲ.ಭಾರತ ಈ ದುಷ್ಕೃತ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಭಾನುವಾರದ ಘಟನೆಯಿಂದ ಭಯಭೀತರಾಗಿರುವ ಸಿಖ್ ಸಮುದಾಯದಲ್ಲಿ ಧೈರ್ಯ  ಮೂಡಬೇಕಾದರೆ ಅಲ್ಲಿನ ಸರ್ಕಾರ ತಮ್ಮ ಜತೆಗೆ ಇದೆ  ಎಂಬ ವಿಶ್ವಾಸ ಅವರಲ್ಲಿ ಹುಟ್ಟಬೇಕು.ಭಾರತ ಸರ್ಕಾರ ಬಾಯುಪಚಾರದ ಅನುಕಂಪದ ಪ್ರತಿಕ್ರಿಯೆಯನ್ನಷ್ಟೇ ನೀಡಿ ಸುಮ್ಮನಾಗದೆ ಅಮೆರಿಕದ ಮೇಲೆ ರಾಜತಾಂತ್ರಿಕ ಒತ್ತಡ ಹೇರಿ ಸಿಖ್ಖರೂ ಸೇರಿದಂತೆ ಆ ದೇಶದಲ್ಲಿರುವ ಭಾರತೀಯರಿಗೆ ಸೂಕ್ತ ರಕ್ಷಣೆ ಸಿಗುವಂತೆ ಮಾಡಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.