ಧನಂಜಯಗೆ ಬಿಜೆಪಿ ನೋಟಿಸ್

7

ಧನಂಜಯಗೆ ಬಿಜೆಪಿ ನೋಟಿಸ್

Published:
Updated:

ಬೆಂಗಳೂರು: ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸರ್ಕಾರ ಹಾಗೂ ಪಕ್ಷದ ವಿರುದ್ಧ ಹಗುರವಾಗಿ ಮಾತನಾಡಿದ ಆರೋಪದ ಮೇಲೆ ಬಿಜೆಪಿ ಮುಖಂಡ ವಿ. ಧನಂಜಯ ಕುಮಾರ್ ಅವರಿಗೆ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಘುನಾಥರಾವ್ ಮಲ್ಕಾಪುರೆ ಅವರು ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

 

ಸಿ.ಎಂ ವಿರುದ್ಧ ವಾಗ್ದಾಳಿ
ಬೆಂಗಳೂರು: `ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹಾಗೂ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕಾವೇರಿ ನದಿ ನೀರಿನ ವಿಚಾರದಲ್ಲಿ ಕೈದಿಗಳಂತೆ ವರ್ತಿಸುತ್ತಿದ್ದಾರೆ~ ಎಂದು ಬಿಜೆಪಿ ಮುಖಂಡ ವಿ.ಧನಂಜಯ ಕುಮಾರ್ ಆರೋಪಿಸಿದರು.ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.`ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ವಿರೋಧಿಸದೆ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಬಿಗಿ ಭದ್ರತೆಯಲ್ಲಿ ತಮ್ಮ ಮನೆಗಳಲ್ಲಿ ಕುಳಿತು ಕೈದಿಗಳಂತಾಗಿದ್ದಾರೆ. ಜನತೆಯ ಬಗ್ಗೆ ಕಾಳಜಿ ಇಲ್ಲದ ಶೆಟ್ಟರ್, ರಾಜ್ಯಕ್ಕೆ ಆಗಿರುವ ಅನ್ಯಾಯ ಮರೆತಿದ್ದಾರೆ.ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕು~ ಎಂದು ಆಗ್ರಹಿಸಿದರು.`ಬಿಗಿ ಭದ್ರತೆಯಲ್ಲಿ ರಾಜಭವನದೊಳಗಿರುವ ರಾಜ್ಯಪಾಲರು, ತಮಿಳುನಾಡಿಗೆ ಕಾವೇರಿ ನೀರು ಬಿಡುವ ಕೇಂದ್ರದ ನಡೆಗೆ ಒಳಗೊಳಗೇ ಬೆಂಬಲ ನೀಡುತ್ತಿದ್ದಾರೆ~ ಎಂದು ಅವರು ಆರೋಪಿಸಿದರು.`ರಾಜ್ಯದ ಸಂಸದರು ಹಾಗೂ ಶಾಸಕರು ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಯ ಹಿತ ಕಾಯುವುದು ಅಧಿಕಾರ ಉಳಿಸಿಕೊಳ್ಳುವುದಕ್ಕಿಂತಲೂ ಮುಖ್ಯವಾದುದು~ ಎಂದು ಹೇಳಿದರು.`ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆದ್ದರಿಂದ ಶೆಟ್ಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು~ ಎಂದು ಬಿ.ಎಸ್. ಯಡಿಯೂರಪ್ಪ ಅವರ ಆಪ್ತರೂ ಆದ ಧನಂಜಯ ಕುಮಾರ್ ಶನಿವಾರ ಬೆಳಿಗ್ಗೆ ಒತ್ತಾಯಿಸಿದ್ದರು. ಇದರ ಬೆನ್ನಿಗೇ ಅವರಿಗೆ ನೋಟಿಸ್ ಜಾರಿ ಮಾಡಿ ಏಳು ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.`ಪಕ್ಷದ ನಾಯಕರು, ಸರ್ಕಾರ ಹಾಗೂ ಶೆಟ್ಟರ್ ವಿರುದ್ಧ ಕೆಲವು ದಿನಗಳಿಂದ ದೃಶ್ಯ ಮಾಧ್ಯಮಗಳಲ್ಲಿ ಅತ್ಯಂತ ಹಗುರವಾಗಿ, ಹೀನಾಯವಾಗಿ ಮಾತನಾಡಿರುವುದು ಪಕ್ಷದ ಶಿಸ್ತಿನ ಸ್ಪಷ್ಟ ಉಲ್ಲಂಘನೆ~ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.`ನಿಮ್ಮ ವರ್ತನೆ ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ನೋಟಿಸ್ ತಲುಪಿದ ಏಳು ದಿನಗಳ ಒಳಗೆ ವಿವರಣೆ ನೀಡಬೇಕು. ಇಲ್ಲದಿದ್ದರೆ ಪಕ್ಷವು ನಿಮ್ಮ ವಿರುದ್ಧ ಏಕಪಕ್ಷೀಯವಾಗಿ ಕ್ರಮ ಜರುಗಿಸಲಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ನಿರ್ದೇಶನದಂತೆ ನೋಟಿಸ್ ನೀಡಲಾಗಿದೆ~ ಎಂದು ಮಲ್ಕಾಪುರೆ ತಿಳಿಸಿದ್ದಾರೆ.ಸಿಗದ ಅವಕಾಶ: `ನನ್ನ ಅಭಿಪ್ರಾಯ ತಿಳಿಸಲು ಪಕ್ಷದ ವೇದಿಕೆಗಳಲ್ಲಿ ಅವಕಾಶ ಸಿಗುತ್ತಿಲ್ಲ. ಪಕ್ಷದ ರಾಜ್ಯ ಘಟಕ, ರಾಷ್ಟ್ರೀಯ ಘಟಕದಲ್ಲಿ ಯಾವುದೇ ಸ್ಥಾನಮಾನ ಹೊಂದಿಲ್ಲದ ಕಾರಣ ಅಲ್ಲಿಯೂ ಹೇಳಿಕೊಳ್ಳುವಂತಿಲ್ಲ. ಹೀಗಾಗಿ ಮಾಧ್ಯಮಗಳ ಮೂಲಕ ನನ್ನ ಅನಿಸಿಕೆ ವ್ಯಕ್ತಪಡಿಸಿದ್ದೇನೆ~ ಎಂದು ಧನಂಜಯ ಕುಮಾರ್ ಪ್ರತಿಕ್ರಿಯಿಸಿದರು.`ಪಕ್ಷ ವಿಭಜನೆ ತಪ್ಪಿಸಬೇಕಾದರೆ, ನಾಯಕರಾದವರು ತಪ್ಪುಗಳನ್ನು ತಿದ್ದಿಕೊಳ್ಳುವ ಹೃದಯ ವೈಶಾಲ್ಯ ತೋರಿಸಬೇಕು. 40 ವರ್ಷಗಳಿಂದ ಪಕ್ಷವನ್ನು ಕಟ್ಟಿಬೆಳೆಸಿದ್ದೇನೆ. ನನ್ನಂಥವರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ನೋಟಿಸ್ ತಲುಪಿದ ನಂತರ ಉತ್ತರ ನೀಡುತ್ತೇನೆ~ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry