ಸೋಮವಾರ, ಆಗಸ್ಟ್ 26, 2019
20 °C

ಧನಂಜಯ ದೇಹ ಧರ್ಮ

Published:
Updated:

`ಎಲ್ಲರೂ ತೆಳ್ಳಗಾಗಬೇಕೆಂದು ಜಿಮ್ ಮೊರೆಹೊಕ್ಕರೆ, ನಾನು ದಪ್ಪಗಾಗುವ ಸಲುವಾಗಿ ಜಿಮ್‌ನಲ್ಲಿ ಕಸರತ್ತು ನಡೆಸಬೇಕಾಗುತ್ತದೆ' ಎನ್ನುತ್ತಾರೆ ನಟ ಧನಂಜಯ್. `ಡೈರೆಕ್ಟರ್ಸ್‌ ಸ್ಪೆಷಲ್' ಚಿತ್ರದ ಮೂಲಕ ಮನೆಮಾತಾದ ನಟ ಧನಂಜಯ್ ಫಿಟ್‌ನೆಸ್ ಸಿದ್ಧಾಂತ ತುಸು ವಿಭಿನ್ನ. ತೆಳ್ಳನೆಯ ದೇಹ ಪ್ರಕೃತಿದತ್ತವಾಗಿ ಅವರಿಗೆ ಬಂದ ವರದಾನವಂತೆ. ಸಿನಿಮಾ ಪಾತ್ರಗಳಿಗೆ ದೇಹವನ್ನು ಒಗ್ಗಿಸಿಕೊಳ್ಳುವುದು ಸಾಹಸ ಕಲಾವಿದರಿಗೆ ಅನಿವಾರ್ಯ. ಆರೋಗ್ಯ ಮತ್ತು ಫಿಟ್‌ನೆಸ್ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಧನಂಜಯ್ ಕಟ್ಟುನಿಟ್ಟು. ಹಾಗಂತ ಇಂಥದ್ದೇ ಆಹಾರವನ್ನು ಇಷ್ಟೇ ಸೇವಿಸಬೇಕು ಎನ್ನುವ ನಿಯಮವನ್ನು ಅವರು ಅಳವಡಿಸಿಕೊಂಡಿಲ್ಲ.ಏನನ್ನೂ ತಿನ್ನದೆ ಇದ್ದರೆ ತೆಳ್ಳಗಾಗುತ್ತೇವೆ ಎಂಬ ಭ್ರಮೆ ಜನರಲ್ಲಿದೆ. ಡಯೆಟ್ ಎಂದರೆ ಏನನ್ನು ಎಷ್ಟು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ತಿಳಿವಳಿಕೆ. ಬೆಳಗಿನ ತಿಂಡಿ ನಮಗೆ ಬಹು ಮುಖ್ಯ. ಹಳ್ಳಿ ಮತ್ತು ನಗರ ಪ್ರದೇಶಗಳ ತಿನಿಸುಗಳ ಗುಣಮಟ್ಟದಲ್ಲಿ ವ್ಯತ್ಯಾಸವಿರುತ್ತದೆ. ಪ್ರೊಟೀನ್ ಅಂಶ ನಗರ ಪ್ರದೇಶಗಳ ತಿನಿಸುಗಳಲ್ಲಿ ಕಡಿಮೆ ಎನ್ನುವ ಧನಂಜಯ್, ಬೆಳಿಗ್ಗೆ ಎಂಟು ಗಂಟೆಗೆ ತಿಂಡಿ ಜೊತೆಗೆ ಕನಿಷ್ಠ ನಾಲ್ಕು ಮೊಟ್ಟೆ ತಿಂದು, ಹಾಲು ಸೇವಿಸುತ್ತಾರಂತೆ. ಮಧ್ಯಾಹ್ನ, ರಾತ್ರಿ ಚಪಾತಿ ಅಥವಾ ಮುದ್ದೆಯೂಟ. ಎರಡೂ ಹೊತ್ತು ಊಟದ ಬಳಿಕ ಒಂದು ಲೋಟ ಮಜ್ಜಿಗೆ ಕುಡಿಯುತ್ತಾರಂತೆ. ಒಂದೇ ಬಾರಿ ಹೊಟ್ಟೆ ತುಂಬಾ ಸೇವಿಸದೆ, ಹಸಿವಾದಾಗ ಸ್ವಲ್ಪ ಸ್ವಲ್ಪ ತಿನ್ನುವುದಿದೆ. ಡ್ರೈಫ್ರೂಟ್ಸ್, ಜೋಳ ಮತ್ತು ಆಗಾಗ ಪಾನಿಪುರಿ ತಿನ್ನುವ ಬಯಕೆಯನ್ನು ಹತ್ತಿಕ್ಕಿಕೊಳ್ಳುವುದು ಅವರಿಗೆ ಕಷ್ಟ. ಜಂಕ್‌ಫುಡ್‌ಗಳಿಂದ ಸದಾ ದೂರ.ಬೆಳಿಗ್ಗೆ ಅಥವಾ ಸಂಜೆ ದಿನದ ಒಂದು ಗಂಟೆ ದೇಹದಂಡನೆಗೆ ಮೀಸಲು. ಸ್ಟಂಟ್ ತರಬೇತಿಗಾಗಿ ವಾರದಲ್ಲಿ ಮೂರು ದಿನ ಜಿಮ್ನಾಸ್ಟಿಕ್ ಕಲಿಕೆ. ತೆಳ್ಳನೆಯ ದೇಹ ಅವರಿಗೆ ವಂಶವಾಹಿನಿಯಲ್ಲಿಯೇ ಬಂದಿದೆಯಂತೆ. ದಪ್ಪಗಾಗಬೇಕೆಂದರೆ ಅವರು ಜಿಮ್‌ನಲ್ಲಿ ಬೆವರು ಸುರಿಸುತ್ತಾರೆ. `ಡೈರೆಕ್ಟರ್ಸ್‌ ಸ್ಪೆಷಲ್' ಚಿತ್ರಕ್ಕಾಗಿ ಕಸರತ್ತು ನಡೆಸಿ ಐದು ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದ ಅವರು, `ರಾಟೆ' ಚಿತ್ರಕ್ಕಾಗಿ ಕಸರತ್ತಿಗೆ ವಿರಾಮ ನೀಡಿ ತೆಳ್ಳಗಾಗಿದ್ದಾರೆ. ವರ್ಕ್‌ಔಟ್ ಮಾಡುವಾಗ ಹೆಚ್ಚಿನವರು ಪ್ರೊಟೀನ್ ಪೌಡರ್ ಸೇವಿಸುತ್ತಾರೆ. ಆದರೆ ತಮಗೆ ಅದರಲ್ಲಿ ನಂಬಿಕೆಯಿಲ್ಲ ಎನ್ನುತ್ತಾರೆ ಧನಂಜಯ್. ನಾನ್‌ವೆಜ್ ಸೇವನೆ ಮಾಡಿದರೂ ಕರಿದ ಪದಾರ್ಥಗಳನ್ನು ಅವರು ಮುಟ್ಟುವುದಿಲ್ಲ. ಸುಟ್ಟ ತಂದೂರಿಯಲ್ಲಿ ಒಳ್ಳೆಯ ಪ್ರೊಟೀನ್ ಸಿಗುತ್ತದೆ, ಅದೇ ಸಾಕು ಎನ್ನುತ್ತಾರೆ. ದಿನಕ್ಕೆ ಎರಡು ಮೂರು ಬಾರಿ ಫ್ರೂಟ್ ಜ್ಯೂಸ್ ಸೇವನೆ ಕಡ್ಡಾಯ.ಸಿಕ್ಸ್‌ಪ್ಯಾಕ್ ತತ್ವವನ್ನು ಅವರು ನೆಚ್ಚಿಕೊಂಡಿಲ್ಲ. ದೇಹವನ್ನು ಸಾಣೆಗೊಡ್ಡಿ ಸಲ್ಮಾನ್ ಖಾನ್ ತರಹ ದೇಹ ಬೆಳೆಸಿದರೆ ಪ್ರಯೋಜನವಾಗಲಾರದು. ಪಾತ್ರ ಬಯಸುವಂತೆ ದೇಹವನ್ನು ಹೊಂದಿಸಿಕೊಳ್ಳಬೇಕಷ್ಟೆ. ನಾಯಕನಟನಿಗೆ ಅಗತ್ಯವಿರುವ ದೇಹದಾರ್ಢ್ಯ ಉಳಿಸಿಕೊಳ್ಳುವಷ್ಟು ಮಾತ್ರ ವರ್ಕ್‌ಔಟ್ ಮಾಡಿದರೆ ಸಾಕು ಎಂಬ ನೀತಿಗೆ ಅವರು ಬದ್ಧ. ಒಂದು ದಿನ ಆಬ್ಸ್, ಮತ್ತೊಂದು ದಿನ ಶೋಲ್ಡರ್, ಮತ್ತೊಂದು ದಿನ ಚೆಸ್ಟ್ ಹೀಗೆ ದಿನವೂ ಪ್ರತ್ಯೇಕ ಅಂಗಗಳಿಗೆ ಅವರು ಕಸರತ್ತು ನಡೆಸುತ್ತಾರಂತೆ. ಚಿತ್ರೀಕರಣದಿಂದ ವ್ಯಾಯಾಮಕ್ಕೆ ಅಡ್ಡಿಯಾದಾಗ ಬಿಡುವಿನ ದಿನ ತುಸು ಹೆಚ್ಚು ಬೆವರು ಹರಿಸುತ್ತಾರಂತೆ. ಗೆಳೆಯರ ಜೊತೆ ವಾರಾಂತ್ಯದಲ್ಲಿ ಕ್ರಿಕೆಟ್, ವಾಲಿಬಾಲ್ ಆಡುವುದಿದೆ.ಎಷ್ಟೇ ಆಹಾರ ಸೇವಿಸಲಿ ಅದಕ್ಕೆ ಪೂರಕವಾದ ಮತ್ತು ಅತಿಯಾಗದ ಕಸರತ್ತು ದೇಹಕ್ಕೆ ಒಳಿತು ಎನ್ನುವ ಮಂತ್ರ ಅವರದು. `ಡೈರೆಕ್ಟರ್ಸ್‌ ಸ್ಪೆಷಲ್'ನಲ್ಲಿ ಗುರುತಿಸಿಕೊಂಡ ಈ ಗಡ್ಡಧಾರಿ ತರುಣ ಈಗ ಎ.ಪಿ. ಅರ್ಜುನ್ ನಿರ್ದೇಶನದ `ರಾಟೆ' ಚಿತ್ರದಲ್ಲಿ ಬಿಜಿ. ಆಗಸ್ಟ್ ತಿಂಗಳಿನಲ್ಲಿಯೇ ಓಂ ಪ್ರಕಾಶ್‌ರಾವ್ ನಿರ್ದೇಶನದದಲ್ಲಿ ಅವರು ನಟಿಸಲಿರುವ `ಹುಚ್ಚ' ಚಿತ್ರ ಶುರುವಾಗಲಿದೆ.`ಜಯನಗರ ಫೋರ್ತ್ ಬ್ಲಾಕ್'

ಬಿಡುವಿನ ಅವಧಿಯಲ್ಲಿ ಧನಂಜಯ್ ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಒಬ್ಬರೇ ಕುಳಿತು ಅಲ್ಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಹೂ ಮಾರುವ ಮಹಿಳೆಯರು, ಕೆಲಸದ ತರಾತುರಿಯಲ್ಲಿ ಓಡಾಡುವವರು, ಹೀಗೆ ಜನರ ಬದುಕು ಅವರಲ್ಲಿನ ಸೃಜನಶೀಲನನ್ನು ಎಚ್ಚರಗೊಳಿಸಿದೆ. ಸಂಜೆ ಹೊತ್ತು ಅಲ್ಲಿನ ಸಾಲು ಬೆಂಚುಗಳಲ್ಲಿ ಕುಳಿತುಕೊಳ್ಳುವ ನಿವೃತ್ತ ವೃದ್ಧರ ಬಳಿ ಹರಟುವ ಧನಂಜಯ್, ಇಳಿ ಸಂಜೆಯಲಿ ಹಿರಿಯರ ನಡುವೆ ವಿಶಿಷ್ಟ ಜಗತ್ತನ್ನು ಕಂಡಿದ್ದಾರೆ. ಅದು ಅವರಲ್ಲಿ ಕತೆಯ ರೂಪ ಪಡೆದುಕೊಂಡರೆ, ಕಿರುಚಿತ್ರವನ್ನಾಗಿಸುವ ಸಾಹಸಕ್ಕೆ ಮುಂದಾದವರು ಟಿ.ಎಸ್. ನಾಗಾಭರಣ ಅವರಿಗೆ ಸಹಾಯಕರಾಗಿದ್ದ ಸತ್ಯಪ್ರಕಾಶ್. ಇಪ್ಪತ್ತೈದು ನಿಮಿಷದ ಈ ಕಿರುಚಿತ್ರದ ಹೆಸರು `ಜಯನಗರ ಫೋರ್ತ್ ಬ್ಲಾಕ್'. ಶೀಘ್ರವೇ ಅದನ್ನು ಜನರ ಮುಂದಿಡುವ ಇರಾದೆ ಧನಂಜಯ್ ಅವರದ್ದು.

 

Post Comments (+)