ಗುರುವಾರ , ಮೇ 13, 2021
16 °C

ಧಮ್ಮಗಿರಿ ಬುದ್ಧವಿಹಾರಕ್ಕೆ 30ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಪಟ್ಟಣದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಧಮ್ಮಗಿರಿಯ ಬುದ್ಧವಿಹಾರ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಅವಶ್ಯಕವಾದ 30ಲಕ್ಷಕ್ಕೂ ಅಧಿಕ ಹಣವನ್ನು ಬಿಡುಗಡೆಗೊಳಿಸಲಾಗುವುದೆಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ( ರಾಜೂಗೌಡ) ಭರವಸೆ ನೀಡಿದರು.ಪಟ್ಟಣದ ಸಿಪಿಎಸ್ ಶಾಲಾ ಮೈದಾನದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರರ 121ನೇ ಜಯಂತ್ಯುತ್ಸವ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಅನಾವಶ್ಯಕವಾಗಿ ಹಣ ಪೋಲು ಮಾಡುವುದು ಬೇಡ. ಹಿಂದುಳಿದ ಸಮುದಾಯದವರು ದುಶ್ಚಟಕ್ಕೆ ಬಲಿಯಾಗಿ ನೆಮ್ಮದಿ ಬದುಕಿಗೆ ಸಂಚಕಾರ ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡಬಾರದು. ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು.ದಲಿತ ಹಾಗೂ ಹಿಂದುಳಿದ ಸಮುದಾಯ ಶಿಕ್ಷಣದತ್ತ ಎಲ್ಲರು ದಾಪುಗಾಲು ಹಾಕಬೇಕು. ಸಮಾಜದಲ್ಲಿ ಶಿಕ್ಷಣ ಕ್ರಾಂತಿಯಿಂದ ಬಹುದೊಡ್ಡ ಬದಲಾವಣೆಯಾಗುವುದು. ದಲಿತ ಸಮುದಾಯದಲ್ಲಿ ಮುಂದುವರೆದ ಜನತೆಯೂ ಆರ್ಥಿಕವಾಗಿ ತೀರಾ ಹಿಂದುಳಿದ ಸಹೋದರರಿಗೆ ಸಹಾಯ ಮಾಡುವ ಪರಿಯನ್ನು ಬೆಳೆಸಿಕೊಳ್ಳಬೇಕೆಂದು ಶಾಸಕ ಶರಣಬಸಪ್ಪ ದರ್ಶನಾಪೂರ ಅಭಿಪ್ರಾಯಪಟ್ಟರು.ಸಂವಿಧಾನ ಶಿಲ್ಪಿಯ ಆದರ್ಶ ತತ್ವಗಳು ಇಂದು ಹೆಚ್ಚು ಪ್ರಸ್ತುತವಾಗಿದ್ದು ಹಿರಿಯರು ತುಳಿದ ಹೆಜ್ಜೆಯಲ್ಲಿ ನಾವು ಸಾಗಬೇಕು. ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಬದುಕಿಗಾಗಿ ಸಾಂಘಿಕ ಹೋರಾಟ ಅತ್ಯಗತ್ಯವಾಗಿದೆ ಎಂದು ಬಿಜೆಪಿಯ ಯುವ ಮುಖಂಡ ಗುರು ಪಾಟೀಲ್ ಸಿರವಾಳ ಹೇಳಿದರು.ಸಭೆಯ ಅಧ್ಯಕ್ಷತೆಯನ್ನು ಜಯಂತ್ಯುತ್ಸವ ಸಮಿತಿ ಅಧ್ಯಕ್ಷರಾದ ಚಂದಪ್ಪ ಸೀತಿನಿ ವಹಿಸಿದ್ದರು. ಕೊಳ್ಳೆಗಾಲದ ಚೇತವನದ ಪೂಜ್ಯ ಭಂತೆ ಮನೋರಖ್ಖಿತ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವರಾಜೇಶ್ವರಿ,ಡಾ.ಚಂದ್ರಶೇಖರ ಸುಬೇದಾರ, ದಲಿತ ಹಿರಿಯ ಮುಖಂಡರಾದ ವೈ.ಪಿ.ಚಿಪ್ಪಾರ, ಮಲ್ಲಿಕಾರ್ಜುನ ಪೂಜಾರಿ, ಮೋನಪ್ಪ ಹೊಸ್ಮನಿ, ನೀಲಕಂಠ ಬಡಿಗೇರ, ನಾಗಣ್ಣಬಡಿಗೇರ, ದೇವಿಂದ್ರ ಶರ್ಮಾ, ಶ್ರೀಶೈಲ್ ಹೊಸ್ಮನಿ, ಮಾರುತಿ ಜಂಬಗಾ, ಹೊನ್ನಪ್ಪ ಗಂಗನಾಳ, ಬಾಬುರಾವ ಭೂತಾಳೆ, ಅಮರೇಶ ವಿಭೂತಿಹಳ್ಳಿ,ಗ್ಯಾನಪ್ಪ ಅಣಬಿ, ಟಿ.ಶಶಿಧರ, ಗೌಡಪ್ಪಗೌಡ ಉಮರದೊಡ್ಡಿ, ಲಕ್ಷ್ಮಣ ಮನಗನಾಳ, ಬಸವರಾಜ ನಾಟೇಕಾರ, ಭೀಮರಾಯ ಹೊಸ್ಮನಿ, ಮರೆಪ್ಪ ಕ್ರಾಂತಿ, ಮರೆಪ್ಪ ಕನ್ಯಾಕೊಳ್ಳುರ, ದೇವಪ್ಪ ಪಟ್ಟೆದಾರ, ಶಿವಪುತ್ರಪ್ಪ ಜವಳಿ, ಮಹಾದೇವ ದಿಗ್ಗಿ, ದೇವಿಂದ್ರ ದಿಗ್ಗಿ ಮತ್ತಿತರರು ಭಾಗವಹಿಸಿದ್ದರು.ಅದ್ದೂರಿ ಮೆರವಣಿಗೆ: ಸಾಮೂಹಿಕವಾಗಿ ವಿವಿಧ ದಲಿತ ಸಂಘಟನೆಯ ಆಶ್ರಯದಲ್ಲಿ ಸಿ.ಬಿ.ಕಮಾನಿನಿಂದ ಸಿಪಿಎಸ್ ಶಾಲಾ ಮೈದಾನದವರೆಗೆ ಅದ್ದೂರಿಯಾಗಿ  ಸಂವಿಧಾನ ಶಿಲ್ಪಿಯ ಭಾವಚಿತ್ರದ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಕ್ರಾಂತಿಗೀತೆ, ಡೊಳ್ಳು ಕುಣಿತ, ತಮಟೆ ಬಾರಿಸುವುದು ಹೆಚ್ಚು ಹುಮಸ್ಸು ನೀಡಿದವು. ಸಾವಿರಾರು ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿ ಅದ್ದೂರಿ ಸಭೆಗೆ ಸಾಕ್ಷಿಯಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.