ಧಮ್ಮ ದೀಪೋತ್ಸವ ಅರಿವಿನ ಸಂಕೇತ...

7

ಧಮ್ಮ ದೀಪೋತ್ಸವ ಅರಿವಿನ ಸಂಕೇತ...

Published:
Updated:

ಸಾವಿರಾರು ವರ್ಷಗಳಿಂದಲೂ ಭಾರತ ಅನೇಕ ಮತ, ಪಂಥ ಹಾಗೂ ಜಾತಿ ಬುಡಕಟ್ಟು ಸಂಸ್ಕೃತಿಗಳ ತವರು. ಹಿಂದೂ ಸಂಸ್ಕೃತಿಯಲ್ಲಿರುವ ಅನೇಕ ತಾರತಮ್ಯ, ಕಂದಾಚಾರ, ರೂಢಿ ಸಂಪ್ರದಾಯಗಳನ್ನು ಪಾಲಿಸುವಂತೆ ಸನಾತನವಾದಿಗಳು ಬಹುಸಂಖ್ಯಾತರ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ.ಹೀಗಾಗಿ ಭಾರತದ ಬಹುಸಂಖ್ಯಾತ ಶೋಷಿತರು ಹಾಗೂ ಅಕ್ಷರದಿಂದ ವಂಚಿತರಾದವರು ಇಂದಿನವರೆಗೂ ಅದನ್ನು ಬಹುನಿಷ್ಠೆಯಿಂದ ಪಾಲಿಸುತ್ತಲೇ ಬಂದಿದ್ದಾರೆ. ಇದರಿಂದಾಗಿ ಸಾಮಾಜಿಕ ಹಿಂದುಳಿಯುವಿಕೆಗೆ ಕಾರಣರಾಗಿದ್ದಾರೆ.ಸಾಮಾಜಿಕ ಅಸಮಾನತೆಯನ್ನು ವಿರೋಧಿಸಿದ ಲೋಕಾಯತರು, ಚಾರ್ವಾಕರು, ಜೈನರು ಮತ್ತು ಬೌದ್ಧರು ಮನುಷ್ಯ ಮುಖಿ ಸಂಸ್ಕೃತಿಯನ್ನು ಕಟ್ಟುವಲ್ಲಿ ಧಾರ್ಮಿಕ ಹಾಗೂ ವೈಚಾರಿಕ ನೆಲೆಯಲ್ಲಿ ಶ್ರಮಿಸಿದ್ದಾರೆ.12ನೇ ಶತಮಾನದ ಬಸವಾದಿ ಶರಣರೂ ಕೂಡಾ ಈ ಪರಂಪರೆಯನ್ನೇ ಮುಂದುವರಿಸಿ `ಅರಿವೇ ಗುರು~ ಎಂದು ಹೇಳುತ್ತಾ ಮಡಿವಂತ ಸಮುದಾಯದವರು ಪ್ರತಿಪಾದಿಸಿದ ಮೌಢ್ಯ ಮತ್ತು ಸಂಪ್ರದಾಯಗಳನ್ನು ತಿರಸ್ಕರಿಸಿದರು. ಆ ಮೂಲಕ ದುಡಿಯುವ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮೊಟ್ಟ ಮೊದಲು ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಪರಿಕಲ್ಪನೆಯನ್ನು ಕಟ್ಟಿಕೊಟ್ಟರು.ತದನಂತರದ ದಾಸರು ಮತ್ತು ಸರ್ವಜ್ಞರಂತಹ ಶ್ರೇಷ್ಠ ಚಿಂತಕರು ಇದೇ ಧಾರೆಯಲ್ಲಿ ಸಮಾಜವನ್ನು ಮುನ್ನಡೆಸಿದರು. ಆದರೂ ಇಲ್ಲಿಯ ಸಾಂಪ್ರದಾಯಿಕ (ಜಾತಿ ಪದ್ಧತಿ) ವ್ಯವಸ್ಥೆ ಬದಲಾಗದೇ ಉಳಿದದ್ದು ಶೋಚನೀಯ ಸಂಗತಿ.ಆಧುನಿಕ ಯುಗದ ಸಂದರ್ಭದಲ್ಲೂ ಈ ನೆಲದ ವರ್ಣ ವ್ಯವಸ್ಥೆ ಅದರಿಂದ ನಿರ್ಮಾಣಗೊಂಡ ಜಾತಿ ಪದ್ಧತಿಯಿಂದ ಉಂಟಾದ ಸಾಮಾಜಿಕ ಅಸಮಾನತೆಗಳು ದಲಿತ ಮತ್ತು ಶೋಷಿತರ ಬದುಕನ್ನು ನಿಕೃಷ್ಟಗೊಳಿಸಿದವು.ಈ ಸಂಕೋಲೆಗಳಿಂದ ಅವರನ್ನು ಬಿಡುಗಡೆಗೊಳಿಸಲು ಪ್ರಯತ್ನಿಸಿದ ಕಬೀರ, ಮಹಾತ್ಮ ಜ್ಯೋತಿಬಾ ಫುಲೆ, ಶಾಹೂ ಮಹಾರಾಜ್, ಸಾವಿತ್ರಿಬಾಯಿ ಫುಲೆ ಮುಂತಾದವರ ಕಾರ್ಯವನ್ನು ಯಶಸ್ವಿಯಾಗಿ ಮುಂದುವರಿಸಿದವರಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಪ್ರಮುಖರಾಗಿದ್ದಾರೆ.ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಬದುಕಿನುದ್ದಕ್ಕೂ ಅನುಭವಿಸಿದ ಸಾಮಾಜಿಕ ಯಾತನೆಗಳು, ಅವರ ಬದುಕನ್ನು ಅರ್ಥಮಾಡಿಕೊಂಡ ಎಂಥಹವರನ್ನೂ ಬೆರಗುಗೊಳಿಸುತ್ತವೆ. ಜಾತಿಯ ಅಸಮಾನತೆಯ ಕಾರಣಕ್ಕಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಲೆಕ್ಕಿಸದೆ ಸಂಘರ್ಷಕ್ಕಿಳಿದು ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳನ್ನು ಪ್ರತಿಪಾದಿಸಿದರು.ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ಧರ್ಮದ ಸುಧಾರಣೆಗಾಗಿ ಎಷ್ಟೇ ಪ್ರಯತ್ನ ಮಾಡಿದರೂ ಮನುವಾದಿ ವ್ಯವಸ್ಥೆ ಗಟ್ಟಿಗೊಳ್ಳುತ್ತಲೇ ಹೋಯಿತು. ಇದನ್ನು ಕಂಡು ರೋಸಿಹೋದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ನನಗೊಂದು ಮಾತೃಭೂಮಿ ಎನ್ನುವುದು ಇಲ್ಲವೆಂದು ಹೇಳುತ್ತಲೇ “ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದು ನನ್ನ ದುರಾದೃಷ್ಟ ಆದರೆ ಹಿಂದೂವಾಗಿ ಮಾತ್ರ ಸಾಯಲಾರೆ” ಎಂದು ದೃಢಸಂಕಲ್ಪ ಮಾಡುವ ಮೂಲಕ 14 ಅಕ್ಟೋಬರ್ 1956ರ ವಿಜಯದಶಮಿ ದಿನದಂದು ತಮ್ಮ ಐದು ಲಕ್ಷ ಅನುಯಾಯಿಗಳೊಂದಿಗೆ ಸನಾತನ ವ್ಯವಸ್ಥೆಯೆಂಬ (ಹಿಂದೂ ಧರ್ಮ) ಕತ್ತಲೆಯಿಂದ ಅರಿವೆಂಬ ಬುದ್ಧನ ಬೆಳಕನ್ನು ಅಪ್ಪಿಕೊಂಡರು.ಡಾ. ಬಾಬಾಸಾಹೇಬ ಅಂಬೇಡ್ಕರ್ ಈ ನೆಲದ ಧಮ್ಮವನ್ನು ಸ್ವೀಕರಿಸುವ ಮೂಲಕ ಬೌದ್ಧ ಧರ್ಮವು ಒಳಗೊಂಡ ಮಾನವೀಯ ಚಿಂತನೆಗಳನ್ನು ಮರುಸ್ಥಾಪಿಸಿದರು. ಇಂದು ಪ್ರಪಂಚದಾದ್ಯಂತ ಹಿಂಸೆ, ಕ್ರೌರ್ಯ, ಭಯೋತ್ಪಾದನೆ ಮತ್ತು ಕೋಮುವಾದಗಳು ಅಟ್ಟಹಾಸಗೈಯುತ್ತಿದ್ದು ಪ್ರೀತಿ, ಕರುಣೆ, ಭ್ರಾತೃತ್ವ ಇಲ್ಲದಂತಾಗಿ ಮನುಷ್ಯತ್ವವೇ ಮರೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.ಮನುಕುಲದ ಒಳಿತಿಗಾಗಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಧಮ್ಮ ಮಾರ್ಗವನ್ನು ನಾವೆಲ್ಲರೂ ಅನುಸರಿಸುವ ಅನಿವಾರ‌್ಯತೆಯೊಂದಿಗೆ  ಪ್ರಬುದ್ಧ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕಾಗಿದೆ.ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕನಸನ್ನು ನನಸುಗೊಳಿಸುವ ಹಿನ್ನೆಲೆಯಲ್ಲಿ  ಮಲ್ಲಿಕಾರ್ಜುನ ಖರ್ಗೆ ಅವರು ಬುದ್ಧವಿಹಾರವನ್ನು ಗುಲಬರ್ಗಾದಲ್ಲಿ ಸ್ಥಾಪಿಸಿದ್ದು ಐತಿಹಾಸಿಕ ಸಂಗತಿಯಾಗಿದೆ.

 

ಈ ಬುದ್ಧವಿಹಾರವು ಉದ್ಘಾಟನೆಗೊಂಡಾಗಿನಿಂದ ಇಂದಿನವರೆಗೆ ಸಾಹಿತ್ಯಕ, ಸಾಂಸ್ಕೃತಿಕ ವಿಚಾರಸಂಕಿರಣ, ಧ್ಯಾನ ಶಿಬಿರಗಳು, ಉಚಿತ ಪುಸ್ತಕ ವಿತರಣೆ, ವೃಕ್ಷೋತ್ಸವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಸಾಮಾಜಿಕ ಸಾಮರಸ್ಯ ಹಾಗೂ ಸಮಾಜದಲ್ಲಿ ಸಹೋದರ ಭಾವವನ್ನು ಮೂಡಿಸುತ್ತಾ ಬರಲಾಗುತ್ತಿದೆ.ಗೌತಮ ಬುದ್ಧನ “ಅತ್ತ ದೀಪ ಭವ” (ಸ್ವಯಂ ಪ್ರಕಾಶಿತರಾಗಿ) ಎಂಬ ಮೂಲ ತತ್ವದ ನೆಲೆಗಟ್ಟಿನಲ್ಲಿ ಬೌದ್ಧರಲ್ಲಿ `ಪದ್ದಿಪೋ ಉಸರ್ಗ~ ಎಂಬುದು ಸಾಮೂಹಿಕ ಬುದ್ಧ ಪ್ರಾರ್ಥನೆಯ ಒಂದು ಕ್ರಮ. ಪ್ರಜ್ವಲಿಸುವ ದೀಪ ಎಂದು ಇದರ ಭಾವಾನುವಾದ. ಇದೊಂದು ವೈಚಾರಿಕ ಸಂಕಲ್ಪ. `ಧಮ್ಮಪದ ಅಠ್ಠಗಾಥಾ~ದಲ್ಲಿ ಇದರ ಉಲ್ಲೇಖವಿದೆ.ಇಂತಹ ಪರಿಕ್ರಮದಂತೆ ಸಾಮ್ರಾಟ ಅಶೋಕ ಚಕ್ರವರ್ತಿ ಪಾಟಲೀಪುತ್ರದ ರಾಜನಗರಿಯಲ್ಲಿ ಸತತ 10 ದಿನಗಳ ಕಾಲ ಧಮ್ಮದೀಪೋತ್ಸವವನ್ನು ನೆರವೇರಿಸಿದ ಉಲ್ಲೇಖ ಬೌದ್ಧ ಸಾಹಿತ್ಯದಲ್ಲಿದೆ. ಪ್ರಚಲಿತ ಸಂದರ್ಭದಲ್ಲಿ ಬೌದ್ಧ ಉಪಾಸಕರು ತಮ್ಮ ಮನೆಗಳಲ್ಲಿ “ಧಮ್ಮದೀಪ” (ಸತ್ಯದ ಬೆಳಕು) ಕಾರ್ಯಕ್ರಮವನ್ನು ಆಯೋಜಿಸಿ ಬುದ್ಧನ ವೈಚಾರಿಕ ಚಿಂತನೆಗಳನ್ನು ಅನುಸರಿಸುವ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾರೆ.ಜನರಲ್ಲಿರುವ ಅಜ್ಞಾನ, ಅಂಧಾನುಸರಣೆ, ಮೂಢನಂಬಿಕೆಗಳಿಂದ ಬಿಡುಗಡೆಗಾಗಿ ಬೆಳಕಿನೆಡೆ (ಜ್ಞಾನ) ಸಾಗುವ ನಿಟ್ಟಿನಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ. ದೀಪ ಅಥವಾ ದೀಪೋತ್ಸವ ಅನ್ನುವುದು ಯಾವುದೇ ಜಾತಿ ಮತ, ಪಂಥಗಳ ಗುತ್ತಿಗೆ ಆಗಿರುವುದಿಲ್ಲ. ಇದು ಅಂಧಾನುಸರಣೆಯೂ ಆಗಿರುವುದಿಲ್ಲ. ದೀಪವು ಬೆಳಕಿನ ಮತ್ತು ಅರಿವಿನ ಸಂಕೇತವಾಗಿದೆ. ಇದು ವಿಜ್ಞಾನದಷ್ಟೇ ಸತ್ಯ.ಬೆಳಕೆಂಬುದು ಕಂದಾಚಾರ, ಸಂಪ್ರದಾಯ, ಮೂಢನಂಬಿಕೆಯ ಸಂಕೇತವೂ ಅಲ್ಲ. ಇರುವ ಕತ್ತಲೆಯನ್ನು ಹೊಡೆದೋಡಿಸಲು ಬೆಳಕು (ದೀಪ) ಬೇಕೇಬೇಕು. ಹಾಗೆಯೇ ಮನುಷ್ಯಮನದ ಕತ್ತಲೆ ಕಳೆಯಲು ಬುದ್ಧ ಬೆಳಕು (ಜ್ಞಾನ) ಅವಶ್ಯಕ ಹಾಗೂ ಅನಿವಾರ್ಯ. ಬಸವಾದಿ ಶರಣರ ಇಷ್ಟಲಿಂಗ, ಪ್ರಾಣಲಿಂಗ ಹಾಗೂ ಭಾವಲಿಂಗ ಪರಿಕಲ್ಪನೆಯಂತೆ ಬೆಳೆಯುತ್ತಾ ಬದಲಾಗುವ ಮೊದಲ ಹೆಜ್ಜೆ ಈ ಧಮ್ಮ ದೀಪೋತ್ಸವ.ಮನುಷ್ಯನ ಬದುಕಿಗೆ ಶ್ರದ್ಧೆ ಮುಖ್ಯವೇ ಹೊರತು ಅಂಧಶ್ರದ್ಧೆಯಲ್ಲ. ಅಂಧಶ್ರದ್ಧೆ ಮನುಷ್ಯನನ್ನು ಮತ್ತೆ ಕತ್ತಲೆಗೆ ದೂಡುತ್ತದೆ. ಶ್ರದ್ಧೆಯು ಬೆಳಕಿನೆಡೆ ನಡೆಸುತ್ತದೆ. ಇಂತಹ ಶ್ರದ್ಧಾಪೂರ್ಣ ಧಮ್ಮ ದೀಪೋತ್ಸವ ಕಾರ್ಯಕ್ರಮ ಪ್ರಪಂಚದಾದ್ಯಂತ ಇರುವ ಬೌದ್ಧವಿಹಾರಗಳಲ್ಲಿ ನಡೆಯುತ್ತವೆ.ಗೌತಮಬುದ್ಧನ ಉಪದೇಶಗಳ ಸಂಗ್ರಹವಾದ ತ್ರಿಪಿಟಕ ಗ್ರಂಥದಲ್ಲಿ; “ಘನಸಾರಪ್ಪದಿತ್ತೇನ ದೀಪೇನ ತಮದಂಸಿನಾ, ತ್ರಿಲೋಕ ದೀಪಂ ಸಂಬುದ್ಧಂ ಪೂಜಯಾಮಿ ತಮೋನುದಂ” ಹೀಗೆಂದರೆ `ಬೆಳಗುತ್ತಿರುವ ಕರ್ಪೂರದ ದೀಪದಿಂದ ಕತ್ತಲೆಯನ್ನು ಹೋಗಲಾಡಿಸುತ್ತಾ      (ಅಜ್ಞಾನದ) ಅಂಧಕಾರವನ್ನು ತೊಡೆದುಹಾಕುವ ತ್ರಿಲೋಕ ದೀಪನಾದ ಸಂಬುದ್ಧನನ್ನು ಪೂಜಿಸುತ್ತೇನೆ ಎಂದರ್ಥವಾಗುತ್ತದೆ. ಇಂತಹ ಬೆಳಕಿನ ಬುದ್ಧನಿಂದ ಪ್ರತಿಯೊಬ್ಬನ ಬಾಳನ್ನು ಬೆಳಕಾಗಿಸಿಕೊಳ್ಳಲು ಬೆಳಕನ್ನು ಪಡೆಯಲು ಈ ಧಮ್ಮ ದೀಪೋತ್ಸವ ಪ್ರೇರಣೆ, ಪ್ರೋತ್ಸಾಹವನ್ನು ನೀಡಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry