ಧರಣಿಗೆ ಮಣಿದು ಅಮಾನತು ಆದೇಶ ಹಿಂದಕ್ಕೆ

7

ಧರಣಿಗೆ ಮಣಿದು ಅಮಾನತು ಆದೇಶ ಹಿಂದಕ್ಕೆ

Published:
Updated:

ಸರಗೂರು: ಇಲ್ಲಿನ ಪಿಎಸ್‌ಐ ನವೀನ್, ಎಎಸ್‌ಐ ಶಿವದತ್ ಮತ್ತು ಕಾನ್‌ಸ್ಟೇಬಲ್ ಶಿವಕುಮಾರ್ ಅಮಾನತು ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು. ಇದಕ್ಕೆ ಮಣಿದ ಹಿರಿಯ ಅಧಿಕಾರಿಗಳು ಈ ಮೂವರ ಅಮಾನತು ಆದೇಶವನ್ನು ತಡೆ ಹಿಡಿದರು.ಈಚೆಗೆ ನಡಹಾಡಿ ಮತ್ತು ಬಂಕವಾಡಿ ಗ್ರಾಮದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸರಿಯಾದ ಕ್ರಮ ಕೈಗೊಳ್ಳದ ಆರೋಪದ ಹಿನ್ನೆಲೆಯಲ್ಲಿ ಈ ಮೂವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶನಿವಾರ ಆದೇಶ ಹೊರಡಿಸಿದ್ದರು. ಇದನ್ನು ತಿಳಿದ ಸರಗೂರು ಹಾಗೂ ಸುತ್ತಲಿನ ಗ್ರಾಮಗಳ ಕೆಲ ಜನ ಭಾನುವಾರ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.ಇಲ್ಲಿನ ಶಿವಾನುಭವ ಮಂದಿರದಲ್ಲಿ ಸಭೆ ನಡೆಸಿದ ಸಾರ್ವಜನಿಕರು ಸರಗೂರು ಪೊಲೀಸ್ ಠಾಣೆಯಲ್ಲಿ ಎರಡು ವರ್ಷದಿಂದ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಪಿಎಸ್‌ಐ ನವೀನ್ ಅಮಾನತು ಆದೇಶವನ್ನು ರದ್ದುಪಡಿಸುವ ತನಕ ಠಾಣೆಯ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದರು. ನಂತರ ಪಟ್ಟಣದ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಠಾಣೆಯ ಮುಂದೆ ಧರಣಿ ಕುಳಿತರು.ಈ ವೇಳೆ ಸರ್ಕಲ್ ಇನ್‌ಸ್ಪೆಕ್ಟರ್ ಎಚ್. ಗೊವಿಂದರಾಜು ಅವರು ಪ್ರತಿಭಟನಾಕಾರರ ಬಳಿ ಬಂದು, ವಿಷಯವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದರು. ಅವರ ಮಾತಿಗೆ ಮಣಿಯದ ಪ್ರತಿಭಟನಾಕಾರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಲ್ಲಿಗೆ ಬಂದು ಅಮಾನತು ಆದೇಶವನ್ನು ರದ್ದುಪಡಿಸಬೇಕು. ಅಲ್ಲಿಯ ತನಕ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದರು.ನಂತರ ಸ್ಥಳಕ್ಕೆ ಬಂದ ಹುಣಸೂರು ಡಿವೈಎಸ್‌ಪಿ ಮುದ್ದುಮಹದೇವಯ್ಯ ಎಸ್ಪಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ವಿಷಯ ತಿಳಿಸಿದರು. 24 ಗಂಟೆಯ ಒಳಗೆ ಮೂವರ ಅಮಾನತು ಆದೇಶವನ್ನು ಹಿಂಪಡೆಯುವುದಾಗಿ ಜಿಲ್ಲಾ ವರಿಷ್ಠಾಧಿಕಾರಿಗಳು ತಿಳಿಸಿದರು. ನಂತರ ಸಾರ್ವಜನಿಕರು ಪ್ರತಿಭಟನೆಯನ್ನು ಕೈಬಿಟ್ಟರು.ಸೋಮವಾರ ಅಮಾನತು ರದ್ದು ಆದೇಶ ಹೊರಡಿಸದಿದ್ದರೆ ಮತ್ತೆ ಉಗ್ರ ಪ್ರತಿಭಟನೆ ಮಾಡುವುದಾಗಿ ಪ್ರತಿಭಟನಾಕಾರರು ತಿಳಿಸಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಮೊತ್ತಬಸವರಾಜಪ್ಪ, ಎಸ್.ಎಂ. ಮಹದೇವಪ್ಪ, ಎಚ್.ವಿ. ಗಣಪತಿ, ಎಚ್.ಸಿ. ಗುರುಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ಪಿ. ನಟರಾಜು, ಸದಸ್ಯ ರಾಜಪ್ಪ, ಪಟ್ಟಣ ಪಂಚಾಯಿತಿ ಸದಸ್ಯೆ ಸುನಂದರಾಜು, ಮಾಜಿ ಸದಸ್ಯ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕವೀರನಾಯಕ, ಕಾಂಗ್ರೆಸ್ ಮುಖಂಡ ಎಸ್.ಎಸ್. ಪ್ರಭುಸ್ವಾಮಿ, ಪಿ.ರವಿ. ಜೆಡಿಎಸ್ ಮುಖಂಡ ಪುರದಕಟ್ಟೆ ಬಸವರಾಜು, ಚಾ.ನಂಜುಂಡಮೂರ್ತಿ, ಸುರೇಂದ್ರ,  ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ್, ಮಂಗಳಪ್ಪ, ಕೊತ್ತೇಗಾಲ ಬಸವಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಸಾನಂದಕುಮಾರ್, ಹಂಚೀಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿದ್ದನಾಯಕ, ಡಿ.ಪಿ.ಪ್ರಕಾಶ್, ರಾಮು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry