ಮಂಗಳವಾರ, ಮೇ 17, 2022
27 °C

ಧರಣಿ:ಪ್ರತಿಪಕ್ಷಗಳ ಸದಸ್ಯರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಬಿಬಿಎಂಪಿಗೆ ಕಡಿಮೆ ಅನುದಾನ ನೀಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಶುಕ್ರವಾರ ನಡೆದ ಬಿಬಿಎಂಪಿ ಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಮೇಯರ್ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರನ್ನು ಅಮಾನತುಪಡಿಸಿದರೂ ಧರಣಿ ಹಿಂಪಡೆಯದ ಪರಿಣಾಮ ಸಭೆಯನ್ನು ಮುಂದೂಡಿದರು.ಶುಕ್ರವಾರ ಬೆಳಿಗ್ಗೆ ಸಭೆ ಆರಂಭವಾಗುತ್ತಿದ್ದಂತೆ ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಸದಸ್ಯರು ಫಲಕಗಳನ್ನು ಪ್ರದರ್ಶಿಸಿದರು. ಸುಮಾರು 3,200 ಕೋಟಿ ರೂಪಾಯಿ ಸಾಲ ಹಾಗೂ 2,000 ಕೋಟಿ ರೂಪಾಯಿ ಮೊತ್ತದ ಬಿಲ್ ಪಾವತಿ ಬಾಕಿ ಉಳಿದಿದ್ದು, 5,000 ಕೋಟಿ ರೂಪಾಯಿ ಅನುದಾನ ನೀಡುವಂತೆ ಕೋರುವ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ನಾಯಕ ಬಿ.ಎಸ್. ಸತ್ಯನಾರಾಯಣ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಬೈರಯ್ಯ ಅವರು, ‘ಕೆಎಂಸಿ ಕಾಯ್ದೆಯ ಪ್ರಕಾರ ಯಾವುದೇ ಫಲಕವನ್ನು ಸಭಾಂಗಣದೊಳಗೆ ತರಬಾರದು’ ಎಂದರು. ಆಗ ಜೆಡಿಎಸ್ ಸದಸ್ಯರು ಫಲಕಗಳನ್ನು ಕೆಳಗಿಳಿಸಿದರು.ಬಳಿಕ ಬಿಜೆಪಿ ಸದಸ್ಯರಾದ ಉಮೇಶ್‌ಶೆಟ್ಟಿ, ಶಾಂತಕುಮಾರಿ, ಆನಂದ್ ಇತರರು ಇತ್ತೀಚೆಗೆ ನಾಗರಬಾವಿಯಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆದ ಸಂದರ್ಭದ ಛಾಯಾಚಿತ್ರಗಳನ್ನು ತಂದು ಮೇಯರ್ ಪೀಠದ ಮುಂಭಾಗ ನಿಂತು ಪ್ರದರ್ಶಿಸಿದರು. ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ಈ ಕುರಿತು ಮಾತನಾಡಲು ಅವಕಾಶ ನೀಡುವಂತೆ ಕೋರಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ವಿರೋಧ ಪಕ್ಷದ ನಾಯಕ ಎಂ. ನಾಗರಾಜ್ ಮಾತನಾಡಿ, ‘ಪೂಜ್ಯ ಮಹಾ ಪೌರರೇ ಸಭೆಯನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುತ್ತಿಲ್ಲವೇ. ನಿಮ್ಮ ಸದಸ್ಯರೇ ಗದ್ದಲ ಎಬ್ಬಿಸುತ್ತಿದ್ದಾರೆ’ ಎಂದರು. ಆಗ ಮೇಯರ್, ತಮ್ಮ ಸ್ಥಾನಗಳಿಗೆ ತೆರಳುವಂತೆ ಬಿಜೆಪಿ ಸದಸ್ಯರಿಗೆ ಹೇಳಿದರು.ನಂತರ ಸತ್ಯನಾರಾಯಣ ಅವರು ಸಭೆಯ ನಡಾವಳಿಗಳನ್ನು ವಾಚಿಸಿದರು. ತಕ್ಷಣವೇ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ರಾಜ್ಯ ಬಜೆಟ್‌ನ ಪ್ರತಿ ಹಿಡಿದು ಧಿಕ್ಕಾರ ಕೂಗಲಾರಂಭಿಸಿದರು. ಬಿಬಿಎಂಪಿಗೆ ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿಗಳು ಘೋಷಿಸಬೇಕು ಎಂದು ಆಗ್ರಹಿಸಿದರು. ಇದರಿಂದ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್. ಸದಾಶಿವ ಅವರೊಂದಿಗೆ ಮಾತುಕತೆ ನಡೆಸಿದ ಮೇಯರ್, ‘ಸಭೆಗೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರನ್ನು ಅಮಾನತುಪಡಿಸಲಾಗಿದೆ. ಸಭೆಯನ್ನು ಅರ್ಧ ಗಂಟೆಗೆ ಮುಂದೂಡಲಾಗಿದೆ’ ಎಂದು ಹೇಳಿ ಹೊರ ನಡೆದರು.ಆದರೂ ಪ್ರತಿಭಟನಾನಿರತ ಸದಸ್ಯರು ಧರಣಿ ಮುಂದುವರಿಸಿದರು. ಅರ್ಧ ಗಂಟೆ ಕಳೆದರೂ ಸಭೆ ನಡೆಯುವ ಲಕ್ಷಣ ಕಂಡುಬಾರದ ಕಾರಣ ಮತ್ತೆ ಮೇಯರ್ ಅವರು ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.ಮೇಯರ್‌ಗೆ ದಿಗ್ಬಂಧನ

ಬೆಂಗಳೂರು: ಬಿಬಿಎಂಪಿಯಲ್ಲಿ ಶುಕ್ರವಾರ ಮೇಯರ್ ಎಸ್.ಕೆ. ನಟರಾಜ್ ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ದಿಗ್ಬಂಧನ ಹಾಕಿದ ಪ್ರಸಂಗ ನಡೆಯಿತು. ಇದರಿಂದ ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.ಸಭೆಗೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರನ್ನು ಅಮಾತನುಪಡಿಸಿರುವುದಾಗಿ ಮೇಯರ್ ಸಭೆಯಲ್ಲಿ ಘೋಷಿಸಿದರು. ಇದು ವಿರೋಧ ಪಕ್ಷಗಳ ಸದಸ್ಯರನ್ನು ಕೆರಳಿಸಿತು. ಹಾಗಾಗಿ ಅವರು ಮೇಯರ್ ಪೀಠದ ಮುಂಭಾಗದಲ್ಲೇ ಧರಣಿ ನಡೆಸಿದರು.ಈ ನಡುವೆ ಕೌನ್ಸಿಲ್ ಸಹ ಕಾರ್ಯದರ್ಶಿ ಮಾರಿಯೊ ಪೈರಿಸ್ ಅವರು ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮನ್ ಮೇಲೆ ಹಲ್ಲೆ ನಡೆಸಿದ ಘಟನೆ ಕೂಡ ಜರುಗಿದ್ದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ಇದನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತೀವ್ರವಾಗಿ ಖಂಡಿಸಿದರು.ಕೌನ್ಸಿಲ್ ಕಟ್ಟಡದಲ್ಲಿರುವ ಮೇಯರ್ ಕೊಠಡಿ ಬಳಿಗೆ ಧಾವಿಸಿದ ಸದಸ್ಯರು ಕೊಠಡಿಯ ಮುಂಭಾಗ ಕುಳಿತು ಧರಣಿ ಆರಂಭಿಸಿದರು. ಇದರಿಂದ ಮೇಯರ್ ಕೆಲ ಹೊತ್ತು ಹೊರಗೆ ಬರಲು ಸಾಧ್ಯವಾಗಲಿಲ್ಲ. ಏನೆಲ್ಲಾ ಪ್ರಯತ್ನ ಪಟ್ಟರೂ ಪ್ರತಿಭಟನಾಕಾರರು ಸ್ಥಳಬಿಟ್ಟು ಕದಲಲಿಲ್ಲ.ಇದೇ ಸಂದರ್ಭದಲ್ಲಿ ಮೇಯರ್ ಅವರನ್ನು ಕಾಣಲು ಬಂದ ವಿಧಾನಪರಿಷತ್ ಸದಸ್ಯ ಅಶ್ವತ್ಥನಾರಾಯಣ ಕೂಡ ಕೊಠಡಿಯ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ಕೌನ್ಸಿಲ್ ಕಟ್ಟಡದ ಮುಂಭಾಗಕ್ಕೆ ತೆರಳಿ ಧರಣಿ ಮುಂದುವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.