ಧರಣಿಮಂಡಲ ಅಪಾರ್ಟ್‌ಮೆಂಟಿನೊಳಗೆ...

7

ಧರಣಿಮಂಡಲ ಅಪಾರ್ಟ್‌ಮೆಂಟಿನೊಳಗೆ...

Published:
Updated:

ನಾನು ಬೆಂಗಳೂರಿಗೆ ಬಂದ ಹೊಸತು, ಅಂದರೆ ಸುಮಾರು 1991ರಲ್ಲಿ ಇಲ್ಲಿ ಅಪಾರ್ಟ್‌ಮೆಂಟ್‌ಗಳು ಕಾಣುತ್ತಿರಲಿಲ್ಲ. ಎಲ್ಲಿಯೋ ಬಸವನಗುಡಿಯಲ್ಲಿ ಒಂದಿದೆ ಎಂತಲೋ, ಕೆಲವು ಕಾರ್ಖಾನೆಯ ಕಾರ್ಮಿಕರ ವಸತಿಗಳನ್ನು ಆ ರೀತಿ ಕಟ್ಟಿದ್ದಾರೆಂತಲೋ ಹೇಳುತ್ತಿದ್ದರು.

 

ನನ್ನ ಕೆಲವು ಖಾಸಾ ಬೆಂಗಳೂರಿನ ಗೆಳೆಯರು `ಅಪಾರ್ಟ್‌ಮೆಂಟ್ ಸಂಸ್ಕೃತಿ ಈ ಊರಿಗೆ ಬರಲಿಕ್ಕೆ ಸಾಧ್ಯವೇ ಇಲ್ಲ! ಮುಂಬಯಿ, ಚೆನ್ನೈನಲ್ಲಾದರೆ ನಗರ ಬೆಳೆಯಲು ಜಾಗವಿಲ್ಲ, ಒಂದು ಬದಿ ಕಡಲು. ಆದ್ದರಿಂದ ಅವರಿಗೆ ಬೇರೆ ದಾರಿಯಿಲ್ಲ. ಬೆಂಗಳೂರಿನವರಿಗ್ಯಾಕೆ ಆ ಕೋಳಿ ಗೂಡಿನ ಮನೆಗಳು~ ಎಂದು ಬೆಂಗಳೂರಿನ ಮಹಿಮೆಯನ್ನು ಕೊಂಡಾಡುತ್ತಿದ್ದರು.ಈ ಇಪ್ಪತ್ತು ವರ್ಷಗಳಲ್ಲಿ ನಾನೂ, ನನ್ನ ಬೆಂಗಳೂರಿನ ಖಾಸಾ ಗೆಳೆಯರು ಸುಸಜ್ಜಿತ ಅಪಾರ್ಟ್‌ಮೆಂಟಿನಲ್ಲಿ ಇದ್ದೇವೆ ಅನ್ನುವುದು ನುಂಗಲಾರದ ಸತ್ಯ. ದೇಹದ ಸುತ್ತ ಹಬ್ಬುವ ಸರ್ಪಹುಣ್ಣಿನ ಹಾಗೆ ಬೆಂಗಳೂರಿನಲ್ಲಿ ಎತ್ತ ಕಣ್ಣು ಹಾಯಿಸಿದರೂ ಅಪಾರ್ಟ್‌ಮೆಂಟುಗಳೇ ಕಾಣುತ್ತವೆ.ರಿಂಗ್ ರೋಡಿನಲ್ಲಿ ಮಾರತಹಳ್ಳಿಯ ಕಡೆಗೆ ಹೋಗುವಾಗ ಕಣ್ಣು ಹಾಯಿಸಿದತ್ತೆಲ್ಲಾ ಕಾಣುವ ಕಾಂಕ್ರೀಟ್ ಕಾನನವನ್ನು ನೋಡಿದಾಗ ಅಂಜಿಕೆಯಾಗುತ್ತದೆ. ಬೆಂಗಳೂರು ಹೋಗಲಿ, ನಮ್ಮ ಬಳ್ಳಾರಿ ಜಿಲ್ಲೆಯಲ್ಲಿಯೂ ಈ ಕಾಂಕ್ರೀಟ್ ಹುತ್ತಗಳು ಒಡಮೂಡಿರುವುದು ಕಂಡಾಗ ಅಚ್ಚರಿಯಾಗುತ್ತದೆ.ಅಪಾರ್ಟ್‌ಮೆಂಟ್ ಅಥವಾ ಸ್ವಂತ ಮನೆಯನ್ನು ಬಯಸುವವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ತಕ್ಕುದಾದ ಕಾರಣಗಳನ್ನು ಕೊಡುವುದನ್ನು ಕಂಡಿದ್ದೇನೆ. ಕೊನೆಗೂ ಇದು ಅವರವರ ರುಚಿ, ಜೇಬಿನ ಆಳ, ಬದುಕಿನ ಯಾವ ಸಂಗತಿಗಳಿಗೆ ಮಹತ್ವ ಕೊಡುತ್ತಾರೆಂಬುದಕ್ಕೆ ಸಂಬಂಧಿಸಿದ್ದು. ಕಡಿಮೆ ಬಜೆಟ್‌ನವರು, ಸಾಮೂಹಿಕ ಮತ್ತು ಸುರಕ್ಷಿತ ಬದುಕು ಬಯಸುವವರು ಮತ್ತು ನೀರು-ವಿದ್ಯುತ್ ಮುಂತಾದವುಗಳ ನಿರ್ವಹಣೆಯ ತಲೆನೋವು ಬೇಡ ಎನ್ನುವವರು ಖಂಡಿತವಾಗಿಯೂ ಅಪಾರ್ಟ್‌ಮೆಂಟ್ ವಾಸ ಇಷ್ಟ ಪಡುತ್ತಾರೆನ್ನುವುದು ನನ್ನ ಅನುಭವ.ನಾನು ಸುಮಾರು ಹತ್ತು ವರ್ಷಗಳಿಂದ ಅಪಾರ್ಟ್‌ಮೆಂಟಿನಲ್ಲಿ ಜೀವಿಸುತ್ತಿದ್ದೇನೆ. ಮುಕ್ಕಾಲು ಪಾಲು ಐಟಿಯವರೇ ತುಂಬಿರುವ 352 ಬಿಡಾರಗಳ ದೊಡ್ಡ ಸಂಕೀರ್ಣವಿದು. ಕನ್ನಡಿಗರು ಕಡಿಮೆ.

 

ಉತ್ತರ ಭಾರತದವರು ಮತ್ತು ತಮಿಳಿನವರು ಜಾಸ್ತಿ. ಏನಿಲ್ಲವೆಂದರೂ ಸುಮಾರು ಒಂದು ಸಾವಿರದಷ್ಟು ಜನರು ವಾಸಿಸುವ ಈ ಅಪಾರ್ಟ್‌ಮೆಂಟ್ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶವನ್ನು ಒದಗಿಸಿದೆ. ಹೌಸ್ ಕೀಪಿಂಗ್‌ನವರು, ಅಡಿಗೆಯವರು, ಮನೆಗೆಲಸದವರು, ಡ್ರೈವರುಗಳು, ಆಯಾಗಳು, ಇಸ್ತ್ರಿಯವರು, ಸೆಕ್ಯೂರಿಟಿಯವರು, ಹಾಲು-ವೃತ್ತಪತ್ರಿಕೆಯವರು - ಹೀಗೆ ಸಾವಿರಾರು ಜನರು ತಮ್ಮ ಬದುಕನ್ನು ಇಲ್ಲಿ ನಿರ್ವಹಿಸುತ್ತಾರೆ. ತನ್ನದೇ ಆದ ದಿನಚರಿಯಲ್ಲಿ ಇಲ್ಲಿ ಬದುಕು ನಡೆಯುತ್ತದೆ.ಹತ್ತು ವರ್ಷದ ಕೆಳಗೆ ಬಂದಾಗ ಪ್ರತಿ ಮನೆಯಲ್ಲಿಯೂ ಕೆಲಸ ಮಾಡುವ ದಂಪತಿಗಳು, ಅವರ ಪುಟ್ಟ ಮಕ್ಕಳು ಹಾಗೂ ವಯಸ್ಸಾದ ತಂದೆ-ತಾಯಿಗಳು ಕಾಣುತ್ತಿದ್ದರು. ಈಗ ಎಲ್ಲಾ ವಯೋಮಾನದವರೂ ಇಲ್ಲಿ ಲಭ್ಯ. ಆರಂಭದಲ್ಲಿ ನಮ್ಮ ಕಣ್ಣೆದುರಿಗೇ ಶಾಲೆಗೆ ಹೋಗುತ್ತಿದ್ದ ಪುಟಾಣಿ ಹುಡುಗನೊಬ್ಬ ಮೊನ್ನೆ ಹೋಟೆಲ್ ಬಳಿ ಘನ ಗಂಭೀರವಾಗಿ ಸಿಗರೇಟು ಸೇದುವುದನ್ನು ಕಂಡಾಗ `ಅಂತೂ ಮತ್ತೊಂದು ತಲೆಮಾರು ಬಂತು~ ಎಂದು ನಕ್ಕಿದ್ದೆ.ಅಷ್ಟೇ ವಿಷಾದವಾಗುವಂತೆ ಆಗೊಮ್ಮೆ ಈಗೊಮ್ಮೆ `ವೈಕುಂಠ ವಾಹನ~ ಬಂದು ಪ್ರಾಂಗಣದಲ್ಲಿ ನಿಂತಿರುವುದನ್ನೂ ಕಾಣುತ್ತೇನೆ. ಯಾಹೂ ಗ್ರೂಪಿನಲ್ಲಿ ಸತ್ತವರ ಬಗ್ಗೆ ವಿವರಗಳು ಬಂದರೂ ಅವರು ಯಾರೆಂದು ತಿಳಿಯದೆ ಗೊಂದಲವಾಗುತ್ತದೆ.ನೆರೆಹೊರೆಯವರನ್ನು ವಿಚಾರಿಸಿ ಅವರು ಯಾರಾಗಿದ್ದರೆಂಬುದನ್ನು ತಿಳಿದುಕೊಳ್ಳುತ್ತೇನೆ. ಆಗಲೇ ಒಂದೆರಡು ಮಕ್ಕಳ ಮದುವೆಗಳೂ ಜರುಗಿ, ಮಕ್ಕಳೂ ಹುಟ್ಟಿವೆ. ಹಲವು ವಿಚ್ಛೇದನಗಳನ್ನೂ ಪಡೆದ ಒಂಟಿ ಜೀವಿಗಳು ಸಿಗುತ್ತಾರೆ.ನಮ್ಮ ಸಂಕೀರ್ಣದ ಮಧ್ಯದಲ್ಲಿ ಒಂದು ವಿಶಾಲ ಮೈದಾನದಷ್ಟು ಜಾಗವನ್ನು ಖಾಲಿ ಬಿಟ್ಟಿದ್ದಾರೆ. ಇಲ್ಲಿ ಬೆಳಗಿನ ಜಾವ ಐದರಿಂದ ದಿನಚರಿ ಶುರುವಾಗುತ್ತದೆ. ಸುರಕ್ಷಿತ ವಲಯದೊಳಗೆ ಈ ಮೈದಾನವಿರುವದರಿಂದ ಬೆಳಿಗ್ಗೆ ಐದರಿಂದ ರಾತ್ರಿ ಹನ್ನೆರಡರವರೆಗೂ ವಾಕಿಂಗ್ ನಡೆದೇ ಇರುತ್ತದೆ.ಬೆಳಕು ಹರಿಯುತ್ತಲೇ ಅಪ್ಪ ಅಥವಾ ಅಮ್ಮಂದಿರು ತಮ್ಮ ಮಕ್ಕಳನ್ನು ಶಾಲೆಯ ಬಸ್ಸುಗಳಿಗೆ ಹತ್ತಿಸುವ ದೃಶ್ಯ ಮನಮೋಹಕವಾದದ್ದು. ನಿದ್ದೆಗಣ್ಣಿನ ಮಗುವಿಗೆ ಪರೀಕ್ಷೆಯಲ್ಲಿ ಏನು ಬರೆಯಬೇಕು, ಮೇಡಂಗೆ ಯಾವ ಉತ್ತರ ಕೊಡಬೇಕು ಎಂದೆಲ್ಲಾ ಹೇಳುತ್ತಾ ಅವಸರದಲ್ಲಿ ಅದನ್ನು ವಾಹನವೇರಿಸಿ, ವಾಪಾಸು ಬರುವಾಗ ಯಾವ ಅವಸರವೂ ಇಲ್ಲದೆ ತಮ್ಮ ನೆರೆಹೊರೆಯವರೊಡನೆ ಹರಟೆ ಹೊಡೆದು, ಒಂದೆರಡು ಸುತ್ತು ವಾಕಿಂಗ್ ಮಾಡಿ ಗೃಹಿಣಿಯರು ಮನೆಗೆ ತೆರಳುತ್ತಾರೆ.

 ಅದೇ ಹೊತ್ತಿಗೆ ಮನೆಗೆಲಸದವರ ದಂಡು ಅಪಾರ್ಟ್‌ಮೆಂಟನ್ನು ಪ್ರವೇಶಿಸುತ್ತದೆ. ಎಂಟು ದಾಟುತ್ತಲೇ ಒಂದೊಂದಾಗಿ ಕಾರುಗಳು ಸದ್ದು ಮಾಡುತ್ತಾ ಹೊರ ನಡೆಯುತ್ತವೆ. ಇನ್ನು ಸಂಜೆಯವರೆಗೆ ಅಂತಹ ಗಲಾಟೆಯಿಲ್ಲ. ಒಂದಿಷ್ಟು ಗಾಸಿಪ್, ಟೆಲಿವಿಜನ್, ಫೋನ್‌ನಲ್ಲಿ ಮಾತು, ಹೌಸ್ ಕೀಪಿಂಗ್‌ನವರ ಕೆಲಸ ಮುಂತಾದವುಗಳು ನಡೆಯುತ್ತವೆ.ಸಂಜೆಯಾಗುತ್ತಲೇ ನೂರಾರು ಮಕ್ಕಳು ಮೈದಾನಕ್ಕೆ ನುಗ್ಗಿ ಆಡಲು ಶುರುವಿಡುತ್ತವೆ. ಅವುಗಳ ಕೇಕೆ, ಓಟ, ಆಟ- ಕಣ್ಣಿಗೊಂದು ಹಬ್ಬ. ಹಿರಿಯರು ಅಲ್ಲ್ಲಲಿ ಗುಂಪುಗೂಡಿ ಹರಟೆ ಹೊಡೆದರೆ, ಒಂದಿಷ್ಟು ಜನ ಆಟ- ವ್ಯಾಯಾಮ- ಈಜುವುದರಲ್ಲಿ ತಲ್ಲೆನರಾಗುತ್ತಾರೆ. ಹಲವಾರು ಭಾಷೆಗಳ ಟೀವಿ ಸದ್ದುಗಳು ಜೊತೆಯಾಗಿ ಮೇಳೈಸಿ ದಿನ ಮುಗಿಯುತ್ತದೆ.

ಪ್ರೈವೆಸಿ ಬಯಸುವವರು ಕಡ್ಡಾಯವಾಗಿ ಅಪಾರ್ಟ್‌ಮೆಂಟಿನಲ್ಲಿರಬಾರದು.ಅಪರೂಪಕ್ಕೊಮ್ಮೆ ಮನೆಯ ಬಾಗಿಲು ಹಾಕಿ ಕಾರಿಡಾರಿಗೆ ಬಂದಾಗ ಪ್ಯಾಂಟಿಗೆ ಜಿಪ್ ಹಾಕಿರುವುದು ಮರೆತದ್ದು ನೆನಪಾಗಿ ಹಾಕಿಕೊಳ್ಳಲು ಹೋದರೆ, ನೂರಾರು ಮನೆಯ ಕಿಟಕಿಗಳಿಂದ ಜನ ನನ್ನನ್ನೇ ನೋಡುತ್ತಿದ್ದಾರೆಂಬ ಭಾವ ಏನು ಮಾಡಿದರೂ ಹೋಗುವದಿಲ್ಲ.ಸರಿರಾತ್ರಿಯಲ್ಲಿ ಯಾರದೋ ಮನೆಯ ಮಂಚದ ಕುಲುಕಾಟ, ಯಾರದೋ ಯುಟಿಲಿಟಿಯಲ್ಲಿ ಫೋನಿನಲ್ಲಿ ಪಿಸುಗುಟ್ಟಿದ ಪ್ರೀತಿಯ ಮಾತುಗಳು, ದೂರದ ಬಾಲ್ಕನಿಯಲ್ಲಿ ಲೊಚಕ್ಕೆಂದು ಕೊಟ್ಟ ಮುತ್ತು, ನಮ್ಮ ತಲೆಯ ಮೇಲೆಯೇ ಬಿದ್ದಂತೆ ಸದ್ದು ಮಾಡುವ ಮೇಲಿನ ಮನೆಯ ಫ್ಲಷ್, ಸಿಗ್ಗಿಲ್ಲದೆ ಒಳ ಚಡ್ಡಿಯ ಮೇಲೆ ತಿರುಗಾಡುವ ಬ್ಯಾಚುಲರ್ ಹುಡುಗರು- ಎಲ್ಲಾ ಕಿರಿಕಿರಿಗಳಿಗೂ ಸಿದ್ಧವಾಗಿರಬೇಕು.ಸುಮ್ಮನೆ ಲ್ಯಾಪ್ ಟಾಪ್ ಆನ್ ಮಾಡಿ, ಬ್ಲೂಟೂತ್ ಎನೇಬಲ್ ಮಾಡಿದರಾಯ್ತು- ಹತ್ತಾರು ಇಂಟರ್‌ನೆಟ್ ನೆಟ್‌ವರ್ಕ್‌ಗಳು ಕಂಪ್ಯೂಟರಿನಲ್ಲಿ ಕಂಡು ಗಲಿಬಿಲಿಗೊಳಿಸುತ್ತವೆ. ನಮ್ಮ ದೇವರುಗಳು ಕೂತ ಗೋಡೆಯ ಹಿಂಭಾಗದಲ್ಲಿಯೇ ಪಕ್ಕದ ಮನೆಯವರ ಟಾಯ್ಲೆಟ್ ಇದೆ ಎಂಬುದು ತುಂಬಾ ತಡವಾಗಿ ಗೊತ್ತಾಗುತ್ತದೆ. ಅಪರೂಪಕ್ಕೆ ಜಿಮ್ಮಿನಲ್ಲಿ ಪರಿಚಯವಾದ ಗೆಳೆಯನ ಒತ್ತಾಯಕ್ಕೆ ಅವನ ಮನೆಗೆ ಹೋದರೆ, ಅವನ ಬಾಲ್ಕನಿಯಿಂದ ನನ್ನ ಮನೆಯ ಟೀವಿ ಸೊಗಸಾಗಿ ಕಾಣುವುದನ್ನು ಕಂಡು ಬೆಚ್ಚಿ ಬಿದ್ದೆ.

 

ಅವನು ಹುಳ್ಳಗೆ ನಕ್ಕು ಕಣ್ಣು ಮಿಟುಕಿಸಿ `ನೀವು ನೋಡೋದೆಲ್ಲ ನಮಗೆ ಕಾಣಿಸ್ತದೆ~ ಅಂದಿದ್ದ! ಇಷ್ಟೆಲ್ಲಾ ಗೌಪ್ಯಗಳು ಬಟಾಬಯಲಾದರೂ, ಪಕ್ಕದ ಮನೆಯವನು ಯಾರನ್ನೋ ತನ್ನ ಬೆಡ್‌ರೂಮಿನಲ್ಲಿಯೇ ಕೊಲೆ ಮಾಡಿ ಹೆಣವನ್ನು ಎರಡು ತಿಂಗಳು ಫ್ರೀಜರಿನಲ್ಲಿಟ್ಟಿದ್ದ ಎಂಬ ಸಂಗತಿ ಮಾತ್ರ ತಿಳಿಯುವುದೇ ಇಲ್ಲ!ಅದ್ಯಾಕೋ ಗೊತ್ತಿಲ್ಲ, ಈ ಆಧುನಿಕ ಅಪಾರ್ಟ್‌ಮೆಂಟ್ ಕಟ್ಟುವವರಿಗೆ ಇಂಗ್ಲಿಷ್ ಹೆಸರುಗಳನ್ನೇ ಇಡುವ ಉಮೇದು. ಆ ತರಹದ ಹೆಸರುಗಳಿಟ್ಟರೆ ಮಾರ್ಕೆಟ್ ವ್ಯಾಲ್ಯೂ ಹೆಚ್ಚಾಗುತ್ತದೆ ಎಂಬುದು ಕಟ್ಟಡ ಕಟ್ಟುವವರ ಅಂಬೋಣ. ಸ್ವಲ್ಪ ಕೆಳ ದರ್ಜೆಯ ಅಪಾರ್ಟ್‌ಮೆಂಟುಗಳಿಗೆ ನಮ್ಮ ಭಾರತೀಯ ಹೆಸರುಗಳನ್ನು ಇಟ್ಟಿರುವುದು ಕಂಡು ಬರುತ್ತದೆ. ಆದರೆ ಕೆಲವೊಮ್ಮೆ ಸಾಮಾನ್ಯ ಜ್ಞಾನವೂ ಇಲ್ಲದಂತೆ ಹೆಸರನ್ನಿಡುತ್ತಾರೆ.ರಿವರ್ ವ್ಯೆ ಅಪಾರ್ಟ್‌ಮೆಂಟಿನ ಮುಂದೆ ದೊಡ್ಡ ವಾಹನ ದಟ್ಟಣೆಯ ರಸ್ತೆಯಿರುತ್ತದೆ. ಸೆವೆನ್ ಹಿಲ್ಸ್ ಅಪಾರ್ಟ್‌ಮೆಂಟಿನೊಳಗೆ ಮಳೆಗಾಲದಲ್ಲಿ ಸಿಕ್ಕಾಪಟ್ಟೆ ನೀರು ನುಗ್ಗುತ್ತದೆ. ಲೇಕ್ ಸೈಡ್ ಅಪಾರ್ಟ್‌ಮೆಂಟಿನ ಕಿಟಕಿಯಲ್ಲಿ ಬೆಳಗಿನ ಜಾವ ನೋಡಿದರೆ ನೂರಾರು ಜನರು ಬಹಿರ್ದೆಶೆಗೆ ಕುಳಿತಿರುತ್ತಾರೆ!ಇತ್ತೀಚೆಗೆ ಅಪಾರ್ಟ್‌ಮೆಂಟಿನ ಸೌಂದರ್ಯ ಪ್ರಜ್ಞೆಯ ಬಗ್ಗೆ ಬಿಲ್ಡರ್‌ಗಳು ಶ್ರಮ ವಹಿಸುತ್ತಿದ್ದಾರೆ. ಸಂಕೀರ್ಣದ ಹೊರ ನೋಟದ ಸಂಪೂರ್ಣ ಹಕ್ಕನ್ನು ಅವರು ಉಳಿಸಿಕೊಳ್ಳುತ್ತಾರೆ. ಮನೆಯೊಳಗೆ ನೀವು ಏನಾದರೂ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾದರೂ, ಹೊರಾಂಗಣಕ್ಕೆ ಕೈ ಹಚ್ಚುವಂತಿಲ್ಲ. ಅದರ ಬಣ್ಣ, ರೂಪ, ನೋಟ- ಎಲ್ಲವೂ ಕಟ್ಟುವುದಕ್ಕೆ ಮುಂಚೆ ಯೋಜಿಸಿದಂತೆಯೇ ಉಳಿಯಬೇಕೆಂದು ಬಿಲ್ಡರ್ಸ್ ಬಯಸುತ್ತಾರೆ. ಹೊರದೇಶದಲ್ಲಿ ಈ ಸೌಂದರ್ಯ ಪ್ರಜ್ಞೆ ಇನ್ನೂ ಹೆಚ್ಚು.ಇಂಗ್ಲೆಂಡಿನಲ್ಲಿ ನಾನು ವಾಸಿಸುತ್ತಿದ್ದ ಅಪಾರ್ಟ್‌ಮೆಂಟಿನಲ್ಲಿ ಡಿಜಿಟಲ್ ಟೀವಿಗೆ ಅವಕಾಶವಿರಲಿಲ್ಲ. ಪುಟ್ಟ ಛತ್ರಿಯನ್ನು ಮನೆಯ ಹೊರಗೆ ದಶದಿಕ್ಕುಗಳಿಗೆ ಲಗತ್ತಿಸುವುದರಿಂದ ಇಡೀ ಬಿಲ್ಡಿಂಗಿನ ಸೌಂದರ್ಯವೇ ಕುಸಿಯುತ್ತದೆಂದು ನಿರ್ಧರಿಸಿ ಬರೀ ಕೇಬಲ್ ಟೀವಿಗೆ ಮಾತ್ರ ಅವಕಾಶ ಕೊಟ್ಟಿದ್ದರು (ಕೇಬಲ್‌ಗಳಿಗೆ ಪೂರ್ವಯೋಜನೆ ಮಾಡಿ ಹೊರಗೆ ಕಾಣದಂತೆ ಮನೆಯೊಳಗೆ ತಂದುಕೊಳ್ಳುವ ಕೊಳವೆಯ ವ್ಯವಸ್ಥೆಯಿತ್ತು).ಮಲೇಷ್ಯಾದಲ್ಲಿಯಂತೂ ನಮ್ಮ ಬಾಲ್ಕನಿಯಲ್ಲಿ ನಮ್ಮ ಬಟ್ಟೆಗಳನ್ನು ಒಣಗಿ ಹಾಕುವುದಕ್ಕೆ ಅನುಮತಿಯಿರಲಿಲ್ಲ. ಹೊಸಬರು ಸಂಕೀರ್ಣಕ್ಕೆ ಬಂದಾಗ ಅವರ ಕಣ್ಣಿಗೆ ಬಾಲ್ಕನಿಯಲ್ಲಿ ತೂಗು ಹಾಕಿದ ಒಳ ಉಡುಪುಗಳು ಕಂಡರೆ ಅಸಹ್ಯವಾಗುತ್ತದೆ ಮತ್ತು ಸಂಕೀರ್ಣದ ಸೌಂದರ್ಯಕ್ಕೆ ಕುತ್ತು ಬರುತ್ತದೆಂಬುದು ಅವರ ನಿಲುವಾಗಿತ್ತು!ಅಪಾರ್ಟ್‌ಮೆಂಟ್ ಕೊಂಡರೂ ಬಿಡಿ ಮನೆಯ ಭಾವವನ್ನು ಅನುಭವಿಸುವ ಹಲವಾರು ಪ್ರಯತ್ನಗಳು ನಡೆಯುತ್ತವೆ. ಅಯ್ಯಂಗಾರಿ ಕುಟುಂಬವೊಂದು ನಾಲ್ಕನೇ ಮಹಡಿಯಲ್ಲಿ ಮನೆಯನ್ನು ಕೊಂಡು, ಗೃಹಪ್ರವೇಶದ ದಿನ ಜೀವಂತ ಹಸುವನ್ನು ಮನೆಯೊಳಗೆ ನುಗ್ಗಿಸುವ ಸಲುವಾಗಿ ಅದನ್ನು ಲಿಫ್ಟಿನಲ್ಲಿ ನಿಲ್ಲಿಸಿ, ಅದು ಹೆದರಿಕೆಯಿಂದ ಕೂಗಿ ಲಿಫ್ಟನ್ನು ಸೆಗಣಿ, ಗಂಜಲದಿಂದ ಪವಿತ್ರಗೊಳಿಸಿದ್ದು ಮಾತ್ರ ಮರೆಯಲಾರದ ಅನುಭವ.ಟೆರೇಸಿನಲ್ಲಿ ಸ್ವಂತ ಈಜುಕೊಳವನ್ನು ಒಬ್ಬರು ನಿರ್ಮಿಸಿಕೊಂಡರೆ, ಬಾಲ್ಕನಿಯಲ್ಲಿ ಬೊನ್ಸಾಯ್ ಕಾಡನ್ನು ಬೆಳೆಸುವವರು ಮತ್ತೊಬ್ಬರು. ನಾಯಿಯನ್ನು ಇಡೀ ದಿನ ಐದನೆಯ ಮಹಡಿಯ ಬಾಲ್ಕನಿಯಲ್ಲಿ ಕಟ್ಟಿ ಹಾಕಿ ಅದು ಮೈದಾನದಲ್ಲಿ ಹೋಗಿ ಬರುವವರನ್ನೆಲ್ಲಾ `ನನ್ನನ್ನು ಮಾತನಾಡಿಸಿರೋ...~ ಎಂಬಂತೆ ಆರ್ತ ಧ್ವನಿಯಲ್ಲಿ ಬೊಗಳುವುದನ್ನು ಜೀರ್ಣಿಸಿಕೊಳ್ಳುವುದು ಕಷ್ಟ.   

  

 ಮನೆಯ ಮುಂದೆ ಕಷ್ಟ ಪಟ್ಟು ಹಾಕಿದ ರಂಗೋಲಿಯನ್ನು ಹೌಸ್‌ಕೀಪಿಂಗ್‌ನವರು ಕೆಲವೇ ಗಂಟೆಗಳಲ್ಲಿ ಗುಡಿಸಿ ಸಾರಿಸಿ ಬಿಡುವ ಗಲಾಟೆ ಮತ್ತೊಂದು ಕಡೆಗೆ. `ರಥಸಪ್ತಮಿ~ಯ ದಿನ ಗೊಬ್ಬಿಳ್ಳುಗಳ ಬೆಂಕಿಯಲ್ಲಿ ಪಾಯಸವನ್ನು ಬೇಯಿಸಿ ಲಿಫ್ಟ್ ಮುಂದಿನ ಗ್ರಾನೈಟ್ ಕಲ್ಲನ್ನು ಕಪ್ಪು ಮಾಡುವವರು ಇನ್ನೊಬ್ಬರು.ವೈವಿಧ್ಯಮಯ ವಸ್ತುಗಳನ್ನು ಮಾರುವ ಸೇಲ್ಸ್‌ಮೆನ್‌ಗಳು, ತರಕಾರಿ-ತಿಂಡಿ-ತಿನಸುಗಳನ್ನು ಮಾರುವ ಬೀದಿ ವ್ಯಾಪಾರಿಗಳು, ಕೊನೆಗೆ ಸಂಕ್ರಾಂತಿಯ ದಿನ ಗಂಗೆತ್ತಿನ ಮೇಳವೂ ಇಲ್ಲದೆ ಪರಿತಪಿಸುವವರು ಮತ್ತೊಬ್ಬರು. ಮನೆ ಮಗಳ ಮದುವೆಯ ದಿನ ಹಂದರ ಹಾಕುವುದು ಹೇಗೆಂದು ತಿಳಿಯದೆ ಗೊಂದಲಗೊಳ್ಳುವ ಸಂಪ್ರದಾಯಸ್ಥರು ಕೆಲವರು.ಅಂಗಳದಲ್ಲಿರಬೇಕಾದ ತುಳಸಮ್ಮ ಒಕ್ಕಲೆಬ್ಬಿಸಿಕೊಂಡು ಹಿತ್ತಲಿನ ಬಾಲ್ಕನಿಯಲ್ಲಿ ನೆಲದ ಸ್ಪರ್ಶವಿಲ್ಲದೆ ಅಂತರಿಕ್ಷದಲ್ಲಿ ನೇತಾಡುತ್ತಾ ಪೂಜೆ ಮಾಡಿಸಿಕೊಳ್ಳುವಾಗ ಗೊಳೋ ಎಂದು ಅಳುತ್ತಾಳೆ!ಈ ಅಪಾರ್ಟ್‌ಮೆಂಟ್ ಕಟ್ಟಿದ ಹೊಸತರಲ್ಲಿ ಇಲ್ಲಿ ಸಾಕಷ್ಟು ಇಲಿಗಳಿದ್ದವು. ದಪ್ಪ ದಪ್ಪ ಹೆಗ್ಗಣ ಗಾತ್ರದ ಇಲಿಗಳವು. ಬಹುಶಃ ಬೆಳೆ ಬೆಳೆಯುತ್ತಿದ್ದ ಹೊಲವೊಂದು ನಗರದ ಬೆಳವಣಿಗೆಗೆ ತತ್ತರಿಸಿ ಅಪಾರ್ಟ್‌ಮೆಂಟಿಗೆ ಶರಣಾಗಿರಬೇಕು. ಯುದ್ಧದಲ್ಲಿ ಸೋತ ದೇಶದ ಪ್ರಜೆಗಳಂತೆ ಈ ಇಲಿಗಳು ಕಂಗಾಲಾಗಿ ಇಡೀ ಅಪಾರ್ಟ್‌ಮೆಂಟಿನ ತುಂಬೆಲ್ಲಾ ಓಡಾಡುತ್ತಿದ್ದವು. ಬಿಲ ತೋಡಲು ಸಾಧ್ಯವಿಲ್ಲದ ಈ ಕಾಂಕ್ರಿಟ್ ಗೋಡೆಗಳನ್ನು ಕೆದರಿ ಕೆದರಿ ತಮ್ಮ ಹಲ್ಲುಗಳನ್ನು ಮೊಂಡು ಮಾಡಿಕೊಂಡವು.ವಿಷಕ್ಕೆ ಬಲಿಯಾಗಿ, ಬೋನಿನಲ್ಲಿ ಸಿಕ್ಕು, ಹೊಡೆತಕ್ಕೆ ಅಸುನೀಗಿ ನಿಧಾನಕ್ಕೆ ಒಂದೊಂದಾಗಿ ನಾಶವಾಗುತ್ತಾ ಬಂದು ಈಗಂತೂ ಇಲಿಗಳು ಕಾಣಿಸುವದಿಲ್ಲ. ನಾವು ಶತ್ರು ನೆಲವನ್ನು ಸಂಪೂರ್ಣವಾಗಿ ವಶ ಪಡಿಸಿಕೊಂಡಿದ್ದೇವೆ!ಹೊಸತರಲ್ಲಿ ಮನೆಯ ಬಾಗಿಲ ಮುಂದಿಟ್ಟಿದ್ದ ವಯರ್ ಬುಟ್ಟಿಯಲ್ಲಿ ಮೂರು ಹಾಲಿನ ಚೀಟಿಯಿಟ್ಟಿದ್ದರೆ, ಎರಡು ಪಾಕೇಟುಗಳು ಇರುತ್ತಿದ್ದವು. ಎರಡಕ್ಕೆ ಚೀಟಿಯನ್ನಿಟ್ಟಿದ್ದರೆ ಒಂದೂ ಇರುತ್ತಿರಲಿಲ್ಲ. ಹಾಲಿನ ಹುಡುಗರ ಮೇಲೆ ಮನೆಯ ಯಜಮಾನರು ದೂರಿತ್ತರೆ, ಅವರು ತಾವು ಖಂಡಿತಾ ತಪ್ಪು ಮಾಡಿಲ್ಲವೆಂದು ಪ್ರಮಾಣ ಮಾಡುತ್ತಿದ್ದರು.ಹಾಲನ್ನು ನೇರವಾಗಿ ನಿಮ್ಮ ಕೈಗೇ ಕೊಡುತ್ತೇವೆಂದು ಹುಡುಗರು ಹೇಳಿದರೆ, ಆ ಬೆಳಿಗ್ಗೆ ಐದಕ್ಕೆ ಏಳುವುದಕ್ಕೆ ಯಜಮಾನರ ಮನೆಯವರು ಸಿದ್ಧರಿರಲಿಲ್ಲ. ಕೊನೆಗೆ ಇಡೀ ಅಪಾರ್ಟಮೆಂಟಿಗೆ ಸಿ.ಸಿ. ಟೀವಿ ಅಳವಡಿಸಿದರು.ಸದ್ದುಗದ್ದಲವಿಲ್ಲದೆ ಕೋತಿಗಳ ಗುಂಪೊಂದು ಬಂದು ಹಾಲಿನ ಪಾಕೇಟುಗಳನ್ನು ಕೊಂಡೊಯ್ಯುವುದು ಗೊತ್ತಾಯಿತು. ಹಿಂದೆ ಹೊಲದಲ್ಲಿದ್ದ ಯಾವ ಹಣ್ಣಿನ ಮರದ ಆಸೆಗೆ ಅವು ಅಲ್ಲಿಗೆ ಬರುತ್ತಿದ್ದವೋ ಗೊತ್ತಿಲ್ಲ. ಈಗ ಅವೊಂದೂ ಸಿಕ್ಕದೆ ಹಾಲಿನ ಪಾಕೇಟಿಗೆ ತೃಪ್ತಿಪಟ್ಟುಕೊಳ್ಳುತ್ತಿದ್ದವು.ಸೆಕ್ಯೂರಿಟಿಯವರು ಈಗ ಜಾಗೃತಗೊಂಡಿದ್ದಾರೆ. ಕೋತಿಯ ಚಿತ್ರ ಕಂಪ್ಯೂಟರ್ ಪರದೆಯ ಮೇಲೆ ಮೂಡಿದರೆ ಸಾಕು, ತಕ್ಷಣ ಓಡಿ ಹೋಗಿ ಕಪಿಗಳನ್ನು ಓಡಿಸುತ್ತಾರೆ. ಈಗ ನಾವು ವಾನರ ಸೈನ್ಯದ ಮೇಲೂ ವಿಜಯ ಸಾಧಿಸಿದ್ದೇವೆ!ಅಪಾರ್ಟ್‌ಮೆಂಟ್‌ನಲ್ಲಿ ಇರುವವರೆಲ್ಲರೂ ಸಾಮಾನ್ಯವಾಗಿ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದವರು. ಸಾಕಷ್ಟು ಒಳ್ಳೆಯ ಹುದ್ದೆಯಲ್ಲಿರುವವರು. ದೇಶ-ವಿದೇಶ ಸುತ್ತಿದವರು. ಒಟ್ಟಾರೆ ಬದುಕಿನಲ್ಲಿ ಯಶಸ್ಸು ಕಂಡವರು. ಆದ್ದರಿಂದ ಇಲ್ಲಿ ಯಾವುದೇ ಒಂದು ಪುಟ್ಟ ಸಲಹೆ ಕಾರ್ಯರೂಪಕ್ಕೆ ಬರುವುದೂ ಇನ್ನಿಲ್ಲದ ಕಷ್ಟಕರ ಸಂಗತಿ! ಒಬ್ಬರು ಒಂದು ಸಲಹೆ ಇತ್ತರೆ ಸಾಕು, ನೂರು ಧ್ವನಿಗಳು ಅದರಲ್ಲಿ ಇಲ್ಲದ ಅನುಮಾನಗಳನ್ನು ಹುಡುಕುತ್ತವೆ.ಪ್ರತಿಯೊಂದು ಸಮಸ್ಯೆಗೂ ಅಂತರ್ಜಾಲದ ಮೂಲಕ ಪರಿಹಾರವನ್ನು ಕಾಣಲು ಹರಸಾಹಸ ಪಡುತ್ತಾರೆ. ಯಾಹೂ ರಣರಂಗದಲ್ಲಿ ತಮ್ಮ ಇ-ಮೇಲ್, ಮೆಸೇಜ್, ವೀಡಿಯೋಗಳೆಂಬ ಕತ್ತಿ, ಗದೆ, ಬಾಣಗಳಿಂದ ಹೋರಾಡುತ್ತಾರೆ.

 

ಒಂದು ನೂರು ರೂಪಾಯಿ ಚಂದಾವನ್ನು ಈ ಕೋಟ್ಯಾಧಿಪತಿಗಳಿಂದ ಸಂಗ್ರಹಿಸಲು ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಒದ್ದಾಡಿ ಹೋಗುತ್ತದೆ! ಮೂರು ತಿಂಗಳಿಗೊಮ್ಮೆ ಮನೆಗಳ ಯಜಮಾನರೆಲ್ಲರೂ ಸೇರಿ ಸಭೆ ಮಾಡಬೇಕೆಂಬುವುದು ನಿಯಮ.ಇದೊಂದು ಮಾತ್ರ ಆ ದೇವರಿಂದಲೂ ಸಾಧಿಸುವುದು ಸಾಧ್ಯವಿಲ್ಲ! ನಿಮಿಷಕ್ಕೆ ನೂರು ಇ-ಮೇಲ್ ಕಳುಹಿಸುವ ಈ ಆಧುನಿಕ ಯಜಮಾನರು, ಐದು ನಿಮಿಷ ವೈಯಕ್ತಿಕ ಸಮಯವನ್ನು ಯಾರಿಗೂ ಕೊಡಲಾಗುವದಿಲ್ಲ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಎಡೆಬಿಡದೆ ದುಡಿಯುವ ಈ ಕಷ್ಟಜೀವಿಗಳ ಬಗ್ಗೆ ನಿಜಕ್ಕೂ ಅನುಕಂಪವಾಗುತ್ತದೆ.ಅದೇ ರೀತಿ ಯಾರ ಸಮಯವೂ ಸಿಗದೆ ಹೇಗೆ ಅಸೋಸಿಯೇಷನ್ ಆಫೀಸ್ ನಡೆಸಬೇಕೆಂದು ಒದ್ದಾಡುವ ಮೇನೇಜ್‌ಮೆಂಟ್ ಕಮಿಟಿಯ ಬಗ್ಗೆಯೂ ಅನುಕಂಪವಾಗುತ್ತದೆ.ಇಷ್ಟೆಲ್ಲಾ ಕಷ್ಟಗಳ ನಡುವೆಯೂ ದಿನನಿತ್ಯದ ಕೆಲಸಗಳು ನಿರಾತಂಕವಾಗಿ ನಡೆದುಕೊಂಡು ಹೋಗುವಂತೆ, ವಾರ್ಷಿಕ ಹಬ್ಬಗಳಾದ ದೀಪಾವಳಿ, ಹೋಳಿ, ರಾಜ್ಯೋತ್ಸವ, ಹೊಸವರ್ಷಗಳನ್ನು ಸೊಗಸಾಗಿ ನಿಭಾಯಿಸುವುದು, ಪ್ರಾಮಾಣಿಕವಾಗಿ ವರ್ಷದ ಆಯವ್ಯಯ ಪಟ್ಟಿಯನ್ನು ಪ್ರಕಟಿಸುವುದು ಅವರ ಸಾಧನೆಯೇ ಆಗಿದೆ. ಯಾವುದೇ ಚಿಕ್ಕಾಸನ್ನೂ ಪಡೆಯದೆ ಸುಮ್ಮನೆ ಅಪಾರ್ಟ್‌ಮೆಂಟಿನ ಪ್ರೀತಿಯಿಂದ ಈ ಜವಾಬ್ದಾರಿಯನ್ನು ನಿಭಾಯಿಸುವುದು ಸುಲಭದ್ದಲ್ಲ.ಆದರೆ ಅಪಾರ್ಟ್‌ಮೆಂಟಿನ ಹಿರಿಯ ಜೀವಿಗಳು `ಎಲ್ಡರ್ಸ್ ಕ್ಲಬ್~ ಮಾಡಿಕೊಂಡು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ದಿನನಿತ್ಯ ಇವರ ಸಂಘದಲ್ಲಿ ಚಟುವಟಿಕೆಗಳಿರುತ್ತವೆ.ಎಲ್ಲರೂ ಸೇರಿ ಭಜನೆ ಮಾಡುತ್ತಾರೆ, ಹರಟೆ ಹೊಡೆಯುತ್ತಾರೆ, ಹತ್ತಿರದ ಆಸ್ಪತ್ರೆಯೊಂದಿಗೆ ಮಾತನಾಡಿ ಉಚಿತವಾಗಿ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಿಸುತ್ತಾರೆ, ಆ ಭಾಗದ ಪಾಲಿಕೆಯ ಪ್ರತಿನಿಧಿಯನ್ನು ಕರೆಸಿ ಸನ್ಮಾನ ಮಾಡಿ ತಮ್ಮ ಅಹವಾಲನ್ನು ಇಡುತ್ತಾರೆ, ಭರ್ಜರಿಯಾಗಿ ಗಣೇಶನನ್ನು ಕೂಡಿಸಿ ಮೈದಾನದಲ್ಲಿ ಮೆರವಣಿಗೆ ಮಾಡುತ್ತಾರೆ,ಇತ್ತೀಚೆಗೆ ಅಗಲಿದ ತಮ್ಮ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾರೆ, ಯಾವುದೋ ಸಂಗೀತ ಸಂಜೆಯನ್ನು ಮಾಡಿಸಿ ಎಲ್ಲರಿಗೂ ಊಟ ಹಾಕಿಸಿ ಬಿಡುತ್ತಾರೆ, ಅಪಾರ್ಟ್‌ಮೆಂಟಿನವರು ಯಾರಾದರೂ ಸಾಧನೆ ಮಾಡಿದರೆ ಅದನ್ನು ನೋಟೀಸು ಬೋರ್ಡಿನಲ್ಲಿ ಹಾಕಿ ಸಂಭ್ರಮಿಸುತ್ತಾರೆ, ಕನ್ನಡ ಕಲಿಸುವ ಕ್ಲಾಸುಗಳನ್ನು ನಡೆಸಿ ನೂರಾರು ಕನ್ನಡೇತರರಿಗೆ ಸೊಗಸಾಗಿ ಕನ್ನಡ ಕಲಿಸಿ ಬಿಟ್ಟಿದ್ದಾರೆ!ಬಳ್ಳಾರಿ ಜಿಲ್ಲೆಯಿಂದ ಬಂದ ನನಗೆ ಅಪಾರ್ಟ್‌ಮೆಂಟಿನಲ್ಲಾಗುವ ಯಥೇಚ್ಚ ನೀರಿನ ಬಳಕೆಯನ್ನು ನೋಡಿ ವಿಶಿಷ್ಟ ಸಂಕಟವಾಗುತ್ತದೆ. ಊರಿನಲ್ಲಿ ನಾಲ್ಕು ಓಣಿಗೆ ಸೇರಿ ಇರುವ ಒಂದು ನೀರಿನ ಕೊಳಾಯಿಯಲ್ಲಿ ದಿನದ ಯಾವುದೋ ಹೊತ್ತಿನಲ್ಲಿ ಒಂದೆರಡು ತಾಸು ನೀರು ಬಂದರೆ, ನಾವು ಮನೆಯವರೆಲ್ಲಾ ಹೋರಾಡಿ ನಮ್ಮ ಬಚ್ಚಲ ಮನೆಯ ಹಂಡೆಯನ್ನು ತುಂಬಿಸುತ್ತಿದ್ದೆವು.

 

ಈಗ ನನ್ನ ಮನೆಯಲ್ಲಿ ಹದಿನೈದಕ್ಕೂ ಹೆಚ್ಚು ನಲ್ಲಿಗಳಿದ್ದು, ಎಲ್ಲದರಲ್ಲೂ ಸರ್ವಕಾಲವೂ ನೀರು ಬರುತ್ತದೆಂಬ ಸಂಗತಿ ಭಯ ಹುಟ್ಟಿಸುತ್ತದೆ. ಅಪಾರ್ಟ್‌ಮೆಂಟ್ ವಾಸಿಗಳೆಲ್ಲರೂ ಮನಸೋ ಇಚ್ಛೆ ನೀರನ್ನು ಬಳಸುತ್ತಾರೆ. ಸುಮ್ಮನೆ ಹತ್ತು ಹನಿ ಮೂತ್ರ ವಿಸರ್ಜಿಸಿದರೂ ಸಾಕು, ಫ್ಲಷ್ ಮೂಲಕ ಹತ್ತು ಲೀಟರ್ ನೀರು ನಿರ್ನಾಮವಾಗುತ್ತದೆ. ಕಾರುಗಳು ಪ್ರತಿನಿತ್ಯ ನೀರಲ್ಲಿ ಸ್ನಾನ ಮಾಡಿ ಕಂಗೊಳಿಸುತ್ತವೆ. ಗಿಡ-ಗಂಟಿಗಳೆಲ್ಲವೂ ಸೊಗಸಾಗಿ ನೀರು ಕಾಣುತ್ತವೆ.ಸಂಕಟದ ವಿಷಯವೆಂದರೆ ಪಕ್ಕದಲ್ಲಿಯೇ ಇರುವ ಹಳ್ಳಿಯಲ್ಲಿ ವಾರಕ್ಕೆ ಒಮ್ಮೆ ಮಾತ್ರ ನೀರು ಬರುತ್ತದಂತೆ! ಮನೆಯ ಕೆಲಸಕ್ಕೆ ಬರುವ ಹೆಂಗಸರು ಇನ್ನಿಲ್ಲದಂತೆ ತಮ್ಮ ನೀರಿನ ಸಮಸ್ಯೆಯನ್ನು ತೋಡಿಕೊಳ್ಳುತ್ತಾರೆ. ತಮಾಷೆಯೆಂದರೆ ಇವರೂ ತಮ್ಮ ಮನಸ್ಸಿಗೆ ಬಂದಂತೆ ನೀರನ್ನು ಪೋಲು ಮಾಡುತ್ತಾರೆ! ಎಷ್ಟೇ ಬೇಡಿಕೊಂಡರೂ ಮಿತವಾಗಿ ನೀರನ್ನು ಬಳಸುವದಿಲ್ಲ. ಇದು ಹೀಗೇ ಎಷ್ಟು ಕಾಲ ಮುಂದುವರೆಯಲು ಸಾಧ್ಯವೆಂದು ನನಗೆ ಆತಂಕವಾಗುತ್ತದೆ.ಆಧುನಿಕ ಜೀವನ ಶೈಲಿಯಲ್ಲಿ ಬದುಕುವ ಪ್ರತಿಯೊಬ್ಬ ಬೆಂಗಳೂರಿನವರನ್ನು ಸಂಸಾರ ಸಮೇತ ಎರಡು ತಿಂಗಳ ಕಾಲ ಬಳ್ಳಾರಿ ಜಿಲ್ಲೆಯ ಹಳ್ಳಿಯಲ್ಲಿ ಕಡ್ಡಾಯವಾಗಿ ಬದುಕಿ ಬರಬೇಕೆಂಬ ಕಾಯ್ದೆಯನ್ನು ಮಾಡಿದರೆ ಒಳ್ಳೆಯದಾಗುತ್ತೆನ್ನಿಸುತ್ತದೆ! 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry