ಧರೆಗುರುಳಿದ ಮರ, ರಸ್ತೆಗಳು ಜಲಾವೃತ

7
ಅಬ್ಬರಿಸಿರ ವರುಣ, ಸಂಚಾರಕ್ಕೆ ಪರದಾಡಿದ ನಾಗರಿಕರು

ಧರೆಗುರುಳಿದ ಮರ, ರಸ್ತೆಗಳು ಜಲಾವೃತ

Published:
Updated:

ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ ಸಂಜೆ ದಿಢೀರ್ ಮಳೆ ಸುರಿಯಿತು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ನಗರ ಹಾಗೂ ಹರಪನಹಳ್ಳಿಯಲ್ಲಿ ಸಂಜೆ ಪ್ರಾರಂಭವಾದ ಮಳೆ, ಸತತ ಎರಡು ಗಂಟೆಗಳ ಕಾಲ ಬಿಡದೇ ಸುರಿಯಿತು.ಜಿಲ್ಲೆಯ ಹರಪನಹಳ್ಳಿಯಲ್ಲಿ 20 ದಿನಗಳಿಂದ ಕಣ್ಮರೆಯಾಗಿದ್ದ ಮಳೆರಾಯ ಮತ್ತೆ ಆಗಮಿಸಿದ ಹಿನ್ನೆಲೆಯಲ್ಲಿ ರೈತರು ನಿಟ್ಟುಸಿರುಬಿಟ್ಟರು. ಮಳೆಯಿಲ್ಲದೇ ಬೆಳೆಗಳು ಒಣಗಲು ಪ್ರಾರಂಭಿಸಿದ್ದವು. ವರುಣ ಕೃಪೆ ತೋರಿದ ಹಿನ್ನೆಲೆಯಲ್ಲಿ ರೈತರು ಹರ್ಷಗೊಂಡಿದ್ದಾರೆ.ಆಜಾದ್ ನಗರ, ಶೇಖರಪ್ಪ ನಗರ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಂಡಿಪೇಟೆಯ ರಸ್ತೆಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರಬಿದ್ದು ಹಾನಿಯಾಯಿತು. ಅಲ್ಲಿಯೇ ಮತ್ತೊಂದು ಬೃಹತ್ ಮರ ರಸ್ತೆಯ ಮೇಲೆ ಉರುಳಿತು. ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ಪಿ.ಬಿ. ರಸ್ತೆಯ ವಿಭಜಕದಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬವೊಂದು ಉರುಳಿ ಬಿತ್ತು. ರೈಲ್ವೆ ಕೆಳಸೇತುವೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ ಪರಿಣಾಮ ವಾಹನ ಸವಾರರು ಪರದಾಡಿದರು. ಅಲ್ಲಲ್ಲಿ ಮರಗಳು ಉರುಳಿದ ಘಟನೆಗಳು ನಡೆದಿವೆ.ಹರಪನಹಳ್ಳಿ, ಚಿಗಟೇರಿಯಲ್ಲಿ ಮಳೆ ಆರ್ಭಟ ಜೋರಾಗಿತ್ತು. ಮಳೆಯ ಜತೆಗೆ ಗಾಳಿಯೂ ಅಬ್ಬರಿಸಿದ ಪರಿಣಾಮ ವಿದ್ಯುತ್ ಕಡಿತ ಮಾಡಲಾಗಿತ್ತು. ಕೋಟೆಯ ಆಂಜನೇಯ ದೇವಸ್ಥಾನ ಬಳಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಯಿತು. ಇನ್ನು ಬಿಎಸ್ಸೆನ್ನೆಲ್ ಕಚೇರಿ, ಗ್ರಂಥಾಲಯ, ದೂರದರ್ಶನ ಮರುಪ್ರಸಾರ ಕೇಂದ್ರ, ಡಿವೈಎಸ್ಪಿ ಕಚೇರಿಯ ಬಳಿಯ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry