ಸೋಮವಾರ, ಏಪ್ರಿಲ್ 19, 2021
29 °C

ಧರ್ಮದಲ್ಲಿ ರಾಜಕೀಯ ಸಲ್ಲ- ವಿ.ಎಸ್. ಉಗ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಾಪಟ್ಟಣ: ಧಾರ್ಮಿಕ ಕ್ಷೇತ್ರ ಪರಮ ಪವಿತ್ರವಾದದ್ದು. ಅದರಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು ಎಂದು ರಾಜ್ಯ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ನುಡಿದರು. ಅವರು ಇಲ್ಲಿಗೆ ಸಮೀಪದ ಕೆಂಗಾಪುರದ ರಾಮಲಿಂಗೇಶ್ವರಸ್ವಾಮಿ ಮಠದಲ್ಲಿ ಗುರುವಾರ ಏರ್ಪಡಿಸಿದ್ದ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಕಷ್ಟ, ಕಾರ್ಪಣ್ಯಗಳಲ್ಲಿ ನೊಂದ ಜನತೆಗೆ ಸಾಂತ್ವನ ಹೇಳಿ ಅವರ ಜೀವನದಲ್ಲಿ ನೆಮ್ಮದಿ ನೀಡುವುದು ಹಾಗೂ ದಾರಿತಪ್ಪಿದ ಜನರಿಗೆ ಉತ್ತಮ ಮಾರ್ಗ ತೋರಿಸುವುದು ಧಾರ್ಮಿಕ ಮುಖಂಡರ ಮಹತ್ಕಾರ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ಧಾರ್ಮಿಕ ಮುಖಂಡರು ಭ್ರಷ್ಟ ರಾಜಕೀಯ ಧುರೀಣರ ಕಾರ್ಯ ವೈಖರಿಯನ್ನು ಬೆಂಬಲಿಸುತ್ತಿರುವುದು ನಿಜಕ್ಕೂ ವಿಷಾದನೀಯ. ಇದರಿಂದ ಮಠಗಳ ಮೇಲೆ ನಂಬಿಕೆ ಇಟ್ಟ ಜನರಿಗೆ ನಿರಾಶೆ ಮೂಡುವುದರೊಂದಿಗೆ ಇಂತಹ ಕ್ಷೇತ್ರಗಳ ಪಾವಿತ್ರತೆಯೂ ಹಾಳಾಗುತ್ತದೆ ಎಂದು ಉಗ್ರಪ್ಪ ನುಡಿದರು.ಪಾಂಡೋಮಟ್ಟಿಯ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಮಾತನಾಡಿ, ಇತ್ತೀಚೆಗೆ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಾಣೆಯಾಗುತ್ತಿವೆ. ಸತ್ಯ, ಧರ್ಮ, ಶಾಂತಿ, ಪ್ರೇಮ, ತ್ಯಾಗ ಎಂಬ ಪದಗಳು ಜೀವನದಿಂದ ಮರೆಯಾಗುತ್ತಿವೆ. ಇದರಿಂದ ಸಮಾಜ ಮುಂದೆ ಘೋರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದಕ್ಕೆ ಮುಂಚೆ ಸಾಮಾಜಿಕ ಜಾಗೃತಿ ಅಗತ್ಯ ಎಂದು ನುಡಿದರು.ಅಧ್ಯಕ್ಷತೆ ವಹಿಸಿದ್ದ ರಾಮಲಿಂಗೇಶ್ವರಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ನೋವುಗಳಿಗೆ ಸ್ಪಂದಿಸುವುದೇ ನಮ್ಮ ಮಠದ ಗುರಿ. ಅನಕ್ಷರತೆಯನ್ನು ಹೋಗಲಾಡಿಸಿ, ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಮಠದಿಂದ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.ಸರ್ದಾರ್ ಸೇವಾಲಾಲ್ ಸ್ವಾಮೀಜಿ, ದಾವಣಗೆರೆಯ ಬಸವಪ್ರಭು ಸ್ವಾಮೀಜಿ, ಗುಲ್ಬರ್ಗದ ಸಿದ್ಧಬಸವ ಕಬೀರ ಸ್ವಾಮೀಜಿ, ಚಿತ್ರದುರ್ಗದ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಮುಂತಾದವರು ಮಾತನಾಡಿದರು.ಧರ್ಮಸಭೆಯ ಅಂಗವಾಗಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ 18 ಜೋಡಿ ವಧು-ವರರು ಗೃಹಸ್ಥಾಶ್ರಮ ಸ್ವೀಕರಿಸಿದರು. ಅವರಿಗೆ ಮಠದ ವತಿಯಿಂದ ಮಾಂಗಲ್ಯ ಮತ್ತು ಬಟ್ಟೆಯನ್ನು ವಿತರಿಸಲಾಯಿತು. ಗುರುವಾರ ಮುಂಜಾನೆ ನಡೆದ ರಾಮಲಿಂಗೇಶ್ವರ ಸ್ವಾಮೀಜಿ ಅವರ ಮುಳ್ಳುಗದ್ದುಗೆ ಉತ್ಸವದಲ್ಲಿ ಸಹಸ್ರಾರು ಜನಭಕ್ತರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.