ಧರ್ಮಪ್ರಚಾರ: ಹದಿನೈದು ವಿದೇಶಿಯರ ಬಂಧನ
ಬಾಗಲಕೋಟೆ: ಪ್ರವಾಸಿ ವೀಸಾದೊಂದಿಗೆ ಆಗಮಿಸಿ ಜಿಲ್ಲೆಯ ವಿವಿಧ ಪ್ರಾರ್ಥನಾ ಮಂದಿರಗಳಲ್ಲಿ ಅಕ್ರಮವಾಗಿ ಧರ್ಮಪ್ರಚಾರ ಮಾಡುತ್ತಿದ್ದ ಆರೋಪದ ಮೇರೆಗೆ ವಿವಿಧ ದೇಶಗಳ ಹದಿನೈದು ಪ್ರಜೆಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಈಜಿಪ್ತ್, ಯೆಮನ್, ಜೋರ್ಡಾನ್ ಮತ್ತಿತರ ದೇಶಗಳಿಂದ ಬಂದಿದ್ದ ಹದಿನೈದು ಜನರ ತಂಡವು ಜಿಲ್ಲೆಯ ವಿವಿಧ ಮಸೀದಿ ಹಾಗೂ ಸಂಘ-ಸಂಸ್ಥೆಗಳಲ್ಲಿ ಧರ್ಮ ಪ್ರಚಾರದಲ್ಲಿ ತೊಡಗಿತ್ತು ಎನ್ನಲಾಗಿದೆ. ಪ್ರವಾಸಿ ವೀಸಾದೊಂದಿಗೆ ನೇರವಾಗಿ ಬಾಗಲಕೋಟೆಗೆ ಬಂದಿಳಿದ ಈ ತಂಡವು ನಗರದ ಇಲಿಯಾಸ್ ಮಸೀದಿಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿತ್ತು.
ಒಂದು ತಿಂಗಳವರೆಗೆ ಜಿಲ್ಲೆಯಾದ್ಯಂತ ಪ್ರಚಾರ ನಡೆಸುವ ಉದ್ದೇಶ ಹೊಂದಿದ್ದ ಈ ತಂಡದ ಸದಸ್ಯರು ಶುಕ್ರವಾರ ಜಮಖಂಡಿಯ ಮಸೀದಿಯೊಂದಕ್ಕೆ ಉಪನ್ಯಾಸ ನೀಡಲು ತೆರಳಿದ್ದರು.
ವಿಷಯ ತಿಳಿದೊಡನೆ ಸ್ಥಳಕ್ಕೆ ತೆರಳಿದ ಪೊಲೀಸರು, ವಿದೇಶಿ ಪ್ರಜೆಗಳನ್ನು ಕರೆತಂದು ವಿಚಾರಣೆ ನಡೆಸಿದಾಗ ಧರ್ಮಪ್ರಚಾರದ ಮಾಹಿತಿ ಹೊರಬಿತ್ತು.
ಧರ್ಮ ಪ್ರಚಾರನಿರತ ತಂಡದ ಸದಸ್ಯರನ್ನು ಕರೆತಂದು ವಿಚಾರಣೆ ನಡೆಸಿದ ಬಳಿಕವೇ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿದೇಶಿ ಪ್ರಜೆಗಳ ವಿರುದ್ಧ ವೀಸಾ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಸಂಪೂರ್ಣ ಮಾಹಿತಿ ಕಲೆಹಾಕಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಗೋಯಲ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.