ಮಂಗಳವಾರ, ಮಾರ್ಚ್ 9, 2021
29 °C

ಧರ್ಮಸಂಕಟ

ಪ್ರಸನ್ನ Updated:

ಅಕ್ಷರ ಗಾತ್ರ : | |

ಧರ್ಮಸಂಕಟ

ಧರ್ಮವು ಒಂದು ಸಂದಿಗ್ಧವನ್ನು ಎದುರಿಸುತ್ತಿದೆ. ಧರ್ಮವೆಂದರೆ ಏನು, ಅದು ಬದುಕಿನ ಒಂದು ಸಾಧನೆಯೋ ಅಥವಾ ಮಾರಾಟವಾಗಬಲ್ಲ ಪದಾರ್ಥವೋ ಎಂದೇ ತಿಳಿಯದಂತಾಗಿದೆ ಇಂದು.ಒಂದು ಕಡೆಯಿಂದ ಧಾರ್ಮಿಕ ಪದಾರ್ಥಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತ ನಡೆದಿದೆ, ಇನ್ನೊಂದು ಕಡೆಯಿಂದ ಅಧರ್ಮವು ಹಿಂದೆಂದಿಗಿಂತಲೂ ಮಿಗಿಲಾಗಿ ತಾಂಡವವಾಡುತ್ತಿದೆ. ಈ ಧರ್ಮಸಂಕಟದ ಮೂಲ ಯಾವುದು ಎಂದು ತಿಳಿದುಕೊಳ್ಳುವ ಪ್ರಯತ್ನ ಈ ಲೇಖನ.ಧಾರ್ಮಿಕ ಪದಾರ್ಥಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದೆ: ಇದು ಹಲವು ರೀತಿಗಳಲ್ಲಿ ಆಗುತ್ತಿದೆ. ಧಾರ್ಮಿಕ ಕಾರ‌್ಯಗಳಿಗಾಗಿ ಹಣ ಸುರಿಯುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ, ಮಾತ್ರವಲ್ಲ ಒಟ್ಟಾರೆಯಾಗಿ ಧರ್ಮವೆಂಬ ಹೆಸರಿನ `ಪದಾರ್ಥ~ವನ್ನು ಮಾರುವವರು ಹಾಗೂ ಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಪ್ರತಿದಿನ ಹೊಸಹೊಸ ಮಠಗಳು ಸನ್ಯಾಸಿಗಳು ಸ್ವಾಮಿಗಳು ಸಾಧಕರು ಬೋಧಕರು ಪ್ರವಚನಕಾರರು ಹುಟ್ಟಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೊಸಹೊಸ ಭಕ್ತಿಗೀತೆಯ ಕ್ಯಾಸೆಟ್ಟುಗಳು ಪ್ರಾರ್ಥನಾ ಶಿಬಿರಗಳು ಯೋಗ ಶಿಬಿರಗಳು ಪೂಜೆ ಪುನಸ್ಕಾರಗಳು ಯಾತ್ರೆ ಹಾಗೂ ವ್ರತಗಳು ಲಭ್ಯವಾಗತೊಡಗಿವೆ.

 

ಅದೆಷ್ಟೇ ಬೆಲೆ ತೆತ್ತಾದರೂ ಸರಿ ಧಾರ್ಮಿಕ ಪದಾರ್ಥಗಳನ್ನು ಕೊಂಡೇ ತೀರುತ್ತೇವೆ ಎಂದು ಜನರು ಮುಗಿಬೀಳತೊಡಗಿದ್ದಾರೆ. ಸರಳವಾಗಿ ಹೇಳುವುದಾದರೆ ಶ್ರಮದ ಸಾಧನೆಯ ಮೂಲಕ ಲಭ್ಯವಾಗಬೇಕಿದ್ದ ಧರ್ಮವು ಹಣಕ್ಕೆ ಮಾರಾಟವಾಗತೊಡಗಿದೆ.ಹಿಂದೆಲ್ಲ ಕಾವಿಬಟ್ಟೆಯು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಗೊಳ್ಳಲು ನಾಚುತ್ತಿತ್ತು, ತನಗೆಂದು ನಿಯುಕ್ತವಾದ `ಪವಿತ್ರ~ ಸ್ಥಳಗಳಲ್ಲಿ ಮಾತ್ರವೇ ಅದು ಅವಿತಿರುತ್ತಿತ್ತು. ಈಗ ಕಾವಿಬಟ್ಟೆ ಅಥವಾ ಮುಸಲರ ಹಸಿರು ಬಟ್ಟೆ ಅಥವಾ ಕಿರಿಸ್ತಾನರ ಬಿಳಿಯ ಬಟ್ಟೆಗಳು ಸಾರ್ವಜನಿಕ ಸ್ಥಳಗಳಲ್ಲಿ ಢಾಳಾಗಿ ಕಾಣಿಸಿಕೊಳ್ಳತೊಡಗಿವೆ.

 

ಮಾತ್ರವಲ್ಲ ಆಯಾ ದೇಶಗಳ ರಾಜಕಾರಣವನ್ನು ತನ್ನ ಬಿಗಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿವೆ. ಹೀಗೆ ಧಾರ್ಮಿಕ ಸಂಸ್ಥೆಗಳಿಗೆ ಹಾಗೂ ಪದಾರ್ಥಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಯಾವುದೇ ಒಂದು ಸಮುದಾಯ ಅಥವಾ ಒಂದು ದೇಶದ ವಿಶಿಷ್ಟ ಬೆಳವಣಿಗೆಯೇನೂ ಅಲ್ಲ. ಇದೊಂದು ರೀತಿಯ ವಿಶ್ವವ್ಯಾಪಿ ಧಾರ್ಮಿಕ ತಹತಹವಾಗಿದೆ. ಹೌದು! ಧಾರ್ಮಿಕತೆಯೆಂಬುದು ತಹತಹವಾಗಿದೆ ಇಂದು.ಈ ತಹತಹವು ಒಳ್ಳೆಯದೇ ಕೆಟ್ಟದ್ದೇ ಎಂಬ ಪ್ರಶ್ನೆಗೆ ಉತ್ತರ ಸುಲಭವಿಲ್ಲ. ಬಲಪಂಥೀಯರನ್ನು ಕೇಳಿದರೆ ಅವರು ಖಂಡಿತವಾಗಿ ಇದು ಒಳ್ಳೆಯ ಬೆಳವಣಿಗೆಯೆಂದೇ ಅನ್ನುತ್ತಾರೆ. ಎಡಪಂಥೀಯರನ್ನು ಕೇಳಿದರೆ ಇದು ಕೆಟ್ಟ ಬೆಳವಣಿಗೆಯೆಂದು ಅನ್ನುತ್ತಾರೆ. ಆದರೆ ಎಲ್ಲ ಚಾರಿತ್ರಿಕ ಬೆಳವಣಿಗೆಗಳಿಗಿರುವಂತೆ ಈ ಬೆಳವಣಿಗೆಗೂ ಸಹ ಎರಡು ಮುಖಗಳಿವೆ. ಬೆಳವಣಿಗೆ ಪೂರ್ತಿ ಒಳ್ಳೆಯದೂ ಅಲ್ಲ, ಪೂರ್ತಿ ಕೆಟ್ಟದ್ದೂ ಅಲ್ಲ.ಧರ್ಮಕ್ಕೆ ಬೇಡಿಕೆ ಹೆಚ್ಚುತ್ತಿದೆಯೆಂದರೆ ನಮ್ಮ ಬದುಕಿನಿಂದ ಧರ್ಮವು ಮರೆಯಾಗುತ್ತಿದೆ ಹಾಗೂ ಅದರ ಅರಿವು ನಮಗಾಗುತ್ತಿದೆ ಎಂದೇ ಅರ್ಥ ತಾನೆ? ನಮ್ಮ ಬದುಕಿನಿಂದ ಧರ್ಮ ಮರೆಯಾಗುತ್ತಿರುವ ಅರಿವು ನಮಗಾಗುತ್ತಿರುವುದು ಒಳ್ಳೆಯ ಬೆಳವಣಿಗೆಯೇ ಸರಿ, ಆದರೆ ಧರ್ಮವೆಂಬುದು ಮಾರಾಟವಾಗಬಲ್ಲ ಪದಾರ್ಥವಾಗಿರುವುದು ಖಂಡಿತವಾಗಿ ಕೆಟ್ಟ ಬೆಳವಣಿಗೆ. ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಅರೆಬೆಂದ ಧಾರ್ಮಿಕ ಪದಾರ್ಥಗಳನ್ನು ಕೊಂಡು ತಂದು ನಾವು ಧಾರ್ಮಿಕರಾಗ ಹೊರಟಿದ್ದೇವೆ.ಧರ್ಮ, ದೇವರು, ಪ್ರೀತಿ, ಮಮತೆ, ಸೌಂದರ್ಯ... ಇವು ಸಾಧಿತವಾಗಬೇಕು ಮಾರಾಟವಾಗಬಾರದು ಎಂಬ ಸಂಗತಿ ನಮಗೆ ತಿಳಿದಿಲ್ಲವೆಂದೇನಲ್ಲ. ಆದರೆ ನಮ್ಮ ಪರಿಸ್ಥಿತಿಯೇ ಹಾಗಾಗಿದೆ. ಇಡೀ ಬದುಕನ್ನೇ ನಾವು ಮಾರುಕಟ್ಟೆಯ ಸುತ್ತ ಬಿಗಿದುಕೊಂಡು ಬಿಟ್ಟಿದ್ದೇವೆ. ಹಣ ಕೊಡದೆ ಹಣ ಪಡೆಯದೆ ಯಾವುದೇ ಸಾಧನೆಯೂ- ಅದು ಅತ್ಯಂತ ಪೂಜ್ಯವಾದದ್ದಿರಲಿ, ಅತ್ಯಂತ ಖಾಸಗಿಯಾದದ್ದಿರಲಿ, ಸಾಧ್ಯವಿಲ್ಲದಂತಾಗಿದೆ ನಮಗೆ.ಕನ್ನಡದಲ್ಲಿ ಪೇಟೆಯೆಂಬ ಪದವೊಂದಿದೆ, ತುಂಬ ಸುಂದರವಾದ ಪದವದು. ಪೇಟೆಯೆಂದರೆ ಇತ್ತ ಮಾರುಕಟ್ಟೆಯೂ ಹೌದು, ಅತ್ತ ನಗರವೂ ಹೌದು. ಈ ಅರ್ಥದಲ್ಲಿ ನಾವೆಲ್ಲರೂ ಪೇಟೆಯವರಾಗಿಬಿಟ್ಟಿದ್ದೇವೆ. ಧರ್ಮ, ದೇವರು, ಮಮತೆ, ಪ್ರೀತಿ, ಸೌಂದರ್ಯ... ಎಲ್ಲವೂ ಪೇಟೆಯ ಸರಕಾಗಿಬಿಟ್ಟಿದೆ.ಈ ದುರಂತಕ್ಕೆ ಪರಿಹಾರವೂ ಪೇಟೆಯಲ್ಲೇ ಅಡಗಿದೆ, ಅರ್ಥಾತ್ ಪೇಟೆಯನ್ನು ನಿಗ್ರಹಿಸುವಲ್ಲಿ ಅಡಗಿದೆ. ಆದರೆ ಪೇಟೆಯನ್ನು ನಿಗ್ರಹಿಸುವ ಕೆಲಸವು ಸುಲಭದ್ದಲ್ಲ. ನಮ್ಮೆಲ್ಲ ರಾಜಕೀಯ ಆರ್ಥಿಕ ಹಾಗೂ ಸಾಮಾಜಿಕ ವಿಚಾರಗಳು ಪೇಟೆಗೆ ಬೆಂಬಲವಾಗಿ ನಿಂತಿವೆ. ಧರ್ಮವನ್ನು ಉಳಿಸಬೇಕೆಂದರೆ ಪೇಟೆಯನ್ನು ಎದುರು ಹಾಕಿಕೊಳ್ಳಬೇಕು, ಪೇಟೆಯ ಪರವಾದ ರಾಜಕೀಯವನ್ನು ಎದುರುಹಾಕಿಕೊಳ್ಳಬೇಕು, ಬೇರೆ ದಾರಿಯಿಲ್ಲ.ಇಷ್ಟಕ್ಕೂ ಧರ್ಮವೆಂದರೇನು? ಧರ್ಮವೆಂದರೆ ಕೇವಲ ಆರಾಧನೆಯಲ್ಲ, ಅಥವಾ ಕೇವಲ ಆಚರಣೆಯಲ್ಲ, ಜಾತಿ, ಪಂಗಡ, ನಂಬಿಕೆ ಇವಾವುದೂ ಧರ್ಮವಲ್ಲ. ಇವೆಲ್ಲವೂ ಧರ್ಮದ ಲಕ್ಷಣಗಳು ಮಾತ್ರ.ಧರ್ಮವೆಂಬುದು ನಮ್ಮ ದಿನನಿತ್ಯದ ನಡವಳಿಕೆಯಲ್ಲಿ, ನೀತಿನಿಯಮಗಳಲ್ಲಿ, ನಾವು ತೋರಿಸುವ ಕರುಣೆಯಲ್ಲಿ ಪ್ರಕಟವಾಗಬೇಕು. ಹಾಗಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಕೊಂಡುತಂದ ಧಾರ್ಮಿಕ ಸಂಕೇತಗಳಿಂದ ನಮ್ಮ ಖಾಲಿತನವನ್ನು ತುಂಬಿಕೊಳ್ಳಲು ಹೊರಟಿದ್ದೇವೆ ನಾವು.ಸಂಕೇತಗಳನ್ನು ತಿರಸ್ಕರಿಸಬೇಕು ನಾವು. ಧರ್ಮ ಬದುಕಾಗಬೇಕು, ಕೇವಲ ಸಂಕೇತವಾಗಬಾರದು. ಧರ್ಮಕ್ಕಾಗಿ ದುಡ್ಡು ಸುರಿಯುವ ಅಥವಾ ದುಡ್ಡು ಮಾಡುವ ಚಟವನ್ನು ನಾವು ತಿರಸ್ಕರಿಸಬೇಕು.ಬೃಹತ್ತಾದ ಮಂದಿರಗಳು ಹಾಗೂ ಮಸೀದಿಗಳನ್ನು ಕಟ್ಟುವುದು, ಪಕ್ಷಗಳನ್ನು ಕಟ್ಟುವುದು, ಧರ್ಮವನ್ನು ರಕ್ಷಿಸಲಿಕ್ಕಾಗಿ ಪಡೆಗಳನ್ನು ಕಟ್ಟುವುದು, ಭಯೋತ್ಪಾದಕರನ್ನು ಹುಟ್ಟುಹಾಕುವುದು, ಜನಸಂದಣಿಯನ್ನು ಜಮಾಯಿಸುವುದು, ಇವೆಲ್ಲವನ್ನೂ ತಿರಸ್ಕರಿಸಬೇಕು. ಹಣದ ದಾನ, ಹಣದ ಭಕ್ತಿ... ಇತ್ಯಾದಿಗಳನ್ನು ತಿರಸ್ಕರಿಸಬೇಕು.ಹಣವೆಂಬುದು ಚೆಲ್ಲಲಿಕ್ಕೆ ಅರ್ಹವಾದ ಸಂಗತಿಯೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಒಂದೊಮ್ಮೆ ಧರ್ಮಕ್ಕಾಗಿ ಹಣವನ್ನು ಚೆಲ್ಲುವುದೇ ಆದರೆ ಹೆಸರಿಲ್ಲದಂತೆ ಚೆಲ್ಲಬೇಕು. ಹಣಕ್ಕೆ ಮುಖವಿರಬಾರದು ಕರುಣೆಗೆ ಮಾತ್ರವೇ ಮುಖವಿರಬೇಕು. ನಮ್ಮ ಬದುಕಿನಿಂದ ಮರೆಯಾಗುತ್ತಿರುವ ಧರ್ಮವನ್ನು ಬದುಕಿಯೇ ತುಂಬಿಕೊಳ್ಳಬೇಕೇ ಹೊರತು. ಕೊಂಡುತಂದ ಧಾರ್ಮಿಕ ಪದಾರ್ಥಗಳಿಂದ ಧಾರ್ಮಿಕ ಖಾಲಿತನವನ್ನು ತುಂಬಲಿಕ್ಕಾಗುವುದಿಲ್ಲ.

ಲೇಖಕರು ರಂಗಕರ್ಮಿ, ಸಾಂಸ್ಕೃತಿಕ ಚಿಂತಕರು ಹಾಗೂ ದೇಸಿ ಸಂಸ್ಕೃತಿಯ ಪ್ರತಿಪಾದಕರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.