ಬುಧವಾರ, ನವೆಂಬರ್ 20, 2019
20 °C

ಧರ್ಮಸ್ಥಳಕ್ಕೆ ಹೋಗುವುದು ಖಚಿತ

Published:
Updated:

ಬೆಂಗಳೂರು: `ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ ಹೋಗುವುದು ಖಚಿತ. ಇದೇ 26ರ ರಾತ್ರಿಯೇ ಕುಟುಂಬ ಸಮೇತನಾಗಿ ಧರ್ಮಸ್ಥಳಕ್ಕೆ ತೆರಳುತ್ತೇನೆ. ನಾನು ಹೇಳಿದಂತೆ ಪ್ರಮಾಣ ಮಾಡುತ್ತೇನೆ~-ಹೀಗೆ ಹೇಳಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.ಆಯುರ್ವೇದ ಚಿಕಿತ್ಸೆ ಸಲುವಾಗಿ ಕೇರಳಕ್ಕೆ ತೆರಳಿದ್ದ ಅವರು ವಾರದ ಬಳಿಕ ಸೋಮವಾರ ಸಂಜೆ ನಗರಕ್ಕೆ ವಾಪಸಾದರು. ಕೇರಳದ ಗುರುವಾಯೂರಿನಲ್ಲಿ ದೇವರ ದರ್ಶನ ಪಡೆದು ನಂತರ ನಗರಕ್ಕೆ ಬಂದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, `ಆಣೆ, ಪ್ರಮಾಣ ಎನ್ನುವುದು ಸಂವಿಧಾನ ಬಾಹಿರವೇನೂ ಅಲ್ಲ. ಹೀಗಾಗಿ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತಿನ ಪ್ರಕಾರ ನಾನು ನಡೆದುಕೊಳ್ಳುತ್ತೇನೆ~ ಎಂದರು.`ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಬರತ್ತಾರೊ ಬಿಡುತ್ತಾರೊ ನನಗೆ ಗೊತ್ತಿಲ್ಲ. ನಾನು ಮಾತ್ರ ಧರ್ಮಸ್ಥಳಕ್ಕೆ ಹೋಗುತ್ತೇನೆ. ಮಂಜುನಾಥನ ಮುಂದೆ ಪ್ರಮಾಣ ಮಾಡುವುದಂತೂ ಖಚಿತ~ ಎಂದು ಹೇಳಿದರು.`ಮುಖ್ಯಮಂತ್ರಿಯಾದ ನನ್ನ ಮೇಲೆಯೇ ಆರೋಪ ಬಂದಾಗ ಅದನ್ನು ನಿರಾಕರಿಸಿ, ಜನರಿಗೆ ಸತ್ಯ ತಿಳಿಸುವುದು ನನ್ನ ಕರ್ತವ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಯಿತು~ ಎಂದು ಸಮರ್ಥಿಸಿಕೊಂಡ ಅವರು `ಇದೇನೂ ತಪ್ಪಲ್ಲ~ ಎಂದಿದ್ದಾರೆ.ಜಾಹೀರಾತಿನ ಹಣವನ್ನು ಸರ್ಕಾರದ ಬದಲಾಗಿ, ಪಕ್ಷದ ವತಿಯಿಂದಲೇ ಪಾವತಿಸಲು ನಿರ್ಧರಿಸಲಾಗಿದೆ.ತಮ್ಮಿಬ್ಬರ ನಡುವಿನ ಆರೋಪಗಳಿಗೆ ಆಣೆ-ಪ್ರಮಾಣ ಅಂತಿಮವೇ ಎಂದು ಕೇಳಿದ ಪ್ರಶ್ನೆಗೆ `ಎಲ್ಲದಕ್ಕೂ 27 ರಂದು ಉತ್ತರ ನೀಡುತ್ತೇನೆ. ಅಲ್ಲಿಯವರೆಗೂ ಏನನ್ನೂ ಮಾತನಾಡುವುದಿಲ್ಲ~ ಎಂದರು.ಶಿವಮೊಗ್ಗದಲ್ಲಿ ತಮ್ಮ ಕುಟುಂಬದವರು ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಕುರಿತು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮಾಡಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, `ಬಂಗಾರಪ್ಪ, ಕುಮಾರಸ್ವಾಮಿ, ಕೃಷ್ಣ, ಖರ್ಗೆ, ಧರ್ಮಸಿಂಗ್, ಸಿದ್ದರಾಮಯ್ಯ- ಇವರೆಲ್ಲರೂ ನನ್ನ ಒಳ್ಳೆಯ ಸ್ನೇಹಿತರು, ಹಿತೈಷಿಗಳು. ಅವರೇನು ಎಚ್ಚರಿಕೆ ಅಥವಾ ಸಲಹೆಗಳನ್ನು ನೀಡಿದ್ದಾರೊ ಅವೆಲ್ಲವನ್ನೂ ಸ್ವೀಕರಿಸುತ್ತೇನೆ. ಯಾವುದಕ್ಕೂ ಉತ್ತರ ಕೊಡುವುದಿಲ್ಲ~ ಎಂದರು.`ಮಂಪರು ಪರೀಕ್ಷೆಗೂ ಸಿದ್ಧ~

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಧಾನಕ್ಕಾಗಿ `ಮಧ್ಯವರ್ತಿ~ಯನ್ನು ಕಳುಹಿಸಿದ್ದರು ಎಂದು ಪುನರುಚ್ಚರಿಸಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, `ನಾನು ಹೇಳಿದ್ದು ಸತ್ಯ ಎಂದು ಸಾಬೀತು ಮಾಡಲು ಮಂಪರು ಪರೀಕ್ಷೆಗೂ ಸಿದ್ಧ~ ಎಂದು ಘೋಷಿಸಿದ್ದಾರೆ.ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಚಾರದ ಕುರಿತು ಯಾವುದೇ ತನಿಖೆಗೂ ಸಿದ್ಧ ಎಂದು ಹೇಳಿದರು. `ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಭಕ್ತರಲ್ಲಿ ನಾನೂ ಒಬ್ಬ. ಇದೇ 27ರಂದು ಧರ್ಮಸ್ಥಳಕ್ಕೆ ತೆರಳಿ ಯಡಿಯೂರಪ್ಪ ಜೊತೆ ಪ್ರಮಾಣ ಮಾಡುತ್ತೇನೆ. ಆದರೆ ನನ್ನ ಕುಟುಂಬದ ಸದಸ್ಯರನ್ನು ಕರೆತರಲಾರೆ, ಈ ವಿಚಾರದಲ್ಲಿ ಕುಟುಂಬದ ಸದಸ್ಯರನ್ನು ಎಳೆಯುವುದರಲ್ಲಿ ಅರ್ಥವಿಲ್ಲ~ ಎಂದರು.`ಬಿಜೆಪಿ ರಾಜ್ಯ ಘಟಕದ ಖಜಾಂಚಿ ಲೆಹರ್ ಸಿಂಗ್ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ನನ್ನನ್ನು ಬೆಂಗಳೂರು ಮತ್ತು ನವದೆಹಲಿಯಲ್ಲಿ ಭೇಟಿ ಮಾಡಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರು ನನ್ನ ವಾದವನ್ನು ಬಹುತೇಕ ಒಪ್ಪಿಕೊಂಡಂತಾಗಿದೆ. 27ರಂದು ಸತ್ಯ ಹೊರಬರುವ ವಿಶ್ವಾಸವಿದೆ. ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ~ ಎಂಬ ಅರ್ಥ ನೀಡುವ ಜಾಹೀರಾತನ್ನು ನೀಡಿದ್ದರೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)