ಧರ್ಮಸ್ಥಳ ಪಾದಯಾತ್ರೆಗೆ 25

7

ಧರ್ಮಸ್ಥಳ ಪಾದಯಾತ್ರೆಗೆ 25

Published:
Updated:

ಸಂಕ್ರಾಂತಿಯಲ್ಲಿ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಪಾದಯಾತ್ರೆ ಕೈಗೊಳ್ಳುವಂತೆ, ರಾಜ್ಯದಲ್ಲೂ ಪ್ರತಿವರ್ಷ ದತ್ತಾತ್ರೇಯ ಭಕ್ತರು ಬಾಬಾಬುಡನ್‌ಗಿರಿಗೆ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ಮಾಡುತ್ತಾರೆ.

 

ಆದರೆ ಇ್ಲ್ಲಲೊಂದು ಭಕ್ತರ ಸಮೂಹ ಕಳೆದ ಇಪ್ಪತ್ತೈದು ವರ್ಷಗಳಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳುತ್ತಿದೆ. ನಿತ್ಯ 40 ಕಿ.ಮೀ ನಡೆಯುವ ಮೂಲಕ ದಣಿವರಿಯದೇ ಮಂಜುನಾಥನ ದರ್ಶನಕ್ಕಾಗಿ ಕಾತರರಾಗಿರುತ್ತಾರೆ.ಮಹಾಲಕ್ಷ್ಮಿ ಬಡಾವಣೆಯ ಸುಮಾರು 200 ಭಕ್ತರ ತಂಡ ಪ್ರತಿ ವರ್ಷ ಶಿವಾರಾತ್ರಿ ವೇಳೆಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ. 9ರಿಂದ 10 ದಿನಗಳಲ್ಲಿ ಧರ್ಮಸ್ಥಳ ತಲುಪುವ ಈ ಭಕ್ತರ ತಂಡ ಪೂರ್ವನಿಯೋಜನೆಯಂತೆ ದಾರಿ ಮಧ್ಯೆ ಅಲ್ಲಲ್ಲಿ ಊರುಗಳಲ್ಲಿ ತಂಗುತ್ತಾರೆ. ದಿನಕ್ಕೆ 35ರಿಂದ 40 ಕಿ.ಮೀ ದೂರ ಕ್ರಮಿಸುವ ಕೇಸರಿ ಸಮವಸ್ತ್ರ ಧರಿಸಿದ ಭಕ್ತರು ರಾತ್ರಿ ಉಳಿದುಕೊಳ್ಳುತ್ತಾರೆ.

 

ಭಜನೆ, ಧ್ಯಾನ ಮಾಡುತ್ತಾ ಪಾದಯಾತ್ರೆ ದಣಿವನ್ನು ಮರೆಯುತ್ತಾರೆ. ಇವರ ಜೊತೆಗೆ ವಾಹನಗಳು ಬರುತ್ತವೆ. ಅವುಗಳಲ್ಲಿ ಆಹಾರ ಪದಾರ್ಥಗಳನ್ನು ತರಲಾಗುತ್ತದೆ. ಪಾದಯಾತ್ರಿಗರು ಆಹಾರ ಸಿದ್ಧಪಡಿಸಿಕೊಂಡು ಸೇವಿಸಿ, ಬೆಳಿಗ್ಗೆ ಪುನಃ ಯಾತ್ರೆ ಆರಂಭಿಸುತ್ತಾರೆ.ಈ ಬಾರಿಯ ಪಾದಯಾತ್ರೆ 25ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿವರ್ಷ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗ 250ರಿಂದ 300ರ ಸಂಖ್ಯೆ ದಾಟಿದೆ ಎನ್ನುತ್ತಾರೆ ಪಾದಯಾತ್ರೆ ಸಮಿತಿ ವ್ಯವಸ್ಥಾಪಕ ಚೆನ್ನಶೆಟ್ಟರು.ಮದ್ಯಪಾನ ಸೇವಿಸುವ, ಕಾಯಿಲೆ ಪೀಡಿತರು ಹರಕೆ ಮಾಡಿಕೊಂಡು ಯಾತ್ರೆಗೆ ಬರುತ್ತಾರೆ. ಯಾತ್ರೆ ಮುಗಿದ ನಂತರ ಬಹುತೇಕ ಭಕ್ತರು ಮದ್ಯಪಾನ ತ್ಯಜಿಸಿದ್ದಾರೆ. ಕೆಲವರ ಆರೋಗ್ಯವೂ ಸುಧಾರಿಸಿದೆ ಎನ್ನುತ್ತಾರೆ ಅವರು.ಗುರುವಾರ (ಫೆ.9) ಸಂಜೆ ಎಲ್ಲಾ ಭಕ್ತರು ಮಹಾಲಕ್ಷ್ಮಿ ಬಡಾವಣೆಯ ಶ್ರೀ ಪ್ರಸನ್ನ ವೀರಾಂಜನೇಯ ದೇವಸ್ಥಾನದಲ್ಲಿ ಸೇರಿ, ದೇವರಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಎಸ್.ವಿ.ಕೃಷ್ಣಮೂರ್ತಿ ಅವರಿಂದ ಉಪನ್ಯಾಸ ಪಡೆಯಲಾಗುತ್ತದೆ. ಬೆಳಿಗ್ಗೆ 3.15ಕ್ಕೆ ಪಾದಯಾತ್ರೆ ಹೊರಡುತ್ತಾರೆ.ಶುಕ್ರವಾರ ಸೋಲೂರಿನ ಶ್ರೀ ಬಸವಣ್ಣ ದೇವರ ಮಠದಲ್ಲಿ ವಿಹರಿಸುತ್ತಾರೆ. ಶನಿವಾರ ಯಡಿಯೂರಿನಲ್ಲಿ ಉಳಿದುಕೊಳ್ಳುತ್ತಾರೆ. ಅಲ್ಲಿಂದಲೂ ನೂರಾರು ಭಕ್ತರು ಪಾದಯಾತ್ರಿಗಳೊಂದಿಗೆ ಸೇರಿಕೊಳ್ಳುತ್ತಾರೆ.

 

ಭಾನುವಾರ ಕಿರಿಸಾವೆ, ಸೋಮವಾರ ಶಾಂತಿಗ್ರಾಮ, ಬುಧವಾರ ಅಂಗಡಿಹಳ್ಳಿ, ಗುರುವಾರ ಕೊಟ್ಟಿಗೆಹಾರ, ಶುಕ್ರವಾರ ಚಾರ್ಮುಡಿ ಮಾರ್ಗವಾಗಿ ಶನಿವಾರ ಉಜಿರೆಗೆ ಪಾದಯಾತ್ರೆ ತಲುಪುತ್ತದೆ. ಭಾನುವಾರ (ಫೆ.19) ಪಾದಯಾತ್ರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ತಲುಪುತ್ತಾರೆ.ಶಿವಾರಾತ್ರಿಯಂದು ಮಂಜುನಾಥೇಶ್ವರನ ದರ್ಶನ ಪಡೆದು ವಾಪಾಸ್ಸಾಗುತ್ತಾರೆ.

32ನೇ ಪಾದಯಾತ್ರೆ: ಶಿವರಾತ್ರಿಯಂದು ಧರ್ಮಸ್ಥಳ ಮಂಜುನಾಥನ ದರ್ಶನಕ್ಕಾಗಿ ಶ್ರೀ ಸ್ವಾಮಿದಾಸ ಹನುಮಂತಪ್ಪ ಅವರು 31 ಬಾರಿ ಪಾದಯಾತ್ರೆ ಹೋಗಿದ್ದಾರೆ.ಶುಕ್ರವಾರ (ಫೆ.10) ಮಹಾಲಕ್ಷ್ಮಿ ಬಡಾವಣೆಯ ಆಂಜನೇಯ ದೇವಸ್ಥಾನದಿಂದ ಆರಂಭವಾಗುವ ಪಾದಯಾತ್ರೆ ಫೆ.19ರ ಭಾನುವಾರ ಧರ್ಮಸ್ಥಳವನ್ನು ತಲುಪುತ್ತದೆ. ಸೋಮವಾರ ಬೆಳಿಗ್ಗೆ ನೇತ್ರಾವತಿಯಲ್ಲಿ ಸ್ನಾನ ಮುಗಿಸಿ ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆಯುತ್ತಾರೆ.ನೆಲಮಂಗಲ, ಕುಣಿಗಲ್, ಬೆಳ್ಳೂರು, ಗೌಡಗೆರೆ, ಶಾಂತಿಗ್ರಾಮ, ಮೋದಿಹಳ್ಳಿ, ಕಸ್ಗೇಬೈಲು, ಕೊಟ್ಟಿಗೆಹಾರ ಮಾರ್ಗವಾಗಿ ಉಜಿರೆ ತಲುಪುತ್ತಾರೆ. ನಂತರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮುಂದುವರೆಯುತ್ತದೆ.74ರ ಇಳಿವಯಸ್ಸಿನಲ್ಲೂ ಕಿಂಚಿತ್ತೂ ಕುಗ್ಗದೇ ಪಾದಯಾತ್ರೆಯ ನೇತೃತ್ವ ವಹಿಸುವ ಹನುಮಂತಪ್ಪ ಅವರು ಧರ್ಮಸ್ಥಳವೇ ಅಲ್ಲದೇ ಇಪ್ಪತ್ತಾರು ಬಾರಿ ತಿರುಪತಿಗೆ ಹಾಗೂ ಕಾಶಿ-ಅಯೋಧ್ಯೆಗೂ ಪಾದಯಾತ್ರೆ ಮಾಡಿ ದೇವರ ದರ್ಶನ ಮಾಡಿದ್ದಾರೆ. ಈಗ ಧರ್ಮಸ್ಥಳಕ್ಕೆ 32ನೇ ಪಾದಯಾತ್ರೆ ಕೈಗೊಂಡಿದ್ದಾರೆ.ಅಖಿಲ ಭಾರತ ಬಲಿಜ ಗುರುಪೀಠ  ಮಾರ್ಗ ಮಧ್ಯೆ ಪಾದಯಾತ್ರಿಗಳಿಗೆ ಆರೋಗ್ಯ ಸೇವೆ ಒದಗಿಸುತ್ತದೆ. ಈ ಪಾದಯಾತ್ರೆಗೆ ಮಹಿಳೆಯರೂ ಬರುತ್ತಾರೆ. ಜಾತಿ ಮತ, ಲಿಂಗ ಬೇಧವಿಲ್ಲದೆ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ  ಶ್ರೀ ಮಂಜುನಾಥೇಶ್ವರನ ದರ್ಶನ ಪಡೆದು ಪುನೀತರಾಗುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry