ಧರ್ಮಾಂಧರ ವಿರುದ್ಧ ಎಚ್ಚರಿಕೆ ಅಗತ್ಯ

7

ಧರ್ಮಾಂಧರ ವಿರುದ್ಧ ಎಚ್ಚರಿಕೆ ಅಗತ್ಯ

Published:
Updated:

ಹುನಗುಂದ: ವಿಶ್ವದ ಪ್ರತಿಯೊಂದು ಧರ್ಮದ ಬೋಧನೆಯ ಸಾರ ಒಂದೇ. ಪೂರ್ವಗ್ರಹಗಳಿಂದ ದೂರವಿದ್ದು, ಪರಧರ್ಮ ಸಹಿಷ್ಣುತೆಯನ್ನು ರೂಢಿಸಿಕೊಳ್ಳಬೇಕು. ಮತಗಳಿಕೆ ಹಾಗೂ ಕ್ಷುಲ್ಲಕ ರಾಜಕಾರಣಕ್ಕಾಗಿ ಧರ್ಮವನ್ನು ಬಳಸಿಕೊಳ್ಳಬಾರದು ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಡಾ. ಎಂ.ಪಿ.ನಾಡಗೌಡ ಸಲಹೆ ನೀಡಿದರು. ಅವರು ನಗರದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅಸೋಸಿಯೇಷನ್ ಸಂಸ್ಥೆಯು, ಈದ್-ಮಿಲಾದ್ ಆಚರಣೆ ನಿಮಿತ್ತ ಬುಧವಾರ ಹಮ್ಮಿಕೊಂಡ ಭಾವೈಕ್ಯ ಸಮ್ಮೇಳನ, ಆಜಾದ್ ಪಬ್ಲಿಕ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬಹುಕಾಲದಿಂದ ಧರ್ಮ ಹಾಗೂ ಯುದ್ಧಗಳನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ದಿನದಿಂದ ದಿನಕ್ಕೆ ಮತಬ್ಯಾಂಕ್ ರಾಜಕಾರಣ ಹೆಚ್ಚಿ ಜನರಲ್ಲಿ ಇಲ್ಲದ ದ್ವೇಷದ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ, ಇದರ ಬದಲಿಗೆ ಭಾವೈಕ್ಯ ಎಂಬುದು ಎಲ್ಲರ ಹೃದಯದಿಂದ ಹುಟ್ಟಬೇಕು ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್.ಆರ್. ಪಾಟೀಲ, ಭಾವೈಕ್ಯಕ್ಕೆ ಪೆಟ್ಟಾದರೆ ನಮ್ಮ ಬದುಕು ದುಸ್ತರವಾಗುವುದು; ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ. ದೇಶದ ಐಕ್ಯತೆಯನ್ನು ಕಾಯುವಲ್ಲಿ ದಾರ್ಶನಿಕರು ಮಾಡಿದ ಸಾಧನೆ ಹಾಗೂ ಹಾದಿಯಲ್ಲಿ ನಡೆಯುವ ಅಗತ್ಯವಿದೆ. ಸಾಮಾಜಿಕ ನ್ಯಾಯದ ಅನುಷ್ಠಾನಕ್ಕಾಗಿ ಮುಸ್ಲಿಮರ ಹಿತಕಾಯುವುದು ಹಾಗೂ ರಾಜಕೀಯ ಸ್ಥಾನಮಾನ ಕಲ್ಪಿಸುವುದು ಸಮಾಜದ ಪ್ರಮುಖ ಜವಾಬ್ದಾರಿ ಆಗಬೇಕು ಎಂದರು.ಭಾವೈಕ್ಯದ ಕುರಿತು ಮಾತನಾಡಿದ ಪತ್ರಕರ್ತ ಅಬ್ದುಲ್ ಹಕೀಂ, ಶರಣರು ಹಾಗು ಸಂತರು ಜೀವಿಸಿದ ಈ ದೇಶದಲ್ಲಿ ಹಿಂದೂಗಳ ಸಹಕಾರದಿಂದ ಮುಸ್ಲಿಮರು ಹಾಗೂ ಮುಸ್ಲಿಮರ ಸಹಕಾರದಿಂದ ಹಿಂದೂಗಳು ಸೌಖ್ಯ ಬದುಕು ಸಾಗಿಸುವುದನ್ನು ಶತಶತಮಾನಗಳಿಂದ ರೂಢಿಸಿಕೊಂಡಿದ್ದಾರೆ. ಈ ಸೌಹಾರ್ದಕ್ಕೆ ಧಕ್ಕೆ ತರುವ ಧರ್ಮಾಂಧ ಮೂಲಭೂತವಾದಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.ಹಜರತ್ ಸೈಯ್ಯದ್ ಅಸಾದುಲ್ಲಾ ಹುಸೇನ್ ಜಾಗೀರದಾರ ಸಾನ್ನಿಧ್ಯ ವಹಿಸಿದ್ದರು. ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಹಾಜಿ ನಿಯಾಜ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ವಿಜಯಾನಂದ ಕಾಶಪ್ಪನವರ, ಇಲಕಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಸ್ಮಾನಗನಿ ಹುಮನಾಬಾದ್, ಕಾಂಗ್ರೆಸ್ ಮುಖಂಡ ಶಿವರಾಜ ಅಕ್ಕಿ, ಪಪಂ ಸದಸ್ಯ ರಜಾಕ್ ರೇಶ್ಮೆ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಬ್ಬಾರ್ ಕಲಬುರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಸರಕಾವಸ ವಂದಿಸಿದರು. ಮೌಲಾನಾ ತಾಜುದ್ದಿನ್ ಕುರಾನ್ ಪಠಣ, ಎಚ್.ಕೆ. ನಾಗನೂರ ವಚನ ಪ್ರಾರ್ಥನೆ ಮಾಡಿದರು. ಕೌಸರ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry