ಧರ್ಮ, ಅಪರಾಧದ ನಶೆಯಲ್ಲಿ ಪೂರ್ವಾಂಚಲ

7

ಧರ್ಮ, ಅಪರಾಧದ ನಶೆಯಲ್ಲಿ ಪೂರ್ವಾಂಚಲ

Published:
Updated:

ಗೋರಖ್‌ಪುರ: `ಪೂರ್ವಾಂಚಲ~ ಎಂದು ಕರೆಯಲಾಗುವ ಪೂರ್ವ ಉತ್ತರಪ್ರದೇಶದ ಇಂದಿನ ದುಸ್ಥಿತಿಗೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ವೈಫಲ್ಯದಲ್ಲಿ ಕಾರಣ ಹುಡುಕುವವರಿದ್ದಾರೆ. ಈ ಎರಡೂ ಪಕ್ಷಗಳು ರಾಜ್ಯದಲ್ಲಿ ಬೆಳೆಯುತ್ತಿರುವ ಜಾತಿ ಮತ್ತು ತೋಳ್ಬಲದ ಕಡೆ ಬೆಟ್ಟು ಮಾಡುತ್ತವೆ.ಕಾರಣಗಳೇನೇ ಇರಬಹುದು, `ಪೂರ್ವಾಂಚಲ~ ಮಾತ್ರ ಅದೇ ಪಾಳುಬಿದ್ದ ಹಳೆಯ ಸಾಮ್ರಾಜ್ಯವೊಂದರ ಅವಶೇಷದಂತೆಯೇ ಕಂಡು ನೋಡುವವರಲ್ಲಿ ವಿಷಾದ ಮೂಡಿಸುತ್ತದೆ. ಈ ಭಾಗಕ್ಕೆ ಸೇರಿರುವ ಗೋರಖ್‌ಪುರ, ಕುಶಿನಗರ, ಅಜಮ್‌ಗಡ, ಗಾಜಿಪುರ ಮೊದಲಾದ ಒಂಬತ್ತು ಜಿಲ್ಲೆಗಳ 59 ಕ್ಷೇತ್ರಗಳಲ್ಲಿ ಶನಿವಾರ ಮತದಾನ ನಡೆಯಲಿದೆ.ಮಂಡಲ-ಕಮಂಡಲದ ರಾಜಕೀಯದ ನಂತರ ಕಾಂಗ್ರೆಸ್ ಮತ್ತು ಕಮ್ಯನಿಸ್ಟರ ತೆಕ್ಕೆಯಿಂದ ಸಮಾಜವಾದಿ ಮತ್ತು ಬಿಎಸ್‌ಪಿ ಕಡೆ ಹೊರಳಿದ್ದ ಪೂರ್ವಾಂಚಲ, ನಂತರ ಬಿಜೆಪಿ ಬಗ್ಗೆ ಒಲವು ತೋರಿತ್ತು.`ಯುಪಿ ಬಿ ಬಂಗಾಲ್ ಬನೇಗಾ, ಪೂರ್ವಾಂಚಲ್ ಸೇ ಸುರುವಾತ್ ಹೋಗಾ~ ಎಂದು ಒಂದು ಕಾಲದಲ್ಲಿ ಮೊಳಗುತ್ತಿದ್ದ ಘೋಷಣೆಗಳನ್ನು ಈಗಲೂ ಮೆಲುಕು ಹಾಕುವ ಹಿರಿಯ ಕಮ್ಯುನಿಸ್ಟ್ ನಾಯಕರು  ಇಲ್ಲಿ ಸಿಗುತ್ತಾರೆ. ಅಯೋಧ್ಯೆಯನ್ನೊಳಗೊಂಡಿರವ ಫೈಜಾಬಾದ್ ಲೋಕಸಭಾ ಕ್ಷೇತ್ರವನ್ನು ಕೂಡಾ 1989ರಲ್ಲಿ ಸಿಪಿಐ ಅಭ್ಯರ್ಥಿ ಆಯ್ಕೆಯಾಗಿದ್ದನ್ನು, 1968ರ ವರೆಗೆ ಮವು ಮತ್ತು 1977ರ ವರೆಗೆ ಗಾಜಿಪುರ ಲೋಕಸಭಾ ಕ್ಷೇತ್ರಗಳನ್ನು ಸಿಪಿಐ ಪ್ರತಿನಿಧಿಸುತ್ತಿದ್ದುದನ್ನು ಅವರು ನೆನೆಪುಮಾಡಿಕೊಂಡು ನಿಟ್ಟುಸಿರು ಬಿಡುತ್ತಾರೆ.ಈಗ ಈ ಪ್ರದೇಶದ ಒಂದಷ್ಟು ಭಾಗ ಭೂಗತ ಪಾತಕಿಗಳ ಕೈಯಲ್ಲಿ ಇನ್ನೊಂದಷ್ಟು ಭಾಗ ಯೋಗಿ ಆದಿತ್ಯನಾಥ ಅವರಂತಹ ಉಗ್ರ ಹಿಂದುತ್ವದ ಪ್ರತಿಪಾದಕರ ನಿಯಂತ್ರಣದಲ್ಲಿದೆ. ಆಗ್ರಾ ಜೈಲಲ್ಲಿರುವ ಭೂಗತ ಪಾತಕಿ ಮುಕ್ತರ್ ಅನ್ಸಾರಿ ಮವು ಮತ್ತು ಘೋಷಿ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದರೆ, ಮತ್ತೊಬ್ಬ ಪಾತಕಿ ಅಮರನಾಥ ತ್ರಿಪಾಠಿ ತನ್ನಮಗನನ್ನು  ಕಣಕ್ಕಿಳಿಸಿದ್ದಾನೆ.ಮವು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಬಿಎಸ್‌ಪಿ ಅಭ್ಯರ್ಥಿಯಾಗಿ ಗೆದ್ದಿರುವ ಮುಕ್ತರ್ ಅನ್ಸಾರಿ ನಂತರದ ಎರಡು ಚುನಾವಣೆಗಳಲ್ಲಿ ಪಕ್ಷೇತರನಾಗಿ ಆಯ್ಕೆಯಾಗಿದ್ದ. ಬಿಜೆಪಿ ನಾಯಕ ಕೃಷ್ಣಾನಂದ ರಾಯ್ ಹತ್ಯೆಯೂ ಸೇರಿದಂತೆ ಕೊಲೆ,ಸುಲಿಗೆ,ಅತ್ಯಾಚಾರ ಮೊದಲಾದ ಹತ್ತಾರು ಆರೋಪಗಳು ಈತನ ಮೇಲಿವೆ. ಮಧುಮಿತ ಎಂಬ ಯುವ ಕವಯಿತ್ರಿಯ ಹತ್ಯೆಯ ಆರೋಪದ ಮೇಲೆ ಕಳೆದ ಒಂದು ವರ್ಷದಿಂದ ಪತ್ನಿ ಜತೆ ಜೈಲಲ್ಲಿರುವ ಅಮರಮಣಿ ತ್ರಿಪಾಠಿ ಮಗ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನೌತನವಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾನೆ.ಉತ್ತರಪ್ರದೇಶ ಎಲೆಕ್ಷನ್ ವಾಚ್ (ಯುಪಿಇಡಬ್ಲ್ಯು) ನಡೆಸಿರುವ ಅಭ್ಯರ್ಥಿಗಳ ಹಿನ್ನೆಲೆಯ ವಿಶ್ಲೇಷಣೆಯ ಪ್ರಕಾರ ಸಮಾಜವಾದಿ ಪಕ್ಷದ ಶೇಕಡಾ 51 ಬಿಎಸ್‌ಪಿಯ ಶೇಕಡಾ 39, ಬಿಜೆಪಿಯ ಶೇಕಡಾ 36 ಮತ್ತು ಕಾಂಗ್ರೆಸ್ ಪಕ್ಷದ ಶೇಕಡಾ 36ರಷ್ಟು ಅಭ್ಯರ್ಥಿಗಳು ಕೊಲೆ, ದರೋಡೆ, ಅಪಹರಣ, ಸುಲಿಗೆ ಮೊದಲಾದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಬಹಳಷ್ಟು ಅಭ್ಯರ್ಥಿಗಳು ಜೈಲಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.ಈ ಪ್ರದೇಶದ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಲು ಭೂಗತ ಪಾತಕಿಗಳ ಜತೆ ಸೇರಿಕೊಂಡವರು ಗೋರಖ್‌ಪುರವನ್ನು `ಹಿಂದುತ್ವದ ಪ್ರಯೋಗ ಶಾಲೆ~ಯನ್ನಾಗಿ ಮಾಡಲು ಹೊರಟಿರುವ ಸ್ಥಳೀಯ ಲೋಕಸಭಾ ಸದಸ್ಯ ಯೋಗಿ ಆದಿತ್ಯನಾಥ್. ಇವರು ಈ ಪ್ರದೇಶದ ಮಾತ್ರವಲ್ಲ ನೆರೆಯ ನೇಪಾಳದ ಹಿಂದೂಗಳ ಶ್ರದ್ಧಾಕೇಂದ್ರವಾಗಿರುವ ಗೋರಕ್ಷಾ ಪೀಠದ ಮಹಂತ.ಒಂದು ತುದಿಯಲ್ಲಿ ಅಯೋಧ್ಯೆ ಇನ್ನೊಂದು ತುದಿಯಲ್ಲಿ ನೇಪಾಳವನ್ನು ಹೊಂದಿರುವ ಗೋರಖ್‌ಪುರ `ಹಿಂದೂ ಸಾಮ್ರಾಜ್ಯ~ ಕಟ್ಟಲು ಹೇಳಿಮಾಡಿಸಿದ ಭೂಪ್ರದೇಶ. ಇಲ್ಲಿನ ಪತ್ರಿಕೆಗಳ ಪುಟ ತಿರುವಿದರೆ ನೇಪಾಳದ ಗಡಿಯಲ್ಲಿ ಐಎಸ್‌ಐ ತರಬೇತಿ ಕೇಂದ್ರಗಳ (?) ಚಿತ್ರ, ಮುಸ್ಲಿಮ್ ಉಗ್ರಗಾಮಿಗಳ ಜತೆ ನಕ್ಸಲೀಯರು ಕೈಜೋಡಿಸಿರವ ಸುದ್ದಿಗಳು ಹೇರಳವಾಗಿ ಸಿಗುತ್ತವೆ.ಕೋಮುದ್ವೇಷದ ಕಿಡಿಹತ್ತಲು ಇಷ್ಟು ಸಾಕು. ಅಷ್ಟರಲ್ಲಿ `ಹಿಂದೂ ಯುವ ವಾಹಿನಿ~ಯ ಪ್ರವೇಶವಾಗುತ್ತದೆ. ನೊಂದ ಮುಸ್ಲಿಮರಿಗೆ ರಕ್ಷಣೆನೀಡಲು ಮುಕ್ತರ್ ಅನ್ಸಾರಿಯಂತಹ ಪಾತಕಿಗಳ ಪ್ರವೇಶವಾಗುತ್ತದೆ.ನರೇಂದ್ರ ಮೋದಿಯವರಂತೆ ಮುಸ್ಲಿಮರ ವಿರುದ್ಧ ಬೆಂಕಿ ಉಗುಳಬಲ್ಲ ಯೋಗಿ, ಉಮಾಭಾರತಿಯವರಂತೆ ಭಾವಾವೇಶಕ್ಕೆ ತಮ್ಮನೊಪ್ಪಿಸಿ ಗಳಗಳನೆ ಅತ್ತುಬಿಡಬಲ್ಲರು. ಮೋದಿ ಮತ್ತು ಉಮಾಭಾರತಿಯವರಿಬ್ಬರೂ ಈಗ ಬದಲಾಗಿದ್ದಾರೆ, ಅವರ ಪಕ್ಷವೂ ಬದಲಾಗಿದೆ. ಆದರೆ ಯೋಗಿ ಬದಲಾಗಿಲ್ಲ. ಬದಲಾಗಿರುವ ಪಕ್ಷಕ್ಕೆ ಬದಲಾಗದ ಯೋಗಿಯೇ ಈಗ ದೊಡ್ಡ ತಲೆನೋವು.ಬಿಜೆಪಿ ಸದಸ್ಯನಾದರೂ ಯೋಗಿ ಆದಿತ್ಯನಾಥ್ ಚಟುವಟಿಕೆಗಳೆಲ್ಲ ನಡೆಯುತ್ತಿರುವುದು ಹಿಂದೂ ಮಹಸಭಾ,ಹಿಂದೂ ಯುವವಾಹಿನಿ, ಹಿಂದೂ ಜಾಗರಣ ಮಂಚ, ಪೂರ್ವಾಂಚಲ ವಿಕಾಸ ಮಂಚ ಮೊದಲಾದ ಸಂಘಟನೆಗಳ ಮೂಲಕ. ಗೋರಖ್‌ಪುರ, ದಿಯೋರಿಯಾ, ಸಿದ್ದಾರ್ಥನಗರ ಮತ್ತು ಮಹಾರಾಣಿಗಂಜ್‌ನ ಸುಮಾರು 25 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಬೀರಬಲ್ಲ ಶಕ್ತಿ ಆದಿತ್ಯನಾಥ್‌ಗಿದೆ. ಬಿಜೆಪಿ ಈ ಪ್ರದೇಶದಲ್ಲಿ ಕಾಲೂರುವಂತೆ ಮಾಡಿದ್ದೇ ಇವರು.ಆದರೆ ಅಭ್ಯರ್ಥಿಗಳ ಆಯ್ಕೆಯಲ್ಲಿ  ತನ್ನನ್ನು ನಿರ್ಲಕ್ಷಿಸಲಾಗಿದೆ ಎಂದು ಅಸಂತುಷ್ಠರಾಗಿರುವ ಆದಿತ್ಯನಾಥ್ ಅಲ್ಲಲ್ಲಿ ಹಿಂದೂ ಯುವವಾಹಿನಿಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ. ಕಳೆದ ಬಾರಿಯೂ ಇದೇ ಕಾರಣಕ್ಕೆ ಹಿಂದೂ ಮಹಾಸಭಾದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲುಹೊರಟಿದ್ದ ಆದಿತ್ಯನಾಥ್ ಅವರನ್ನು ವಿಶ್ವಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಮಧ್ಯೆಪ್ರವೇಶಿಸಿ ಸಮಾಧಾನ ಪಡಿಸಿದ್ದರು. ಹೀಗಿದ್ದರೂ ಬಿಜೆಪಿಗೆ ಈ ಭಾಗದಲ್ಲಿ ಏಳು ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಈ ಭಾಗದಲ್ಲಿ ತನ್ನಿಂದಾಗಿ ಬೆಳೆದ ಪಕ್ಷವನ್ನು ತಾನೆ ಕೆಡವಿಹಾಕುತ್ತೇನೆ ಎಂದು ಆದಿತ್ಯನಾಥ ಹೊರಟಂತಿದೆ. ಅವರನ್ನು ನಿಯಂತ್ರಿಸಬಲ್ಲ ನಾಯಕರೂ ಬಿಜೆಪಿಯಲ್ಲಿ ಇಲ್ಲ.ರಾಜ್ಯದ ಮೂರು ಪ್ರಮುಖ ಪಕ್ಷಗಳ ರಾಜ್ಯ ಅಧ್ಯಕ್ಷರು ಸ್ಪರ್ಧಿಸುತ್ತಿರುವ ಕ್ಷೇತ್ರಗಳು ಶನಿವಾರ ಮತದಾನ ನಡೆಯಲಿರುವ ಪ್ರದೇಶದ ವ್ಯಾಪ್ತಿಯಲ್ಲಿರುವುದು ವಿಶೇಷ. ಬಿಜೆಪಿಯ ರಾಜ್ಯ ಅಧ್ಯಕ್ಷ ಸೂರ್ಯಪ್ರತಾಪ್ ಶಾಹಿ, ಬಿಎಸ್‌ಪಿ ರಾಜ್ಯ ಅಧ್ಯಕ್ಷ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ `ಪೀಸ್ ಪಾರ್ಟಿ~ ಸ್ಥಾಪಕ ಅಧ್ಯಕ್ಷ ಡಾ.ಆಯೂಬ್ ಅವರ ರಾಜಕೀಯ ಭವಿಷ್ಯ ನಾಳೆ ಮತಪೆಟ್ಟಿಗೆಗಳಲ್ಲಿ ಭದ್ರವಾಗಲಿದೆ. ರಾಹುಲ್‌ಗಾಂಧಿ ಈ ಭಾಗದಲ್ಲಿ ಬಿರುಸಿನ ಪ್ರಚಾರ ನಡೆದರೂ ಮತದಾನ ನಡೆಯಲಿರುವ 59 ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತ್ರದಲ್ಲಿಯಷ್ಟೇ ಗೆದ್ದಿರುವ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ನಿರೀಕ್ಷೆ ಇಲ್ಲ. ಬಿಜೆಪಿಗೆ ಉತ್ಸಾಹವೇ ಇಲ್ಲ. ಇದರಿಂದಾಗಿ ಸ್ಪರ್ಧೆ ಇರುವುದು ಬಿಎಸ್‌ಪಿ ಮತ್ತು ಎಸ್‌ಪಿ ನಡುವೆ.ಸಾಮಾನ್ಯವಾಗಿ ಚುನಾವಣೆ ಕಾಲದಲ್ಲಿ ಈ ಭಾಗದಲ್ಲಿ ಕೇಳಿ ಬರುವ ಪ್ರತ್ಯೇಕ ಪೂರ್ವಾಂಚಲ ರಾಜ್ಯ ಸ್ಥಾಪನೆಯ ಬೇಡಿಕೆ ಬಗ್ಗೆ ಈ ಬಾರಿ ಯಾಕೋ ಯಾರೂ ಮಾತನಾಡುವವರೇ ಇಲ್ಲ. ರಾಜ್ಯ ವಿಭಜನೆಯ ಮಾಯಾವತಿಯವರ ನಿರ್ಧಾರ ಚುನಾವಣೆಯ ಪ್ರಮುಖ ಚರ್ಚಾವಸ್ತುವಾಗಲಿದೆ ಎಂಬ ನಿರೀಕ್ಷೆ ಸದ್ಯಕ್ಕೆ ಸುಳ್ಳಾಗಿದೆ. ಅನ್ಸಾರಿ, ತ್ರಿಪಾಠಿ, ಆದಿತ್ಯನಾಥ್ ಮೊದಲಾದವರಿಗೆ ಬೇಡವಾಗಿದ್ದು ಜನತೆಗೂ ಬೇಡವಾಗಿದೆಯೇ?

59 ಕ್ಷೇತ್ರಗಳಲ್ಲಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳು

ಪಕ್ಷ       ಸಂಖ್ಯೆ    ಪ್ರಮಾಣ%

ಎಸ್‌ಪಿ    30       (50.8)

ಬಿಎಸ್‌ಪಿ  23       (39.0)

ಬಿಜೆಪಿ     20       (36.4)

ಕಾಂಗ್ರೆಸ್ 19       (32.2)

ಜೆಡಿ(ಯು)12       (24.0)

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry