ಧರ್ಮ ಮನಸ್ಸು ಬೆಸೆಯಲಿ

7

ಧರ್ಮ ಮನಸ್ಸು ಬೆಸೆಯಲಿ

Published:
Updated:

ಜಮಖಂಡಿ: ಧರ್ಮ ಪ್ರಧಾನ ದೇಶವಾದ ಭಾರತದಲ್ಲಿ ಅನೇಕ ಧರ್ಮಗಳು ಇವೆ. ಎಲ್ಲರ ಮನಸ್ಸುಗಳನ್ನು ಬೆಸೆಯುವ ಕೆಲಸ ಧರ್ಮಗಳಿಂದ ನಡೆಯಬೇಕು ಎಂದು ಶ್ರೀಶೈಲದ ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ನುಡಿದರು.ಸಾವಳಗಿ ಗ್ರಾಮದ ಹರಿ ಮಂದಿರದ ಕಳಸಾರೋಹಣ ನಿಮಿತ್ತ ಗುರೂಜಿ ಬುವಾಫಡ ಸಾಂಪ್ರದಾಯಿಕ ಭಜನಿ ಮಂಡಳಿ ಹಾಗೂ ಹರಿಮಂದಿರ ಸಂತ ಮಂಡಳಿ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ  ಲಕ್ಷ ದೀಪೋತ್ಸವ, ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ, ಅಖಂಡ ಹರಿನಾಮ ಸಪ್ತಾಹ, ಕುಂಭಮೇಳ ಹಾಗೂ ಅಡ್ಡಪಲ್ಲಕಿ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಧರ್ಮದಿಂದ ಹರ ಮತ್ತು ಹರಿ ಪಂತಗಳನ್ನು ಒಂದುಗೂಡಿಸುವ ಕಾರ್ಯಗಳು ನಡೆಯಬೇಕು. ಆದರೆ ಧರ್ಮದ ಹೆಸರಿನಲ್ಲಿ ಮನಸ್ಸುಗಳನ್ನು ಒಡೆಯುವ ಕೆಲಸ ನಡೆಯಬಾರದು. ಧರ್ಮ ಬಂಗಾರದ ಕತ್ತರಿಯಾಗ ಬಾರದು ಎಂದು ನುಡಿದರು.ಪಂಢರಪುರದ ಬಾಬಾಸಾಬ ನಿವೃತ್ತಿನಾಥ ರಾಶಿನಕರ ಮಹಾರಾಜರು ಮಾತನಾಡಿ, ಪಂಢರಪುರದ ಸುಕ್ಷೇತ್ರವನ್ನು ಸ್ಥಾಪನೆ ಮಾಡಿರುವ ಚಿಂತಾಮಣಿ ಬಾಬಾ ಪರಾಂಜಪೆ ಅವರು ಸಾವಳಗಿ ಭಾಗವದರು ಎಂಬುದು ಹೆಮ್ಮೆಯ ಸಂಗತಿ ಎಂದರು.ಕೊಣ್ಣೂರಿನ ಪ್ರಭುದೇವರು ಮಾತನಾಡಿ, ಹರ ಮತ್ತು ಹರಿ ಪಂತಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಆ ಎರಡೂ ಪಂತಗಳಲ್ಲಿ ಭಾವ ಬದಲಾದರೆ ಭೇದ ಉಂಟಾಗುತ್ತದೆ. ಕಾರಣ ಹಾಗಾಬಾರದು ಎಂದರು.ಕೊಕಟನೂರಿನ ಗುರುಶಾಂತಲಿಂಗ ದೇವರು, ಜಮಖಂಡಿಯ ಮುತ್ತಿನಕಂತಿ ಮಠದ ಶಿವಲಿಂಗ ಶ್ರೀಗಳು, ಜಮಖಂಡಿಯ ಕಲ್ಯಾಣ ಮಠದ ಗೌರಿಶಂಕರ ಶ್ರೀಗಳು ಆಶೀರ್ವಚನ ನೀಡಿದರು.ಜಿ.ಪಂ.ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಸಿಂಧೂರ ಮಾತನಾಡಿದರು. ಕೇಂದ್ರ ಮಾಜಿ ಸಚಿವ ಸಿದ್ದು ನ್ಯಾಮಗೌಡ, ತಾ.ಪಂ. ಅಧ್ಯಕ್ಷೆ ಗೀತಾ ಬಾಪಕರ, ತಾ.ಪಂ. ಸದಸ್ಯ ಜಯಶ್ರೀ ಕದಂ, ಗ್ರಾ.ಪಂ. ಅಧ್ಯಕ್ಷ ಮಹಾದೇವ ಮಾಳಿ, ಉಪಾಧ್ಯಕ್ಷ ವಿಠ್ಠಲ ಉಮರಾಣಿ ಮತ್ತಿತರರು ವೇದಿಕೆಯಲ್ಲಿದ್ದರು.ಶ್ರೀಶೈಲ ಪೀಠದ ಶಿಷ್ಯಂದಿರಾದ ಮಂಜುನಾಥ, ವಿಶ್ವನಾಥ ವೇದಘೋಷ ಹಾಕಿದರು. ಬಾಳೇಶ್ ಪಾಟೀಲ ಸ್ವಾಗತಿಸಿದರು. ಸಾಹಿತಿ ಚಿತ್ತರಂಜನ ನಾಂದ್ರೇಕರ ನಿರೂಪಿಸಿದರು. ಶಿವಾಜಿ ಘೋರ್ಪಡೆ ವಂದಿಸಿದರು.ಅಡ್ಡಪಲ್ಲಕ್ಕಿ ಮಹೋತ್ಸವ: ಇದಕ್ಕೂ ಮೊದಲು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮ ಪ್ರಮುಖ ಬೀದಿಗಳಲ್ಲಿ ಜರುಗಿತು. ಕುಂಭಹೊತ್ತ ಹಾಗೂ ಆರತಿ ಹಿಡಿದ ಸುಮಂಗಲೆಯರು ಅಡ್ಡಪಲ್ಲಕ್ಕಿ ಮಹೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry