ಬುಧವಾರ, ಅಕ್ಟೋಬರ್ 16, 2019
28 °C

ಧರ್ಮ ಸಹಿಷ್ಣುತೆ ಬೆಳೆಸುವ ಪಠ್ಯಕ್ರಮ ರೂಪಿಸಲಿ

Published:
Updated:

ಯಾವುದೇ ದೇಶದ ಏಳಿಗೆಯಲ್ಲಿ ಅಲ್ಲಿನ ಕಲಿಕಾ ವ್ಯವಸ್ಥೆಯ ಪಾತ್ರ ದೊಡ್ಡದು. ಸರಿಯಾದ ಕಲಿಕೆಯ ವ್ಯವಸ್ಥೆಯ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಪ್ರತಿಯೊಂದನ್ನು ಪ್ರಶ್ನಿಸಿ ತಿಳಿಯುವ ಕುತೂಹಲದ ಮನಃಸ್ಥಿತಿ, ಮಾನವೀಯ, ನಾಗರಿಕ ಮೌಲ್ಯಗಳನ್ನು ಬಿತ್ತುವ ಕೆಲಸವಾಗಬೇಕು.

 

ಮಕ್ಕಳ ಮನಸ್ಸನ್ನು ಹಕ್ಕಿಯಂತೆ ಹಾರಿಕೊಂಡು, ಮುಕ್ತವಾಗಿ ತೆರೆದ ಮನಸ್ಸಿನಂತೆ ಯೋಚಿಸುವಂತೆ ಕಟ್ಟಿದಲ್ಲಿ ಮಾತ್ರ ಜಗತ್ತು ಬೆರಗಾಗುವಂತಹ ಅಪರೂಪದ ಸಾಧನೆಯನ್ನು ಆ ಮಕ್ಕಳು ಸಾಧಿಸಲು ಸಾಧ್ಯ. ಆದ್ದರಿಂದ ಮಕ್ಕಳ ಮನಸ್ಸನ್ನು ಯಾವುದೇ ಧರ್ಮದ, ಪಂಥದ, ಜಾತಿಯ ಆಚರಣೆಯ ಚೌಕಟ್ಟಿಗೆ ಬಂಧಿಸುವ ಕೆಲಸ ಶಾಲೆಗಳಲ್ಲಿ ಆಗಬಾರದು.ಹೀಗಾಗಿ ಶಾಲೆಗಳಲ್ಲಿ ಯಾವುದೇ ಒಂದು ಧರ್ಮಾಧಾರಿತ ಬೋಧನೆಗೆ ಮುಂದಾಗುವುದು ತರವಲ್ಲ. ಎಲ್ಲ ಧರ್ಮ, ಜನಾಂಗಗಳನ್ನು ಸಮಾನವಾಗಿ ಕಾಣುವ ತಳಹದಿಯ ಮೇಲೆ ಅಸ್ತಿತ್ವಕ್ಕೆ ಬಂದಿರುವ ನಮ್ಮ ಸಂವಿಧಾನವೂ ಇದನ್ನು ಒಪ್ಪುವುದಿಲ್ಲ. ಹಾಗೊಂದು ವೇಳೆ, ಧರ್ಮ ಗ್ರಂಥಗಳಲ್ಲಿರುವ ಜೀವನ ಮೌಲ್ಯವನ್ನು ಮಕ್ಕಳಿಗೆ ತಿಳಿಸುವುದೇ ಉದ್ದೇಶವಾದಲ್ಲಿ, ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್ ಸೇರಿದಂತೆ ಎಲ್ಲ ಧರ್ಮಗಳ ಪರಿಚಯ ನೀಡುವಂತಹ, ಆಯಾ ಧರ್ಮ ಗ್ರಂಥಗಳ ಸಾರವನ್ನು ಮಕ್ಕಳಿಗೆ ತಿಳಿಸುವಂತಹ ಮತ್ತು ಆ ಮೂಲಕ ಎಲ್ಲ ಧರ್ಮಗಳ ಬಗ್ಗೆ ಸಹಿಷ್ಣುತೆ ಬೆಳೆಸುವಂತಹ ಪಠ್ಯಕ್ರಮ ರೂಪಿಸುವ ಕೆಲಸಕ್ಕೆ ಸರ್ಕಾರ ಮುಂದಾಗಲಿ.

- ವಸಂತ ಶೆಟ್ಟಿ, ಬೆಂಗಳೂರುಸಂವಿಧಾನದ ಜೀವಂತಿಕೆ ಸತ್ತಿದೆಯೇ?

ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಮುಖ್ಯಮಂತ್ರಿಗಳು `ಅಪ್ಪಣೆ~ ಕೊಡಿಸಿದ್ದಾರೆ. ಏಕೆ? ಭಾರತದ ಸಾರ್ವಜನಿಕ ಜೀವನಕ್ಕೆ ಸಂಹಿತೆಯಾದ ಸಂವಿಧಾನದ ಭಾವ-ಜೀವಂತಿಕೆಗಳು ಸತ್ತುಹೋಗಿದೆಯೇ?ಧ್ಯಾನ, ಧಾರಣ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ ಇತ್ಯಾದಿ ಅಷ್ಟಾಂಗ ಯೋಗನಿರತ ವೈದಿಕ ಯತಿವರೇಣ್ಯರುಗಳು ಈ ಕೆಲಸ ಬಿಟ್ಟು, `ರಾಜಕೀಯ ಸಮಾಧಿಸ್ಥ~ರಾಗಿರುವುದರಿಂದ, ಸರ್ಕಾರ ಅಧ್ಯಾತ್ಮ ತತ್ವಬೋಧನೆಯಲ್ಲಿ ತೊಡಗಬೇಕಾದ ಅಗತ್ಯ ಉಂಟಾಗಿದೆಯೇನೋ, ಪಾಪ!ದೇಶದ ಸಾರ್ವಜನಿಕ ಜೀವನಕ್ಕೆ ಸಂಹಿತೆಯಾದ ಸಂವಿಧಾನದ ಭಾವ-ಜೀವಂತಿಕೆಗಳಲ್ಲಿಯೇ ಭಗವದ್ಗೀತೆಯ ಭಾವಾಶಯಗಳಿವೆ. ಅದು ಒಣಗಿಹೋಗಿರುವುದು, ಕ್ಷುದ್ರ ರಾಜಕಾರಣಿಗಳ ಬುದ್ಧಿ-ಭಾವಗಳಲ್ಲಿ.ಭಗವದ್ಗೀತೆಯಲ್ಲಿ ಸತ್ಯದರ್ಶನವಿಲ್ಲವೆಂದಲ್ಲ. ಆದರದು ಭಗವದ್ಗೀತೆಯಲ್ಲಿ ಮಾತ್ರ ಇದೆ ಎಂದು ವಾದಿಸುವುದು ಸತ್ಯಭ್ರಷ್ಟರ ಬೊಗಳೆತನವಷ್ಟೇ ಆದೀತು. ಇಂದಿನ `ಭಗವದ್ಗೀತೆ~ ಎಂಬ ಗ್ರಂಥದಲ್ಲಿ ಪ್ರಕ್ಷೇಪ-ಪಾಠಾಂತರಗಳೂ ಸೇರ್ಪಡೆಯಾಗಿಲ್ಲವೆನ್ನುವಂತಿಲ್ಲ.

 

ಐಹಿಕ ಸಾಮಾಜಿಕ ಜೀವನದ ಬಗ್ಗೆ ಈ ಗ್ರಂಥದಲ್ಲಿ ಸಮಗ್ರ ದೃಷ್ಟಿಯೊಂದಿದೆ ಎಂದು ಒಪ್ಪಿಕೊಂಡರೂ, ಅದು `ಮರ್ತ್ಯವೆಂಬುದು ಕರ್ತಾರನ ಕಮ್ಮಟವಯ್ಯ~ ಎಂದ ಕನ್ನಡದ ವಚನಕ್ರಾಂತಿಯಲ್ಲೂ ಇನ್ನೂ ವಿಶಿಷ್ಟವಾಗಿ, ಸ್ಪಷ್ಟವಾಗಿ ಇದೆ. ಎಷ್ಟೇ `ಸೆಕ್ಯುಲರ್~ ಎಂದು ಕೊಚ್ಚಿಕೊಂಡರೂ, ಭಗವದ್ಗೀತೆ ವೈದಿಕ ಸಾಹಿತ್ಯದ ಒಂದು ಭಾಗ.ದಲಿತರು, ಅಲ್ಪಸಂಖ್ಯಾತರು ಇತ್ಯಾದಿ ಓಟಿನ ಓಲೈಕೆ ರಾಜಕೀಯದ ಅನೀತಿಯ ವಿರುದ್ಧ, ಭಗವದ್ಗೀತೆಯಂಥ `ಬ್ರಹ್ಮಾಸ್ತ್ರ~ ಪ್ರಯೋಗಿಸುವುದಕ್ಕಿಂತ, ಜೀವಂತ ಸಂವಿಧಾನದ ಅರ್ಥದಲ್ಲಿ ಬಹುಮತ ಸೃಷ್ಟಿಸಿಕೊಳ್ಳುವ ಪ್ರಯತ್ನ ಹೆಚ್ಚು ಪ್ರಜಾಸತ್ತಾತ್ಮಕವಾದೀತು.

- ಆರ್. ಕೆ. ದಿವಾಕರ, ಬೆಂಗಳೂರು

ಕಲಿಕೆ ಐಚ್ಛಿಕವಾಗಲಿ

ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ರಾಜ್ಯಸರ್ಕಾರದ ಚಿಂತನೆಗೆ ಬಂದ ಪ್ರತಿಕ್ರಿಯೆ ಸಮಂಜಸವಾಗಿದೆ. ಭಗವದ್ಗೀತೆ ಯಾವ ಒಂದು ನಿರ್ದಷ್ಟ ಧರ್ಮಕ್ಕೆ ಸೇರಿದ ಗ್ರಂಥವಾಗಿರದೇ ಎಲ್ಲ ಧರ್ಮದವರೂ ಮೆಚ್ಚಿಕೊಳ್ಳಬಹುದಾದ ವೈಚಾರಿಕ ಗ್ರಂಥವೆಂದು ಒಪ್ಪಿಕೊಳ್ಳಬಹುದಾದರೂ ಲೋಕದಲ್ಲಿ ಅದೊಂದು ಭಾರತೀಯ ಧರ್ಮಗ್ರಂಥವೆಂಬ ಪ್ರತೀತಿ ಬೆಳೆದುಬಂದಿದೆ.ಹೀಗೊಂದು ವಿವಾದವಿರುವಾಗ ಅದನ್ನು ಧರ್ಮ ನಿರಪೇಕ್ಷ ಸಂವಿಧಾನ ಹೊಂದಿರುವ ಭಾರತದಲ್ಲಿ ಶಾಲಾ ಪಠ್ಯದಲ್ಲಿ ಸೇರಿಸಿದರೆ ಭಾರತದಲ್ಲಿರುವ ಇತರ ಧರ್ಮಗಳ ಜನಾಂಗದವರು ತಮ್ಮ ಧರ್ಮಗ್ರಂಥಗಳಾದ ಬೈಬಲ್, ಕುರಾನದಂಥವುಗಳನ್ನೂ ಶಾಲಾ ಪಠ್ಯದಲ್ಲಿ ಸೇರಿಸಬೇಕೆಂಬ ಒತ್ತಾಯವನ್ನು ತರುವದು ಸ್ವಾಭಾವಿಕ!ಆಗ ಸರ್ಕಾರ ಒಂದು ಅನಾರೋಗ್ಯಕರ ವಿವಾದವನ್ನು ರಾಜ್ಯದಲ್ಲಿ ಮೈಮೇಲೆ ಎಳೆದುಕೊಂಡಂತಾಗುತ್ತದೆ.  ಆದ್ದರಿಂದ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸಲೇಬೇಕೆಂದರೆ ಅದನ್ನು ಐಚ್ಛಿಕ ವಿಷಯವನ್ನಾಗಿ ಸೇರಿಸಬಹುದಾಗಿದೆ.

 - ಜಯರಾಮ ಹೆಗಡೆ, ಶಿರಸಿ

ಸರ್ಕಾರಿ ಶಾಲೆಯ ಮಕ್ಕಳೇ ಏಕೆ?

`ವಿವಾದಕ್ಕೆ ಆಸ್ಪದವಿಲ್ಲದಂತೆ ಭಗವದ್ಗೀತೆಯ ಭಾಗಗಳನ್ನು ಆಯ್ಕೆ ಮಾಡಿಕೊಂಡು ಪಠ್ಯಕ್ರಮದಲ್ಲಿ ಅಳವಡಿಸಬೇಕು~ ಎಂದು ಸೂಚಿಸಿದ್ದಾರೆ ಮುಖ್ಯಮಂತ್ರಿಗಳು. ಇದನ್ನು ಬಲಪಂಥೀಯ ಚಿಂತಕರು ಸ್ವಾಗತಿಸಿ ಭಗವದ್ಗೀತೆಯ ಮಹತ್ವವನ್ನು ಎತ್ತಿ ಹಿಡಿಯುತ್ತಿದ್ದರೆ, ಎಡಪಂಥೀಯರು ಗೀತೆಯ ವಿವಾದಾತ್ಮಕ ಅಂಶಗಳನ್ನು ಬಯಲಿಗೆಳೆಯುವಲ್ಲಿ ನಿರತರಾಗಿದ್ದಾರೆ. ಈಗ ಈ ಎರಡನ್ನೂ ಕೈಬಿಟ್ಟು ಯಾವುದೇ ಪಂಥದ ಪ್ರತಿನಿಧಿಗಳಾಗದೇ ಆಲೋಚನೆ ಮಾಡುವ ಅಗತ್ಯವಿದೆ.`ವಿವಾದಕ್ಕೆ ಆಸ್ಪದವಿಲ್ಲದ ಭಾಗಗಳು~ ಎಂಬ ಮಾತಿಗೆ ಏನರ್ಥ? ಗೀತೆ ಒಳ್ಳೆಯದಲ್ಲದ ಭಾಗಗಳನ್ನೂ ಒಳಗೊಂಡಿವೆ ಎಂದೇ? ಅವರ ಮಾತುಗಳನ್ನು ಒಪ್ಪಿ ಒಂದು ವೇಳೆ ಗೀತೆಯನ್ನು ಸಂಕಲಿಸಿ ಪಠ್ಯಕ್ರಮಕ್ಕೆ ಅಳವಡಿಸಿದ್ದೇ ಆದಲ್ಲಿ ಗೀತೆಯನ್ನು ಕುರಿತು ಮಕ್ಕಳಿಗೆ ತಪ್ಪಾಗಿ, ಅಪೂರ್ಣವಾಗಿ ತಿಳವಳಿಕೆ ನೀಡಿದಂತಾಗುವುದಿಲ್ಲವೇ?ಎರಡನೆಯದಾಗಿ, ನಮ್ಮ ಉಪಾಧ್ಯಾಯರುಗಳು ಗೀತೆ ಹೇಗೆ ಮನುಸ್ಮೃತಿಗಿಂತ ಹೆಚ್ಚು ಅಪಾಯಕಾರಿ ಗ್ರಂಥವಾಗಿದೆ ಎಂದು ಬೋಧಿಸಲಾರಂಭಿಸಿದರೆ ಅದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಬಲ್ಲರೆ? ಏಕೆಂದರೆ ಹಾಗೆ ಹೇಳಲು ಗೀತೆಯಲ್ಲಿ ಸಾಕಷ್ಟು ಪ್ರಮಾಣಗಳು ಸಿಗುತ್ತವೆ ಮತ್ತು ಹಾಗೆ ವ್ಯಾಖ್ಯಾನಿಸಲು ನಮ್ಮ ವ್ಯವಸ್ಥೆಯಲ್ಲಿ ಮೇಷ್ಟರುಗಳಿಗೆ ಎಲ್ಲ ಸ್ವಾತಂತ್ರ್ಯವಿದೆ.ಮೂರನೆಯದಾಗಿ, ಶಿಕ್ಷಣದಲ್ಲಿ ಯಾರಿಗೆ ಯಾವುದೇ ಹೊಸ ಆಲೋಚನೆ ಬಂದರೂ ಅದಕ್ಕೆ ಪ್ರಯೋಗ ಪಶುಗಳಂತೆ ಸರ್ಕಾರಿ ಶಾಲೆಯ ಮಕ್ಕಳೇ ಏಕೆ ಪ್ರಯೋಗಾರ್ಥಿಗಳಾಗಬೇಕು? ಕನ್ನಡ ಮಾಧ್ಯಮ ಬೇಕು ಎನ್ನುವವರಿಗೂ ಸರ್ಕಾರಿ ಶಾಲೆಯ ಮಕ್ಕಳೇ ಕಾಣಿಸುತ್ತಾರೆ.1ನೇ ತರಗತಿಯಿಂದ ಇಂಗ್ಲಿಷ್ ಕಲಿಸಬೇಕು ಎನ್ನುವವರಿಗೂ ಸರ್ಕಾರಿ ಶಾಲೆಯ ಮಕ್ಕಳೇ ಗುರಿಯಾಗುತ್ತಾರೆ. ಈಗ ಗೀತಾ ಪ್ರಚಾರಕರೂ ಸರ್ಕಾರೀ ಶಾಲೆಯ ಮಕ್ಕಳ ಮೇಲೆ ಪ್ರಯೋಗ ನಡೆಸಲು ಬಂದಿದ್ದಾರೆ. ಇದೇಕೆ?

-ಡಾ. ಟಿ.ಎನ್. ವಾಸುದೇವಮೂರ್ತಿ, ಬೆಂಗಳೂರು

Post Comments (+)