ಮಂಗಳವಾರ, ಜನವರಿ 28, 2020
23 °C

ಧವನ್‌ ‘ರನ್‌ ಶಿಖರ’ದ ಹಿಂದೆ...

– ಪ್ರಮೋದ್‌ ಜಿ.ಕೆ. Updated:

ಅಕ್ಷರ ಗಾತ್ರ : | |

‘ವೆಸ್ಟ್‌ ಇಂಡೀಸ್‌ ಎದುರಿನ ಏಕದಿನ ಸರಣಿ ಮುಗಿದ ನಂತರ ಆಟಗಾರರು ವಿಜಯೋತ್ಸವದಲ್ಲಿ ತೊಡಗಿದ್ದರು. ಆದರೆ, ಶಿಖರ್‌ ಧವನ್‌ ಕ್ರಿಕೆಟ್‌ನ ಕಿಟ್‌ ಹೊತ್ತುಕೊಂಡು ಅವಸರದಲ್ಲಿ ದೆಹಲಿಗೆ ಬಂದರು. ಮರುದಿನವೇ ಟೆಲಿಫಂಕನ್‌ ಕ್ರಿಕೆಟ್‌ ಕ್ಲಬ್‌ನಲ್ಲಿ ಬ್ಯಾಟ್‌ ಹಿಡಿದು ನಿಂತಿದ್ದರು. ಏಕೆ ಗೊತ್ತೆ?  –ಹೀಗೊಂದು ಪ್ರಶ್ನೆಯನ್ನು ಎದುರಿಗಿಟ್ಟಿದ್ದು ಟೆಲಿಫಂಕನ್‌ ಕ್ಲಬ್‌ನ ಮುಖ್ಯ ಕೋಚ್‌ ಮದನ್‌ ಶರ್ಮ.



ಕಾನ್ಪುರದಲ್ಲಿ ಪಂದ್ಯ ಮುಗಿದ ಮರುದಿನವೇ ಧವನ್‌ ಅಭ್ಯಾಸ ಶುರು ಮಾಡಿದ್ದರು. ಇದಕ್ಕೆ ಕಾರಣವೂ ಇದೆ. ಮೂರು ದಿನದ ನಂತರ (ಡಿಸೆಂಬರ್‌ 5ರಿಂದ) ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿರುವ ಏಕದಿನ ಸರಣಿಗೆ ಸಜ್ಜಾಗಲು ಆ ಅಭ್ಯಾಸ.



ಅದು ಪ್ಲಾಸ್ಟಿಕ್‌ ಚೆಂಡಿನ ಮೂಲಕ! ಧವನ್‌ ಆಟದ ಬಗ್ಗೆ ಹೊಂದಿರುವ ಪ್ರೀತಿಗೆ, ತುಡಿತಕ್ಕೆ ಮತ್ತು ಬದ್ಧತೆಗೆ ಇದಕ್ಕಿಂತ ಇನ್ನೊಂದು ಸಾಕ್ಷಿ ಬೇಕಿಲ್ಲ. ದಕ್ಷಿಣ ಆಫ್ರಿಕಾದ ಪುಟಿದೇಳುವ ಪಿಚ್‌ಗಳಲ್ಲಿ ರನ್‌ ಗಳಿಸುವುದು ಸುಲಭವಲ್ಲ. ಆ ಸವಾಲನ್ನು ಎದುರಿಸುವುದು ಭಾರತದ ಬ್ಯಾಟ್ಸ್‌ಮನ್‌ ಗಳಿಗಂತೂ ಕಷ್ಟ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ದಂಥ ಅಪಾಯಕಾರಿ ಪಿಚ್‌ಗಳು ದುಃಸ್ವಪ್ನದಂತೆ ಕಾಡಿವೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ.



ಅದು 2011–12. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಾಡಲು ಭಾರತ ಆಸ್ಟ್ರೇಲಿಯಾಕ್ಕೆ ತೆರಳಿತ್ತು. ಟೆಸ್ಟ್‌ ದಿಗ್ಗಜರಾದ ರಾಹುಲ್ ದ್ರಾವಿಡ್‌, ವಿ.ವಿ.ಎಸ್‌. ಲಕ್ಷ್ಮಣ್‌ ಅವರಂಥ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದರು. ಕಾಂಗರೂಗಳ ನಾಡಿನ ಪಿಚ್‌ ಮರ್ಮ ಅರಿಯಲಾಗದೇ ಭಾರತ 0–4ರಲ್ಲಿ ಸೋಲು ಕಂಡು ಭಾರಿ ಮುಖಭಂಗಕ್ಕೆ ಒಳಗಾಗಿತ್ತು. ಆಟಗಾರರು ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಂತೆ ಟೀಕೆಗಳ ಮಳೆ ಸುರಿದಿತ್ತು.



ಆರಂಭಿಕ ಬ್ಯಾಟ್ಸ್‌ಮನ್‌ ಸ್ಥಾನ ತುಂಬಲು ಸಾಕಷ್ಟು ಆಟಗಾರರು ತುದಿಗಾಲಿನಲ್ಲಿ ನಿಂತಿದ್ದಾರೆ. ಎಲ್ಲರೂ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಆದ್ದರಿಂದ ಬ್ಯಾಟಿಂಗ್‌ ಲಯ ಕಳೆದುಕೊಳ್ಳದಂತೆ ಧವನ್‌ ತುಂಬಾ ಎಚ್ಚರಿಕೆ ವಹಿಸುತ್ತಿದ್ದಾರೆ. ಅದಕ್ಕಾಗಿಯೇ ದೆಹಲಿಯ ಆಟಗಾರ ಪ್ಲಾಸ್ಟಿಕ್‌ ಚೆಂಡಿನಿಂದ ಅಭ್ಯಾಸ ನಡೆಸುತ್ತಿದ್ದಾರೆ. ಅವರ ಕೋಚ್ ಮದನ್‌ ಶರ್ಮ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಷಯವನ್ನು ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

* ಧವನ್‌ ನಿಮ್ಮಲ್ಲಿ ತರಬೇತಿಗೆ ಬಂದಿದ್ದು ಯಾವಾಗ. ಆಗ ಹೇಗಿದ್ದರು?

11 ವರ್ಷದವನಿದ್ದಾಗಲೇ ನನ್ನ ಬಳಿ ತರಬೇತಿ ಪಡೆಯಲು ಆರಂಭಿಸಿದ. ಸಾಕಷ್ಟು ಹೊತ್ತು ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ. ಮೊದಮೊದಲು ರನ್‌ ಗಳಿಸಲು ಅವಸರಿಸಿ ಬೇಗನೆ ಔಟಾಗಿ ಬಿಡುತ್ತಿದ್ದ. ಆದ್ದರಿಂದ ತುಂಬಾ ಹೊತ್ತು ಕ್ರೀಸ್‌ನಲ್ಲಿ ಇರುವುದನ್ನು ಕಲಿತುಕೊ ರನ್‌ ತಾನಾಗಿಯೇ ಬರುತ್ತವೆ ಎಂದು ಹೇಳಿದ್ದೆ. ಅದನ್ನು ಧವನ್‌ ಬೇಗನೆ ಕಲಿತುಕೊಂಡ. ಇದರಿಂದ ವೇಗವಾಗಿ ರನ್‌ ಗಳಿಸಲು ಸಾಧ್ಯವಾಗುತ್ತಿದೆ.

* ಧವನ್‌ ಬದುಕಿಗೆ ತಿರುವು ನೀಡಿದ ಸಂದರ್ಭ ಯಾವುದು?

19 ವರ್ಷದೊಳಗಿನವರ ವಿಶ್ವಕಪ್‌ ಅವರ ಕ್ರಿಕೆಟ್‌ ಬದುಕಿನ ದಿಕ್ಕನ್ನೇ ಬದಲಿಸಿತು. 2004 ರಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ 84ರ ಸರಾಸರಿಯಲ್ಲಿ ಒಟ್ಟು 505 ರನ್‌ ಕಲೆ ಹಾಕಿದ. 2004–05ರಲ್ಲಿ ರಣಜಿಗೆ ಪದಾರ್ಪಣೆ ಮಾಡಿದಾಗಲೂ ಅತ್ಯಧಿಕ ರನ್‌ ಗಳಿಸಿದ ಗೌರವ ಸಿಕ್ಕಿತು.



ಆದರೂ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗಲು ತುಂಬಾ ಕಾಯಬೇಕಾಯಿತು. ಆದರೆ, ಈ ವರ್ಷ ನಡೆದ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಗೆ ವೀರೇಂದ್ರ ಸೆಹ್ವಾಗ್‌ ಬದಲು ಸ್ಥಾನ ಪಡೆದು, ಪದಾರ್ಪಣೆ ಪಂದ್ಯದಲ್ಲಿಯೇ ವೇಗದ ಶತಕ ಗಳಿಸಿದ್ದು ಧವನ್‌ ಬದುಕಿಗೆ ಹೊಸ ಆಯಾಮ ನೀಡಿತು.

* ಧವನ್‌ ಅವರಲ್ಲಿರುವ ಸಕಾರಾತ್ಮಕ ಅಂಶಗಳೇನು?

ಅಂದುಕೊಂಡಿದ್ದನ್ನು ಪಟ್ಟು ಹಿಡಿದು ಸಾಧಿಸುವ ಛಲ ಅವರ ಸಕಾರಾತ್ಮಕ ಅಂಶ. ರನ್‌ ಗಳಿಸುವಾಗಲೂ ಅಷ್ಟೇ. ಅರ್ಧಶತಕ, ಶತಕದ ಹೊಸ್ತಿಲಲ್ಲಿದ್ದಾಗ ಎಚ್ಚರಿಕೆಯಿಂದ ಆಡಬೇಕು, ರಕ್ಷಣಾತ್ಮಕವಾಗಿ ಆಡಬೇಕು ಎನ್ನುವ ಮನೋಭಾವವಿಲ್ಲ. ತಂಡಕ್ಕಾಗಿ ಆಡುವ ಅವರ ಗುಣ ಮೆಚ್ಚುವಂಥದ್ದು.

* ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಅವರು ಹೇಗೆ ಸಜ್ಜಾಗುತ್ತಿದ್ದಾರೆ?

ಈಗಾಗಲೇ ಆ ಬಗ್ಗೆ ಹೇಳಿದ್ದೇನೆ. ಅಲ್ಲಿನ ಪಿಚ್‌ಗೆ ಹೊಂದಿಕೊಳ್ಳಲು ಪ್ಲಾಸ್ಟಿಕ್‌ ಚೆಂಡಿನಿಂದ ಅಭ್ಯಾಸ ನಡೆಸುತ್ತಿದ್ದಾರೆ. ಇದೇ ವರ್ಷದ ಜೂನ್‌ನಲ್ಲಿ ದಕ್ಷಿಣ ಆಫ್ರಿಕಾದ ನೆಲದಲ್ಲಿ ಅವರು ಶತಕ ಗಳಿಸಿದ್ದರು. ಆಗಲೂ ಪ್ಲಾಸ್ಟಿಕ್‌ ಚೆಂಡಿನಿಂದ ಅಭ್ಯಾಸ ನಡೆಸಿದ್ದರು. ಆದ್ದರಿಂದ ಅವರಿಗೆ ಏಕದಿನ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲಿ ಶತಕ ಗಳಿಸಲು ಸಾಧ್ಯವಾಯಿತು. ಅದಕ್ಕಾಗಿ ಈಗಲೂ ಹಿಂದಿನ ಪ್ರಯೋಗವನ್ನು ಮುಂದುವರಿಸಿದ್ದಾರೆ.

* ಸತತ ಬ್ಯಾಟಿಂಗ್‌ ಲಯ ಉಳಿಸಿಕೊಂಡಿರುವ ಹಿಂದಿನ ಗುಟ್ಟೇನು?

ಯಾವುದೇ ಸರಣಿ, ಟೂರ್ನಿ ಮುಗಿದ ನಂತರ ಅದರ ಖುಷಿಯಲ್ಲಿಯೇ ಹೆಚ್ಚು ಸಮಯ ಕಳೆಯುವುದಿಲ್ಲ. ಬದಲಾಗಿ, ತಕ್ಷಣವೇ ಅಭ್ಯಾಸದಲ್ಲಿ ತೊಡಗುತ್ತಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಆದ ಕಾರಣ ನಿರಾಳವಾಗಿ ರನ್‌ ಗಳಿಸಲು ಅವಕಾಶವಿರುತ್ತದೆ. ಈ ಅವಕಾಶವನ್ನು ಧವನ್‌ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)