ಮಂಗಳವಾರ, ಮೇ 18, 2021
31 °C

ಧವನ್ `ಬ್ರಾಂಡ್ ಮೌಲ್ಯ' ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ಮೂರು ಶತಕ ಗಳಿಸುವ ಮೂಲಕ ಭಾರತ ತಂಡದ ಹೊಸ `ಬ್ಯಾಟಿಂಗ್ ಹೀರೊ' ಎನಿಸಿಕೊಂಡಿರುವ ಶಿಖರ್ ಧವನ್ ಅವರ `ಬ್ರಾಂಡ್ ಮೌಲ್ಯ' ಕೂಡಾ ಹೆಚ್ಚಿದೆ.ಹಲವು ಕಾರ್ಪೊರೇಟ್ ಕಂಪೆನಿಗಳು ಧವನ್ ಪ್ರಾಯೋಜಕತ್ವ ವಹಿಸಲು ಆಸಕ್ತಿ ತೋರಿವೆ ಎಂದು ಈ ಆಟಗಾರನ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ `ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್' ಕಂಪೆನಿ ಹೇಳಿದೆ. `ಶಿಖರ್ ಅದ್ಭುತ ಆಟದ ಮೂಲಕ ತಮಗೆ ಲಭಿಸಿದ ಅವಕಾಶಗಳನ್ನು ಸದುಪಯೋಪಡಿಸಿಕೊಂಡಿದ್ದಾರೆ. ಅವರು ಇನ್ನೂ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದ ಆರಂಭಿಕ ಹಂತದಲ್ಲಿದ್ದಾರೆ. ಆದರೂ ಅವರ ಬ್ರಾಂಡ್ ಮೌಲ್ಯ ಈಗಾಗಲೇ ಹೆಚ್ಚಿದೆ' ಎಂದು ಕಂಪೆನಿಯ ಸಿಇಒ ಬಂಟಿ ಸಜ್ದೆ ನುಡಿದಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ಪದಾರ್ಪಣೆ   ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸಿದ್ದ ಧವನ್, ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸತತ ಎರಡು ಶತಕ ಗಳಿಸಿದ್ದಾರೆ. ಈ ಶತಕಗಳಿಂದಾಗಿ ಶಿಖರ್ ಬ್ರಾಂಡ್ ಮೌಲ್ಯ ಹೆಚ್ಚಿದೆಯೇ ಎಂಬ ಪ್ರಶ್ನೆಗೆ ಬಂಟಿ, `ನಾವು ಈಗಾಗಲೇ ಮುಂಚೂಣಿಯಲ್ಲಿರುವ ಉದ್ಯಮ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದೇವೆ. 3-4 ಕಾರ್ಪೊರೇಟ್ ಕಂಪೆನಿಗಳು ಶಿಖರ್ ಜೊತೆ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ತೋರಿವೆ' ಎಂದು ಉತ್ತರಿಸಿದರು.`ಶಿಖರ್ ಈ ಹಂತದಲ್ಲಿ ಒಂದಕ್ಕಿಂತ ಹೆಚ್ಚಿನ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ನಾವು ಬಯಸುವುದಿಲ್ಲ. ಏಕೆಂದರೆ ಅವರು ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡುವತ್ತಲೂ ಗಮನ ಹರಿಸುವುದು ಅಗತ್ಯ' ಎಂದಿದ್ದಾರೆ. ಭಾರತ ಕ್ರಿಕೆಟ್ ತಂಡದ ಇತರ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಮಾರುಕಟ್ಟೆ ವ್ಯವಹಾರಗಳನ್ನೂ `ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್' ಕಂಪೆನಿ ನೋಡಿಕೊಳ್ಳುತ್ತಿದೆ.`ಬ್ರಾಂಡ್ ಮೌಲ್ಯ' ಹೆಚ್ಚಲು ಶಿಖರ್ ಮುಂದಿನ ಒಂದು ವರ್ಷದ ಅವಧಿಯಲ್ಲಿ ನೀಡುವ ಪ್ರದರ್ಶನ ಮಹತ್ವದ ಪಾತ್ರ ವಹಿಸಲಿದೆ ಎಂಬುದು ಕಂಪೆನಿಯ ಹೇಳಿಕೆ. `ಮುಂದಿನ ಆರು ತಿಂಗಳಲ್ಲಿ ಅವರ ಆಟ ಹೇಗಿರುತ್ತದೆ ಎಂಬುದನ್ನು ಯಾರಿಗೂ ಹೇಳಲು ಸಾಧ್ಯವಿಲ್ಲ. ಒಬ್ಬ ಕ್ರೀಡಾಪಟುವಿನ ವೃತ್ತಿಜೀವನ ಕಡಿಮೆ ಅವಧಿಯದ್ದಾಗಿರುತ್ತದೆ. ಆದ್ದರಿಂದ ಬ್ರಾಂಡ್ ಮೌಲ್ಯ ಹೆಚ್ಚಿದ ಸಂದರ್ಭ ಅವರ ಪ್ರಯೋಜನ ಪಡೆಯುವುದು ಅಗತ್ಯ' ಎಂದು ಬಂಟಿ ತಿಳಿಸಿದ್ದಾರೆ.ಶಿಖರ್ ಹೊಂದಿರುವ ಹುರಿ ಮೀಸೆಯನ್ನು ನೋಡಿ ಕಂಪೆನಿಗಳು ಅವರತ್ತ ಆಸಕ್ತಿ ತೋರಿದೆಯೇ ಎಂದು ಕೇಳಿದಾಗ, `ಅದು ಅವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ ವಿಚಾರ. ಆದರೆ ವೃತ್ತಿಜೀವನದ ಉದ್ದಕ್ಕೂ ಅದೇ ರೀತಿಯ ಮೀಸೆ ಉಳಿಸಿಕೊಳ್ಳುವರು ಎಂಬ ಯಾವುದೇ ಖಾತರಿ ಇಲ್ಲ. ಆದರೆ ಯಾವುದಾದರೂ ಕಂಪೆನಿ ಅವರ ಮೀಸೆಯನ್ನು ನೋಡಿ ಒಪ್ಪಂದಕ್ಕೆ ಮುಂದಾದರೆ, ನಾವು ಸ್ವಾಗತಿಸುತ್ತೇವೆ' ಎಂದು ಬಂಟಿ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.