ಧಾತುವಿನಲ್ಲಿ ದಸರೆಯ ದಶಾವತಾರ

7

ಧಾತುವಿನಲ್ಲಿ ದಸರೆಯ ದಶಾವತಾರ

Published:
Updated:

`ಒಂದೆರಡಲ್ಲ ರೀ.. ಸಾವಿರಾರು ಬೊಂಬೆಗಳಿವೆ. ಎಲ್ಲೆಡೆ ಗೌರಿ ಗಣೇಶನನ್ನು ಕಳುಹಿಸಿ ಹಬ್ಬದ ತಯಾರಿ ಮಾಡತೊಡಗಿದರೆ, ನಾವು ಶ್ರಾವಣ ಮಾಸದಿಂದಲೇ ಆರಂಭಿಸುತ್ತೇವೆ. ಎರಡು ಇಂಚು ಉದ್ದದ ಬೊಂಬೆಯಿಂದ 11 ಅಡಿಯಷ್ಟು ಎತ್ತರದ ಗಾತ್ರದ ವಿವಿಧ ಬೊಂಬೆಗಳಿವೆ.ಎಲ್ಲವನ್ನೂ ಒಂದೊಂದೇ ಸಂದರ್ಭಕ್ಕೆ ಅನುಸಾರವಾಗಿ ಜೋಡಿಸುವುದೇ ಒಂದು ಸವಾಲು. ಹಬ್ಬದ ನಂತರ ಸಂಕ್ರಮಣದವರೆಗೂ ಇವುಗಳನ್ನು ಜತನ ಮಾಡುವುದೇ ದೊಡ್ಡ ಕೆಲಸವಾಗಿದೆ~ ಎನ್ನುತ್ತ ಮಾತಿಗಿಳಿದರು ಅನುಪಮಾ ಹೊಸಕೆರೆ.ಬೊಂಬೆ ಕೂರಿಸುವ ಸಂಪ್ರದಾಯ ಇವರಲ್ಲಿನ ಸೃಜನಶೀಲ ಮನಸಿಗೆ ಹೊಸ ವೇದಿಕೆ ನೀಡಿತ್ತು. `ದಶಾವತಾರ, ಕೃಷ್ಣ- ರುಕ್ಮಿಣಿ ಸ್ವಯಂವರ ಮುಂತಾದ ಸನ್ನಿವೇಶಗಳನ್ನು ಬೊಂಬೆ ಕೂರಿಸುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತಿತ್ತು.ಆದರೆ ಗೊಂಬೆ ಇಟ್ಟರೆ ಸಾಕೆ? ಕತೆ ಹೇಳುವುದು ಬೇಡವೆ? ಮಗಳು ಪ್ರಕೃತಿಗೆ ಕತೆ ಹೇಳುವುದನ್ನೇ ಕಲೆಯಾಗಿಸಿಕೊಂಡೆ. ನಂತರ ಅದನ್ನು ಬೊಂಬೆಯಾಟದ ಮೂಲಕ ಹೇಳಲಾರಂಭಿಸಿದೆ~ ಎನ್ನುತ್ತ ಅನುಪಮಾ ತಮ್ಮ 17 ವರ್ಷಗಳ ಪಯಣವನ್ನು ಬಿಚ್ಚಿಡುತ್ತಾರೆ.2000ದಿಂದ ತಂತ್ರಜ್ಞಾನವನ್ನು ಬಳಸಿ ಕಥೆ ಹೇಳಲಾರಂಭಿಸಿದರು. ನಂತರ ಮಕ್ಕಳಿಗೆ ಬೊಂಬೆಯಾಟದಲ್ಲಿ ಆಸಕ್ತಿ ಮೂಡಿಸಲೆಂದೇ ಕಥಾ ಶಿಬಿರಗಳನ್ನು ಹಮ್ಮಿಕೊಳ್ಳತೊಡಗಿದರು. ಬೊಂಬೆ ತಯಾರಿ, ಶರನ್ನವರಾತ್ರಿ ಉತ್ಸವದ ಆಕಷರ್ಣೆಯ ಬಿಂದುವಾಯಿತು.

 

ಪ್ರತಿವರ್ಷವೂ ಒಂದೊಂದು ಹೊಸ ಪೌರಾಣಿಕ ಕತೆಗಳನ್ನು ಅನಾವರಣಗೊಳಿಸಲು ಆರಂಭಿಸಿದರು. ಹಿಂದೂ ಪುರಾಣಕತೆಗಳಲ್ಲಿರುವಷ್ಟು ಫ್ಯಾಂಟಸಿ, ರೋಚಕತೆ ಇಂದಿನ ಯಾವ ಕಾರ್ಟೂನುಗಳಲ್ಲೂ ಇಲ್ಲ. ಈ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕೆನ್ನುವುದೇ ಅನುಪಮಾ ಅವರ ಮೂಲ ಉದ್ದೇಶವಾಗಿತ್ತು. ಅದು ಈಡೇರುತ್ತಲೇ ಬರುತ್ತಿದೆ.ಈ ವರ್ಷದ ವಿಶೇಷ

ಕಳೆದೆರಡು ವರ್ಷಗಳ ಹಿಂದೆ ಮೈಸೂರಿಗೆ ಭೇಟಿ ನೀಡಿದಾಗ ಜನಪದ ವಸ್ತು ಸಂಗ್ರಹಾಲಯದಲ್ಲಿ ಅನುಪಮಾ ಈಚನೂರು ಬೊಂಬೆಯನ್ನು ನೋಡಿದರಂತೆ. ಅನುಪಮಾ ಜೊತೆಗೆ ಅವರಿಗೆ ಬೊಂಬೆಯಾಟವನ್ನು ಹೇಳಿಕೊಟ್ಟ ಗುರು ಎಂ.ಆರ್.ರಂಗನಾಥ್ ಸಹ ಇದ್ದರು.ಅವರೇ ಈಚನೂರು ಬೊಂಬೆಗಳ ಪರಿಚಯ ಮಾಡಿಕೊಟ್ಟರು. 70 ವಸಂತಗಳನ್ನು ಕಂಡ ರಂಗನಾಥ್ ತಮ್ಮ ಬಾಲ್ಯದಲ್ಲಿ ಈಚನೂರು ಬೊಂಬೆಯಾಟ ನೋಡಿರುವ ಬಗ್ಗೆ ಮಾಹಿತಿ ನೀಡಿದರು. ಇದೀಗ ಯಾರೂ ಆಡಿಸುವುದಿಲ್ಲ ಎಂಬುದೂ ತಿಳಿದುಬಂತು.“ಆ ಬೊಂಬೆ ಕತೆಯಾಡಿಸುವ ಬಗೆಯನ್ನು ಹೇಳುತ್ತಿದ್ದರೆ, ಅಕ್ಷಿಪಟಲದ ಮುಂದೆ ನನ್ನ ಕಾಲ್ಪನಿಕ ಲೋಕ ಬಿಚ್ಚಿಕೊಳ್ಳುತ್ತಿತ್ತು. ಆಗಿನಿಂದಲೇ ಈಚನೂರು ಮಾದರಿಯ ಬೊಂಬೆಗಳ ನಿರ್ಮಾಣದ ಬಗ್ಗೆ ಯೋಚಿಸಿದೆ. ಕಟ್ಟಿಗೆಯ ಈ ಬೊಂಬೆಗಳಲ್ಲಿ ಆಭರಣಗಳೇ ಮೂಲ ಆಕರ್ಷಣೆ. ಇದೀಗ ಈ ಬೊಂಬೆಗಳನ್ನು ಬಳಸಿಕೊಂಡು `ರಾಜಸೂಯ ಯಾಗ~ ಕಾರ್ಯಕ್ರಮವನ್ನು ಅ.22ರಂದು ಪ್ರಸ್ತುತ ಪಡಿಸುತ್ತಿದ್ದೇವೆ.ಅಳಿವಿನಂಚಿನಲ್ಲಿದ್ದ ಅಥವಾ ಜನಪದರಿಂದ ದೂರವಾದ ಕಲೆಯೊಂದನ್ನು ಮತ್ತೆ ಜನರ ಮುಂದೆ ತರುತ್ತಿರುವುದು ಖುಷಿಯಾಗಿದೆ” ಎನ್ನುತ್ತಾರೆ ಅನುಪಮಾ.

ಈ ಸಂಶೋಧನೆ ಹಾಗೂ ನಿರ್ಮಾಣಕ್ಕಾಗಿ ಸಂಸ್ಕೃತಿ ಸಚಿವಾಲಯದಿಂದ ಹಿರಿಯ ಫೆಲೋಶಿಪ್ ಸಹ ದೊರೆಯಿತು. ಇದೀಗ ಒಂದು ಕಾರ್ಯಕ್ರಮ ರೂಪುಗೊಂಡಿದೆ.`ರುಕ್ಮಿಣಿ ಪರಿಣಯ~, `ಜರಾಸಂಧ ವಧೆ~, `ಶಿಶುಪಾಲ ವಧೆ~ ಮುಂತಾದ ಕತೆಗಳಿರುವ `ರಾಜಸೂಯ ಯಾಗ~ ಕಾರ್ಯಕ್ರಮವು ಸಿದ್ಧವಾಗಿದೆ ಎನ್ನುತ್ತಾರೆ ಅನುಪಮಾ. 70 ನಿಮಿಷಗಳ ಅವಧಿಯ ಈ ಪ್ರದರ್ಶನವನ್ನು ಕನ್ನಡದಲ್ಲಿ ಪ್ರಸ್ತುತಪಡಿಸಲಾಗುತ್ತದೆ.

ಇದಲ್ಲದೆ ಶಿವಪುರಾಣ, ಕೃಷ್ಣಬಾಲಲೀಲೆ, ಗೀತೋಪದೇಶ, ತ್ರಿಪುರಾಂತಕ ಶಿವ ಮುಂತಾದ ರೂಪಕಗಳನ್ನು ಪ್ರದರ್ಶನದಲ್ಲಿ ನಿರೂಪಿಸಲಾಗಿದೆ.ಅಕ್ಟೋಬರ್ 17ರಿಂದ 24ರವರೆಗೆ ಸಂಜೆ 6.30ರಿಂದ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3ರಿಂದ ಮಕ್ಕಳಿಗೆ ಶ್ಲೋಕಗಳ ಶಿಬಿರವನ್ನು ಏರ್ಪಡಿಸಲಾಗಿದೆ. ಬೊಂಬೆ ಪ್ರದರ್ಶನವನ್ನು ಸಾರ್ವಜನಿಕರಿಗೆ ಮಧ್ಯಾಹ್ನ 3ರಿಂದ 8ರವರೆಗೆ ತೆರೆಯಲಾಗುತ್ತದೆ.

ಹೆಚ್ಚಿನ ಮಾಹಿತಿಗೆ: 6568 3396.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry