ಸೋಮವಾರ, ಜೂನ್ 21, 2021
28 °C

ಧಾರಣೆ ಕುಸಿತದ ನಡುವೆಯೂ ಹೆಚ್ಚುತ್ತಿರುವ ರೇಷ್ಮೆ ಕೃಷಿ

ಎಸ್. ಸಂಪತ್ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ರೇಷ್ಮೆ ಗೂಡಿನ ಧಾರಣೆ ಕುಸಿತದ ನಡುವೆಯೂ ರಾಜ್ಯದಾದ್ಯಂತ ವರ್ಷದ ಅವಧಿಯಲ್ಲಿ ಅಚ್ಚರಿ ಎಂಬಂತೆ 10,703 ಹೆಕ್ಟೇರ್ ಭೂಮಿ ಹೆಚ್ಚುವರಿಯಾಗಿ ರೇಷ್ಮೆ ಕೃಷಿಗೆ ಸೇರ್ಪಡೆಯಾಗಿದೆ !2010-11ನೇ ಸಾಲಿನಲ್ಲಿ 62,697 ಹೆಕ್ಟೇರ್ ಇದ್ದ ರೇಷ್ಮೆ ಕೃಷಿ ಪ್ರದೇಶ 2011-12 (ಫೆಬ್ರುವರಿ ಅಂತ್ಯ)ನೇ ಸಾಲಿನಲ್ಲಿ 71,994 ಹೆಕ್ಟೇರ್‌ನಷ್ಟು ವಿಸ್ತೀರ್ಣಗೊಂಡಿದೆ ಎಂದು ಕೇಂದ್ರ ರೇಷ್ಮೆ ಮಂಡಳಿಯ ಸಹಾಯಕ ನಿರ್ದೇಶಕ ಮುಸ್ತಾಫ್ ಅಲಿಖಾನ್ `ಪ್ರಜಾವಾಣಿ~ಗೆ ಮಾಹಿತಿ ನೀಡಿದ್ದಾರೆ.2008-09ರಲ್ಲಿ ರಾಜ್ಯದಲ್ಲಿ 77,329 ಹೆಕ್ಟೇರ್‌ನಷ್ಟಿದ್ದ ರೇಷ್ಮೆ ಕೃಷಿ ಪ್ರದೇಶ, 2009-10ನೇ ಸಾಲಿನಲ್ಲಿ 82,098 ಹೆಕ್ಟೇರ್‌ಗೆ ಏರಿಕೆಯಾಗಿತ್ತು. ಆದರೆ 2010-11ನೇ ಸಾಲಿನಲ್ಲಿ ಅದು 62,697 ಹೆಕ್ಟೇರ್ ಪ್ರದೇಶಕ್ಕೆ ಕುಸಿತ ಕಂಡಿತ್ತು. ಗೂಡಿನ ಧಾರಣೆ ಕುಸಿತದಿಂದ ಈ ವರ್ಷ ಇನ್ನಷ್ಟು ಹೆಕ್ಟೇರ್ ಕುಸಿಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅಚ್ಚರಿ ಎಂಬಂತೆ 10 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆ ವಿಸ್ತೀರ್ಣವಾಗಿದೆ ಎಂದು ಅವರು ಅಂಕಿ ಅಂಶ ಸಹಿತ ವಿವರಿಸಿದರು.ರೇಷ್ಮೆ ಜಿಲ್ಲೆಯಲ್ಲೂ ಹೆಚ್ಚಳ: ರೇಷ್ಮೆ ನಾಡು ಖ್ಯಾತಿಯ ರಾಮನಗರ ಜಿಲ್ಲೆಯಲ್ಲಿ 2010-11ರಲ್ಲಿ 9,817 ಹೆಕ್ಟೇರ್ ಇದ್ದ ರೇಷ್ಮೆ ಕೃಷಿ ಭೂಮಿ 2011-12 (ಫೆಬ್ರುವರಿ ಅಂತ್ಯ)ರಲ್ಲಿ 11,496 ಹೆಕ್ಟೇರ್‌ಗೆ ವಿಸ್ತೀರ್ಣವಾಗಿದೆ. ಒಂದು ವರ್ಷದಲ್ಲಿ 1,669 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆ ಹೆಚ್ಚುವರಿ ಅಭಿವೃದ್ಧಿಯಾಗಿದೆ ಎಂದು ರೇಷ್ಮೆ ಇಲಾಖೆಯ ರಾಮನಗರ ಜಿಲ್ಲಾ ಉಪ ನಿರ್ದೇಶಕ ಚಂದ್ರಶೇಖರಪ್ಪ ತಿಳಿಸಿದರು. ಕಳೆದ ವರ್ಷ 23,479 ಇದ್ದ ರೇಷ್ಮೆ ಕೃಷಿಕರ ಸಂಖ್ಯೆ ಈ ವರ್ಷ 23,593ಕ್ಕೆ ಏರಿಕೆಯಾಗಿದೆ.ಅದೇ ರೀತಿ ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದನೆಯೂ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.

ರಾಮನಗರ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ  ಕಳೆದ ವರ್ಷ 11,030 ಮೆಟ್ರಿಕ್ ಟನ್ ಗೂಡು ಬಂದಿದ್ದರೆ, ಈ ವರ್ಷ ಫೆಬ್ರುವರಿ ಅಂತ್ಯದ ವೇಳೆಗೆ 12,380 ಮೆಟ್ರಿಕ್ ಟನ್ ಗೂಡು ಬಂದಿದ್ದು, ಆರ್ಥಿಕ ವರ್ಷದ ಅಂತ್ಯದೊಳಗೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಮಾರುಕಟ್ಟೆಯ ಉಪ ನಿರ್ದೇಶಕ ಎಚ್.ರಾಜಣ್ಣ ಅಂಕಿ ಅಂಶ ನೀಡಿದರು.ರೈತರ ಪ್ರತಿಕ್ರಿಯೆ: `ಕನಿಷ್ಠ ಕೆ.ಜಿ ಗೂಡಿಗೆ 300 ರೂಪಾಯಿ ಆದರೂ ದೊರೆಯಬೇಕು. ಧಾರಣೆ ಕುಸಿತದಿಂದ ನಮ್ಮೂರಿನಲ್ಲಿ ಕೆಲವರು ಗಿಡಗಳನ್ನು ಬುಡಸಹಿತ ಕಿತ್ತುಹಾಕಿದ್ದಾರೆ. ಇನ್ನೂ ಕೆಲವರೂ ಈ ಬಾರಿಯ ಬಜೆಟ್ ಮೇಲೆ ನಿರೀಕ್ಷೆ ಹೊಂದಿದ್ದರೂ. ಅದೂ ಈಗ ಹುಸಿಯಾಗಿದೆ. ಇನ್ನಷ್ಟು ಜನ ಗಿಡ ಕಿತ್ತು ಹಾಕುವ ಸಾಧ್ಯತೆ ಇದೆ~ ಎಂದು ಕನ್ನಮಂಗಲದ ರೈತ ಕೆಂಪಲಿಂಗಯ್ಯ ಪ್ರತಿಕ್ರಿಯಿಸಿದರು.`ಕಳೆದ ವರ್ಷದಿಂದ ಮಾರುಕಟ್ಟೆಗೆ ರೇಷ್ಮೆ ಗೂಡನ್ನು ತೆಗೆದುಕೊಂಡು ಬರುತ್ತಿದ್ದೇನೆ. ಗೂಡಿನ ಧಾರಣೆಯಿಂದ ಲಾಭ ಬರುತ್ತಿಲ್ಲ. ಆದರೆ ಇರುವ ಅರ್ಧ ಎಕರೆಯಲ್ಲಿ ಸಾಲ ಮಾಡಿ ಹಿಪ್ಪುನೇರಳೆ ಕಡ್ಡಿ ಹಾಕಿಸಿದ್ದೇನೆ. ಅದನ್ನು ಬಿಟ್ಟರೆ ನಮಗೆ ಬೇರೆ ಗತಿಯಿಲ್ಲ. ವರ್ಷದಲ್ಲಿ ಮೂರು ನಾಲ್ಕು ಬಾರಿ ಇದರಲ್ಲಿ ಆದಾಯ ಬರುತ್ತದೆ. ಹೇಗೋ ಜೀವನ ಆಗುತ್ತಿದೆ. ಬೆಲೆ ಇನ್ನಷ್ಟು ಕಡಿಮೆಯಾದರೆ ನಮ್ಮ ಕುಟುಂಬ ಬೀದಿಪಾಲಾಗುತ್ತದೆ~ ಎಂದು ಅಲಗೂರಿನ ರೇಷ್ಮೆ ಕೃಷಿಕರಾದ ಶಾಂತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ರೈತ ಮುಖಂಡರ ಹೇಳಿಕೆ: `ರೇಷ್ಮೆ ಧಾರಣೆ ಕುಸಿತದಿಂದ ಹಂತ ಹಂತವಾಗಿ ಕೃಷಿಕರು ಈ ಉದ್ಯಮದಿಂದ ದೂರ ಸರಿಯುತ್ತಿದ್ದಾರೆ. ಮೊದಲಿನಂತೆ ಈಗ ಈ ಕೃಷಿ ವಿಸ್ತರಣೆಯಾಗುತ್ತಿಲ್ಲ. ಪ್ರಗತಿಯ ದರ ಕ್ಷೀಣಿಸುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ರೇಷ್ಮೆ ಕೃಷಿ ಹೇಗಿರುತ್ತದೆ ಎಂದು ಹೇಳಲಾಗದ ಸ್ಥಿತಿ ಇಂದಿದೆ~ ಎಂದು ರಾಜ್ಯ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಯ್ಯಾರೆಡ್ಡಿ ತಿಳಿಸಿದರು.`ಈಗಾಗಲೇ ಬೆಲೆ ಕುಸಿತದಿಂದ ಕಂಗಾಲಾಗಿರುವ ರೇಷ್ಮೆ ಕೃಷಿಕರಲ್ಲಿ ಶೇ 25ರಿಂದ 30ರಷ್ಟು ಜನ ಈ ಉದ್ಯಮದಿಂದ ಕಾಲನ್ನು ಹೊರಗಿಟ್ಟಿದ್ದಾರೆ. ಇನ್ನೂ ನಾಲ್ಕು-ಐದು ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ದೇಶದಲ್ಲಿ ರೇಷ್ಮೆ ಕೃಷಿಯೇ ಇಲ್ಲದ ಸ್ಥಿತಿ ಎದುರಾದರೂ ಆಶ್ಚರ್ಯ ಪಡಬೇಕಿಲ್ಲ~ ಎಂದು ರಾಜ್ಯ ನೋಂದಾಯಿತ ರೇಷ್ಮೆ ಮೊಟ್ಟೆ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ. ಮಹೇಂದ್ರ ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.