ಧಾರವಾಡದಲ್ಲಿ ಉತ್ತಮ, ಹುಬ್ಬಳ್ಳಿಯಲ್ಲಿ ಕಳಪೆ

7

ಧಾರವಾಡದಲ್ಲಿ ಉತ್ತಮ, ಹುಬ್ಬಳ್ಳಿಯಲ್ಲಿ ಕಳಪೆ

Published:
Updated:
ಧಾರವಾಡದಲ್ಲಿ ಉತ್ತಮ, ಹುಬ್ಬಳ್ಳಿಯಲ್ಲಿ ಕಳಪೆ

ಧಾರವಾಡ ಸಾಂಸ್ಕೃತಿಕ ನಗರಿಯ ಜೊತೆಗೆ ಕ್ರೀಡಾ ನಗರಿಯೂ ಹೌದು. ವಿಶ್ವವಿದ್ಯಾಲಯದ ಕ್ರೀಡಾಂಗಣಗಳು, ಜೆಎಸ್‌ಎಸ್, ಕರ್ನಾಟಕ ಕಾಲೇಜು, ಎಸ್‌ಡಿಎಂ ಕಾಲೇಜು ಮೈದಾನಗಳು, ಮಲ್ಲಸಜ್ಜನ ವ್ಯಾಯಾಮ ಶಾಲೆಯ ಅಂಕಣ.... ಹೀಗೆ ನಾಲ್ಕಾರು ಮೈದಾನಗಳಲ್ಲಿ ನಿತ್ಯ ಕ್ರೀಡಾ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.ಇವೆಲ್ಲದಕ್ಕಿಂತ ಮುಖ್ಯವಾಗಿ ಗುರುತಿಸಿಕೊಳ್ಳುವುದು ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣ. ನಗರದ ಹೃದಯ ಭಾಗದಲ್ಲಿ ಸುಮಾರು ಎಂಟು ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಮಣ್ಣಿನ ಮೈದಾನಕ್ಕೆ ಇದೀಗ ಸಿಂಥೆಟಿಕ್ ಹೊದಿಕೆ ಹೊದಿಸುವ ಕಾರ್ಯಕ್ಕೆ ಚಾಲನೆ ದೊರೆಯುತ್ತಿದೆ. ಈ ಮೂಲಕ ಇಲ್ಲಿನ ಕ್ರೀಡಾ ಚಟುವಟಿಕೆಗಳಿಗೆ, ಕ್ರೀಡಾಭ್ಯಾಸಕ್ಕೆ ಆಧುನಿಕ ಸ್ಪರ್ಶ ನೀಡುವ ಕಾರ್ಯ ನಡೆದಿದೆ. ರೂ. 3.69 ಕೋಟಿ ವೆಚ್ಚದಲ್ಲಿ ಧಾರವಾಡದ ಆರ್.ಎನ್.ಶೆಟ್ಟಿ  ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಸರ್ಕಾರದ ಅನುಮತಿ ಸಿಕ್ಕಿದೆ. ಎಂಟು ಲೇನ್ ಟ್ರ್ಯಾಕ್ ನಿರ್ಮಾಣವಾಗಲಿದೆ. ಈ ಸಂಬಂಧ ಇ-ಟೆಂಡರ್ ಪ್ರಕ್ರಿಯೆ ಸಹ ಆರಂಭಗೊಂಡಿದೆ ಎನ್ನುತ್ತಾರೆ ಅಧಿಕಾರಿಗಳು.ಮಣ್ಣಿನ ಅಂಕಣದಿಂದ ಕೂಡಿರುವ ಆರ್.ಎನ್. ಶೆಟ್ಟಿ ಮೈದಾನದಲ್ಲಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಅಭ್ಯಾಸ ನಡೆಯುತ್ತದೆ. ಡಿವೈಎಸ್‌ಎಸ್ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಜಿಮ್ನಾಸ್ಟಿಕ್ ಹಾಗೂ ಹಾಕಿ ಅಭ್ಯಾಸ ಕೈಗೊಂಡರೆ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.ಗ್ರಾಮೀಣ ಭಾಗಗಳಿಂದಲೂ ಇಲ್ಲಿಗೆ ಕ್ರೀಡಾಪಟುಗಳು ಅಭ್ಯಾಸಕ್ಕೆಂದು ಬರುತ್ತಾರೆ. ಕ್ರೀಡಾಪಟುಗಳಾದ ಗಣೇಶ ನಾಯ್ಕ, ರಿಜ್ವಾನ್, ಶಿವಾನಂದ, ಕೃಷ್ಣಪ್ಪ, ಸುರೇಖಾ ಪಾಟೀಲ, ಪ್ರತಿಮಾ ಕುಲಕರ್ಣಿ, ಶ್ರುತಿ ದೇವಶೆಟ್ಟಿ, ಶ್ರುತಿ ಶಿರಗುಪ್ಪಿಕರ, ಅನಿತಾ, ಪ್ರಿಯಾಂಕಾ ಮೊದಲಾದ ಅಥ್ಲೀಟ್‌ಗಳು ಇದೇ ಕ್ರೀಡಾಂಗಣದಲ್ಲಿ ನಿತ್ಯ ಅಭ್ಯಾಸ ನಡೆಸಿ ರಾಷ್ಟ್ರೀಯ ಮಟ್ಟದ ಸ್ಫರ್ಧೆಗಳಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿದ್ದಾರೆ.ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಲಿಂಗರಾಜು, ಗಂಗಪ್ಪ ಮೊದಲಾದ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಹೆಸರು ಮಾಡುತ್ತಿದ್ದಾರೆ.ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಕ್ರೀಡಾಂಗಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಮೈದಾನ ತಕ್ಕಮಟ್ಟಿಗೆ ವ್ಯವಸ್ಥಿತ ಸ್ಥಿತಿಯಲ್ಲಿದೆ.  ಸುಮಾರು 20,000 ಪ್ರೇಕ್ಷಕರ ಸಾಮರ್ಥ್ಯವುಳ್ಳ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ ಸರ್ಕಾರಿ ಕಾರ್ಯಕ್ರಮಗಳು ನಡೆಯುತ್ತವೆ. ಇಂತಹ ಸಂದರ್ಭಗಳಲ್ಲಿ ಮೈದಾನವನ್ನು ಬಳಸುವ ಕಾರಣ ಅಂಗಣ ಹಾಳಾಗುತ್ತದೆ.ಇದರಿಂದ ಕ್ರೀಡಾಪಟುಗಳಿಗೆ ಅನಾನುಕೂಲವಾಗುವ ಸಾಧ್ಯತೆಗಳು ಹೆಚ್ಚು. ಸರ್ಕಾರಿ ಕಾರ್ಯಕ್ರಮಗಳನ್ನೂ ಬೇರೊಂದು ಮೈದಾನದಲ್ಲಿ ನಡೆಸುವುದು ಸೂಕ್ತ. ಕ್ರೀಡಾಂಗಣವನ್ನು ಕೇವಲ ಆಟಕ್ಕಷ್ಟೇ ಮೀಸಲಿಡಬೇಕು ಎಂಬುದು ಬಹುತೇಕ ಕ್ರೀಡಾಪಟುಗಳ ಆಗ್ರಹವಾಗಿದೆ. ಆದರೆ ಇಲ್ಲಿ ಮುಂದೊಂದು ದಿನ ಸಿಂಥೆಟಿಕ್ ಹಾಸಿದರೆ, ಸರ್ಕಾರಿ ಕಾರ್ಯಕ್ರಮಗಳನ್ನು ಎಲ್ಲಿ ನಡೆಸುವುದೆಂಬ ಪ್ರಶ್ನೆ ಧುತ್ತೆಂದಿದೆ.

`ಕ್ರೀಡಾಂಗಣ' ಎಂಬ ಮೈದಾನ:

ಹುಬ್ಬಳ್ಳಿಯ ಹೃದಯ ಭಾಗದಲ್ಲಿ ನೆಹರೂ `ಕ್ರೀಡಾಂಗಣ' ಎನ್ನುವ ಮೈದಾನವೊಂದಿದೆ. ಆಟ ಹೊರತುಪಡಿಸಿ       ಉಳಿದೆಲ್ಲ ಚಟುವಟಿಕೆಗಳಿಗೇ ಈ ಕ್ರೀಡಾಂಗಣ ಬಳಕೆಯಾಗುತ್ತಿದೆ. ರಾಜಕೀಯ ಪಕ್ಷಗಳ ಸಮಾವೇಶಗಳು, ಜಾತಿ ಸಂಘಟನೆಗಳ ಕಾರ್ಯಕ್ರಮಗಳು, ಸ್ವಾಮೀಜಿಗಳ     ಉಪನ್ಯಾಸ... ಹೀಗೆ ವಾರ ಹಾಗೂ ತಿಂಗಳುಗಟ್ಟಲೆ ಇಲ್ಲಿ  ಮೈದಾನದ ತುಂಬ ವಿಭಿನ್ನ ರೀತಿಯ ವೇದಿಕೆಗಳು ಕಂಡು ಬರುತ್ತವೆ. ಪೆವಿಲಿಯನ್, ಗ್ಯಾಲರಿ ಸೌಲಭ್ಯಗಳನ್ನು ಹೊಂದಿರುವ ಈ ಕ್ರೀಡಾಂಗಣದಲ್ಲಿ ಹಿಂದೊಮ್ಮೆ ರಣಜಿ ಪಂದ್ಯವೂ ನಡೆದಿತ್ತು. ಈಗೀಗ ಇಲ್ಲಿ ಆಟ ನಡೆದಿದ್ದೇ ಅಪರೂಪ.ಕ್ರಿಕೆಟ್ ಪಂದ್ಯಗಳನ್ನು ಹೊರತುಪಡಿಸಿ ಇಲ್ಲಿ ಉಳಿದ ಕ್ರೀಡೆಗಳಿಗೆ ಅವಕಾಶ ಸಿಗದಂತಾಗಿದೆ. ಹೀಗಾಗಿ ಶಾಲೆ-ಕಾಲೇಜು ಮಟ್ಟದ ಕ್ರೀಡಾಕೂಟಗಳು  ಭೂಮರಡ್ಡಿ  ಕಾಲೇಜು ಮೈದಾನದಂತಹ ಖಾಸಗಿ ಸ್ಥಳಗಳಿಗೆ ಸ್ಥಳಾಂತರಗೊಳ್ಳುತ್ತಿವೆ. ಸರ್ಕಾರಿ ಕಾರ್ಯಕ್ರಮಗಳ ಜೊತೆಗೆ ನಾನಾ ಸಮಾವೇಶಗಳು ನಿರಂತರವಾಗಿ ನಡೆಯುವ ಕಾರಣ ಇಡೀ ಮೈದಾನ ಕ್ರೀಡಾಂಗಣದ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ.`ಈ ಮೈದಾನವನ್ನು ಕೇವಲ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಮೀಸಲಿಡಲಾಗುವುದು' ಎಂದು ಹಿಂದೊಮ್ಮೆ ಜಿಲ್ಲಾಧಿಕಾರಿ ದರ್ಪಣ ಜೈನ್ ಹೇಳಿದ್ದರು. ಮಹಾನಗರ ಪಾಲಿಕೆಯ ಸಭೆಯಲ್ಲಿ ಕೂಡ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ದರ್ಪಣ್ ಆಶಯ ಕಾರ್ಯಗತವಾಗಿಲ್ಲ.ಕ್ರೀಡಾಂಗಣ ಹೀಗೂ ಇರುತ್ತದೆ...

ಕಾರವಾರ

*ರಾಜ್ಯ ಕ್ರೀಡಾ ಇಲಾಖೆ ಸುಪರ್ದಿಯಲ್ಲಿರುವ ಮಾಲಾದೇವಿ ಮೈದಾನದಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತೆ. ಕೆಲವು ರಾಜಕೀಯ ಪಕ್ಷಗಳ ಸಮಾರಂಭಗಳೂ ನಡೆದಿವೆ. ಇಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ತರಬೇತಿಗೆ ಬರುವ ಮಹಿಳಾ ಅಥ್ಲೀಟ್‌ಗಳು ಶೌಚಕ್ಕೆ ಅಕ್ಕಪಕ್ಕದ ಮನೆ, ಶಾಲೆಗಳತ್ತ ಹೋಗಬೇಕಿದೆ. ನಿತ್ಯವೂ ಕಾರು ಬೈಕು ಕಲಿಯುವವರ ಹಾವಳಿ ಇದ್ದದ್ದೇ. ಮೈದಾನ ಸಮತಟ್ಟಾಗಿಲ್ಲದ ಕಾರಣ ಅಭ್ಯಾಸ ನಡೆಸುವ ಕ್ರೀಡಾಪಟುಗಳ ಪಡಿಪಾಟಲು ಹೇಳತೀರದು.ಚಿಕ್ಕಬಳ್ಳಾಪುರ

*ಸಾರ್ವಜನಿಕರ ನಿರಂತರ ಹೋರಾಟದ ಪರಿಣಾಮವಾಗಿ ನಾಲ್ಕು ತಿಂಗಳ ಹಿಂದಷ್ಟೇ ಗಟ್ಟಿ ಮಣ್ಣಿನ ಟ್ರ್ಯಾಕ್ ರೂಪಿಸಲಾಯಿತು. ಇದಕ್ಕೆ ಒಂದೂವರೆ ಕೋಟಿ ರೂಪಾಯಿ ಖರ್ಚಾಗಿದೆಯಂತೆ. ಇದೇ ಸ್ಥಳದಲ್ಲಿ ಎರಡು ವಾರಗಳ ಹಿಂದೆ ಕೇಂದ್ರ ಸಚಿವರೊಬ್ಬರು ರಾಜಕೀಯ ಸಭೆಯನ್ನುದ್ದೇಶಿಸಿ ಮಾತನಾಡಿದ್ದರೆ, ಕ್ರೀಡಾ ಇಲಾಖೆಯ ವ್ಯಾಪ್ತಿಯಲ್ಲಿಯೇ ಇರುವ ಈ `ಕ್ರೀಡಾಂಗಣ'ದಲ್ಲಿಯೇ ಗಣರಾಜ್ಯೋತ್ಸವ ಕಾರ್ಯಕ್ರಮವೂ ನಡೆಯಿತು !ಬೀದರ್

*ಮಳೆ ಬಂದರೆ ನೀರು ನಿಂತಿರುತ್ತದೆ. ನೀರು ಹೊರಗೆ ಸರಾಗ ಹರಿಯುವಂತೆ ಮಾಡುವ ವ್ಯವಸ್ಥೆ ಕೆಟ್ಟು ಎಷ್ಟೋ ವರ್ಷಗಳಾಗಿವೆ. ಶೌಚಾಲಯವನ್ನು ಮನುಷ್ಯ ಮಾತ್ರರು ಬಳಸುವಂತಿಲ್ಲ. ಗಣರಾಜ್ಯೋತ್ಸವದಂತಹ ಸರ್ಕಾರಿ ಸಮಾರಂಭಗಳೇ ಅಲ್ಲದೆ, ಹಲವು ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಮೈದಾನವೇ ಮುಖ್ಯ ತಾಣ.ಹುಬ್ಬಳ್ಳಿ

*ಕ್ರೀಡಾ ಇಲಾಖೆ ಸುಪರ್ದಿಯಲ್ಲಿರುವ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರಿಂದ ಇಲ್ಲಿನ ಟ್ರ್ಯಾಕ್ ಹಾಳಾಗುತ್ತದೆ ಎಂಬುದು ಕ್ರೀಡಾಪಟುಗಳ ಅನಿಸಿಕೆ.  ಸರ್ಕಾರದ ವ್ಯಾಪ್ತಿಗೇ ಬರುವ ನೆಹರು ಕ್ರೀಡಾಂಗಣದಲ್ಲಿ ಬಹಳ ಹಿಂದೆ ರಣಜಿ ಪಂದ್ಯವೊಂದು ನಡೆದಿತ್ತು. ಆದರೆ ಇವತ್ತು ಕ್ರೀಡೆ ಹೊರತು ಪಡಿಸಿ ನಿರಂತರವಾಗಿ ಬೇರೆ ಕಾರ್ಯಕ್ರಮಗಳೇ ಇಲ್ಲಿ ನಡೆಯುತ್ತವೆ. ಈ ಮೈದಾನದಲ್ಲಿ ಕ್ರೀಡಾ ಚಟುವಟಿಕೆ ಮಾತ್ರ ಮೀಸಲಿಡಬೇಕೆಂದು ಹಿಂದೊಮ್ಮೆ ಜಿಲ್ಲಾಧಿಕಾರಿಯೇ ಆದೇಶ ಹೊರಡಿಸಿದ್ದರು. ಆದರೆ ಇಲ್ಲಿ ನಿತ್ಯವೂ ಸ್ವಾಮೀಜಿಗಳ ಭಾಷಣ, ರಾಜಕೀಯ ಪಕ್ಷಗಳ ಸಮಾವೇಶ, ವಸ್ತು ಪ್ರದರ್ಶನ ಇತ್ಯಾದಿಗಳೇ ನಡೆಯುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry