ಧಾರವಾಡದಲ್ಲಿ ಗುಡುಗು ಸಹಿತ ಭಾರಿ ಮಳೆ

7

ಧಾರವಾಡದಲ್ಲಿ ಗುಡುಗು ಸಹಿತ ಭಾರಿ ಮಳೆ

Published:
Updated:

ಧಾರವಾಡ: ನಗರದಲ್ಲಿ ಶುಕ್ರವಾರ ಸಂಜೆ ಭಾರಿ ಗುಡುಗು ಸಹಿತ ಮಳೆಯಾಗಿದ್ದರಿಂದ ಪ್ರಮುಖ ಚರಂಡಿಗಳು ತುಂಬಿಕೊಂಡಿದ್ದರಿಂದ ನೀರೆಲ್ಲ ರಸ್ತೆಯ ಮೇಲೆ ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ 4ಕ್ಕೆ ಆರಂಭವಾದ ಮಳೆ ಸುಮಾರು 5.40ರವರೆಗೂ ರಭಸದಿಂದ ಸುರಿಯಿತು. ಮಳೆಯಿಂದಾಗಿ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

 

ಆದರೆ ಸತತವಾಗಿ ಸುರಿದ ಮಳೆಯಿಂದಾಗಿ ಇಲ್ಲಿಯ ಜನ್ನತ್ ನಗರ, ಲಕ್ಷ್ಮೀಸಿಂಗನಕೇರಿ, ಕೊಪ್ಪದಕೇರಿ, ಹಾವೇರಿಪೇಟೆ, ಮುರುಘಾಮಠದ ಹಿಂಭಾಗ, ಭಾವಿಕಟ್ಟಿ ಪ್ಲಾಟ್, ಟೋಲ್ ನಾಕಾ, ಹೊನ್ನತ್ತಿ ಚಾಳ ಸೇರಿದಂತೆ ಹಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಗಂಟೆ ಗಟ್ಟಲೇ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು.ಇತ್ತೀಚೆಗೆ ಬಿದ್ದ ಮಳೆಯಲ್ಲೇ ಶುಕ್ರವಾರ ಬಿದ್ದ ಮಳೆ ಸುದೀರ್ಘ ಅವಧಿಯದಾಗಿತ್ತು. ಇತ್ತ ಗುಡುಗು, ಸಿಡಿಲು, ಮಿಂಚಿನ ಮಿಶ್ರಣದೊಂದಿಗೆ ಮಳೆ ಆರಂಭವಾಗುತ್ತಿದ್ದಂತೆಯೇ ಅತ್ತ ಹೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತ್ತು. ಮಳೆ ನಿಂತು ಅರ್ಧ ಗಂಟೆಯಾದರೂ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು.ಟೋಲ್ ನಾಕಾ ಬಳಿಯ ದೊಡ್ಡ ಚರಂಡಿ ತುಂಬಿಕೊಂಡು ರಸ್ತೆಗೆ ಹರಿದಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಬಹಳ ಹೊತ್ತಿನವರೆಗೆ ಒಂದು ಬದಿಯ ವಾಹನಗಳನ್ನು ಮಾತ್ರ ಮುಂದೆ ಹೋಗಲು ಅನುವು ಮಾಡಿಕೊಡಲಾಯಿತು.ಸಂಜೆಯಾದ್ದರಿಂದ ಮಳೆ ನಿಂತ ಮೇಲೆ ಬಹಳಷ್ಟು ವಾಹನಗಳು ರಸ್ತೆಗೆ ಇಳಿದಿದ್ದರಿಂದ ಪೊಲೀಸರು ಸಂಚಾರ ದಟ್ಟಣಿಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಸಿಗ್ನಲ್ ದೀಪಗಳು ಕೈಕೊಡುವ ಮೂಲಕ ಟ್ರಾಫಿಕ್ ದಟ್ಟಣಿ ಇನ್ನಷ್ಟು ಹೆಚ್ಚಾಗಿತ್ತು.

ಇಂದೂ ಭಾರಿ ಮಳೆ ಬರುವ ಸಾಧ್ಯತೆ

ತಮಿಳುನಾಡಿನ ಸಮುದ್ರದಲ್ಲಿ ವಾಯು ಭಾರ ಕುಸಿತ ಉಂಟಾಗಿದ್ದರಿಂದ ರಾಜ್ಯದಲ್ಲೂ ಅದರ ಪ್ರಭಾವದಿಂದ ಶನಿವಾರವೂ ರಾಜ್ಯದಾದ್ಯಂತ ಮಳೆಯಾಗಲಿದೆ.ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಹವಾಮಾನ ಇಲಾಖೆಯ ನಿರ್ದೇಶಕ ಪುಟ್ಟಣ್ಣ, `ವಿದರ್ಭದಿಂದ ದಕ್ಷಿಣಕ್ಕೆ ಸಮುದ್ರ ಮಟ್ಟದಿಂದ 1.5-1.8 ಕಿ.ಮೀ. ಅಂತರದಲ್ಲಿ ವಾಯುಭಾರ ಕುಸಿತದ ವಿಸ್ತರಣೆಯಾಗಿ ದ್ದರಿಂದ ಮಳೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿಯುವ ಸಾಧ್ಯತೆಯಿದೆ ಎಂದು ತಿಳಿಸಿದರು.ಅದರಲ್ಲೂ ಕರಾವಳಿ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇದರ ಪ್ರಭಾವ ಉಂಟಾಗಲಿದೆ. ವಾಯುಭಾರ ಕುಸಿತ ಉಂಟಾದ ಸಂದರ್ಭದಲ್ಲಿ ಈ ರೀತಿ ಪ್ರಭಾವ ಉಂಟಾಗಲಿದೆ~ ಎಂದು ಅವರು   ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry