ಬುಧವಾರ, ಜೂನ್ 23, 2021
28 °C

ಧಾರವಾಡದಲ್ಲಿ ಜೋಶಿ ಪ್ರಚಾರಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಗುರುವಾರ ಬೆಳಗಿನಜಾವ ನಗರದ ಜಯನಗರ ಕೆರೆ ಹಾಗೂ ಕೆಸಿಡಿ ಮೈದಾನದಲ್ಲಿ ವಾಯು ವಿಹಾರಿಗಳನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುಗಾದಿ ಹಬ್ಬದ ನಂತರ ಮತ್ತೊಮ್ಮೆ ರಾಜ್ಯದಲ್ಲಿ ನರೇಂದ್ರ ಮೋದಿ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯ ಪ್ರವಾಸ ಕುರಿತಂತೆ ಈಗಾಗಲೇ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಏಪ್ರಿಲ್‌ ಮೊದಲ ವಾರದಲ್ಲಿ ಅವರು ರಾಜ್ಯ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಮೋದಿ ಅವರ ಪ್ರಭಾವ ಕೇವಲ ಕರ್ನಾಟಕದಲ್ಲಿ ಮಾತ್ರ ಇಲ್ಲ. ರಾಷ್ಟ್ರವ್ಯಾಪಿ ಇದ್ದು, ಈ ಬಾರಿ ಎನ್‌ಡಿಎ ಮೈತ್ರಿಕೂಟ ಜಯಭೇರಿ ಬಾರಿಸಲಿದೆ’ ಎಂದರು.‘ರಾಜ್ಯದಲ್ಲಿ ಕಳೆದ 10 ತಿಂಗಳಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತಿಲ್ಲ. ಇದು ಇಂದಿನ  ಕಾಂಗ್ರೆಸ್‌ ಸರ್ಕಾರದ ಕಾರ್ಯ ವೈಖರಿ. ಇದನ್ನು ಗಮನಿಸಿದಾಗ ಸರ್ಕಾರ ಇನ್ನೂ ಟೇಕ್ ಆಫ್‌ ಆಗಿಲ್ಲ. ಈ ಆಡಳಿತ ಕ್ರಮದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಪರ ಅಲೆ ಬೀಸಿದ್ದು, ಮತ್ತೊಮ್ಮೆ ಬಿಜೆಪಿಗೆ ಅವಕಾಶ ನೀಡುವ ಕುರಿತಂತೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ’ ಎಂದು ಹೇಳಿದರು.ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಸ್ಪರ್ಧೆಗೆ ಇಳಿದಿರುವ ಕುರಿತಂತೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ‘ನಮ್ಮದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳೊಂದಿಗೆ ಸ್ಪರ್ಧೆ. ಇದೀಗ ಕಾಂಗ್ರೆಸ್ ಸಹ ನನ್ನ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಲು ಮೀನ ಮೇಷ ಎನಿಸುತ್ತಿದೆ. ಇಂಥ ಸಂದರ್ಭದಲ್ಲಿ ಮುತಾಲಿಕ ಅಥವಾ ಉಳಿದವರು ಲೆಕ್ಕಕ್ಕೇ ಇಲ್ಲ. ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಈಗಾಗಲೇ ಬಿರುಸಿನ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಅಲ್ಲದೇ, ಇದೇ ತಿಂಗಳ 24ರಂದು ನಾಮಪತ್ರ ಸಲ್ಲಿಸುತ್ತೇನೆ. ಇದಾದ ಬಳಿಕ ಚುನಾವಣಾ ಪ್ರಚಾರವನ್ನು ಇನ್ನೂ ತೀವ್ರಗೊಳಿಸಲಾಗುವುದು’ ಎಂದರು.ಶಾಸಕ ಅರವಿಂದ ಬೆಲ್ಲದ, ಮೇಯರ್ ಶಿವು ಹಿರೇಮಠ, ಬಿಜೆಪಿ ಶಹರ ಅಧ್ಯಕ್ಷ ವಿಜಯಾನಂದ ಶೆಟ್ಟಿ, ಶಶಿಮೌಳಿ ಕುಲಕರ್ಣಿ, ಅರವಿಂದ ಏಗನಗೌಡರ, ಮೋಹನ ರಾಮದುರ್ಗ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.