ಬುಧವಾರ, ಜೂನ್ 16, 2021
22 °C

ಧಾರವಾಡ: ಸೇವಾ ಖಾತರಿಗೆ ಅರ್ಜಿಗಳ ಮಹಾಪೂರ

ಪ್ರವೀಣ ಕುಲಕರ್ಣಿ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಧಾರವಾಡ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದಿರುವ ನಾಗರಿಕ ಸೇವಾ ಖಾತರಿ ಸೌಲಭ್ಯವನ್ನು ಬಳಸಿಕೊಳ್ಳಲು ಸಾರ್ವಜನಿಕರು ಉತ್ಸಾಹ ತೋರಿದ್ದು, ಮೊದಲ 15 ದಿನಗಳ ಅವಧಿಯಲ್ಲಿಯೇ  10,689 ಅರ್ಜಿಗಳು ಬಂದಿವೆ. ಅದರಲ್ಲಿ ಇದುವರೆಗೆ 7,145 ಅರ್ಜಿಗಳ ವಿಲೇವಾರಿಯಾಗಿದ್ದು, ಯಾವ ಅಧಿಕಾರಿಯೂ ದಂಡದ ಶಿಕ್ಷೆಯನ್ನು ಅನುಭವಿಸಿಲ್ಲ.`ಸೇವಾ ಖಾತರಿ ಸೌಲಭ್ಯದ ಬಳಕೆಗೆ ಧಾರವಾಡ ತಾಲ್ಲೂಕಿನ ಜನ ಅತ್ಯುತ್ಸಾಹ ತೋರಿದ್ದು, ಪ್ರತಿ ದಿನ ಸರಾಸರಿ 700 ಅರ್ಜಿಗಳು ದಾಖಲಾಗುತ್ತಿವೆ. ಅಷ್ಟೇ ವೇಗದಲ್ಲಿ ಅವುಗಳನ್ನು ವಿಲೇವಾರಿ ಕೂಡ ಮಾಡಲಾಗುತ್ತಿದೆ~ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.ಈ ತಿಂಗಳ 1ರಂದು ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಲಾಗಿತ್ತು. ರಾಜ್ಯದ ನಾಲ್ಕು ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಈ ಕಾನೂನನ್ನು ಅನುಷ್ಠಾನಕ್ಕೆ ತರಲಾಗಿದ್ದು, ಅವುಗಳಲ್ಲಿ ಧಾರವಾಡ ಸಹ ಒಂದಾಗಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಪಾಲಿಕೆ ಪ್ರದೇಶಗಳೂ ಬರುವುದರಿಂದ ಪಾಲಿಕೆಯೂ ಈ ಕಾನೂನು ಅನುಷ್ಠಾನದ ಜವಾಬ್ದಾರಿ ಹೊತ್ತಿದೆ.ನಾಗರಿಕ ಸೇವಾ ಖಾತರಿ ಸೌಲಭ್ಯಕ್ಕಾಗಿಯೇ ಪಾಲಿಕೆ ಕಚೇರಿ ಮತ್ತು ತಾಲ್ಲೂಕು ಕಚೇರಿಯಲ್ಲಿ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ. ಈ ಸೌಲಭ್ಯಕ್ಕೆ ಚಾಲನೆ ನೀಡಿದ ಸಮಾರಂಭದಲ್ಲಿ ಉಪ್ಪಿನ ಬೆಟಗೇರಿಯ ಭೀಮಪ್ಪ ದಿಂಡಿಲಕೊಪ್ಪ ಎಂಬುವವರು ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದ್ದರು. ನಿಗದಿತ ಅವಧಿಯಲ್ಲಿ ಆ ಸೌಲಭ್ಯವನ್ನು ಅರ್ಜಿದಾರರಿಗೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.`ತ್ವರಿತವಾಗಿ ಸೇವೆಯನ್ನು ಒದಗಿಸಲಾಗುತ್ತಿದ್ದು, ಇದುವರೆಗೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬ ಯಾವುದೇ ದೂರು ದಾಖಲಾಗಿಲ್ಲ. ಪ್ರತಿ ಅರ್ಜಿಯನ್ನು ಕಂಪ್ಯೂಟರ್‌ನಲ್ಲಿ ಅಳವಡಿಕೆ ಮಾಡುವುದರಿಂದ ಸುಳ್ಳು ಹೇಳಲು ಯಾರಿಗೂ ಆಸ್ಪದ ಇಲ್ಲ. ಸಮಯಕ್ಕೆ ಸರಿಯಾಗಿ ಅರ್ಜಿ ವಿಲೇವಾರಿ ಆಗಿರುವುದರಿಂದ ದಂಡ ಹಾಕುವ ಪ್ರಮೇಯ ಬಂದಿಲ್ಲ. ಪ್ರಾಧಿಕಾರದ ಮುಂದೆ ಯಾವ ಪ್ರಕರಣವೂ ಬಂದಿಲ್ಲ~ ಎಂದು ಮೇಲ್ಮನವಿ ಪ್ರಾಧಿಕಾರದ ಮುಖ್ಯಸ್ಥರೂ ಆಗಿರುವ ಜಿಲ್ಲಾಧಿಕಾರಿಗಳು ವಿವರಿಸಿದರು.ಇದುವರೆಗೆ ದಾಖಲಾದ ದೂರುಗಳ ಪೈಕಿ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಅತ್ಯಧಿಕ ಅಂದರೆ 4,500 ಅರ್ಜಿಗಳು ಬಂದಿವೆ. ಸಾರಿಗೆ ಇಲಾಖೆ ಬಿಟ್ಟರೆ ಹೆಚ್ಚಿನ ಸೇವೆಯನ್ನು ಅಪೇಕ್ಷಿಸಿದ ವಿಭಾಗವೆಂದರೆ ಅದು ಕಂದಾಯ ಇಲಾಖೆ. ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿಗಳ ಮಹಾಪೂರವೇ ಹರಿದುಬಂದಿದೆ.ಪಾಲಿಕೆಯಲ್ಲಿ ದಾಖಲಾದ ಅರ್ಜಿಗಳ ಪೈಕಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಅಪೇಕ್ಷಿಸಿ ಬಂದಂಥವುಗಳೇ ಹೆಚ್ಚು. ಖಾತಾ ಬದಲಾವಣೆಗಾಗಿಯೂ ನಗರದ ಜನ ಸೇವಾ ಖಾತರಿ ಪ್ರಯೋಜನ ಪಡೆದಿದ್ದಾರೆ. ವಾಣಿಜ್ಯ ತೆರಿಗೆಗೆ ಸಂಬಂಧಿಸಿದ `ಸಿ~ ಫಾರ್ಮ್ ಬಯಸಿ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳು ದಾಖಲಾಗಿವೆ. `ಎಲ್ಲ ಅರ್ಜಿಗಳನ್ನು ಕಾಲಮಿತಿಯಲ್ಲೇ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಅವರು  ಸರಿಯಾಗಿ ಸ್ಪಂದಿಸುತ್ತಿದ್ದಾರೆ~ ಎಂದು ಜೈನ್ ಪ್ರಶಂಸಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.