ಧಾರವಾಡ ಹುಡುಗನ ರಣಜಿಯಾತ್ರೆ !

7

ಧಾರವಾಡ ಹುಡುಗನ ರಣಜಿಯಾತ್ರೆ !

Published:
Updated:
ಧಾರವಾಡ ಹುಡುಗನ ರಣಜಿಯಾತ್ರೆ !

ಉತ್ತರ ಕರ್ನಾಟಕದಲ್ಲಿ ಕ್ರಿಕೆಟ್ ಪ್ರತಿಭೆಗಳಿಗೆ ಬರ ಇಲ್ಲವಾದರೂ ಅವರಿಗೆ ಅವಕಾಶ ಸಿಗುವುದೇ ಕಷ್ಟ. ಹೀಗಾಗಿ ಸುನಿಲ್ ಜೋಶಿ, ಸೋಮಶೇಖರ ಶಿರಗುಪ್ಪಿ, ಅವಿನಾಶ ವೈದ್ಯ, ಆನಂದ ಕಟ್ಟಿ, ಯರೇಗೌಡ ಅವರಂತಹ ಬೆರಳೆಣಿಕೆ ಆಟಗಾರರಿಗಷ್ಟೇ ರಣಜಿ ತಂಡದಲ್ಲಿ ಆಡುವುದು ಸಾಧ್ಯವಾಗಿದೆ. ರಾಜಧಾನಿಯಲ್ಲಿ ನೆಲೆಸಿ, ಬೆಂಗಳೂರಿಗರೇ ಆಗಿಹೋದರಷ್ಟೇ ಕ್ರಿಕೆಟ್ ಆಟಗಾರರಿಗೆ ಅದೃಷ್ಟ ಖುಲಾಯಿಸುತ್ತದೆ. ಆದರೆ, ಧಾರವಾಡದ ನಿತಿನ್ ಭಿಲ್ಲೆ ಬೆಂಗಳೂರಿಗೆ ಹೋಗದಿದ್ದರೂ ಅದೃಷ್ಟ ಅವರನ್ನು ಹುಡುಕಿಕೊಂಡು ಬಂದಿದೆ.ಧಾರವಾಡದ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿಯಲ್ಲಿ ತಯಾರಾದ ಈ ಹುಡುಗ ಮುಂಬಯಿ ಎದುರಿನ ಪಂದ್ಯದಲ್ಲಿ ರೇಲ್ವೇಸ್ ಪರ ಆಡಲು ಇಳಿಯುವ ಮೂಲಕ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಯಾವುದೇ ರಾಜ್ಯದ ತಂಡಕ್ಕೆ ಆಯ್ಕೆ ನಡೆಸುವಾಗ ಆಯಾ ರಾಜ್ಯದ ಪ್ರತಿಭೆಗಳನ್ನಷ್ಟೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ, ರೇಲ್ವೇಸ್ ತಂಡಕ್ಕೆ ಅಂತಹ ಯಾವುದೇ ಗಡಿಗಳಿಲ್ಲ. ತಂಡದ ಆಯ್ಕೆಗೆ ದೇಶದ ಎಲ್ಲ ಭಾಗದ ಪ್ರತಿಭೆಗಳನ್ನು (ಅವರು ರೈಲ್ವೆ ಇಲಾಖೆಯಲ್ಲಿ ಕೆಲಸದಲ್ಲಿರಬೇಕು) ಪರಿಗಣಿಸಲಾಗುತ್ತದೆ. ಇಂತಹ ಪ್ರಬಲ ಪೈಪೋಟಿಯನ್ನು ಎದುರಿಸಿ ನಿತಿನ್ ರೇಲ್ವೇಸ್ ತಂಡ ಸೇರಿದ್ದಾರೆ.ರಾಜ್ಯದ 15ರಿಂದ 25 ವರ್ಷದೊಳಗಿನವರೆಗೆ ಎಲ್ಲ ವಯೋಮಾನದ ತಂಡಗಳಲ್ಲಿ ಧಾರವಾಡದ ಈ ಹುಡುಗ ಆಡಿದ್ದಾರೆ. ಓಡಿಶಾ ವಿರುದ್ಧ ಕಟಕ್‌ನಲ್ಲಿ ನಡೆದ 19 ವರ್ಷದೊಳಗಿನವರ ಪಂದ್ಯದಲ್ಲಿ 89 ರನ್ ಬಾರಿಸಿದ್ದ ನಿತಿನ್ ಸ್ವಲ್ಪದರಲ್ಲೇ ಶತಕ ತಪ್ಪಿಸಿಕೊಂಡಿದ್ದರು. ರಾಜ್ಯ ರಣಜಿ ತಂಡದ ಸದಸ್ಯರಾಗಿರುವ ಮಿಥುನ್ ಅಭಿಮನ್ಯು, ಗಣೇಶ್ ಸತೀಶ್, ಸಿ.ಎಂ. ಗೌತಮ್ ಮೊದಲಾದವರು ಆಗ ಇವರ ಜೊತೆ ಆಟಗಾರರಾಗಿದ್ದರು. `ಮಿಥುನ್ ಅವರಂತೂ ನನ್ನ ಕಾಯಂ ರೂಮ್‌ಮೇಟ್ ಆಗಿರುತ್ತಿದ್ದರು~ ಎಂದು ಅವರು ನೆನೆಯುತ್ತಾರೆ.`ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿಯ ನೀಧಜ್ ಕುಮಾರ್ ನನ್ನ ಈ ಬೆಳವಣಿಗೆಗೆ ಕಾರಣವಾದವರು. ಅವರ ನೆರವು ಇಲ್ಲದಿದ್ದರೆ ಇವತ್ತು ನಾನು ಈ ಹಂತ ತಲುಪಲು ಆಗುತ್ತಿರಲಿಲ್ಲ. ಸೌಲಭ್ಯಗಳೇ ಇಲ್ಲದಿದ್ದ ನಮಗೆ ಆಡಲುಬೇಕಾದ ಪೂರಕ ವಾತಾವರಣ ನೀಧಜ್ ಒದಗಿಸಿಕೊಟ್ಟರು~ ಎಂದು ನಿತಿನ್ ಕೃತಜ್ಞತೆಯಿಂದ ಸ್ಮರಿಸುತ್ತಾರೆ.`ರಾಜ್ಯ ವಿವಿಧ ವಯೋಮಾನದ ತಂಡಗಳಲ್ಲಿ ಇದ್ದಾಗ ಸೋಮಶೇಖರ್ ಶಿರಗುಪ್ಪಿ ಹಾಗೂ ಪಿ.ವಿ. ಶಶಿಕಾಂತ್ ಅವರಿಂದಲೂ ನನಗೆ ಸಹಾಯ ಸಿಕ್ಕಿತು. ಆದರೆ, ನೀಧಜ್ ಅವರ ಸಹಾಯಹಸ್ತ ಸಿಗದೆ ಹೋಗಿದ್ದರೆ ನಾನು ಕ್ರಿಕೆಟ್ ಆಟಗಾರನಾಗಿ ಬೆಳೆಯಲು ಸಾಧ್ಯವಿರಲಿಲ್ಲ~ ಎನ್ನುತ್ತಾರೆ ಅವರು.`ನಮ್ಮಲ್ಲಿ ಟರ್ಫ್ ಇಲ್ಲವೆ ಸಿಮೆಂಟ್ ವಿಕೆಟ್‌ಗಳು ಇರುವುದಿಲ್ಲ. ಆಡಲು ಬೇಕಾದ ಬೇರೆ ಸೌಲಭ್ಯಗಳೂ ಸಿಗುವುದಿಲ್ಲ. ಬೆಂಗಳೂರಿನಷ್ಟು ನಿಯಮಿತವಾಗಿ ಪಂದ್ಯಗಳು ಕೂಡ ನಡೆಯುವುದಿಲ್ಲ. ಇಂತಹ ಪ್ರತಿಕೂಲ ವಾತಾವರಣದಲ್ಲಿ ದೊಡ್ಡ ಸಾಧನೆ ಮಾಡುವುದು ಸುಲಭವಲ್ಲ. ಆದ್ದರಿಂದಲೇ ಗ್ರಾಮಾಂತರ ಭಾಗದಿಂದ ಬಂದರೂ ರಣಜಿ ಆಡಿದ ಖುಷಿ ಇದೆ~ ಎಂದು ಅವರು ಹೇಳುತ್ತಾರೆ.ರೇಲ್ವೇಸ್ ರಣಜಿ ತಂಡದ ಆಯ್ಕೆ ಪ್ರಕ್ರಿಯೆ ಬಹಳ ದೀರ್ಘವಾದದ್ದು. ಅಂತರ ವಿಭಾಗ ರೈಲ್ವೆ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ 60 ಜನ ಆಟಗಾರರನ್ನು ಈ ಸಲ ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿತ್ತು. ನಂತರ ಆ ಸಂಖ್ಯೆಯನ್ನು 36ಕ್ಕೆ ಇಳಿಸಲಾಯಿತು.ವಾರಣಾಸಿಯಲ್ಲಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಮಳೆ ಕಾಡಿದ್ದರಿಂದ ಶಿಬಿರವನ್ನು ರದ್ದುಗೊಳಿಸಿ ಧರ್ಮಶಾಲಾದಲ್ಲಿ ಹಿಮಾಚಲ ಪ್ರದೇಶ ಎದುರು ಅಭ್ಯಾಸ ಪಂದ್ಯಗಳನ್ನು ಆಡಲು ತಂಡವನ್ನು ಕಳುಹಿಸಿಕೊಡಲಾಗಿತ್ತು. ಹೀಗೆ ವಿವಿಧ ಹಂತಗಳಲ್ಲಿ ಸೋಸಿ ಆಟಗಾರರ ಆಯ್ಕೆ ಮಾಡಲಾಗಿದೆ. ಅಂತಹ ಎಲ್ಲ `ಲಿಟ್ಮಸ್ ಟೆಸ್ಟ್~ಗಳನ್ನು ನಿತಿನ್ ಯಶಸ್ವಿಯಾಗಿ ಎದುರಿಸಿದ್ದಾರೆ.`ಮುಂಬಯಿ ವಿರುದ್ಧ ಮೊದಲ ಪಂದ್ಯ ಆಡುವಾಗ ನನಗೆ ಯಾವುದೇ ಆತಂಕ ಇರಲಿಲ್ಲ. ಸಾಧ್ಯವಾದಷ್ಟು ಹೆಚ್ಚಿನ ಹೊತ್ತು ಮೈದಾನದಲ್ಲಿ ಇರಬೇಕು ಎಂಬ ಸಲಹೆಯನ್ನು ಮಾತ್ರ ನಾಯಕ ಸಂಜಯ್ ಬಂಗಾರ್ ನೀಡಿದ್ದರು. ಅದರಂತೆಯೇ ಆಡಿದೆ~ ಎಂದು ಅವರು ಹೇಳುತ್ತಾರೆ.ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಿಂದ ನಿತಿನ್, ಒಟ್ಟಾರೆ 63 ರನ್ ಗಳಿಸಿದ್ದರು. ಆರಂಭಿಕ ಆಟಗಾರನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಈ     ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಸಹ ಹೌದು.`ತಂಡದಲ್ಲಿರುವ ಹಿರಿಯ ಆಟಗಾರರಾದ ಯರೇಗೌಡ, ಬಂಗಾರ್, ಮುರಳಿ ಕಾರ್ತಿಕ್ ಅವರಿಂದ ಒಳ್ಳೆಯ ಮಾರ್ಗದರ್ಶನ ಹಾಗೂ ಉತ್ತಮ ಬೆಂಬಲ ಸಿಗುತ್ತಿದೆ~ ಎಂದು ಅವರು ಸ್ಮರಿಸುತ್ತಾರೆ. ಕೆಪಿಎಲ್‌ನಲ್ಲಿ ಮೈಸೂರು ಮಹಾರಾಜ ತಂಡದಲ್ಲಿ ಆಡಿದ್ದ ನಿತಿನ್, ಕಳೆದ ಎರಡು ವರ್ಷಗಳಿಂದ ನೈಋತ್ಯ ರೈಲ್ವೆಯ ಹುಬ್ಬಳ್ಳಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.`ಕಳೆದ ಹತ್ತು ವರ್ಷಗಳಿಂದ ನಿತಿನ್ ನಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಸಾಕಷ್ಟು ಪರಿಶ್ರಮ ಪಟ್ಟಿರುವ ಆತ, ಪ್ರತಿಭಾನ್ವಿತ ಆಟಗಾರ. ಅವನಿಗೆ ಈಗಷ್ಟೇ 22ರ ಹರೆಯ. ಉಜ್ವಲ ಭವಿಷ್ಯ ಅವನಿಗಾಗಿ ಕಾದಿದೆ~ ಎಂದು ನೀಧಜ್ ಹೇಳುತ್ತಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry