ಭಾನುವಾರ, ಡಿಸೆಂಬರ್ 15, 2019
26 °C

ಧಾರಾಕಾರ ಮಳೆ: ಜನತೆ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರಾಕಾರ ಮಳೆ: ಜನತೆ ತತ್ತರ

ಹುಣಸಗಿ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಯಿಂದ ಜನರು ತತ್ತರಿಸುವಂತಾಗಿದೆ. ಹುಣಸಗಿ ಪಟ್ಟಣದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.ಹುಣಸಗಿ ಪಟ್ಟಣದ ಚಿಕ್ಕಹಳ್ಳ ಮತ್ತು ಹಿರೇಹಳ್ಳ ತುಂಬಿಹರಿಯುತ್ತಿದ್ದರಿಂದ ಮುಖ್ಯ ಸೇತುವೆ ಜಲಾವೃತವಾಗಿತ್ತು. ಇದರಿಂದಾಗಿ ಹುಣಸಗಿ ಕೆಂಭಾವಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಹುಣಸಗಿಯಿಂದ ದೇವಾಪುರವರೆಗೆ ಹಳ್ಳದ ದಡದಲ್ಲಿರುವ ಹೊಲಗಳಿಗೆ ನೀರು ನುಗ್ಗಿ ನೂರಾರು ಎಕರೆ ಪ್ರದೇಶದಲ್ಲಿರುವ ಬತ್ತ ಜಲಾವೃತವಾಗಿದೆ. ಅಲ್ಲಲ್ಲಿ ನೀರಿನ ರಭಸಕ್ಕೆ  ಪೈರು ಕೊಚ್ಚಿ ಹೋಗಿದೆ.ಸಮೀಪದ ವಜ್ಜಲ ಗ್ರಾಮದಲ್ಲಿ ಹೊಲಗಳಿಗೆ ದಂಡೆಯಲ್ಲಿರುವ ಭೂಮಿಗಳಿಗೆ ನೀರು ಹರಿದು, ಬತ್ತ ಕೊಚ್ಚಿಕೊಂಡು ಹೋಗಿದೆ.

ಎಲ್ಲೆಂದರಲ್ಲೆ ಒಡ್ಡುಗಳು ಒಡೆದು ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಗ್ರಾಮದ ರೈತರು ತಿಳಿಸಿದರು.

ಸಮೀಪದ ಬನ್ನಟ್ಟಿ ಗ್ರಾಮದಲ್ಲಿ ಮನೆಗಳು ಬಿದ್ದಿವೆ. ಆದರೆ ಯಾವುದೇ ಜೀವ ಹಾನಿಯಾಗಿಲ್ಲ. ಮನೆಯಲ್ಲಿರುವ ದವಸ ಧಾನ್ಯ, ರಸಗೊಬ್ಬರ ನೀರು ಪಾಲಾಗಿದೆ.ಸಮೀಪದ ಮಾರಲಬಾವಿ ಗ್ರಾಮದಲ್ಲಿ ಮನೆ ಬಿದ್ದು ನಾಲ್ಕು ಜನರಿಗೆ ತೀವ್ರ ಗಾಯವಾಗಿದೆ. ದೇವಕೆಮ್ಮ ಎಂಬುವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಶಾಂತಮ್ಮ ಸಿದ್ದಮ್ಮ ಮತ್ತು ಪುಟ್ಟಮ್ಮ ಎಂಬುವರಿಗೆ ಅಲ್ಲಲ್ಲಿ ಗಾಯವಾಗಿದೆ. ಎಲ್ಲರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಹಳ್ಳ ತುಂಬಿ ಹರಿಯುತ್ತಿದ್ದು, ಕರವೇಯ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ ಬಡಿಗೇರ, ಹನುಮಂತ ನಾಯಕ, ಹುಲಗಪ್ಪ ಸೇರಿದಂತೆ ಇತರರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಶ್ರಮಿಸಿದರು.ಶಾಸಕರ ಭೇಟಿ: ಸಮೀಪದ ಬನ್ನಟ್ಟಿ ಗ್ರಾಮದಲ್ಲಿ ಮನೆ ಬಿದ್ದು ಹಾನಿಯಾಗಿರುವ ಸ್ಥಳಕ್ಕೆ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ, ಮುಖಂಡರಾದ ವಿಠ್ಠಲ ಯಾದವ, ಶಿವಣ್ಣ ಮಂಗ್ಯಾಳ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಪಾಟೀಲ, ಸಿದ್ದು ರೇವಡಿ, ಸುರೇಶ ನೀರಲಗಿ ಹುಣಸಗಿ ತಹಶೀಲ್ದಾರ್ ಬಸವರಾಜ ಅಂಬರಶೆಟ್ಟಿ ಮತ್ತು ಸಿಬ್ಬಂದಿ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲಿಸಿದರು.ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ನಾಯಕ ತಿಳಿಸಿದರು. ಮಳೆಯ ಹಾನಿ ಕುರಿತು ಸರ್ಕಾರ ಸಮೀಕ್ಷೆ ನಡೆಸಿ ರೈತರ ನೆರವಿಗೆ ಧಾವಿಸಬೇಕಿದೆ.

ಪ್ರತಿಕ್ರಿಯಿಸಿ (+)