ಧಾರಾಕಾರ ಮಳೆ, ನೆಲಕ್ಕುರುಳಿದ ಮರ

7

ಧಾರಾಕಾರ ಮಳೆ, ನೆಲಕ್ಕುರುಳಿದ ಮರ

Published:
Updated:

ಬೆಂಗಳೂರು: ನಗರದಲ್ಲಿ ಸೋಮವಾರ ಸುರಿದ ಗಾಳಿ ಸಹಿತ ಧಾರಾಕಾರ ಮಳೆಗೆ  ಹಲವೆಡೆ ಮರಗಳು ಧರೆಗುರುಳಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ತೀವ್ರ ತೊಂದರೆ ಅನುಭವಿಸಿದರು.ಬೆಳಿಗ್ಗೆ ಬಿರುಬಿಸಿಲ ವಾತಾವರಣವಿದ್ದು, ಸಂಜೆಯಾಗುತ್ತಿದ್ದಂತೆ ದಟ್ಟ ಮೋಡಗಳು ವ್ಯಾಪಕ ಮಳೆ ಸುರಿಸಿದವು. ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದರಿಂದ ಕೆಲವು ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಯಿತು.ನಗರದಲ್ಲಿ ಗರಿಷ್ಠ 2 ಮಿ.ಮೀ ಮಳೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ 36.9. ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಮಾರತ್‌ಹಳ್ಳಿ ದೀಪಾ ನರ್ಸಿಂಗ್ ಹೋಮ್ ಸಮೀಪ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿತು. ಮಹದೇವಪುರ ಸಮೀಪವಿರುವ ಅಲ್ಪಾನಿಕ್ ಅಪಾರ್ಟ್‌ಮೆಂಟ್‌ನ ಆವರಣ ಗೋಡೆ ಕುಸಿತಗೊಂಡಿದ್ದ ಆರು ಕಾರುಗಳು ಜಖಂಗೊಂಡಿವೆ. ಮೈಸೂರು ರಸ್ತೆಯ ವಾಲ್ಮೀಕಿ ನಗರ, ಮೋದಿ ಆಸ್ಪತ್ರೆ, ಶಂಕರ ಮಠ ಸೇರಿದಂತೆ ವಿವಿಧೆಡೆ ಮರಗಳು ನೆಲಕ್ಕುರುಳಿದವು.ಮೆಜೆಸ್ಟಿಕ್, ಮೈಸೂರು ರಸ್ತೆ, ಜಯನಗರ, ಬನಶಂಕರಿ, ಕನಕಪುರ ರಸ್ತೆ, ಕಬ್ಬನ್ ಉದ್ಯಾನ ರಸ್ತೆ, ಬಸವೇಶ್ವರ ವೃತ್ತ, ಟ್ರಿನಿಟಿ ವೃತ್ತ, ಫ್ರೇಜರ್ ಟೌನ್  ಸೇರಿದಂತೆ ಹಲವೆಡೆ ಮಳೆ ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಅಧಿಕವಾಗಿತ್ತು. ಇದರಿಂದ ಕೆಲ ಕಾಲ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.ಜೀವನಹಳ್ಳಿಯ ಮೇಲು ಸೇತುವೆಯ ಕೆಳಭಾಗದಲ್ಲಿ ನೀರು ನಿಂತ ಪರಿಣಾಮ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಆನಂತರ ಪಾಲಿಕೆ ಮತ್ತು ಜಲಮಂಡಳಿಯ ಎಂಜಿನಿಯರ್‌ಗಳು ಕಾರ್ಯಾಚರಣೆ ನಡೆಸಿ ಸಂಚಾರ ಸುಗಮಗೊಳಿಸಿದರು ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.ಜೀವನಬಿಮಾನಗರದಲ್ಲಿ ಸಮಸ್ಯೆ

ಜೀವನಬಿಮಾನಗರದ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ರಸ್ತೆಯ ತುಂಬೆಲ್ಲ ನೀರು ಹರಿಯುತ್ತದೆ. ಇದೇ ನೀರು ಪಿಡಬ್ಲ್ಯೂಡಿ ವಸತಿ ಗೃಹಗಳಿಗೂ ನುಗ್ಗಿದ್ದರಿಂದ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ.`ಈ ಭಾಗದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿದ್ದು, ಎಲ್ಲರದ್ದೂ ಒಂದೇ ಸಮಸ್ಯೆ. ಮಳೆ ಬಂದಾಗೆಲ್ಲ ರಸ್ತೆಯ ನೀರು ಮನೆಯೊಳಗೂ ನುಗ್ಗುತ್ತದೆ. ಅಲ್ಲದೇ ಸಂಪ್‌ಗಳಲ್ಲಿ ಶೇಖರಿಸಿಟ್ಟ ಶುದ್ಧ ನೀರು ಕೂಡ ಮಲಿನವಾಗುತ್ತಿದೆ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ನಿವಾಸಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry