ಧಾರಾಕಾರ ಮಳೆ: ಲಕ್ಷಾಂತರ ಮೌಲ್ಯ ಬೆಳೆ ಹಾನಿ

7

ಧಾರಾಕಾರ ಮಳೆ: ಲಕ್ಷಾಂತರ ಮೌಲ್ಯ ಬೆಳೆ ಹಾನಿ

Published:
Updated:

ನಾಗಮಂಗಲ: ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಗದ್ದೆಭೂವನಹಳ್ಳಿಯಲ್ಲಿ ನೂರಾರು ತೆಂಗಿನಮರಗಳು ಧರೆಗುರುಳಿ, ಟೊಮೆಟೊ, ಬೀನ್ಸ್ ಬೆಳೆಗಳು ನೆಲಕಚ್ಚಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಹಲವು ಮನೆಗಳ ಹೆಂಚು, ಶೀಟ್‌ಗಳು ಗಾಳಿಗೆ ಹಾರಿಹೋಗಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡು ಗ್ರಾಮ ಕತ್ತಲೆಯಲ್ಲಿ ಮುಳುಗಿದೆ.ಮಳೆಗೆ, ಗಾಳಿಗೆ ಗ್ರಾಮದ ತಿಮ್ಮೇಗೌಡ, ಕೆಂಪೇಗೌಡ, ಜೋಗಯ್ಯ, ಕುಳ್ಳಿನಿಂಗರಾಜ, ಬೋರಣ್ಣ ಎಂಬವರಿಗೆ ಸೇರಿದ ನೂರಾರು ತೆಂಗಿನಮರಗಳು ಬುಡ ಸಮೇತ ಮುರಿದು ಬಿದ್ದಿವೆ. ಮಂಜುನಾಥ ಎಂಬುವವರ 1 ಎಕರೆ ಬೀನ್ಸ್ ಬೆಳೆ, ಸೀತಕಲ್ಲೇಗೌಡ, ಗಾಡಿರಾಮ, ಜವರಪ್ಪನ ರಾಜ, ಅಣ್ಣಯ್ಯನರಾಜ, ಕಿರಣ್, ತಿಮ್ಮೇಗೌಡ ಮುಂತಾದವರಿಗೆ ಸೇರಿದ ಟೊಮೆಟೊ ಬೆಳೆ ಸಂಪೂರ್ಣ ಹಾಳಾಗಿದೆ.ಗ್ರಾಮದ ಸುತ್ತಮುತ್ತ ಜಮೀನು ಗಳಲ್ಲಿರುವ ಬೇವು, ಅರಳಿ, ಬಸರಿ ಬೃಹತ್ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಂಪುರ್ಣ ಕಡಿತಗೊಂಡಿದೆ.ಶನೇಶ್ವರ, ಕೃಷ್ಣ ದೇವರ ದೇವಸ್ಥಾನದ ತಗಡಿನ ಶೀಟ್‌ಗಳು ಗಾಳಿಗೆ ಹಾರಿ ಹೋಗಿದ್ದರೆ, ರಾಜು, ವರದರಾಜು, ವರದಯ್ಯ, ವಿಶ್ವನಾಥ ಮುಂತಾದವರ ಮನೆಗಳ ಹೆಂಚುಗಳು ಹಾರಿಹೋಗಿವೆ.ತಾಲ್ಲೂಕಿನ ದೇವಲಾಪುರ ಹೋಬಳಿ ಸುತ್ತಮುತ್ತಲ ಗ್ರಾಮಗಳಲ್ಲಿಯೂ ಜೋರು ಮಳೆಯಾಗಿದೆ. ನಾಗಮಂಗಲ ಪಟ್ಟಣದ ನಾಗಮಂಗಲ ಪಟ್ಟಣದ ಮಂಡ್ಯ ರಸ್ತೆಯಲ್ಲಿ ಮರದ ರೆಂಬೆಗಳು ಮುರಿದು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry