ಶುಕ್ರವಾರ, ನವೆಂಬರ್ 22, 2019
20 °C

ಧಾರ್ಮಿಕ ಆಚರಣೆಗೆ ನಿರ್ಬಂಧ ಇಲ್ಲ: ಕೋರ್ಟ್

Published:
Updated:

ಧಾರವಾಡ: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳನ್ನು ನಿರ್ಬಂಧಿಸಿ ಜಿಲ್ಲಾ ಚುನಾವಣಾಧಿಕಾರಿ ಹೊರಡಿಸಿದ್ದ ಆದೇಶವನ್ನು ಗುರುವಾರ ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠ ಅನೂರ್ಜಿತಗೊಳಿಸಿದೆ.ಚುನಾವಣಾ ನೀತಿ ಸಂಹಿತೆ ರಾಜಕೀಯ ವ್ಯಕ್ತಿ, ಪಕ್ಷಗಳು ಮತ್ತು ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ. ಆದರೆ, ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ವಿಧಿಸುವುದು ಸಂವಿಧಾನದ ಅನುಚ್ಛೇದ 25ರ ಉಲ್ಲಂಘನೆ ಎಂದು ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. `ಚುನಾವಣಾಧಿಕಾರಿಗಳು ಯಾವ ಅಧಿಕಾರದ ಮೇಲೆ ಧಾರ್ಮಿಕ ಆಚರಣೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಸಂವಿಧಾನದ ವ್ಯಾಪ್ತಿಯನ್ನು ಮೀರಿ ಅಧಿಕಾರಿಗಳು ಆದೇಶ ಹೊರಡಿಸಲು ಅವಕಾಶವಿದೆಯೇ' ನ್ಯಾಯಮೂರ್ತಿಗಳು ಪ್ರಶ್ನಿಸಿದರು.ರಾಮನವಮಿ ಮತ್ತು ಹನುಮಜಯಂತಿ ಅಂಗವಾಗಿ ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಸಂಸ್ಥಾನ ಮಠವು ಇಲ್ಲಿನ ಸೀತಾರಾಮ ಮಂದಿರದಲ್ಲಿ ಗುರುವಾರದಿಂದ 25 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ ಸಂದರ್ಭದಲ್ಲಿ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಸಕೂಡದು ಎನ್ನುವ ಷರತ್ತಿನೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮಠದ ಪರವಾಗಿ ಎಚ್.ಆರ್.ಗುಡಿ ಎನ್ನುವವರು ರಿಟ್ ಅರ್ಜಿ ಸಲ್ಲಿಸಿದ್ದರು.ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾದರೆ ಆ ಕುರಿತು ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಅದನ್ನು ಬಿಟ್ಟು ಆಚರಣೆಗಳನ್ನು ನಿರ್ಬಂಧಿಸುವುದು ಕಾನೂನುಬಾಹಿರ ಎಂದು ಟೀಕಿಸಿದ ನ್ಯಾಯಮೂರ್ತಿಗಳು, ಕಾರ್ಯಕ್ರಮದ ವಿಡಿಯೊ ಚಿತ್ರೀಕರಣಕ್ಕೆ ಅನುಮತಿಸಬೇಕು ಮತ್ತು ಧ್ವನಿವರ್ಧಕ ಬಳಸದಂತೆ  ಅರ್ಜಿದಾರರಿಗೆ ಸೂಚನೆ ನೀಡಬೇಕು ಎನ್ನುವ ಸರ್ಕಾರಿ ವಕೀಲರ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಅರ್ಜಿದಾರರ ಪರವಾಗಿ ವಕೀಲರಾದ ಕೆ.ಎಲ್.ಪಾಟೀಲ, ಎಸ್.ಎಸ್.ಬೇತೂರಮಠ ಮತ್ತು ಎಸ್.ಎನ್.ಪರಾಂಡೆ ವಾದ ಮಂಡಿಸಿದ್ದರು.

ಪ್ರತಿಕ್ರಿಯಿಸಿ (+)