ಧಾರ್ಮಿಕ ಕಟ್ಟಡ ತೆರವಿಗೆ ವಿರೋಧ: ಪ್ರತಿಭಟನೆ

7

ಧಾರ್ಮಿಕ ಕಟ್ಟಡ ತೆರವಿಗೆ ವಿರೋಧ: ಪ್ರತಿಭಟನೆ

Published:
Updated:

ಧಾರವಾಡ: ಸಾರ್ವಜನಿಕ ಸ್ಥಳದಲ್ಲಿರುವ ಧಾರ್ಮಿಕ ಕಟ್ಟಡಗಳನ್ನು ಗುರುವಾರ ಬೆಳಿಗ್ಗೆ ತೆರವುಗೊಳಿಸುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಸಂಜೆ ಹೊತ್ತಿಗೆ ಮರಳಿ ದೇವಸ್ಥಾನವನ್ನು ನಿರ್ಮಿಸಿ ದೇವರ ಪ್ರತಿಮೆಯನ್ನು ಸಹ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಪ್ರಸಂಗ ನಡೆಯಿತು.ದೇವಸ್ಥಾನವನ್ನು ತೆರವುಗೊಳಿಸಲು ಹಾಗೂ ನಿರ್ಮಿಸುವ ಕಾರ್ಯಗಳು ಪೊಲೀಸರ ರಕ್ಷಣೆಯಲ್ಲಿಯೇ ನಡೆದವು. ತೆರವುಗೊಳಿಸುವ ಸಂದರ್ಭದಲ್ಲಿ ಬೆರಳಣಿಕೆಯಷ್ಟಿದ್ದ ಪೊಲೀಸರು, ಪುನಃ ನಿರ್ಮಿಸುವಾಗ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಜಿಲ್ಲಾ ಆಡಳಿತದ ಪ್ರತಿನಿಧಿಗಳು, ತಹಶೀಲ್ದಾರರು ಸ್ಥಳಕ್ಕೆ ಆಗಮಿಸದ ಕಾರಣ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಬಿಜೆಪಿ ನಾಯಕರ ನೇತೃತ್ವದಲ್ಲಿಯೇ ದೇವಸ್ಥಾನ ನಿರ್ಮಿಸಲಾಯಿತು.ಕೇವಲ ಒಂದು ಕೋಮಿಗೆ ಸೇರಿದ ಮಂದಿರಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳ ಮುಖಂಡರು ಆಲೂರು ವೆಂಕಟರಾವ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ಆಗಮಿಸಿ ಶಾಸಕ ಚಂದ್ರಕಾಂತ ಬೆಲ್ಲದ ಅವರನ್ನು ಸಹ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡು, ಅವರ ವಿರುದ್ಧ ಘೋಷಣೆ ಕೂಗಿದರು.ತಹಸೀಲ್ದಾರ ರವೀಂದ್ರ ಕರಲಿಂಗಣ್ಣವರ ನೇತೃತ್ವದಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಆರಂಭವಾಯಿತು. ಹಳಿಯಾಳ ನಾಕಾ ಹತ್ತಿರವಿರುವ ಆಂಜನೇಯ ದೇವಸ್ಥಾನ, ಆರ್‌ಎನ್ ಶೆಟ್ಟಿ ಕ್ರೀಡಾಂಗಣ ಸಮೀಪದ ಶಿವಾಲಯವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಬೆಳಗಾವಿ ರಸ್ತೆಯಲ್ಲಿನ ಎಸ್‌ಪಿ ಕಚೇರಿ ಎದುರಿನ ಕರಿಯಮ್ಮದೇವಿ ದೇವಸ್ಥಾನ ತೆರವುಗೊಳಿಸುವ ಸಂದರ್ಭದಲ್ಲಿ ಹಿಂದೂ ಪರ ಸಂಗಟನೆಗಳ ಮುಖಂಡರು ತಡೆಯೊಡ್ಡಿದರು. ಈ ಸಂದರ್ಭದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.ಸಂಜೆ ಹೊತ್ತಿಗೆ ಹಿಂದೂ ಪರ ಸಂಘಟನೆಗಳ ಮುಖಂಡರು ಮತ್ತೆ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಕೇವಲ ಒಂದೇ ಕೋಮಿಗೆ ಸೇರಿದ ಧಾರ್ಮಿಕ ಕಟ್ಟಡವನ್ನು ತೆರವುಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಆರ್.ಎನ್.ಶೆಟ್ಟಿ ಕ್ರೀಡಾಂಗಣ ಸಮೀಪ ಆಗಮಿಸಿದ ಕಾರ್ಯಕರ್ತರು, ರಸ್ತೆಯಲ್ಲಿ ವಿದ್ಯುತ್ ದೀಪದ ಕಂಬಗಳನ್ನು ಹಾಕಲು ಇಟ್ಟಿದ್ದ ಉಸುಕು, ಕಲ್ಲು ಬಳಸಿಕೊಂಡು ಪುನಃ ದೇವಸ್ಥಾನ ನಿರ್ಮಿಸಿದರು. ದೇವರ ಪ್ರತಿಮೆಗಳನ್ನು ಸಹ ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಪೊಲೀಸರ ಸಮ್ಮುಖದಲ್ಲಿಯೇ ಇದೆಲ್ಲವೂ ನಡೆದರು ಏನೂ ಮಾಡದ ಸ್ಥಿತಿಯಲ್ಲಿ ಅವರಿದ್ದರು. ಜಿಲ್ಲಾ ಆಡಳಿತದ ನಿಷ್ಕ್ರಿಯತೆ ಎದ್ದು ಕಾಣುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry