ಶನಿವಾರ, ಮೇ 21, 2022
25 °C

ಧಾರ್ಮಿಕ ಕಾರ್ಯದ ಕೊಂಡಿ ಈ ಪಾಠಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಹುಬ್ಬಳ್ಳಿ ಕಡೆಗೆ ಹೋಗುವ ಮುಖ್ಯರಸ್ತೆಯ ಬಾಜುವಿನಲ್ಲಿ ರಸ್ತೆ ಸಾರಿಗೆ ಬಸ್ ಡಿಪೋ ಇದೆ. ಇಲ್ಲಿ ಬೆಳಗಿನ ಪಾಳಿಯಲ್ಲಿ ಕೆಲಸ ಮಾಡುವ ಮಂದಿಗಂತೂ ಅವರು ಕರ್ತವ್ಯಕ್ಕೆ ಹಾಜರಾಗುವಾಗ, ಬಸ್ ಚಾಲನೆ ಮಾಡಲು ಮೇಲೆತ್ತುವಾಗ ‘ಮಂತ್ರಘೋಷ’ಗಳು ಕಿವಿಗೆ ಬೀಳುತ್ತವೆ. ಎಲ್ಲರಿಗೂ ಒಂದು ರೀತಿ ಮನಸ್ಸಿಗೆ ಹಿತವಾಗಿ ಶುದ್ಧ ಮನಸ್ಸಿನಿಂದ ಕಾಯಕಕ್ಕೆ ಇಳಿಯುತ್ತಾರೆ.-ಈ ರೀತಿಯ ಮಂತ್ರಘೋಷ, ವೇದೋಚ್ಚಾರಗಳು ಬಸ್ ಡಿಪೋ ಹಿಂದೆ ಇರುವ ಶ್ರೀಗುರು ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯಿಂದ ಪ್ರತಿನಿತ್ಯ ಸೂರ್ಯ ಮೂಡುವ ಹೊತ್ತಿಗೆ ಪ್ರಾರಂಭವಾಗಿ ಒಂದೆರಡು ತಾಸು ನಿರಂತರವಾಗಿ ಕೇಳುತ್ತಲೇ ಇರುತ್ತದೆ.ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯಲ್ಲಿ ಸರಿಸುಮಾರು 1956 ರಿಂದಲೂ ವೈದಿಕ, ಜ್ಯೋತಿಷ್ಯ, ಧ್ಯಾನ ಇವುಗಳನ್ನು ಹೇಳಿಕೊಡಲಾಗುತ್ತದೆ. ಉಚಿತವಾಗಿ. ಇಲ್ಲಿ ಕಲಿಯುವ ವಟುಗಳಿಗೆ ಊಟ- ವಸತಿಗೇ ಯಾವುದೇ ಶುಲ್ಕವೂ ಇಲ್ಲ. ಕಾಲ ಎಷ್ಟೇ ಬದಲಾವಣೆಯಾದರೂ ಆಚಾರ, ಸಂಸ್ಕೃತಿ ಹಾಗೂ ಧಾರ್ಮಿಕ ಅಂಶಗಳು ಮಾನವನ ಒಟ್ಟಿಗೆ ಇರುತ್ತವೆ.ಆದರೆ ಬೇರೆ ಅಧ್ಯಯನಗಳ ಕಡೆಗೆ ಒಲವು ಹೆಚ್ಚಾಗಿರುವುದರಿಂದ ಇವುಗಳ ಕಡೆ ಸ್ವತಹ ಗಮನ ಹರಿಸಿದೇ ಇದ್ದರೂ ಬೇರೆಯವರಿಂದಾರೂ ಆಚರಣೆ ಮಾಡಿಸುವುದನ್ನು ಯಾರು ತಪ್ಪಿಸಿಲ್ಲ.ಇದರಿಂದಾಗಿ ಇಂತಹ ಧಾರ್ಮಿಕ ಪಾಠಶಾಲೆಯಲ್ಲಿ ಕಲಿತ ವಟುಗಳಿಗೆ ಪ್ರತಿನಿತ್ಯ ಬೇಡಿಕೆ ಇರುತ್ತದೆ.ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯಲ್ಲಿ ಪ್ರಸ್ತುತ ಮೂವತ್ತು ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಿದ್ದಾರೆ. ಇವರು ಮೂರು ವರ್ಷಗಳ ಕಾಲ ಧಾರ್ಮಿಕ ವಿಧಿ-ವಿಧಾನ, ಆಚಾರ-ವಿಚಾರ, ಪೂಜೆ-ಪುನಸ್ಕಾರಗಳ ಬಗ್ಗೆ ಕಲಿತುಕೊಳ್ಳಬೇಕಾಗುತ್ತದೆ. ಬೆಳಿಗ್ಗೆ 7 ರಿಂದ 9 ಗಂಟೆಗೆ ವರೆಗೆ ವೈದಿಕ, ಧ್ಯಾನ, ಜ್ಯೋತಿಷ್ಯ ಬೋಧನೆ ಮಾಡಲಾಗುವುದು. ಸಂಜೆ ಸಂಸ್ಕೃತ ಹೇಳಿಕೊಡಲಾಗುತ್ತದೆ. ಇದರ ಮಧ್ಯ ಬಿಡುವಿನ ವೇಳೆಯಲ್ಲಿ ವಟುಗಳು ವೇದ ಅಧ್ಯಯನದಲ್ಲಿ ತೊಡಗಬಹುದು ಅಥವಾ ಯಾವುದಾದರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.‘ಮೊದಲ ಆರು ತಿಂಗಳಲ್ಲಿ ವಿದ್ಯಾರ್ಥಿಗಳು ಒಂದು ಹಂತಕ್ಕೆ ಬರುತ್ತಾರೆ. ಆಗ ಅಂತಹವರನ್ನು ದೇವಸ್ಥಾನಗಳಲ್ಲಿ, ಮನೆಗಳಲ್ಲಿ ನಡೆಸುವ ಅಭಿಷೇಕ, ಪೂಜೆಗಳಿಗೆ ಕಳುಹಿಸಲಾಗುತ್ತದೆ. ಅಲ್ಲದೇ ಹಿರಿಯ ವಟುಗಳು ಭಾಗವಹಿಸುವ ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ಸಹಾಯಕರಾಗಿ ಹೋಗುತ್ತಾರೆ. ಅಲ್ಲಿ ಒಂದು ರೀತಿ ಪ್ರಾಯೋಗಿಕವಾಗಿ ಕಲಿತಂತೆ ಆಗುತ್ತದೆ’ ಎನ್ನುತ್ತಾರೆ ಪಾಠಶಾಲೆಯಲ್ಲಿ ವಟುಗಳಿಗೆ ತರಬೇತಿ ನೀಡುವ ಗಂಗಾಧರ ದೇವರು.ಮೂರು ವರ್ಷದ ವರೆಗೆ ವಟುಗಳು ಲಿಂಗಾಧಾರಣೆ, ಹೋಮ, ಗೃಹಪ್ರವೇಶ, ಅಂತ್ಯಸಂಸ್ಕಾರ ವಿಧಿ-ವಿಧಾನ, ಮದುವೆ ಮುಂತಾದ ಶುಭಕಾರ್ಯಗಳ ಪ್ರಕ್ರಿಯೆಗಳ ರೀತಿ-ನೀತಿಗಳನ್ನು ಕಲಿತುಕೊಳ್ಳುತ್ತಾರೆ.ಈಗ ಈ ಪಾಠಶಾಲೆಯಲ್ಲಿ ಹತ್ತು ದಿನಗಳ ಕಾಲ ಮಹಾಶಿವ ಶರಣೆ ಸಜ್ಜಲಗುಡ್ಡದ ಶರಣಮ್ಮನವರ ಪುರಾಣ ಪ್ರವಚನ ನಡೆಯಲಿದೆ. ಅಲ್ಲದೆ ಹಾನಗಲ್ ಕುಮಾರ ಶಿವಯೋಗಿ ಹಾಗೂ ಸಿಂದಗಿ ಶಾಂತವೀರ ಸ್ವಾಮೀಜಿ ಅವರ ಸ್ಮರಣೋತ್ಸವವೂ ಕೂಡಾ ಜರುಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.