`ಧಾರ್ಮಿಕ ಕ್ಷೇತ್ರದಲ್ಲೂ ಭ್ರಷ್ಟಾಚಾರ'

7

`ಧಾರ್ಮಿಕ ಕ್ಷೇತ್ರದಲ್ಲೂ ಭ್ರಷ್ಟಾಚಾರ'

Published:
Updated:

ಬೆಂಗಳೂರು: `ರಾಜಕೀಯ ಕ್ಷೇತ್ರದಲ್ಲಿ ಆಗುತ್ತಿರುವಂತೆ, ಧಾರ್ಮಿಕ ಕ್ಷೇತ್ರದಲ್ಲೂ ಸದ್ಯ ಭ್ರಷ್ಟಾಚಾರ ಮತ್ತು ಅಪನಂಬಿಕೆಗಳು ಹೆಚ್ಚಾಗುತ್ತಿವೆ' ಎಂದು ಬೆಂಗಳೂರಿನ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ವಿಷಾದಿಸಿದರು.

ಬೆಂಗಳೂರು ಮಹಾಧರ್ಮಕ್ಷೇತ್ರವು ಪುಲಿಕೇಶಿನಗರದ ಸೇಂಟ್ ಜರ್ಮನ್ಸ್ ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ `ಕ್ರಿಸ್‌ಮಸ್ ಸಹಮಿಲನ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಹೆಚ್ಚಾಗುತ್ತಿರುವ ಕೊಳ್ಳುಬಾಕತನದಿಂದ ಮಾನವ ಸಂಬಂಧಗಳಲ್ಲಿ ಬಿರುಕು ಮೂಡುತ್ತಿವೆ. ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಮೌಲ್ಯಗಳನ್ನು ಕಾಪಾಡಬೇಕಿದ್ದ ಧಾರ್ಮಿಕ ಕ್ಷೇತ್ರವೂ ಜನರ ನಂಬಿಕೆ ಕಳೆದುಕೊಳ್ಳುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ' ಎಂದು ಅವರು ಕಳವಳ ವ್ಯಕ್ತಪಡಿಸಿದರು. `ಮಾಧ್ಯಮಗಳೂ ಸಾಮಾಜಿಕ ಮೌಲ್ಯಗಳನ್ನು ಕಾಯುವಲ್ಲಿ ಹಿಂದುಳಿದಿವೆ.ಮಾಧ್ಯಮಗಳು ಮಾನವೀಯತೆಯನ್ನೇ ಮರೆತಂತೆ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಸಮಾಜಕ್ಕೆ ಒಳಿತಾಗುವುದಿಲ್ಲ. ಕ್ರಿಸ್ತನ ಸಂದೇಶಗಳನ್ನು ಜನರು ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳುವ ಮೂಲಕ ಮೌಲ್ಯಗಳನ್ನು ಕಾಪಾಡಲು ಮುಂದಾಗಬೇಕು' ಎಂದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮಾತನಾಡಿ, `ಶಾಂತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಜಗತ್ತಿಗೆ ಸಾರಿದ ಕ್ರಿಶ್ಚಿಯನ್ ಧರ್ಮದ ಕೊಡುಗೆ ಅಪಾರ' ಎಂದರು.`ಸ್ವಾರ್ಥ ಮತ್ತು ಹಣ ಸಂಪಾದನೆಗಾಗಿ ಜೀವನವನ್ನೇ ಮುಡುಪಾಗಿಡುವುದು ಸರಿಯಲ್ಲ. ಎಲ್ಲರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಅನ್ಯ ಧರ್ಮಗಳನ್ನು ಗೌರವದಿಂದ ಕಾಣುವ ಮೂಲಕ ಧರ್ಮ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು' ಎಂದರು.`ಭಾರತ ಜಾತ್ಯತೀತ ರಾಷ್ಟ್ರ. ದೇಶದಲ್ಲಿ ಅನೇಕ ಧರ್ಮಗಳು ಆಚರಣೆಯಲ್ಲಿದ್ದರೂ, ಜನರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಇಲ್ಲಿನ ಸಹಬಾಳ್ವೆಯ ಜೀವನ ವಿಧಾನ ಕಾರಣ' ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಸ್ಯಾಕ್ರೆಡ್ ಹಾರ್ಟ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕ್ರಿಸ್ತನ ಜನನ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry