ಧಾರ್ಮಿಕ ಧ್ರುವೀಕರಣ ಹಾದಿಯಲ್ಲಿ

7

ಧಾರ್ಮಿಕ ಧ್ರುವೀಕರಣ ಹಾದಿಯಲ್ಲಿ

Published:
Updated:

ಕೊಕರ್‌ಝಾರ್:  ಅಸ್ಸಾಂನಲ್ಲಿ `ಮೂಲನಿವಾಸಿಗಳು~ ಮತ್ತು `ಹೊರಗಿನವರ~ ನಡುವಿನ ಸಂಘರ್ಷಕ್ಕೆ ಶತಮಾನಗಳ ಇತಿಹಾಸ ಇದೆ. ಆದರೆ ಇದು ಕೋಮುಸ್ವರೂಪ ಪಡೆದಿರುವುದು ಕಳೆದ ಕಾಲು ಶತಮಾನದಲ್ಲಿ, ಮುಖ್ಯವಾಗಿ ಅಸ್ಸಾಂ ಗಣಪರಿಷತ್ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ. `ಹೊರಗಿನವರ~ ಜತೆಗಿನ ಪ್ರಾರಂಭದ ಹೋರಾಟವನ್ನು `ವಿದೇಶಿಯರ~ ವಿರುದ್ಧ ತಿರುಗಿಸಿದ್ದ ಎಜಿಪಿ ನಂತರದ ದಿನಗಳಲ್ಲಿ ಬಾಂಗ್ಲಾದೇಶಿ ಮುಸ್ಲಿಮರನ್ನು ಗುರಿ ಮಾಡಿಕೊಂಡಿತ್ತು. ಇದಕ್ಕೆ ವ್ಯವಸ್ಥಿತವಾಗಿ ಕೋಮುಸಂಘರ್ಷದ ಬಣ್ಣಹಚ್ಚುವ ಪ್ರಯತ್ನ ಈಗ  ನಡೆಯುತ್ತಿದೆ. ನೂರಾರು ಬುಡಕಟ್ಟುಗಳ ವೈವಿಧ್ಯಮಯ ಸಂಸ್ಕೃತಿಗಳ ತೊಟ್ಟಿಲಿನಂತಿರುವ ಅಸ್ಸಾಂ ರಾಜ್ಯ ಧರ್ಮದ ಆಧಾರದಲ್ಲಿ ಒಡೆಯತೊಡಗಿದೆ.ರಾಜ್ಯದ ಪ್ರತಿ ಮೂವರಲ್ಲಿ ಒಬ್ಬ ಮುಸ್ಲಿಮ್ ಇರುವ ಈ ರಾಜ್ಯದಲ್ಲಿ ಮುಸ್ಲಿಮರ ಓಲೈಕೆಯ ಮೂಲಕ ರಾಜಕೀಯ ಲಾಭ ಪಡೆಯುವ ಪ್ರಯತ್ನವನ್ನು ಪ್ರಾರಂಭದಿಂದಲೇ ಮಾಡುತ್ತಾ ಬಂದಿದ್ದ ಕಾಂಗ್ರೆಸ್ ಅದರಲ್ಲಿ ಯಶಸ್ಸನ್ನೂ ಕಂಡಿದೆ. ಅದೇ ಕೋಮುವಾದದ ಬಾಣವನ್ನು ತಿರುಗಿ ಪ್ರಯೋಗಿಸುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರ ಮುಸ್ಲಿಮರನ್ನು ಏಕಾಂಗಿಗಳನ್ನಾಗಿ ಮಾಡಿ ಅವರ ವಿರುದ್ಧ ಉಳಿದವರನ್ನು ಎತ್ತಿಕಟ್ಟಿ ಇನ್ನೊಂದು ಮತಬ್ಯಾಂಕ್ ಮಾಡಿಕೊಳ್ಳುವ ಕಟ್ಟಲು ಹೊರಟಿದೆ. ತಮಗೆ ವಿರುದ್ಧವಾದ ಈ ಬೆಳವಣಿಗೆಗಳಿಂದಾಗಿ ಮುಸ್ಲಿಮರಲ್ಲಿ ಹುಟ್ಟಿಕೊಂಡಿರುವ ಅಭದ್ರತೆಯನ್ನು ಬಳಸಿಕೊಂಡು ಬದ್ರುದ್ದೀನ್ ಅಜ್ಮಲ್ ಎಂಬ ಅತ್ತರ್ ವ್ಯಾಪಾರಿ ಮುಸ್ಲಿಮ್ ಕೋಮುವಾದದ ಮೂಲಕವೇ ತನ್ನ ರಾಜಕೀಯ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಿದ್ದಾರೆ.ಈಗಿನ ಗಲಭೆಯ ಪ್ರಧಾನ ಪಾತ್ರಧಾರಿಗಳಾಗಿರುವ ಬೋಡೊಗಳನ್ನು  ದೇಶದ ಮುಖ್ಯವಾಹಿನಿಯ `ಹಿಂದು~ಗಳ ಜತೆಯಲ್ಲಿಟ್ಟು ನೋಡಲಾಗದು. ಬೋಡೊಗಳು ಬುಡಕಟ್ಟು ಸಮುದಾಯಕ್ಕೆ ಸೇರಿದವರಾದರೂ ಇವರು ಅರಣ್ಯವಾಸಿಗಳಲ್ಲ, ದೇಶದ ಬಯಲು ಪ್ರದೇಶದ ಅತ್ಯಂತ ದೊಡ್ಡ ಬುಡಕಟ್ಟು ಬೋಡೊಗಳದ್ದು. ಬ್ರಹ್ಮ ಪಂಥ ಮತ್ತು ಸಾಂಪ್ರದಾಯಿಕವಾದ ಬಥೋ ಧರ್ಮಕ್ಕೆ ಸೇರಿದ ಬೋಡೊಗಳಲ್ಲಿ ಶೇಕಡಾ ಹನ್ನೆರಡರಷ್ಟು ಕ್ರಿಶ್ಚಿಯನರೂ ಇದ್ದಾರೆ. ಕೆಲವರು ತಮ್ಮದೇ ಆಗಿರುವ ಬುಡಕಟ್ಟು ಧರ್ಮವನ್ನು ಹೊಂದಿದ್ದಾರೆ. ಹಿಂದು ಧರ್ಮದ ಮುಖ್ಯ `ಗುರುತು~ಗಳಾದ ಜಾತಿವ್ಯವಸ್ಥೆ ಮತ್ತು ಅಸ್ಪೃಶ್ಯತೆ ಸಹ ಬೋಡೊಗಳಲ್ಲಿ ಇಲ್ಲ.ಈ ಬೋಡೊಗಳು ಮೊದಲು ಯುದ್ಧ ಸಾರಿದ್ದು ವಲಸಿಗರು ಇಲ್ಲವೇ ಬಂಗಾಳಿ ಮುಸ್ಲಿಮರ ವಿರುದ್ಧ ಅಲ್ಲ, ಅದು ಅಸ್ಸಾಮಿಗಳ ವಿರುದ್ಧ.  ಭೂಮಿ, ಉದ್ಯೋಗ, ಭಾಷೆ, ಸಂಸ್ಕೃತಿ ಮತ್ತು ರಾಜಕೀಯದ ಮೇಲೆ ಪ್ರಭುತ್ವ ಸಾಧಿಸಿರುವ ಅಸ್ಸಾಮಿಗಳನ್ನು ತಮ್ಮ ಮೊದಲ ಶತ್ರುಗಳೆಂದು ಬೋಡೊಗಳು ತಿಳಿದಿದ್ದರು. `ವಸಾಹತುಷಾಹಿ ನೀತಿಯನ್ನು ಅನುಸರಿಸುತ್ತಿರುವ ಅಸ್ಸಾಮಿಗಳು ಬುಡಕಟ್ಟು ಸಮುದಾಯಕ್ಕೆ ಸೇರಿರುವ ಭೂಭಾಗವನ್ನು ಕಬಳಿಸಿ ಅವರನ್ನು ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ. ಬೋಡೊಗಳು ಪ್ರತ್ಯೇಕ ರಾಜ್ಯ ಕೇಳುತ್ತಿರುವ ಒಂದೇ ಕಾರಣಕ್ಕಾಗಿ ಅಸ್ಸಾಮಿ ಜನ ಮತ್ತು ಅಸ್ಸಾಮಿ ಸರ್ಕಾರ ಬೋಡೊಗಳನ್ನು ತಮ್ಮ ಮೊದಲ ಶತ್ರು ಎಂದು ತಿಳಿದುಕೊಂಡಿದೆ..ಎಂದು 1987ರಲ್ಲಿ ಅಖಿಲ ಬೋಡೊ ವಿದ್ಯಾರ್ಥಿ ಸಂಘ (ಎಬಿಎಸ್‌ಯು) ಕೇಂದ್ರಸರ್ಕಾರಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಹೇಳಿದೆ. ಬೋಡೊಗಳು ಮಾತ್ರವಲ್ಲ ಇತರ ಬುಡಕಟ್ಟುಗಳಾದ ಕೋಚ್ ರಾಜವಂಶಿ, ರಾಬಾ ಮೊದಲಾದ ಇತರ ಬುಡಕಟ್ಟುಗಳು ಅಸ್ಸಾಮಿ ಸರ್ವಾಧಿಕಾರವನ್ನು ವಿರೋಧಿಸುತ್ತಲೇ ಬಂದವರು.  `ಬೋಡೊ ಭಾಷೆಯನ್ನು ಮಾತನಾಡುತ್ತಿರುವ ಬೋಡೊಗಳಿಗೆ ಹೋಲಿಸಿದರೆ ಅಸ್ಸಾಮಿ ಮತ್ತು ಬಂಗಾಳಿ ಮಾತನಾಡುವ ಮುಸ್ಲಿಮರು ನಿಜವಾದ ಅರ್ಥದಲ್ಲಿ ಇಲ್ಲಿನ ಮಣ್ಣಿನ ಮಕ್ಕಳು. ಈ `ನವ ಅಸ್ಸಾಮಿ~ಗಳನ್ನು ರಾಜ್ಯದ ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ಳಬೇಕು~ ಎಂಬ ಅಭಿಪ್ರಾಯವನ್ನು ಅಸ್ಸಾಮಿ ಬುದ್ದಿಜೀವಿ ವರ್ಗ ಕೂಡಾ ವ್ಯಕ್ತಪಡಿಸಿದ್ದುಂಟು. ಆದರೆ ಅಷ್ಟರಲ್ಲಿ ಕೋಮುವಾದದ ಭೂತ ಪ್ರವೇಶವಾಗಿದೆ.

ಮೊದಲು ಕಾಂಗ್ರೆಸ್ ಪಕ್ಷದ ಈಗ ಎಐಯುಡಿಎಫ್‌ನ ಪ್ರಮುಖ ಮತಬ್ಯಾಂಕ್ ಆಗಿರುವ ಮುಸ್ಲಿಮರ ರಾಜಕೀಯ ಶಕ್ತಿಯನ್ನು ಮುರಿಯಲು ಧರ್ಮದ ಹೆಸರಲ್ಲಿ ಉಳಿದವರನ್ನು ಎತ್ತಿಕಟ್ಟಿ ಅವರನ್ನು ಏಕಾಂಗಿಗಳನ್ನಾಗಿ ಮಾಡುವ ಪ್ರಯತ್ನ ಕಳೆದೆರಡು ದಶಕಗಳಿಂದ ನಡೆಯುತ್ತಿದೆ.ಇದರಲ್ಲಿ ಅಸ್ಸಾಂ ಗಣ ಪರಿಷತ್ ಸರಣಿ ತಪ್ಪುಗಳ ಮೂಲಕ ರಾಜಕೀಯ ಹರಾಕಿರಿ ಮಾಡಿಕೊಂಡ ನಂತರ ಆ ಜಾಗವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಪಡುತ್ತಿರುವ ಭಾರತೀಯ ಜನತಾ ಪಕ್ಷದ ಪಾತ್ರ ಕೂಡಾ ಇದೆ..ರಾಜಕೀಯವಾಗಿ ತನಗೆ ಪ್ರಮುಖ ಸ್ಪರ್ಧಿಯಾಗಿರುವ ಮುಸ್ಲಿಮರನ್ನು ಹಣಿಯಲು ಧರ್ಮದ ಅಸ್ತ್ರವೇ ಹೆಚ್ಚು ಪರಿಣಾಮಕಾರಿ ಎಂಬುದು ಮನವರಿಕೆಯಾದ ನಂತರ ಬೋಡೊಗಳು ಕೂಡಾ ಕೋಮುವಾದದ ಭಾಷೆಯಲ್ಲಿಯೇ ಮಾತನಾಡತೊಡಗಿದ್ದಾರೆ.ಈ ಬೆಳವಣಿಗೆಗಳ ಪರಿಣಾಮವನ್ನು ಇತ್ತೀಚಿನ ಗಲಭೆಯಲ್ಲಿಯೂ ಕಾಣಬಹುದು. ಬೋಡೊಗಳ ಜತೆಗಿನ ಹಿಂದಿನ ಎಲ್ಲ ಸಂಘರ್ಷಗಳ ಕಾಲದಲ್ಲಿ ಕೇವಲ ಬಂಗಾಳಿ ಮುಸ್ಲಿಮರು ಮಾತ್ರವಲ್ಲ ಸಂತಾಲರು,ರಾಜವಂಶಿ, ಬಂಗಾಳಿ ಹಿಂದೂಗಳು, ನೇಪಾಳಿ ಮತ್ತು ಬಿಹಾರಿಗಳ ಮೇಲೆಯೂ ಬೋಡೊ ಉಗ್ರಗಾಮಿಗಳು ದಾಳಿ ನಡೆಸಿದ್ದರು.  ಆದರೆ ಬೋಡೊಗಳು ಈ ಬಾರಿ ನಿರ್ದಿಷ್ಠವಾಗಿ ಮುಸ್ಲಿಮರನ್ನೇ ಗುರಿ ಮಾಡಿದ್ದಾರೆ. ಬೋಡೊ ಪ್ರಾಂತೀಯ ಸ್ವಾಯತ್ತ ಮಂಡಳಿ (ಬಿಟಿಎಡಿ) ರಚನೆಯಾದ ನಂತರ  ಬೋಡೊಗಳ ದಬ್ಬಾಳಿಕೆಯನ್ನು ವಿರೋಧಿಸಲು ಬೋಡೊ ಅಲ್ಲದ ಸಮುದಾಯಗಳು ಕಟ್ಟಿಕೊಂಡ `ಬೋಡೊ ವಿರೋಧಿ ರಕ್ಷಣಾ ಸಮಿತಿ~ ಕೂಡಾ ಈ ಬಾರಿ ಬೋಡೊ ವಿರುದ್ಧ ದನಿ ಎತ್ತಿಲ್ಲ.ಪ್ರತ್ಯೇಕ ರಾಜ್ಯದ  ಬೇಡಿಕೆ ಈಡೇರಿಕೆಯ ಹಾದಿಯಲ್ಲಿನ ಮುಳ್ಳು ಮುಸ್ಲಿಮರೆಂದು ಬೋಡೊಗಳು ತಿಳಿದುಕೊಂಡಿದ್ದಾರೆ. ಬೋಡೊಗಳ ಹೋರಾಟದ ಫಲವಾಗಿಯೇ ಬೋಡೊ ಪ್ರಾಂತೀಯ ಸ್ವಾಯತ್ತ ಮಂಡಳಿ (ಬಿಟಿಎಡಿ)ಸ್ಥಾಪನೆಯಾದರೂ ಇದರ ವ್ಯಾಪ್ತಿಯಲ್ಲಿರುವ ಬೋಡೊಗಳ ಜನಸಂಖ್ಯೆ ಕೇವಲ ಶೇಕಡಾ 30 ಮಾತ್ರ.ಇನ್ನೊಂದು ಪ್ರಮುಖ ಬುಡಕಟ್ಟು ಜನಾಂಗವಾದ ರಾಜವಂಶಿಗಳು ಶೇಕಡಾ 15ರಷ್ಟಿದ್ದಾರೆ, ಅದೇ ರೀತಿ ಸಂತಾಲರು ಶೇಕಡಾ ಆರರಷ್ಟಿದ್ದಾರೆ. `ಬೋಡೋಗಳಲ್ಲದ ಇತರರ ಜತೆ ಶೇಕಡಾ 30ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವ ಮುಸ್ಲಿಮರು ಸೇರಿಕೊಂಡರೆ ತಾವು ಅಲ್ಪಸಂಖ್ಯಾತರಾಗಿ ಹೋಗಿಬಿಡಬಹುದು. ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಪ್ರತ್ಯೇಕ ರಾಜ್ಯದ ಬೇಡಿಕೆಯೇ ಪ್ರಸ್ತುತತೆಯನ್ನು ಕಳೆದುಕೊಳ್ಳಬಹುದು ಎಂಬ ಭೀತಿ ಬೋಡೊಗಳಲ್ಲಿ ಹುಟ್ಟಿಕೊಂಡಿದೆ. ಇದಕ್ಕಾಗಿ ತಮ್ಮ ವಿರೋಧಿಗಳಾಗಿರುವ ಇತರರನ್ನು ಮುಟ್ಟಲು ಹೋಗದೆ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಮರನ್ನೇ ಕೇಂದ್ರವಾಗಿಟ್ಟುಕೊಂಡು ಅವರು ದಾಳಿ ನಡೆಸುತ್ತಿದ್ದಾರೆ. ಈ ಬಾರಿ ಮುಸ್ಲಿಮರ ಮೇಲೆ ಹಲ್ಲೆ ನಡೆಸಿರುವುದು ಮಾತ್ರ ಅಲ್ಲ, ಅವರ ಮನೆಗಳನ್ನು ಒಳಗಿದ್ದ ದಾಖಲೆಪತ್ರಗಳ ಸಮೇತ ಸುಟ್ಟುಹಾಕಲಾಗಿದೆ. ಗಲಭೆಯ ಈ ವಿನ್ಯಾಸದಲ್ಲಿಯೇ `ಜನಾಂಗೀಯ ಶುದ್ದೀಕರಣ~ದ ಸಂಚನ್ನು ಕಾಣಬಹುದು~ ಎನ್ನುತ್ತಾರೆ ಅಖಿಲ ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿ ಸಂಘದ ಕಾನೂನು ಸಲಹೆಗಾರ ಮುಸ್ತಾಫ ಕದ್ದಮ್ ಹುಸೇನ್. ಇವರ ಆತಂಕ ಅತಿರೇಕತನದ್ದು ಎಂದು ಅನಿಸಿದರೂ ಇದನ್ನು ಸಾರಸಗಟಾಗಿ ತಳ್ಳಿಹಾಕಲಾಗದು.

ಅಸ್ಸಾಂ ಹೀಗೆ ಇರಲಿಲ್ಲ....

ಗುವಾಹಟಿ: `ಹದಿನೇಳು ವರ್ಷಗಳ ಹಿಂದೆ ನಾನು ನೋಡಿದ್ದ ಅಸ್ಸಾಂ ಹೀಗೆ ಇರಲಿಲ್ಲ. ನೋಡಿ ನಮ್ಮ ಎದುರಿನ ಮನೆ ಬ್ರಾಹ್ಮಣರದ್ದು, ಪಕ್ಕದ ಮನೆ ಅಸ್ಸಾಮಿಗಳದ್ದು, ಆ ಕಡೆ ಮುಸ್ಲಿಮರು ಈ ಕಡೆ ಬೋಡೊಗಳು...ಒಂದೇ ಒಂದು ದಿನ ಜಾತಿ-ಧರ್ಮದ ವಿಷಯದಲ್ಲಿ ಸಣ್ಣಪುಟ್ಟ ಜಗಳಗಳೂ ಇಲ್ಲಿ ನಡೆದಿಲ್ಲ. ಇತ್ತೀಚಿನ ದಿನಗಳ ಬೆಳವಣಿಗೆ ನಮಗೂ ಆಘಾತವನ್ನುಂಟು ಮಾಡಿದೆ.. ಎಂದು ಹೇಳುತ್ತಲೇ ಹೋದರು ರಂಗಕರ್ಮಿ ಭಾಗಿರಥಿ ಕದಂ. ಅಸ್ಸಾಂ ರಂಗಭೂಮಿಯಲ್ಲಿ ಭಾಗೀರಥಿ ಮತ್ತು ಅವರ ಗಂಡ ಬಹರುಲ್ ಇಸ್ಲಾಂ ಪ್ರಸಿದ್ಧ ಹೆಸರು.ಮೂಲತ: ಮೈಸೂರಿನವರಾದ ಭಾಗೀರಥಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿದ್ದಾಗ  ಸಹಪಾಠಿಯಾಗಿದ್ದ ಬಹರುಲ್ ಇಸ್ಲಾಂ ಅವರನ್ನು ಮದುವೆಯಾಗಿ 1995ರಿಂದ ಅಸ್ಸಾಂನಲ್ಲಿ ನೆಲೆಸಿದ್ದಾರೆ. ಗಂಡ-ಹೆಂಡತಿಯರಿಬ್ಬರೂ `ಸೀಗಲ್~ ಎನ್ನುವ ರೆಪರ್ಟರಿಯನ್ನು ಕಟ್ಟಿ ಅಸ್ಸಾಮಿ ಯುವಕ-ಯುವತಿಯರಿಗೆ ನಾಟಕದ ಶಾಲೆ ನಡೆಸುತ್ತಿದ್ದಾರೆ.ಅಸ್ಸಾಮಿ,ಹಿಂದಿ,ಬಂಗಾಳಿ, ಕನ್ನಡ ಭಾಷೆಗಳ ನೂರಾರು ನಾಟಕಗಳನ್ನು ಇವರ ತಂಡ ಪ್ರದರ್ಶಿಸಿದೆ. ಭಾಗೀರಥಿ ಅವರ `ಜಾತ್ರಾ~, `ಮಧ್ಯವರ್ತಿನಿ~ ಮೊದಲಾದ ನಾಟಕಗಳು ಅಸ್ಸಾಂನಲ್ಲಿ ಬಹುಜನಪ್ರಿಯ. ಮನೆಯಲ್ಲಿಯೇ ರಂಗತರಬೇತಿ ಶಾಲೆ, ಕಿರುಸಭಾಂಗಣಗಳನ್ನು ನಿರ್ಮಿಸಿಕೊಂಡಿರುವ ಈ ದಂಪತಿಗಳು ಅಸ್ಸಾಮಿ ನಟ-ನಟಿಯರನ್ನು ಕರ್ನಾಟಕಕ್ಕೆ ಕರೆತಂದು ಅಸ್ಸಾಮಿ ನಾಟಕಗಳ ಪ್ರದರ್ಶನ ನೀಡಿದ್ದಾರೆ.`ಶರಣಾಗತಿಯಾದ ಉಲ್ಫಾ ಉಗ್ರಗಾಮಿಗಳಿಂದ ಹಿಡಿದು ಅಸ್ಸಾಮಿ, ಬಂಗಾಳಿ, ಮುಸ್ಲಿಮ್ ಹೀಗೆ ಎಲ್ಲ ಜಾತಿ-ವರ್ಗಗಳ ಮಕ್ಕಳು ನಾಟಕ ಕಲಿಯಲು ಇಲ್ಲಿ ಬರುತ್ತಾರೆ. ಅಸ್ಸಾಂನದ್ದು ಬಹಳ ಉದಾರವಾದಿ ಸಮಾಜ. ಇಲ್ಲಿನ ಬ್ರಾಹ್ಮಣರು ಕೂಡಾ ಮಾಂಸಹಾರಿಗಳು, ಅವರ ಮದುವೆ ಸಮಾರಂಭಗಳಲ್ಲಿಯೇ ಮೀನು-ಮಾಂಸದ ಊಟ ಇರುತ್ತದೆ. ಜಾತೀಯತೆ, ಅಸ್ಪೃಶ್ಯತೆ ಇಲ್ಲವೇ ಇಲ್ಲ. ಮುಸ್ಲಿಮ್‌ನನ್ನು ಮದುವೆಯಾಗಿದ ಕೆಲವು ರಾಜಕಾರಣಿಗಳು ಸ್ವಾರ್ಥಸಾಧನೆಗಾಗಿ ಈ ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡುತ್ತಿರುವುದು ನೋಡಿದಾಗ ದು:ಖವಾಗುತ್ತದೆ~ ಎಂದರು ಭಾಗೀರಥಿ. ಮನೆಗೆ ಕರೆದು ಉಪಚರಿಸಿದ ಈ ದಂಪತಿಗಳು ಬೀಳ್ಕೊಟ್ಟಾಗ ` ಅಸ್ಸಾಂ ಬಗ್ಗೆ ಒಳ್ಳೆಯದನ್ನೇ ಬರೆಯಿರಿ~ ಎಂದು ಹೇಳಲು ಮರೆಯಲಿಲ್ಲ.

 

 (ನಾಳಿನ ಸಂಚಿಕೆಯಲ್ಲಿ 5ನೇ ಕಂತು)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry