ಧಾರ್ಮಿಕ ಪರಿಷತ್ ರಚನೆಗೆ ಅರ್ಜಿ ಆಹ್ವಾನ

7

ಧಾರ್ಮಿಕ ಪರಿಷತ್ ರಚನೆಗೆ ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳಲ್ಲಿ ಇತ್ತೀಚೆಗೆ ಅಂಗೀಕಾರವಾದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಮಸೂದೆಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಸಹಿ ಮಾಡಿದ್ದು, 83 ದೇವಸ್ಥಾನಗಳಿಗೆ ಧಾರ್ಮಿಕ ಪರಿಷತ್ ರಚಿಸುವ ಸಂಬಂಧ ಭಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮುಜರಾಯಿ ಸಚಿವ ಡಾ.ವಿ.ಎಸ್. ಆಚಾರ್ಯ ತಿಳಿಸಿದರು.ರಾಜ್ಯ ಧಾರ್ಮಿಕ ಪರಿಷತ್ತಿನ ರಚನೆಯಾಗಿದೆ, ಅದು ತಿಂಗಳಿಗೊಮ್ಮೆ ಸಭೆ ನಡೆಸುತ್ತಿದೆ. ಮುಜರಾಯಿ ಇಲಾಖೆ ಅಧೀನದ 83 ದೇವಸ್ಥಾನಗಳಿಗೆ ಧಾರ್ಮಿಕ ಪರಿಷತ್ ರಚಿಸುವ ಸಂಬಂಧ ಅರ್ಜಿ ನಮೂನೆ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೊರೆಯುತ್ತಿದೆ.ಇದೇ 20, ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಎಂದು ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.18 ಜಿಲ್ಲೆಗಳಲ್ಲಿ ಧಾರ್ಮಿಕ ಪರಿಷತ್ತಿನ ರಚನೆ ಮಾಡಲಾಗಿದ್ದು, ಬಾಕಿ ಇರುವ 12 ಜಿಲ್ಲೆಗಳಲ್ಲಿ ಪರಿಷತ್ತಿನ ರಚನೆ ಸಂಬಂಧ ರಾಜ್ಯ ಧಾರ್ಮಿಕ ಪರಿಷತ್ತು ಪರಿಶೀಲನೆ ನಡೆಸುತ್ತಿದೆ ಎಂದರು.ಪ್ರತಿ ಧಾರ್ಮಿಕ ಪರಿಷತ್ತಿನಲ್ಲಿ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ಕನಿಷ್ಠ ಒಬ್ಬ ವ್ಯಕ್ತಿ, ಇಬ್ಬರು ಮಹಿಳೆಯರು, ದೇವಸ್ಥಾನದ ಪ್ರಧಾನ ಅರ್ಚಕ, ದೇವಸ್ಥಾನ ಇರುವ ಪ್ರದೇಶಕ್ಕೆ ಸೇರಿದ ಒಬ್ಬರು ಹಾಗೂ ಇತರ ನಾಲ್ವರು ಸದಸ್ಯರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.ಎಲ್ಲ ಜಿಲ್ಲೆಗಳಲ್ಲಿ ಧಾರ್ಮಿಕ ಪರಿಷತ್ತಿನ ರಚನೆಯಾದ ನಂತರ, ಇಲಾಖೆ ಅಧೀನದ `ಬಿ~ ಮತ್ತು `ಸಿ~ ಗುಂಪಿನ ದೇವಸ್ಥಾನಗಳ ಧಾರ್ಮಿಕ ಪರಿಷತ್ತಿಗೂ ಅರ್ಜಿ ಆಹ್ವಾನಿಸಲಾಗುವುದು.ದೇವಸ್ಥಾನಗಳ ಆದಾಯ ಹೆಚ್ಚಿಸಿ, ಭಕ್ತರನ್ನು ಅವುಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವುದು ಇದರ ಉದ್ದೇಶ ಎಂದರು.ಮುಜರಾಯಿ ಇಲಾಖೆಗೆ ಸೇರಿದ ಎಲ್ಲ ದೇವಸ್ಥಾನಗಳ ವಾರ್ಷಿಕ ಮಿಗತೆ ಆದಾಯದಲ್ಲಿ ಶೇಕಡ 5ರಷ್ಟು ಮೊತ್ತದಿಂದ `ಸಾಮಾನ್ಯ ನಿಧಿ~ ಸ್ಥಾಪಿಸಲಾಗಿದೆ. ಪ್ರಸಕ್ತ ವರ್ಷ ಈ ನಿಧಿಯಲ್ಲಿ 13 ಕೋಟಿ ರೂಪಾಯಿ ಸಂಗ್ರಹವಾಗಿದೆ. ಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನಗಳ ನವೀಕರಣಕ್ಕೆ ಈ ನಿಧಿಯಿಂದ ನಾಲ್ಕು ಕೋಟಿ ರೂಪಾಯಿ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry