ಶುಕ್ರವಾರ, ಮೇ 29, 2020
27 °C

ಧಾರ್ಮಿಕ ಸ್ಥಳಗಳ ತೆರವು: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಜಿಲ್ಲೆಯ ಬೇರೆ ಪಟ್ಟಣಗಳಲ್ಲಿರುವ ರಸ್ತೆಯಲ್ಲಿನ ಧಾರ್ಮಿಕ ಸ್ಥಳಗಳನ್ನು ಶೀಘ್ರ ತೆರವುಗೊಳಿಸಲಾಗುವುದು. ಒಂದುವೇಳೆ ಯಾರಾದರೂ ಅಡ್ಡಿಪಡಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲಾ ಎಚ್ಚರಿಸಿದರು.ಅವರು ಬುಧವಾರ ಇಲ್ಲಿನ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಬಸವಕಲ್ಯಾಣದಲ್ಲಿ ಮೊದಲು ತೆರವು ಕಾರ್ಯ ಕೈಗೊಂಡಿರುವುದಕ್ಕೆ ವಿಶೇಷ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಉಚ್ಚನ್ಯಾಯಾಲಯದ ಆದೇಶ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ರಸ್ತೆಯಲ್ಲಿನ ಧಾರ್ಮಿಕ ಸ್ಥಳ ತೆರವು ಕಾರ್ಯ ನಡೆಯುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿಲ್ಲ ಎಂದು ತಿಳಿಸಿದರು.

ರಸ್ತೆ ಅತಿಕ್ರಮಣ ತೆರವುಗೊಳಿಸುವಾಗ ಕೆಲವರು ತಮ್ಮ ಹತ್ತಿರ ದಾಖಲೆಗಳಿವೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ಕಟ್ಟಡವನ್ನು ಹಿಂದೆ ಮತ್ತು ಮುಂದೆ ಸ್ಥಳಬಿಟ್ಟು ಹಾಗೂ ಅನುಮತಿ ಕೊಟ್ಟಷ್ಟು ಅಂತಸ್ತಿನ ಕಟ್ಟಡ ಮಾತ್ರ ಕಟ್ಟಿರುವುದಿಲ್ಲ. ಅಂಥವರು ರಸ್ತೆ ಅಗಲಗೊಳಿಸಲು ಮುಂದಿನ ಜಾಗ ಬಿಟ್ಟರೆ ತಪ್ಪೇನು ಎಂದು ಪ್ರಶ್ನಿಸಿದರು.ಒಂದುವೇಳೆ ಯಾರದ್ದಾದರೂ ಇಡೀ ಜಾಗ ರಸ್ತೆಯಲ್ಲಿ ಹೋಗಿ ಅವರು ನಿರಾಶ್ರಿತರಾಗಿದ್ದರೆ ಅಂಥವರಿಗೆ ಸರ್ಕಾರದ ಯೋಜನೆಯ ಮನೆಗಳನ್ನು ಕೊಡಲಾಗುತ್ತದೆ ಎಂದೂ ಹೇಳಿದರು.ರಿಂಗ್ ರಸ್ತೆ: ಬಸವಕಲ್ಯಾಣದ ಸುತ್ತಮುತ್ತ ರಿಂಗ್‌ರಸ್ತೆ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು ಈ ಬಗ್ಗೆ ಸ್ಥಳವನ್ನು ಪರಿಶೀಲಿಸಲಾಗಿದೆ ಎಂದು ಜಿಲ್ಲಾಧಿಕಾರಿ  ತಿಳಿಸಿದರು.ಖಾನಾಪುರ ಹತ್ತಿರ ಶೈಕ್ಷಣಿಕ ಸಂಕೀರ್ಣ ನಿರ್ಮಿಸಲಾಗುತ್ತಿದ್ದು ಸರ್ಕಾರಿ ಪ್ರಥಮದರ್ಜೆ ಕಾಲೇಜು, ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಮೊರಾರ್ಜಿ ದೇಸಾಯಿ ಶಾಲೆಗಳ ಕಟ್ಟಡಗಳನ್ನು ಅಲ್ಲಿ ನಿರ್ಮಿಸಲಾಗುತ್ತದೆ.ಬಸವಕಲ್ಯಾಣದಲ್ಲಿನ ಒಟ್ಟು 5 ರಸ್ತೆಗಳಲ್ಲಿ ಅತಿಕ್ರಮಣ ತೆರವು ಮತ್ತು ರಸ್ತೆ ಸುಧಾರಣೆ ಕಾರ್ಯ ನಡೆಯುತ್ತಿದೆ. ಈ ಕೆಲಸ ತೀವ್ರಗೊಳಿಸಿ ಮೂರು ವಾರಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿತರಿಗೆ ಸೂಚಿಸಲಾಗಿದೆ ಎಂದರು. ಕೆಲವರಿಗೆ ಕಳೆದ ವರ್ಷ ನಡೆದ ಬಸವ ಉತ್ಸವದ ಬಿಲ್ ಪಾವತಿಸಬೇಕಾಗಿದ್ದು ಅದನ್ನು ಶೀಘ್ರ ಕೊಡಲಾಗುವುದು ಎಂದೂ ಹೇಳಿದರು. ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಉಪಸ್ಥಿತರಿದ್ದರು.ಮನವಿ: ಅತಿಕ್ರಮಣ ತೆರವು ಕಾರ್ಯ ನಡೆಸುವಾಗ ರಾಜಾ ಬಾಗ ಸವಾರ ದರ್ಗಾ ಎದುರಿನ ಸಮಾಧಿಗಳಿಗೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಬಸವಕಲ್ಯಾಣದ ಮುಸ್ಲಿಂ ಬಾಂಧವರು ಬುಧವಾರ ಜಿಲ್ಲಾಧಿಕಾರಿ ಸಮೀರ ಶುಕ್ಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮುಖಂಡರಾದ ಇಕ್ರಾಮ ಖಾದಿವಾಲೆ, ವಾರೀಸ ಅಲಿ, ಅನ್ವರ ಭೋಸಗೆ ಮುಂತಾದವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.