ಧಾ ಧಿನ್ ಧಿನ್ ದಾ...

7

ಧಾ ಧಿನ್ ಧಿನ್ ದಾ...

Published:
Updated:

ವಿಧೇಯನಿಗೆ ಅದಾಗಲೇ ಆರು ವರ್ಷ ತುಂಬಿದೆ. ಆತನ ಮನೆಯ ಪಕ್ಕದಲ್ಲೇ ಇರುವ ದೇವಸ್ಥಾನದ ಡೋಲು ನಾದ, ಮನೆಯ ಮುಂದೆ ನಗಾರಿ ಬಡಿಯುತ್ತಾ ಬೇಡಲು ಬಂದವರು ನುಡಿಸುವ ನಗಾರಿಯ ಸುನಾದ; ಅಷ್ಟೇ ಏಕೆ, ಮನೆಯಲ್ಲಿ ಪಾತ್ರೆಯನ್ನು ಬೋರಲು ಹಾಕಿ ಅದರ ಮೇಲೆ ಕೋಲು ತೆಗೆದು ಡಬಡಬ ಬಡಿದಾಗ ಹೊರಡುವ ಲಯಕ್ಕೆ ಮನಸೋಲುವ ಮನಸ್ಸು.. ಟೀವಿಯಲ್ಲಿ ಶಾಸ್ತ್ರೀಯ ಸಂಗೀತ ಬಂದಾಗ ಕಣ್ಣೆಲ್ಲಾ ಕಿವಿಯಾಗಿಸುವುದು ತಬಲಾದ ಲಯಕ್ಕೆ; ಧಾ ಧಿನ್ ಧಿನ್‌ಧಾ.. ಧಾ ಧಿನ್ ಧಿನ್ ಧಾ..

ಎಂಬ ತೀನ್ ತಾಲ್ ಬೋಲ್‌ಗಳಾಗಿ, ಠೇಕಾಗಳಾಗಿ ಅರಳುವಾಗ ತನಗರಿವಿಲ್ಲದೇ ಕೈಗಳಲ್ಲಿ ಚಲನೆ.. ಆಗಲೇ ತಬಲಾ ಕಲಿಯಬೇಕೆಂಬ ಹಂಬಲ; ರಾತ್ರಿ ಹಗಲು ತಬಲಾದ್ದೇ ತಪಸ್ಸು.. ತಬಲಾ ಕಲಿತು ದೊಡ್ಡ ಕಲಾವಿದ ಆಗಬೇಕೆಂಬ ಕನಸು..!ಪುಟ್ಟ ಬಾಲಕನ ಕನಸನ್ನು ಸಾಕಾರಗೊಳಿಸಲು ಹೊರಟವರು, ಅವನಲ್ಲಿ ಲಯದ ಅಲೆಯ ಬಗೆಗಿನ ಆಸಕ್ತಿ ಗುರುತಿಸಿದವರು ತಾಯಿ ಕಲಾವತಿ. ಏಕೆಂದರೆ ಈಕೆಗೂ ಈ ಅವನದ್ಧ ವಾದ್ಯದ ಮೇಲೆ ಇನ್ನಿಲ್ಲದ ಮೋಹ. ಮಗನಿಗೆ ಕಲಿಸಬೇಕೆಂಬ ತವಕ.

 

ಅಲ್ಲಿಂದಲೇ ಶುರುವಾಯಿತು ಗುರುವಿಗಾಗಿ ಹುಡುಕಾಟ. ಉತ್ತಮ ಗುರು ಎಲ್ಲಿ ಸಿಗುತ್ತಾರೆ; ಗುಣಮಟ್ಟದ ತಬಲಾ ಎಲ್ಲಿ ಸಿಗಬಹುದು ಎಂಬ ತಡಕಾಟ. ಸಂಗೀತ ವಾದ್ಯ ಪರಿಕರಗಳ ಅಂಗಡಿಯಲ್ಲಿ ತಬಲಾ ಸಿಗುತ್ತದೆ ಎಂಬ ವಿಚಾರ ಗೊತ್ತಿದ್ದರೂ ಎಳೆಯ ಬೆರಳುಗಳನ್ನು ತಬಲಾ - ಡಗ್ಗಾಗಳ ಮೇಲೆ ಹೊರಳಿಸಲು ಎಂತಹ ತಬಲಾ, ಎಲ್ಲಿ ಕೊಳ್ಳಬೇಕು ಎಂಬ ಗೊಂದಲ..ಕೊನೆಗೂ ವಿಧೇಯನಿಗೆ ತಬಲಾನೂ ಸಿಕ್ತು, ಗುರುವಿನ ಕೃಪೆಯೂ ಒದಗಿಬಂತು.

ಹೌದು, ಹೊಸದಾಗಿ ತಬಲಾ ಕಲಿಯಬೇಕು ಎಂದು ಬಯಸುವ ಎಲ್ಲ ವಿದ್ಯಾರ್ಥಿಗಳಿಗೂ ಈ ಗೊಂದಲ, ತಳಮಳ ಸಾಮಾನ್ಯವೇ.ಲಯ ವಾದ್ಯ

ಅವನದ್ಧ ಅಥವಾ ಚರ್ಮ ವಾದ್ಯಕ್ಕೆ ಸೇರಿದ ವಾದ್ಯ ಪ್ರಕಾರ ಈ ತಬಲಾ. ಹಿಂದೂಸ್ತಾನಿ ಸಂಗೀತದಲ್ಲಿ ಮಾತ್ರವೇ ಪ್ರಮುಖ ಸಾಥಿ ವಾದ್ಯವಾಗಿ ಬಳಸಲಾಗುವ ಈ ವಾದ್ಯ, ಇದೀಗ ಸೋಲೊ ಕಛೇರಿಯಾಗಿಯೂ ಪ್ರಯೋಗವಾಗುತ್ತಿದೆ. ಎರಡು ಕೈಗಳ ಎಲ್ಲ ಬೆರಳುಗಳಿಗೂ ನಿರಂತರ ಚಲನೆ ಒದಗಿಸುವ ಈ ವಿಶಿಷ್ಟ ವಾದ್ಯಪ್ರಕಾರದಲ್ಲಿ ಪುಟ್ಟದಾಗಿರುವುದು ತಬಲಾ, ದುಂಡಗೆ ಕೊಂಚ ದಪ್ಪ ಇರುವುದು ಡಗ್ಗಾ. ತಬಲಾ, ಡಗ್ಗಾ ಎರಡೂ ಸೇರಿ ಆಗಿರುವುದು ತಬಲಾ ಎಂಬ ಲಯವಾದ್ಯ. ತಬಲಾವನ್ನು ಹಲಸಿನ ಮರ ಮತ್ತು ಆಡಿನ ಚರ್ಮದಿಂದ ಮಾಡುತ್ತಾರೆ.ಲಯ ಹೊರಡಿಸಲು ಬೆರಳುಗಳ ಪೆಟ್ಟು ಬೀಳುವ ಭಾಗವೇ `ಮುಚ್ಚಟೆ~. ನಾದವನ್ನು ನಿಯಂತ್ರಿಸುವ ಭಾಗ ಈ ಮುಚ್ಚಟೆ ಬಳಿ ಇರುವ ಕಪ್ಪು ವೃತ್ತದಂತಿರುವ ಭಾಗ `ಶಾಯಿ~.

ಸಾಮಾನ್ಯವಾಗಿ ಡಗ್ಗಾವನ್ನು ಸ್ಟೀಲ್ ಅಥವಾ ತಾಮ್ರದಿಂದ ತಯಾರಿಸುವರು. ನಾದ ಭಾಗ ಮಾತ್ರ ಚರ್ಮದಿಂದ ತಯಾರಾಗುವುದು. ನಮ್ಮ ದೇಶದಲ್ಲಿ ಮುಂಬೈ, ಬನಾರಸ್ ಮತ್ತು ಹೈದರಾಬಾದ್ ತಬಲಾ ತಯಾರಿಕೆಯಲ್ಲಿ ಹೆಸರುವಾಸಿಯಾದ ನಗರಗಳು. ಮುಂಬೈ ತಬಲಾ ಗುಣಮಟ್ಟದಲ್ಲಿ ಉತ್ತಮವಾಗಿದ್ದು ಬೆಲೆಯೂ ದುಬಾರಿ. ಮುಂಬೈ ತಬಲಾ ಒಂದು ಸೆಟ್‌ಗೆ ಅಂದಾಜು 15 ಸಾವಿರ ರೂಪಾಯಿ. ಬನಾರಸ್ ತಬಲಾ 9 ಸಾವಿರ ಮತ್ತು ಹೈದರಾಬಾದ್ ತಬಲಾಕ್ಕೆ 5ರಿಂದ 6 ಸಾವಿರ ರೂಪಾಯಿ.ಸುಮಾರು 400-450 ವರ್ಷಗಳ ಇತಿಹಾಸವಿರುವ ತಬಲಾ, ಇರಾನಿ ಮತ್ತು ತುರ್ಕಿ ಸಂಸ್ಕೃತಿ ಕಡೆಯಿಂದ ಬಂದಿದೆ. ಅಮೀರ್ ಖುಸ್ರೊ ತಬಲಾದ ಮೂಲ ಪುರುಷ ಎನ್ನುತ್ತದೆ ಚರಿತ್ರೆ.ಬೆಂಗಳೂರಿನಲ್ಲಿ  ಬಸವನಗುಡಿಯಲ್ಲಿರುವ ಗಣೇಶ್ ಮ್ಯೂಸಿಕಲ್ಸ್ (080- 22201402), ಜೆಸಿ ರಸ್ತೆಯಲ್ಲಿ ರಾಜೀವ್ ಡಿಸ್ಟ್ರಿಬ್ಯೂಟರ್ಸ್‌ (080- 22918021), ಚಿಕ್ಕಪೇಟೆಯಲ್ಲಿ ಭಾರತ್ ಹಾರ್ಮೋನಿಯಂ ವರ್ಕ್ಸ್ (080- 22872627), ಕಮ್ಮನಹಳ್ಳಿಯ ಆರ್‌ಎಸ್ ಪಾಳ್ಯದಲ್ಲಿ `ರಾಗ್ ಮ್ಯೂಸಿಕಲ್ಸ್~ (080-66492495) ಮತ್ತು ಕೋರಮಂಗಲದಲ್ಲಿ ಅರುಣಾ ಮ್ಯೂಸಿಕಲ್ಸ್ ನ್ಯೂ (9341214105) ಉತ್ತಮ ತಬಲಾ ಸೆಟ್ ಸಿಗುತ್ತದೆ.ವಿಧೇಯ ಈಗಾಗಲೇ `ಧಾ ಧಿನ್ನಾ.. ಧಾ ತೋನ್ನಾ... ತಾಳದಲ್ಲೂ ಪಕ್ಕಾ ಆಗಿದ್ದಾನೆ. ದಾದ್ರಾ, ಝಪ್‌ತಾಲ್, ಆದಿತಾಲ್, ಏಕ್‌ತಾಲ್, ತೀನ್‌ತಾಲ್ ಎಲ್ಲವೂ ಆತನಿಗೆ ಈಗ ಸಲೀಸು..! ನೀವೂ ತಬಲಾ ಕಲಿಯಬೇಕೆ..? ಶುರು ಮಾಡಿ ವಿಧೇಯನಂತೆ ತಬಲಾ ತಾಲೀಮು..! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry