ಶನಿವಾರ, ನವೆಂಬರ್ 23, 2019
18 °C
ಬಿಲ್ಲವ ಮಹಿಳೆಯರಿಗೆ ಸಾಹಿತಿ ಬಿ.ಎಂ.ರೋಹಿಣಿ ಸಲಹೆ

`ಧೈರ್ಯದಿಂದ ಮುಖ್ಯವಾಹಿನಿಗೆ ಬನ್ನಿ'

Published:
Updated:

ಮಂಗಳೂರು: `ಬಿಲ್ಲವ ಮಹಿಳೆಯರು ನಾಚಿಕೆ, ಅವಮಾನ, ಹಿಂಜರಿಕೆ, ಸಂಕುಚಿತ ಭಾವನೆಗಳನ್ನು ಬಿಟ್ಟು ಧೈರ್ಯದಿಂದ ಮುಖ್ಯವಾಹಿನಿಗೆ ಬರುವ ಅಗತ್ಯ ಇದೆ' ಎಂದು ನಿವೃತ್ತ ಶಿಕ್ಷಕಿ, ಹಿರಿಯ ಸಾಹಿತಿ ಬಿ.ಎಂ.ರೋಹಿಣಿ ಸಲಹೆ ನೀಡಿದರು.ಕುದ್ರೋಳಿಯ ಬಿಲ್ಲವರ ಮಹಿಳಾ ಸಂಘದ ದಶಮಾನೋತ್ಸವ ಸಮಾರಂಭದ ಅಂಗವಾಗಿ ಭಾನುವಾರ ನಾರಾಯಣಗುರು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕಾಲ ಬದಲಾದಂತೆ ಬಿಲ್ಲವ ಮಹಿಳೆಯರಲ್ಲಿ ಸಾಕಷ್ಟು ಪ್ರಗತಿಪರ ಧೋರಣೆಗಳು ಬಂದಿದ್ದರೂ ಸಮಸ್ಯೆಗಳು ಇನ್ನೂ ಇವೆ. ಆ ಎಲ್ಲ ಸಮಸ್ಯೆಗಳನ್ನು ಶಾಂತ ಚಿತ್ತದಿಂದ ಪರಿಶೀಲಿಸಿದರೆ ಹೊಸ ಉತ್ತರಗಳು ಸಿಗಬಹುದು. ಆರ್ಥಿಕವಾಗಿ ಬಿಲ್ಲವರು ಈಗ ಸಾಕಷ್ಟು ಸಬಲರಾಗಿದ್ದಾರೆ. ಹಾಗೆಂದು ನನ್ನದು ಸುಖೀ ಕುಟುಂಬ ಆರಾಮವಾಗಿ ಇದ್ದರಾಯಿತು ಎಂದು ಅಷ್ಟಕ್ಕೇ ಸಂತೃಪ್ತರಾಗುವುದು ಸರಿಯಲ್ಲ. ಬಿಲ್ಲವ ಮಹಿಳೆಯರು ಇನ್ನಷ್ಟು ಜ್ಞಾನವಂತರಾಗಬೇಕು.ಅವರ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರವಾಗಬೇಕು. ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಅವರು ಇನ್ನಷ್ಟು ಬೆಳೆಯಬೇಕು' ಎಂದು ಸಲಹೆ ನೀಡಿದರು.

`ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರ ಸಂಘಟನೆಗೆ ಅವರ ಪ್ರಗತಿಪರ ಧೋರಣೆಗೆ ಪುರುಷರಿಂದಲೇ ಸಾಕಷ್ಟು ಅಡೆತಡೆಗಳಿದ್ದವು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರು ಎಲ್ಲ ರಂಗಗಳಲ್ಲೂ ಪ್ರಗತಿಪರರಾಗಬೇಕು ಎಂದು ಸ್ವತಃ ಪುರುಷರೇ ಹುರಿದುಂಬಿಸುತ್ತಿದ್ದಾರೆ. ಈ ಅವಕಾಶದ ಸದ್ಬಳಕೆಯಾಗಲಿ' ಎಂದು ಆಶಿಸಿದರು.`ಸಾಮಾನ್ಯವಾಗಿ ಮಹಿಳೆಯರು ಹರಟೆಪ್ರಿಯರು ಎಂಬ ಆರೋಪ ಇದೆ. ಮಹಿಳೆಯರು ಹರಟೆ ಹೊಡೆದರೂ ಅದರಿಂದ ಅವರಿಗೆ ಲಾಭ ಇದೆ. ಮಹಿಳೆ ತನ್ನ ಒಳಬೇಗುದಿಯನ್ನು ನಾಲ್ಕಾರು ಜನರ ಬಳಿ ಹಂಚಿಕೊಂಡಾಗ ಹಗುರವಾಗುತ್ತಾಳೆ. ಇದರಿಂದ ಒಂದಷ್ಟು ಪ್ರೀತಿ ಹಂಚಿ ಆತ್ಮವಿಶ್ವಾಸ ಪಡೆದು ಬಲಿಷ್ಠಳಾಗುತ್ತಾಳೆ' ಎಂದು ವಿಶ್ಲೇಷಿಸಿದ ರೋಹಿಣಿ, `ಪ್ರಪಂಚದ ಎಲ್ಲ ಹೆಣ್ಣು ಮಕ್ಕಳ ಭಾವನೆಗಳು, ಕಷ್ಟಗಳು ಒಂದೇ ಆಗಿದೆ' ಎಂದರು.`ಕರಾವಳಿಯಲ್ಲಿ ಮಾಸ್ತಿ ಪದ್ಧತಿ ಇಲ್ಲ. ಆದರೆ ಬಿಲ್ಲವರ ಪೂಜನೀಯ ಗರಡಿಗಳಲ್ಲಿ ಮಾಸ್ತಿಗಳನ್ನು ಕಂಡಿದ್ದೇನೆ. ಬಿಲ್ಲವ ಕುಟುಂಬಗಳಲ್ಲಿ ಮಾಸ್ತಿಯನ್ನು ಆರಾಧಿಸುವುದನ್ನು ಗಮನಿಸಿದ್ದೇನೆ. ಬಿಲ್ಲವ ಮಹಿಳೆಯರು ಸ್ವಾಭಿಮಾನಿಗಳಾಗಿದ್ದರು. ಧೈರ್ಯವಂತರಾಗಿದ್ದರು. ಕುಟುಂಬಕ್ಕಾಗಿ ಮಾಡಿದ ತ್ಯಾಗಕ್ಕಾಗಿ ಅವರು ಪೂಜನೀಯ ಸ್ಥಾನ ಪಡೆದಿದ್ದಾರೆ. ಆದರೆ ಇಂದಿನವರಿಗೆ ಎಳ್ಳು ಕಾಳಿನಷ್ಟೂ ಧೈರ್ಯ ಇಲ್ಲ' ಎಂದರು.ನಿವೃತ್ತ ಶಿಕ್ಷಕಿ, ಸಾಹಿತಿ ಜಾನಕಿ ಬ್ರಹ್ಮಾವರ ಮಾತನಾಡಿ, `ಬಿಲ್ಲವ ಸಮಾಜದಲ್ಲಿ ಮಾತೃಪ್ರಧಾನ ವ್ಯವಸ್ಥೆ ಇದೆ. ಬಿಲ್ಲವರಲ್ಲಿ ಮನೆ ಮಗಳೇ ಮುಖ್ಯ. ಇಂಥ ವ್ಯವಸ್ಥೆ ಬಿಲ್ಲವ ಸಮಾಜದ ಹೆಣ್ಣುಮಗಳಿಗೆ ವರದಾನವೇ ಆಗಿದೆ. ಇದೇ ಕಾರಣದಿಂದ ಬಿಲ್ಲವರಲ್ಲಿ ಹೆಣ್ಣು ಭ್ರೂಣ ಹತ್ಯೆಯಂಥ ಪಿಡುಗು ಇಲ್ಲ. ಭ್ರೂಣ ಹತ್ಯೆಯಿಂದಾಗಿ ಸಮಾಜದ ಬೇರೆ ಬೇರೆ ಸಮುದಾಯಗಳಲ್ಲಿ ಕಂಡು ಬರುವ ಹೆಣ್ಣುಮಕ್ಕಳ ಕೊರತೆ ಬಿಲ್ಲವರಲ್ಲಿ ಇಲ್ಲ' ಎಂದರು.ಡಾ. ರಮೀಳ ಶೇಖರ್ ಅವರು ಮಹಿಳೆ ಮತ್ತು ಮಾನಸಿಕ ಆರೋಗ್ಯ ಎಂಬ ವಿಷಯದ ಕುರಿತು  ಮಾತನಾಡಿದರು. ಕುದ್ರೋಳಿ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಖಲಾಕ್ಷಿ ವೈ ಸುವರ್ಣ, ಖಜಾಂಚಿ ರೇವತಿ ಅಶೋಕ್ ಮೊದಲಾದವರು ಇದ್ದರು.

ಪ್ರತಿಕ್ರಿಯಿಸಿ (+)