ಶುಕ್ರವಾರ, ಫೆಬ್ರವರಿ 26, 2021
22 °C

ಧ್ವಜದ ನೆರಳಿನಲ್ಲಿ...

ಗಣೇಶ ವೈದ್ಯ Updated:

ಅಕ್ಷರ ಗಾತ್ರ : | |

ಧ್ವಜದ ನೆರಳಿನಲ್ಲಿ...

ಜುಲೈ 22, 1947

ನಿರ್ಮಾಪಕ: ಕೆ.ಎಂ. ನಂಜೇಗೌಡ

ನಿರ್ದೇಶಕ: ವಿಶಾಲ್ ರಾಜ್

ತಾರಾಗಣ: ಸುಚೇಂದ್ರ ಪ್ರಸಾದ್, ಸುಧಾರಾಣಿ, ಅಚ್ಯುತ್‌ಕುಮಾರ್, ಭಾರ್ಗವಿ ನಾರಾಯಣ್

***

ಸರಜೂ ಕಾಟ್ಕರ್ ಅವರ ಕಾದಂಬರಿ ಆಧರಿತ ‘ಜುಲೈ 22, 1947’ ಚಿತ್ರವನ್ನು ವಿಶಾಲ್ ರಾಜ್ ಚಿತ್ರದ ಚೌಕಟ್ಟಿಗೆ ಅಳವಡಿಸಿದ್ದಾರೆ. ಭಾರತದ ಧ್ವಜವನ್ನು ತನ್ನ ಪ್ರಾಣದಂತೆ ರಕ್ಷಿಸುವ ಮತ್ತು ಗೌರವಿಸುವ ಸತ್ಯಪ್ಪ ಎಂಬ ಬೆಳಗಾವಿಯ ದೇಶಭಕ್ತ ಚಿತ್ರದ ಕೇಂದ್ರ ಬಿಂದು.

ಸಚಿವರೊಬ್ಬರ ಕಾರಿಗೆ ಹಾಕಿರುವ ರಾಷ್ಟ್ರಧ್ವಜ ಹರಿದಿರುವುದನ್ನು ಕಂಡ ಸತ್ಯಪ್ಪ ಕಾರನ್ನು ಬೆಂಬತ್ತಿ ಅದನ್ನು ಸರಿಪಡಿಸುತ್ತಾನೆ. ಧ್ವಜಕ್ಕೆ ಅಗೌರವ ಉಂಟಾಗುವುದು ತನ್ನ ಕಣ್ಣಿಗೆ ಬಿದ್ದಾಗ ಅದನ್ನು ಸರಿಪಡಿಸುವುದು ದೇಶದ ಪ್ರಜೆಯಾದ ತನ್ನ ಕರ್ತವ್ಯ ಎಂಬುದು ಅವನ ನಂಬಿಕೆ.ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿತ್ಯ ಧ್ವಜ ಏರಿಸುವುದು–ಇಳಿಸುವುದು ಹಾಗೂ ಕಡತಗಳನ್ನು ಎತ್ತಿ ಕೊಡುವ ಸಿಪಾಯಿ ಆತ. ತನ್ನ ವೃತ್ತಿಗೆ ಮತ್ತು ನಂಬಿದ ಆದರ್ಶಕ್ಕೆ ಇನಿತೂ ಅಪಚಾರ ಮಾಡದ ನಡೆ–ನುಡಿ ಅವನದು. ಇಡೀ ಊರಿನಲ್ಲಿ ಆತ ಚಿರಪರಿಚಿತ. ಊರಿನವರ ಪ್ರಕಾರ ‘ಸತ್ಯಪ್ಪ ಜೀವಂತ ಧ್ವಜಸಂಹಿತೆ’.ಮಹಾತ್ಮಾ ಗಾಂಧಿ ಬೆಳಗಾವಿಗೆ ಬಂದಾಗ ಸತ್ಯಪ್ಪನ ತಂದೆ ರಾಮಪ್ಪನಿಗೆ ದೇಶಪ್ರೇಮ, ಝಂಡಾದ ಮಹತ್ವ ಕುರಿತು ಬೋಧಿಸಿರುತ್ತಾರೆ. ಅದನ್ನು ದೀಕ್ಷೆಯಂತೆ ಸ್ವೀಕರಿಸುವ ರಾಮಪ್ಪನು ಸತ್ಯಪ್ಪನಿಗೂ ಮಾದರಿ.ಹೆಂಡತಿ (ಸುಧಾರಾಣಿ) ಆತನ ಬೆನ್ನೆಲುಬು. ಆದರೆ ಗಾಂಧಿಗೆ ಹರಿಲಾಲ ಇದ್ದಂತೆ ಸತ್ಯಪ್ಪನಿಗೆ ಮಗ ಮೋಹನ ಇದ್ದಾನೆ. ಆತ ಕ್ರಿಕೆಟ್ ಬೆಟ್ಟಿಂಗ್, ಕುಡಿತ, ಮೋಸದ ದಾಸ. ಮಗನನ್ನು ಮನೆಯಿಂದ ಹೊರಹಾಕುವ ಈ ದೇಶಭಕ್ತನಿಗೆ ತಂದೆಯ ಹೃದಯವೂ ಇದೆ.‘ತಾಯಿ ಕೊನೆಯುರಿಸಿರೆಳೆಯುವ ಸಮಯ ಮತ್ತು ಸತ್ಯಪ್ಪ ಧ್ವಜ ಇಳಿಸಬೇಕಾದ ಸಮಯ ಎರಡೂ ಒಂದೇ. ಧ್ವಜ ಇಳಿಸದೆ ಸತ್ಯಪ್ಪ ತಾಯಿಯನ್ನು ನೋಡಲು ಬರಲು ಸಾಧ್ಯವಿಲ್ಲ. ಧ್ವಜಕ್ಕೂ ಜೀವವಿದೆ ಎಂದು ನಂಬುವ ಸತ್ಯಪ್ಪನಿಗೆ ಇದು ಧರ್ಮಸಂಕಟ.ಒಂದು ಆದರ್ಶಕ್ಕೆ ಕಟ್ಟುಬಿದ್ದವರು ಪಡುವ ಪಡಿಪಾಟಲನ್ನಾಗಿಯೂ ಈ ಸಂದರ್ಭವನ್ನು ಅರ್ಥೈಸಬಹುದು. ಧ್ವಜಭಕ್ತಿಯಿಂದಾಗಿ ಸತ್ಯಪ್ಪ ಏನೆಲ್ಲ ಕಷ್ಟಗಳನ್ನು ಅಪ್ಪಿಕೊಳ್ಳಬೇಕಾಗುತ್ತದೆ, ಈ ಆದರ್ಶ ಯಾವ ರೀತಿಯಲ್ಲಿ ಪರಿಣಮಿಸುತ್ತದೆ, ತನ್ನ ಕೊನೆಗಾಲದಲ್ಲೂ ಅದೇ ಭಕ್ತಿಯನ್ನು ಉಳಿಸಿಕೊಳ್ಳುತ್ತಾನಾ ಎಂಬುದು ಚಿತ್ರದ ಕೌತು.ದ್ವಿತೀಯಾರ್ಧದಲ್ಲಿ ಚಿತ್ರಕಥ ಕೊಂಚ ನಿಧಾನ ಎನ್ನಿಸುವುದು ಬಿಟ್ಟರೆ ಎಲ್ಲೂ ಬೋರು ಹೊಡೆಸುವುದಿಲ್ಲ. ಸಂಗೀತಾ ಕಟ್ಟಿ ಸಂಯೋಜನೆಯಲ್ಲಿ ಹಾಡುಗಳು ಇಂಪಾಗಿ ಕೇಳುತ್ತವೆ. ಮುಖ್ಯ ಪಾತ್ರಗಳಲ್ಲಿ ಸುಚೇಂದ್ರ ಪ್ರಸಾದ್, ಸುಧಾರಾಣಿ, ಶೋಭರಾಜ್, ಅಚ್ಯುತ್‌ಕುಮಾರ್, ಭಾರ್ಗವಿ ನಾರಾಯಣ್ ಅಭಿನಯ ಸಹಜತೆ ಇಷ್ಟವಾಗುತ್ತದೆ.ಅಂದಹಾಗೆ, ಪಿಂಗಳಿ ವೆಂಕಯ್ಯ ಅವರು ವಿನ್ಯಾಸಗೊಳಿಸಿದ್ದ ಬಾವುಟವನ್ನು ಭಾರತದ ರಾಷ್ಟ್ರಧ್ವಜ ಎಂದು ಸ್ವೀಕರಿಸಿದ್ದು ಜುಲೈ 22, 1947ರ ಮಹತ್ವ. ಆದರೆ ಇಂದಿನ ಸಮಾಜದಲ್ಲಿ ನಡೆಯುವ ಈ ಚಿತ್ರದ ಕಥೆಯಲ್ಲಿ ಶೀರ್ಷಿಕೆಯ ಮಹತ್ವ ತಿಳಿಸುವ ಯಾವ ದೃಶ್ಯವೂ ಇಲ್ಲದಿರುವುದು ಒಂದು ಕೊರತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.