ಶುಕ್ರವಾರ, ಫೆಬ್ರವರಿ 26, 2021
28 °C

ಧ್ವಜಪ್ರೀತಿಯ ಬೆನ್ನೇರಿ...

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಧ್ವಜಪ್ರೀತಿಯ ಬೆನ್ನೇರಿ...

*‘ಇಂಗಳೆ ಮಾರ್ಗ’ದ ಬಳಿಕ ಕಾದಂಬರಿ ಆಧಾರಿತ ಮತ್ತೊಂದು ಚಿತ್ರ ‘ಜುಲೈ 22, 1947’ರೊಂದಿಗೆ ಚಂದನವನಕ್ಕೆ ಮರಳಿದ್ದೀರಿ. ಸಿನಿಮಾಕ್ಕೆ ಕಾದಂಬರಿಗಳನ್ನೇ ಆಯ್ಕೆ ಮಾಡಿಕೊಳ್ಳುವುದರ ಹಿಂದಿನ ಉದ್ದೇಶ?

ಕಾದಂಬರಿ ಅಂತಷ್ಟೇ ಅಲ್ಲ; ಸಂವೇದನೆಯುಳ್ಳ ಕಥೆ ಸಿಕ್ಕರೆ ಅದನ್ನು ಸಿನಿಮಾಕ್ಕೆ ತರಲು ನಾನು ಹೆಚ್ಚು ಉತ್ಸುಕನಾಗಿದ್ದೇನೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿ ದೇವರಾಯ ಇಂಗಳೆ ಕುರಿತ ‘ಇಂಗಳೆ ಮಾರ್ಗ’ದಲ್ಲಿ ಕಾಣುತ್ತಿದ್ದ ಸಂದೇಶವೇ ಬೇರೆ; ಈ ವಾರ ತೆರೆಗೆ ಬರುತ್ತಿರುವ ‘ಜುಲೈ 22, 1947’ ಚಿತ್ರದ ಅಂತಃಸತ್ವವೇ ಬೇರೆ. ದಲಿತರಿಗಾಗಿ ದುಡಿದ ಹೋರಾಟಗಾರ ಇಂಗಳೆಯ ಕತೆಯಾದರೆ, ಇದು ರಾಷ್ಟ್ರಧ್ವಜ ಪ್ರೇಮವನ್ನು ಪ್ರತಿಯೊಬ್ಬನಲ್ಲೂ ಮೂಡಿಸುವ ಕಥೆ. ಎರಡೂ ಉದಾತ್ತ ಸಂದೇಶ ಸಾರುವ ಕಥೆಗಳೇ ಆಗಿವೆ.*ದಿನಾಂಕವೊಂದನ್ನು ಹೇಳುವ ಶೀರ್ಷಿಕೆಯೇ ವಿಭಿನ್ನವಾಗಿದೆಯಲ್ಲ?

ಅದು ತ್ರಿವರ್ಣ ಧ್ವಜಕ್ಕೆ ಒಪ್ಪಿಗೆ ಸೂಚಿಸಿದ ದಿನಾಂಕ ಅಷ್ಟೇ. ಸ್ವಾತಂತ್ರ್ಯ ಯೋಧ ಪಿಂಗಳಿ ವೆಂಕಯ್ಯ ವಿನ್ಯಾಸ ಮಾಡಿದ ಧ್ವಜವನ್ನು 1947ರ ಜುಲೈ 22ರಂದು ಅಂಗೀಕರಿಸಲಾಯಿತು ಎಂಬುದು ಎಷ್ಟೋ ಮಂದಿಗೆ ಕೊಟ್ಟಿಲ್ಲ. ಅಂದು ನಡೆದ ಸಾಂವಿಧಾನಿಕ ಸಭೆಯಲ್ಲಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಜತೆಗೆ ಮಧ್ಯದಲ್ಲಿ ಅಶೋಕ ಚಕ್ರವಿರುವ ಬಾವುಟವನ್ನು ರಾಷ್ಟ್ರಧ್ವಜವಾಗಿ ಅಂಗೀಕರಿಸಲಾಯಿತು.*ಹಾಗಿದ್ದರೆ ಈ ಸಿನಿಮಾ ಸ್ವಾತಂತ್ರ್ಯ ಹೋರಾಟದ ಕುರಿತಾಗಿದೆಯೇ?

ಖಂಡಿತ ಇಲ್ಲ. ರಾಷ್ಟ್ರಧ್ವಜದ ಮಹತ್ವ ಬಣ್ಣಿಸುವ ಸಿನಿಮಾ ಮಾಡುವ ಆಸೆ ನನ್ನದಾಗಿತ್ತು. ಸರಜೂ ಕಾಟ್ಕರ್ ಅವರ ಕಾದಂಬರಿಯನ್ನು ಓದುತ್ತ ಹೋದಂತೆಲ್ಲ, ಅದನ್ನು ಸಿನಿಮಾ ಮಾಡಿದರೆ ಹೇಗೆ ಎಂಬ ಯೋಚನೆ ಮೂಡಿತು. ಅದನ್ನು ಕಾಟ್ಕರ್ ಬಳಿ ಚರ್ಚಿಸಿದೆ. ಅವರು ತಮ್ಮ ಕಾದಂಬರಿ ರಚನೆಯ ಹಿನ್ನೆಲೆಯನ್ನು ತೆರೆದಿಡುತ್ತ ಹೋದರು. ಹುಬ್ಬಳ್ಳಿಯಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ, ಮೂರು ತಲೆಮಾರುಗಳ ಕಥೆಯನ್ನು ಅವರು ಬರೆದಿದ್ದರು.ಆ ಪೈಕಿ ನಾನು ಸಿನಿಮಾ ರೂಪಕ್ಕೆ ತರುವಾಗ ಸುಲಭವಾಗುವಂತೆ ಒಂದಷ್ಟು ಬದಲಾವಣೆ ಮಾಡಿಕೊಂಡೆ. 1936ರಲ್ಲಿ ಗಾಂಧೀಜಿ ಏಳು ದಿನ ಬೆಳಗಾವಿ ಸಮೀಪದ ಹುದಲಿಯಲ್ಲಿ ಉಳಿದುಕೊಂಡಿದ್ದರು. ಗಾಂಧೀಜಿ ಭೇಟಿಯ ಕುರುಹು ಬಿಟ್ಟರೆ ಉಳಿದಿದ್ದೆಲ್ಲ ಬೇರೆಯದೇ ಕಥೆ. ಜಿಲ್ಲಾಧಿಕಾರಿ ಕಚೇರಿಯ ಸಿಪಾಯಿ ಸತ್ಯಪ್ಪ ಎಂಬಾತನ ಕೆಲಸ ದಿನನಿತ್ಯ ಬಾವುಟ ಹಾರಿಸುವುದು ಹಾಗೂ ಇಳಿಸುವುದು. ಆತ ಯಾಕೆ ಹಾಗೂ ಎಷ್ಟರಮಟ್ಟಿಗೆ ತ್ರಿವರ್ಣ ಧ್ವಜ ಪ್ರೀತಿಸುತ್ತಾನೆ ಎಂಬುದು ಕಥೆ. ಬೆಳಗಾವಿ, ಹುದಲಿ ಹಾಗೂ ಪಂಜಾಬಿನ ವಾಘಾ ಗಡಿಯಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿದ್ದೇವೆ.*ರಾಷ್ಟ್ರಧ್ವಜ ಕುರಿತಾದ ಸಿನಿಮಾ ಮಾಡುವಾಗ ಏನೇನು ಮುನ್ನೆಚ್ಚರಿಕೆ ವಹಿಸಬೇಕಾಯಿತು?

ನಮ್ಮೆದುರು ಇದ್ದ ದೊಡ್ಡ ಸವಾಲು ಏನೆಂದರೆ, ಧ್ವಜಕ್ಕೆ ಎಳ್ಳಷ್ಟೂ ಎಲ್ಲೂ ಅಪಚಾರ ಆಗಬಾರದೆನ್ನುವುದು. ತಮಾಷೆ ದೃಶ್ಯಗಳಂತೂ ಇರುವ ಹಾಗೆಯೇ ಇಲ್ಲವಲ್ಲ? ಸಂಭಾಷಣೆಯಲ್ಲಿಯೂ ಅಪಚಾರ ಕಾಣುವಂತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ರಾಷ್ಟ್ರಧ್ವಜ ಸಂಹಿತೆಯನ್ನು ಉಲ್ಲಂಘಿಸುವಂತಿಲ್ಲ. ನಾವೆಲ್ಲ ಶಾಲೆಗಳಿಂದಲೇ ಬಾವುಟ ಹಾರಿಸಲು ಶಿಕ್ಷಕರು ಪಡುತ್ತಿದ್ದ ಎಚ್ಚರಿಕೆಯನ್ನು ನೋಡುತ್ತ ಬೆಳೆದವರು.ಈಗ ಅದನ್ನು ಸಿನಿಮಾ ರೂಪಕ್ಕೆ ತರುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಪ್ರತಿ ಕ್ಷಣ ಮೈಯೆಲ್ಲ ಕಣ್ಣಾಗಿಸಿ ಚಿತ್ರೀಕರಣ ಮಾಡಿದ್ದೇವೆ. ಅದೂ ಒಂದು ಹೊಸ ಅನುಭವ. ರಾಷ್ಟ್ರಧ್ವಜ ಸಂಹಿತೆ ಬಗ್ಗೆ ಸಾಕಷ್ಟು ತಿಳಿದುಕೊಂಡೇ ಶಿರೀಷ್ ಜೋಶಿ ಸಂಭಾಷಣೆಯನ್ನು ಬರೆದಿದ್ದಾರೆ. ಇನ್ನು ಬಂಕಿಮ ಚಂದ್ರ ಚಟರ್ಜಿ ಅವರ ‘ವಂದೇ ಮಾತರಂ’ ಸೇರಿದಂತೆ ಐದು ಹಾಡುಗಳಿಗೆ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಸಂಗೀತ ಸಂಯೋಜಿಸಿದ್ದಾರೆ.*ಇಂದಿನ ಪೀಳಿಗೆಯಲ್ಲಿ ದೇಶಪ್ರೇಮವೇ ಕಾಣೆಯಾಗುತ್ತಿದೆ ಎಂಬ ಆತಂಕದ ಮಧ್ಯೆ ನಿಮ್ಮ ಚಿತ್ರ ಹೇಗೆ ಗಮನ ಸೆಳೆದೀತೆಂಬ ವಿಶ್ವಾಸವಿದೆ?

ಎಲ್ಲವೂ ಈಗ ಬದಲಾಗಿದೆ. ಹಾಗೆಂದು ನಿರಾಶೆ ಪಡುವವನಲ್ಲ ನಾನು. ರಾಷ್ಟ್ರಧ್ವಜದ ಪ್ರೇಮ ನೂರು ಜನರಲ್ಲಿ ಒಬ್ಬರ ಹೃದಯಕ್ಕೆ ತಟ್ಟಿದರೂ ಸಾಕು ಎಂದು ನಿರೀಕ್ಷೆ ಮಾಡುತ್ತಿದ್ದೇನೆ. ಎಲ್ಲಕ್ಕೂ ಮೀರಿ, ರಾಷ್ಟ್ರಧ್ವಜ ನಮ್ಮ ದೇಶಭಕ್ತಿಯ ಸಂಕೇತವೂ ಹೌದಲ್ಲ? ನಾನೊಮ್ಮೆ ನನ್ನ ಕಾರಿಗೆ ಜೋಡಿಸಲು ಲೋಹದ ಸರಳುಗಳಿದ್ದ ಎರಡು ರಾಷ್ಟ್ರಧ್ವಜಗಳನ್ನು ಬ್ಯಾಗಿನೊಳಗೆ ಹಾಕಿಕೊಂಡು ದೆಹಲಿಯಿಂದ ತರುತ್ತಿದ್ದೆ.

ವಿಮಾನ ನಿಲ್ದಾಣದಲ್ಲಿ ತಪಾಸಣಾ ಸಮಯದಲ್ಲಿ ಅಲ್ಲಿನ ಯಂತ್ರಗಳು ಸದ್ದು ಮಾಡಿದವು. ಬ್ಯಾಗ್ ತೆರೆದು ಪರಿಶೀಲಿಸಿದ ಸಿಬ್ಬಂದಿ ಅದನ್ನು ಕಾಣುತ್ತಲೇ ಹೆಮ್ಮೆಯಿಂದ ನನ್ನತ್ತ ನೋಡಿದ. ಆ ಭಾವನೆ ನನ್ನಲ್ಲಿ ಈ ವಿಷಯದ ಬಗ್ಗೆ ಇನ್ನಷ್ಟು ಆತ್ಮವಿಶ್ವಾಸ ಮೂಡಿಸಿತು. ಎಂಥದೇ ವಿಷಯದ ಬಗ್ಗೆ ಸಿನಿಮಾ ಮಾಡಲು ಸಾಧ್ಯವಿದೆ. ಆದರೆ ತ್ರಿವರ್ಣ ಧ್ವಜದ ಬಗ್ಗೆ ಚಿತ್ರ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ.*ಪ್ರಧಾನಿ ನರೇಂದ್ರ ಮೋದಿ ಅವರಿಂದ ಈ ಚಿತ್ರ ಬಿಡುಗಡೆ ಮಾಡಿಸಿದ್ದರ ಹಿಂದಿನ ಉದ್ದೇಶ ಏನು?

ಅದಕ್ಕೆ ಹೆಚ್ಚೇನೂ ಅರ್ಥ ಕಲ್ಪಿಸಬೇಕಿಲ್ಲ! ಆದರೆ ಮೊದಲು ಇದಕ್ಕೆಲ್ಲ ಕೃತಜ್ಞತೆ ಸಲ್ಲಿಸಬೇಕಾದ್ದು ಬೆಳಗಾವಿ ಸಂಸದ ಸುರೇಶ ಅಂಗಡಿ ಅವರಿಗೆ. ಈ ಸಿನಿಮಾ ನೋಡಿದ ಅವರು, ಇಷ್ಟಕ್ಕೇ ಬಿಟ್ಟರೆ ಈ ಸಿನಿಮಾ ಬಗ್ಗೆ ಹೆಚ್ಚು ಜನರಿಗೆ ಗೊತ್ತಾಗುವುದಿಲ್ಲ ಎಂದುಕೊಂಡು ಮೋದಿ ಅವರಿಂದ ಬಿಡುಗಡೆ ಮಾಡಿಸಲು ನಿರ್ಧರಿಸಿದರು. ಅವರ ಸತತ ಪರಿಶ್ರಮದಿಂದ ಕೊನೆಗೂ ಪ್ರಧಾನಿ ಭೇಟಿ ನಿಗದಿಯಾಯಿತು. ನಾವು ಅವರಿಂದಲೇ ಸಿನಿಮಾ ಬಿಡುಗಡೆ ಮಾಡಿಸಿದೆವು. ‘ಈ ಅಂಶವನ್ನು ಪ್ರಚಾರಕ್ಕಾಗಿ ಪ್ರಮೋಟ್ ಮಾಡಿಕೊಳ್ಳಿ’ ಎಂದು ಹಲವರು ಸಲಹೆ ಮಾಡಿದರು. ನಾವು ಒಪ್ಪಲಿಲ್ಲ. ಇಲ್ಲಿ ರಾಷ್ಟ್ರಧ್ಜಜವೇ ನಾಯಕ. ಅದು ನಮ್ಮ ಗಟ್ಟಿಯಾದ ನಿಲುವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.