ಬುಧವಾರ, ಅಕ್ಟೋಬರ್ 16, 2019
22 °C

ಧ್ವನಿವರ್ಧಕ ಬಳಕೆ- ಸರ್ಕಾರಕ್ಕೆ ನೋಟಿಸ್

Published:
Updated:

ಬೆಂಗಳೂರು: ಪ್ರಾರ್ಥನಾ ಮಂದಿರಗಳು ಪರವಾನಗಿ ಪಡೆದುಕೊಳ್ಳದೇ ಧ್ವನಿವರ್ಧಕ ಅಳವಡಿಸುವ ಮೂಲಕ ಶಬ್ದ ಮಾಲಿನ್ಯ ಮಾಡುತ್ತಿರುವ ಕ್ರಮಕ್ಕೆ ಹೈಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.`ಪೊಲೀಸ್ ಕಾಯ್ದೆಯಲ್ಲಿ ಪರವಾನಗಿ ಅಗತ್ಯ ಎಂದು ಉಲ್ಲೇಖಗೊಂಡಿದೆ. ಈಚೆಗೆ ಸುಪ್ರೀಂಕೋರ್ಟ್ ಈ ಬಗ್ಗೆ ಸ್ಪಷ್ಟಪಡಿಸಿದೆ. ಆದರೂ ಕಾನೂನು ಉಲ್ಲಂಘನೆ ಆಗುತ್ತಿರುವುದು ಸರಿಯಲ್ಲ. ಎಲ್ಲಿಯೇ, ಯಾವುದೇ ಸ್ಥಳದಲ್ಲಿ ಕಾನೂನು ಉಲ್ಲಂಘನೆ ಆಗುತ್ತಿದ್ದರೂ ಆ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿತು.`ಜಯನಗರ ನಾಗರಿಕ ಸಮಿತಿ~ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. `ಪೊಲೀಸ್ ಕಾಯ್ದೆಯ 37ನೇ ಕಲಮಿನ ಅನ್ವಯ ಧ್ವನಿವರ್ಧಕ ಬಳಕೆ ಮಾಡಲು ಪೊಲೀಸ್ ಇಲಾಖೆಯ ಪೂರ್ವಾನುಮತಿ ಅಗತ್ಯ. ಅಷ್ಟೇ ಅಲ್ಲದೇ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯ ಅವಧಿಯಲ್ಲಿ ಧ್ವನಿವರ್ಧಕ ಬಳಕೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಕಾನೂನು ಉಲ್ಲಂಘನೆ ಆಗುತ್ತಿದ್ದರೂ ಈ ಬಗ್ಗೆ ಸರ್ಕಾರ ಮೌನ ತಾಳಿದೆ~ ಎನ್ನುವುದು ಅರ್ಜಿದಾರರ ಆರೋಪ.ಬಹಳಷ್ಟು ಪ್ರಾರ್ಥನಾ ಮಂದಿರಗಳು ಇಲಾಖೆಯದಿಂದ ಪೂರ್ವಾನುಮತಿ ಪಡೆದುಕೊಂಡಿಲ್ಲ ಎಂಬ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ತಮಗೆ ಮಾಹಿತಿ ದೊರಕಿದೆ ಎಂದೂ ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸುವಂತೆ ಅವರು ಕೋರಿದ್ದಾರೆ. ಸರ್ಕಾರ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಇತರ ಪ್ರತಿವಾದಿಗಳಿಗೆ ಪೀಠ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿದೆ.ಮಾಹಿತಿಗೆ ಆದೇಶ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷರಾಗಿರುವ ಶಾಸಕ ನೆಹರು ಓಲೇಕಾರ್ ಇಲ್ಲಿಯವರೆಗೆ ನಡೆಸಿರುವ ಸಭೆಗಳ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.ಹಾವೇರಿಯ ಶಾಸಕರೂ ಆಗಿರುವ ಓಲೇಕಾರ್, ಅಧ್ಯಕ್ಷರಾಗಿ ಇದುವರೆಗೆ ಒಂದೇ ಒಂದು ಸಭೆ ನಡೆಸಿಲ್ಲ. ಆದುದರಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿಸಬೇಕು ಎಂದು ಕೋರಿ  `ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ~ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಇವರು ಅಧ್ಯಕ್ಷರಾಗಿ ಎಷ್ಟು ಸಭೆ ನಡೆಸಿದ್ದಾರೆ ಎಂಬ ಬಗ್ಗೆ ಒಬ್ಬೊಬ್ಬರು ಒಂದೊಂದು ಮಾಹಿತಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪೀಠ ಈ ಮಾಹಿತಿ ಬಯಸಿದೆ. ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯುವ ಕುರಿತಾಗಿ ಲಿಖಿತ ಹೇಳಿಕೆ ಮೂಲಕ ಮಾಹಿತಿ ನೀಡುವಂತೆಯೂ ಹೈಕೋರ್ಟ್ ನಿರ್ದೇಶಿಸಿದೆ. ಇದಕ್ಕೆ ಒಂದು ದಿನದ ಗಡುವು ನೀಡಿರುವ ಪೀಠ, ವಿಚಾರಣೆಯನ್ನು ಬುಧವಾರಕ್ಕೆ  ಮುಂದೂಡಿದೆ.

Post Comments (+)