`ಧ್ವನಿ' ಇಲ್ಲದ ಮಂದಿಗೆ ಕಿವಿ ಕೇಳದ `ದೇವರು'

7
ಚಿಕ್ಕಬಳ್ಳಾಪುರ ತಾಲ್ಲೂಕು ಕೇತೇನಹಳ್ಳಿ

`ಧ್ವನಿ' ಇಲ್ಲದ ಮಂದಿಗೆ ಕಿವಿ ಕೇಳದ `ದೇವರು'

Published:
Updated:

ಈ ಗ್ರಾಮದ ಜನರಿಗೆ ಸಂಜೆ 6ರ ನಂತರ ಬಸ್ ಸಿಗೋದಿಲ್ಲ. 20 ಕಿ.ಮೀ. ದೂರಕ್ಕೆ ಹೋಗಿ ತರದ ಹೊರತು ದಿನಪತ್ರಿಕೆ ಸಿಗೋದಿಲ್ಲ, ಇನ್ನು ಪ್ರಾಣಾಪಾಯದಂಥ ಸಂದರ್ಭದಲ್ಲೂ ಜಿಲ್ಲಾ ಆಸ್ಪತ್ರೆಗೆ ಎಂದರೆ 20 ಕಿ.ಮೀ. ತೆರಳಬೇಕು. ವಾಹನಗಳು ಸಿಕ್ಕರೆ ಪ್ರಾಣ ಉಳಿದಷ್ಟೇ ಸಂತಸ ಪಡುವ ಇವರು ಕೇತೇನಹಳ್ಳಿ ಗ್ರಾಮಸ್ಥರು.



`ನಿಮ್ಮ ಇಡೀ ಜಿಲ್ಲೆಯೇ ಬಯಲುಸೀಮೆ ಪ್ರದೇಶ. ಮಳೆ ಬೀಳೋದೇ ಕಷ್ಟವಾಗಿರುವಾಗ ಇಲ್ಲಿ ಕಾಡು ಅದ್ಹೇಗ್ರಿ ಬೆಳೆಯುತ್ತೆ. ಶಿವಮೊಗ್ಗದಂತಹ ಮಲೆನಾಡು ಪ್ರದೇಶಕ್ಕೆ ಹೋದರೆ, ಹಸಿರು ಪರಿಸರ-ಪ್ರಾಣಿಕಪಕ್ಷಿಗಳು ಕಾಣಿಸುತ್ತವೆ. ನಿಮ್ಮೂರಲ್ಲಿ ಏನ್ರಿ ಇದೆ ಬರೀ ಬಟಾಬಯಲು' ಅಂತ ಹೊರ ಜಿಲ್ಲೆಯ ಅಧಿಕಾರಿಗಳು ಕೇಳಿಬಿಟ್ಟರೆ, ಕೇತೇನಹಳ್ಳಿ ಗ್ರಾಮಸ್ಥರಿಗೆ ನಖಶಿಖಾಂತ ಸಿಟ್ಟು ಬಂದುಬಿಡುತ್ತದೆ.



`ಸ್ವಾಮಿ, ನಮ್ಮದು ಕುಗ್ರಾಮ. ಆದರೆ ನಾವಿರೋದು ದಟ್ಟ ಕಾಡಿನ ಮಧ್ಯೆಯೇ. ತಿಂಗಳಿಗೊಮ್ಮೆಯಾದರೂ ನರಿ, ತೋಳದಂತಹ ಕಾಡುಪ್ರಾಣಿ ನೋಡ್ತೀವಿ. ಚಿರತೆಯಂತೂ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಮೂರು ತಿಂಗಳಿಗೊಮ್ಮೆ ಒಬ್ಬನಾದರೂ ಕರಡಿ ದಾಳಿಗೆ ಒಳಗಾಗಿ, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾನೆ' ಎಂದು ಮನಸ್ಸಿನೊಳಗೆ ಏನನ್ನೂ ಉಳಿಸಿಕೊಳ್ಳದೆ ಎಲ್ಲವನ್ನೂ ಹೇಳಿದ ನಂತರ ಈ ಗ್ರಾಮದ ಜನ ಸುಮ್ಮನಾಗುತ್ತಾರೆ.



ಹೌದು! ಚಿಕ್ಕಬಳ್ಳಾಪುರ ತಾಲ್ಲೂಕಿನ ಕಟ್ಟಕಡೆ ಗ್ರಾಮಗಳ ಪೈಕಿ ಒಂದಾದ ಕೇತೇನಹಳ್ಳಿ ಅಕ್ಷರಶಃ ಕಾಡಿನ ಮಧ್ಯದಲ್ಲಿದೆ. ಮೂಲಸೌಕರ್ಯದ ಲವಲೇಶವೂ ಕಾಣಸಿಗದ ಈ ಗ್ರಾಮ ಜಿಲ್ಲಾ ಕೇಂದ್ರದಿಂದ 20 ಕಿ.ಮೀ.ಗಳಷ್ಟು ದೂರದಲ್ಲಿದೆ. ಚಿಕ್ಕಬಳ್ಳಾಪುರಕ್ಕೆ ತುರ್ತಾಗಿ ಕೆಲಸಕ್ಕೆ ಹೋಗಬೇಕಿದ್ದರೆ, ಸಂಜೆ 6 ಗಂಟೆಗೆ ಹೊರಡುವ ಕಟ್ಟಕಡೆ ಬಸ್ ಏರಬೇಕು. ಆ ನಂತರ ನಸುಕಿನ 6 ಗಂಟೆಯವರೆಗೆ ಜಪ್ಪಯ್ಯ ಅಂದರೂ ಒಂದೇ ಒಂದು ಬಸ್ ಬರಲ್ಲ ಮತ್ತು ಹೋಗಲ್ಲ.



ಇನ್ನು ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ಅಥವಾ ಯಾರಾದರೂ ಹೃದಯಾಘಾತಕ್ಕೆ ಒಳಗಾದರೆ, ಜಿಲ್ಲಾ ಆಸ್ಪತ್ರೆ ಮುಟ್ಟುವ ನಂಬಿಕೆಯನ್ನೇ ಕೈ ಬಿಡಬೇಕು. ಏಕೆಂದರೆ, 20 ಕಿ.ಮೀ. ದೂರ ಹೋಗಲು ವಾಹನಗಳು ಇರಲ್ಲ. ದ್ವಿಚಕ್ರ ವಾಹನಗಳಲ್ಲಿ ಆಸ್ಪತ್ರೆಗೆ ಹೋಗಲು ಆಗಲ್ಲ. ಆಟೊರಿಕ್ಷಾಗಳು ಕೂಡ ಸಮೀಪದಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ.



ಆದರೆ, ಈ ಗ್ರಾಮಕ್ಕೆ ತನ್ನದೇ ವೈಶಿಷ್ಟ್ಯ ಇದೆ. ನಂದಿ ಗಿರಿಸಾಲಿನ ಐದು ಬೆಟ್ಟಗಳು ಈ ಗ್ರಾಮವನ್ನು ಸುತ್ತುವರೆದಿವೆ. ಇಡೀ ಜಿಲ್ಲೆಯಲ್ಲಿ ಮಳೆ ಬಾರದಿದ್ದರೂ ಸಂಪದ್ಭರಿತ ಹಸಿರು ವಾತಾವರಣದಿಂದ ಇಲ್ಲಿ ಮಳೆ ಬರುತ್ತದೆ. ಪೃಕೃತಿಯನ್ನು ದೇವರೆಂದೇ ಪೂಜಿಸುವ ಇಲ್ಲಿನ ಗ್ರಾಮಸ್ಥರು, ಏನಾದರೂ ಅಪಚಾರವಾಯಿತು ಎಂಬ ಅನುಮಾನ ಬಂದರೆ ದುಬದುಬನೇ ಓಡಿ ಹೋಗಿ 2 ಕಿ.ಮೀ. ದೂರದಲ್ಲಿರುವ ದೇವಳಗಿರಿ ಬೆಟ್ಟದ ಗವಿಯೊಳಗೆ ಸೇರಿಬಿಡುತ್ತಾರೆ. ಅಲ್ಲಿರುವ ಲಕ್ಷ್ಮಿದೇವಿ ಮತ್ತು ಗವಿತಿಮ್ಮರಾಯಸ್ವಾಮಿ ದೇವರಿಗೆ ಪೂಜೆ ಮಾಡಿದಾಗಲೇ ಅವರಿಗೆ ಸಮಾಧಾನ.



ಇದು ಹೆಮ್ಮೆಯೋ ಅನಿವಾರ್ಯವೋ ಒಟ್ಟಿನಲ್ಲಿ ಈ ಗ್ರಾಮದ ಬಹುತೇಕ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಕಲೀತಿದ್ದಾರೆ. ಸಮೀಪದಲ್ಲಿ ಎಲ್ಲಿಯೂ ಖಾಸಗಿ ಶಾಲೆಗಳಿಲ್ಲ ಎಂಬುದೇ ಇದಕ್ಕೆ ಕಾರಣ. ಇಲ್ಲಿ ದಿನಪತ್ರಿಕೆಗಳು ಕೂಡ ಸಿಗುವುದಿಲ್ಲ. ಪತ್ರಿಕೆಗಳನ್ನು ಖರೀದಿಸಬೇಕಿದ್ದರೆ, 20 ಕಿ.ಮೀ. ಹೋಗಲೇಬೇಕು.



ಬಹುತೇಕ ಗ್ರಾಮಗಳಲ್ಲಿ ಇದ್ದಂತೆ ಇಲ್ಲಿಯೂ ಮನೆಗಳ ಎದುರು ಚರಂಡಿ ನೀರು ಹರಿಯುತ್ತದೆ. ಗಲೀಜು ಎಲ್ಲೆಂದರಲ್ಲಿ ಕಾಣುತ್ತದೆ. ಇಲ್ಲಿನ ಗ್ರಾಮಸ್ಥರು ಕಷ್ಟಗಳನ್ನೇ ಸಂಗಾತಿಯಾಗಿಸಿಕೊಂಡಿದ್ದಾರೆ ಆದ್ದರಿಂದ `ಹೀಗೆಲ್ಲ ಗಲೀಜಿದ್ದರೆ, ರೋಗ-ರುಜಿನ ಬರಲ್ಲವೇ' ಎಂದು ಪ್ರಶ್ನಿಸಿದರೆ, `ಒಂದೆರಡು ದಿನ ಕಾಯಿಲೆ ಬೀಳಬಹುದು. ಡಾಕ್ಟ್ರು ಇದ್ದಾರಲ್ಲ, ಅವರು ಇಂಜೆಕ್ಷನ್, ಗುಳಿಗೆ ಕೊಟ್ಟುಬಿಡ್ತಾರೆ. ಮೂರನೇ ದಿನಕ್ಕೆ ಕೆಲಸ ಮಾಡಲಿಕ್ಕೆ ಹೊರಟುಬಿಡ್ತೀವಿ. ಕೆಲಸಕ್ಕೆ ಹೋಗದಿದ್ದರೆ, ನಮ್ಮ ಹೊಟ್ಟೆ ತುಂಬುವುದಾದರೂ ಹೇಗೆ' ಎಂದು ಮರು ಪ್ರಶ್ನಿಸುತ್ತಾರೆ.



`ಜಿಲ್ಲಾ ಕೇಂದ್ರದಲ್ಲಿದ್ದೂ ಒಂದು ರೀತಿಯಲ್ಲಿ ಅಪರಿಚಿತರಂತೆ ಬಾಳುತ್ತಿದ್ದೇವೆ. ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಇಲ್ಲಿ ಭೇಟಿ ನೀಡಿ, ನಮ್ಮ ಕಷ್ಟ ಆಲಿಸಲಿ ಎಂದು ನಾವು ಬಯಸುತ್ತೇವೆ. ಆದರೆ ಅವರ ಮುಖದರ್ಶನವೇ ಆಗುವುದಿಲ್ಲ. ಗ್ರಾಮಾಭಿವೃದ್ಧಿ ಬಗ್ಗೆ ಶಾಸಕರು ಭರವಸೆ ನೀಡಿದ್ದಾರೆ. ಆದರೆ ಯಾವಾಗ ಜಾರಿಯಾಗುತ್ತೋ ಗೊತ್ತಿಲ್ಲ. ನಮ್ಮ ಗ್ರಾಮದ ಸುತ್ತಮುತ್ತ ಆವರಿಸಿರುವ ಬೆಟ್ಟ- ಗುಡ್ಡಗಳನ್ನು ನೋಡುವ ಹೊರ ಊರಿನ ಪ್ರವಾಸಿಗರು, ಇದನ್ನು ಪ್ರವಾಸಿ ತಾಣ ಮಾಡಬಹುದು ಎನ್ನುತ್ತಾರೆ.



ಆದರೆ ಅವರೇ ಇಲ್ಲಿನ ಹದಗೆಟ್ಟ ರಸ್ತೆಗಳನ್ನು ನೋಡಿ, ಮತ್ತೊಮ್ಮೆ ಇಲ್ಲಿ ಬರೋದು ಕಷ್ಟ ಕಣ್ರೀ. ರಸ್ತೆ ರಿಪೇರಿಯಾದಾಗ ಫೋನ್ ಮಾಡಿ ಎಂದು ಹೊರಟುಬಿಡುತ್ತಾರೆ. ಗ್ರಾಮದಲ್ಲಿ ಎಲ್ಲವೂ ಸುಧಾರಣೆಯಾಗುತ್ತದೆ ಎಂದು ನಾವಂತೂ ಚಾತಕ ಪಕ್ಷಿಗಳಂತೆ ಕಾಯುತ್ತಲೇ ಇದ್ದೇವೆ' ಎನ್ನುತ್ತಾರೆ ಕೇತೇನಹಳ್ಳಿ ಗ್ರಾಮಸ್ಥ ಗಂಗರಾಜು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry