ಧ್ವನಿ ಬೆಳಕು: ಕೋಟೆ ಬಾಗಿಲು ಮುಚ್ಚಲು ವಿರೋಧ

7

ಧ್ವನಿ ಬೆಳಕು: ಕೋಟೆ ಬಾಗಿಲು ಮುಚ್ಚಲು ವಿರೋಧ

Published:
Updated:

ಶ್ರೀರಂಗಪಟ್ಟಣ:  ಇಲ್ಲಿನ ಡೆಲ್ಲಿ ಗೇಟ್‌ ಬಳಿ ಪ್ರವಾಸೋದ್ಯಮ ಇಲಾಖೆ ನಡೆಸಲು ಉದ್ದೇಶಿಸಿರುವ ಪಟ್ಟಣದ ಪರಂಪರೆ ಬಿಂಬಿಸುವ ಧ್ವನಿ ಬೆಳಕು ಕಾರ್ಯಕ್ರಮಕ್ಕಾಗಿ ಕೋಟೆ ದ್ವಾರವನ್ನು ಮುಚ್ಚಲು ಸಿದ್ಧತೆ ನಡೆಯುತ್ತಿದ್ದು, ಕೋಟೆ ಬಾಗಿಲು ಬಂದ್‌ ಮಾಡಿದರೆ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪುರಸಭೆ ಸದಸ್ಯರು ಹಾಗೂ ಹಿರಿಯ ನಾಗರಿಕರು ಎಚ್ಚರಿಸಿದರು.ಇಲ್ಲಿನ ಪುರಸಭೆ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ 20ಕ್ಕೂ ಹೆಚ್ಚು ಪುರಸಭೆ ಸದಸ್ಯರು ಹಾಗೂ ಪೌರ ಸಮಿತಿಯ ಸದಸ್ಯರು ಕೋಟೆ ಬಾಗಿಲು ಮುಚ್ಚಲು ವಿರೋಧ ವ್ಯಕ್ತಪಡಿಸಿದರು. ಪುರಸಭೆ ಕಚೇರಿ ಹಾಗೂ ಮಿನಿ ವಿಧಾನಸೌಧದ ಬಳಿ ಕೆಲಕಾಲ ಪ್ರತಿಭಟನೆ ನಡೆಸಿ ಪ್ರವಾಸೋದ್ಯಮ ಇಲಾಖೆ ವಿರುದ್ಧ ಘೋಷಣೆ ಕೂಗಿದರು.

ಡೆಲ್ಲಿ ಗೇಟ್‌ ಮಾರ್ಗ ಕಳೆದ 500 ವರ್ಷ­ಗಳಿಂದಲೂ ಜನ ಬಳಕೆಯ ರಸ್ತೆಯಾಗಿದೆ. ಚೆಕ್‌ಪೋಸ್ಟ್‌ ಮಾರ್ಗದಿಂದ ಪಟ್ಟಣಕ್ಕೆ ಇದು ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ರೈತರು, ಪ್ರವಾಸಿಗರು ಈ ಮಾರ್ಗದಿಂದಲೇ ಪಟ್ಟಣ ಪ್ರವೇಶಿಸುತ್ತಿದ್ದಾರೆ. ಈ ಮಾರ್ಗವನ್ನು ಮುಚ್ಚಿದರೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಡೆಲ್ಲಿ ಗೇಟ್‌ ಮಾರ್ಗವನ್ನು ಬಂದ್‌ ಮಾಡಬಾರದು ಎಂದು ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಬಲರಾಂ, ಎನ್‌.ಗಂಗಾಧರ್‌, ಗಂಜಾಂ ನರಸಿಂಹಸ್ವಾಮಿ ಇತರರು ಆಗ್ರಹಿಸಿದರು. ಸ್ಥಳೀಯರು ಸ್ಮಾರಕ ವಿರೂಪಗೊಳಿಸಿದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಆದರೆ ದ್ವನಿ ಬೆಳಕು ಕಾರ್ಯಕ್ರಮದ ಹೆಸರಿನಲ್ಲಿ ಐತಿಹಾಸಿಕ ಕಂದಕವನ್ನು ಮುಚ್ಚಲಾಗುತ್ತಿದೆ. ಕೋಟೆಯನ್ನು ಶಿಥಿಲಗೊಳಿಸಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಥಳೀಯ ಪುರಸಭೆ ಹಾಗೂ ಜನಪ್ರತಿನಿಧಿಗಳನ್ನು ದೂರ ಇಟ್ಟು ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಸದಸ್ಯೆ ಪದ್ಮಮ್ಮ, ದೂರಿದರು.ಧ್ವನಿ ಬೆಳಕು ಕಾಯರ್ಕ್ರಮಕ್ಕೆ ಶುಲ್ಕ ವಿಧಿಸಬಾರದು ಎಂದು ಮತ್ತೊಬ್ಬ ಸದಸ್ಯ ಎಸ್‌.ಪ್ರಕಾಶ್‌ ಹೇಳಿದರು.

ತಹಶೀಲ್ದಾರ್‌ ಶಿವಾನಂದಮೂರ್ತಿ ಅವರ ಮೂಲಕ ರಾಜ್ಯ ಸರ್ಕಾರಕ್ಕ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌, ಈ ಕುರಿತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸುವುದಾಗಿ ತಿಳಿಸಿದರು. ಪುರಸಭೆ ಸದಸ್ಯರಾದ ಗೌರಮ್ಮ, ರಾಜೇಶ್ವರಿ, ಕಾವೇರಮ್ಮ, ನಳಿನಿ, ವೆಂಕಟೇಶ್‌, ಆರ್ಮುಗಂ, ಬಿ.ಮಂಜುಸ್ವಾಮಿ, ಟಿ.ಕೃಷ್ಣ, ಎಸ್‌.ಟಿ.ರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry