ಗುರುವಾರ , ಮೇ 26, 2022
31 °C

ನಂಜನಗೂಡು: ವಿಜೃಂಭಣೆಯ ಪಂಚ ಮಹಾ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು:  ‘ದಕ್ಷಿಣ ಕಾಶಿ’ ಎಂದೇ ಪ್ರಖ್ಯಾತಿ ಪಡೆದಿರುವ ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ  ದೊಡ್ಡ ಜಾತ್ರೆ ಪ್ರಯುಕ್ತ ಪಂಚ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ  ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ 5.50 ರಿಂದ 6.25ರೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಮತ್ತು ಚಂಡಿಕೇಶ್ವರ ದೇವರ ಉತ್ಸವ ಮೂರ್ತಿಗಳನ್ನು ದೇವಾಲಯದಿಂದ ತಂದು ಪ್ರತ್ಯೇಕ ರಥಗಳ  ಮಂಟಪದ ಪೀಠದ ಮೇಲೆ ಪ್ರತಿಷ್ಠಾಪಿಸಲಾಯಿತು. ಆಗಮಿಕ ಶಾಸ್ತ್ರದಂತೆ ಅರ್ಚಕ ವೃಂದ ಪೂಜಾ,  ವಿಧಿ-ವಿಧಾನಗಳನ್ನು ಪೂರೈಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಾತ್ರಿಯಿಂದಲೇ  ಸಾಗರೋಪಾದಿಯಲ್ಲಿ ಜಮಾಯಿಸಿದ್ದ ಭಕ್ತಜನರು ಹರ್ಷೋದ್ಗಾರ ಮಾಡುತ್ತಾ ರಥಗಳನ್ನು ಎಳೆಯಲು ಪ್ರಾರಂಭಿಸಿದರು. ದೇವಾಲಯದ ಆವರಣದಿಂದ ಮೊದಲಿಗೆ ಸಂಪ್ರದಾಯದಂತೆ ಗಣಪತಿ ರಥವನ್ನು ಹೊರಡಿಸಲಾಯಿತು. ತದನಂತರ ಶ್ರೀಕಂಠೇಶ್ವರ ಸ್ವಾಮಿಯ ಬೃಹತ್ ರಥ, ಪಾರ್ವತಿ (ಅಮ್ಮನವರು), ಸುಬ್ರಹ್ಮಣ್ಯ, ಚಂಡಿಕೇಶ್ವರ ರಥಗಳು ಹಿಂಬಾಲಿಸಿದವು. ಸುಮಾರು 95 ಅಡಿ ಎತ್ತರ, 50 ಟನ್‌ಗೂ ಅಧಿಕ ಭಾರದ ಶ್ರೀಕಂಠೇಶ್ವರನ ಬೃಹತ್ ರಥವನ್ನು  ದಾರಿ ಉದ್ದಕ್ಕೂ ಜೈಕಾರ ಹಾಕುತ್ತಾ ಭಕ್ತಜನರು ಸಂಭ್ರಮ, ಸಡಗರದಿಂದ ಎಳೆದು ತಂದರು. ಮಾರ್ಗದ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ತೇರಿಗೆ ಹಣ್ಣು-ಜವನ ಎಸೆದು ಭಕ್ತಿ ಮೆರೆದರು.ಬೆಳಿಗ್ಗೆ 6.25ರ ಸುಮಾರಿಗೆ ಹೊರಟ ಶ್ರೀಕಂಠೇಶ್ವರಸ್ವಾಮಿಯ ರಥ ರಾಷ್ಟ್ರಪತಿ ರಸ್ತೆ, ಪಾಠಶಾಲಾ ಬೀದಿ, ಅಂಗಡಿ ಬೀದಿ ಮೂಲಕ ಸುಮಾರು 1.5 ಕಿ.ಮೀ. ದೂರ ಚಲಿಸಿ ಮತ್ತೆ ಸ್ವಸ್ಥಾನ ಸೇರಿದಾಗ ಬೆಳಿಗ್ಗೆ 7.25 ಗಂಟೆ ಆಗಿತ್ತು. ಈ ಬಾರಿ ಕೂಡ ಯಾವುದೆ ಅಡೆ ತಡೆ ಇಲ್ಲದೆ ಬೃಹತ್ ರಥ ಸಾಗಿ ಬಂದದ್ದು ಭಕ್ತರು, ಅಧಿಕಾರಿಗಳಲ್ಲಿ ಸಂತಸ ತಂದಿತು. ಎಲ್ಲಾ ಐದು ರಥಗಳು ಬೆಳಿಗ್ಗೆ 9.15ರ ಹೊತ್ತಿಗೆ ದೇವಾಲಯದ ಆವರಣ ಸೇರಿಕೊಂಡವು. ದಕ್ಷಿಣ ಭಾರತದಲ್ಲಿ ಜರುಗುವ ಏಕೈಕ ಪಂಚ ಮಹಾರಥೋತ್ಸವ ಇದಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ಚಿಕಿತ್ಸಾ ವಾಹನ, ಅಗ್ನಿ ಶಾಮಕ ವಾಹನ, ಕ್ರೇನ್ ರಥದ ಹಿಂದೆ ಸಾಗಿ ಬಂದವು.ರಾಜ್ಯ ಮತ್ತು ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತಜನರು ರಥೋತ್ಸವದಲ್ಲಿ ಭಾಗಿಯಾದರು. ಪದ್ಧತಿಯಂತೆ  ನವ ದಂಪತಿಗಳು ಕೂಡ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಶುರುವಾಗಿರುವ ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ಈ ಸಲದ ಜಾತ್ರೆಗೆ ಜನ ಕಡಿಮೆ ಎಂಬ ಅಭಿಪ್ರಾಯ ಅಲ್ಲಲ್ಲಿ ವ್ಯಕ್ತವಾಯಿತು. ಜಿಲ್ಲಾಧಿಕಾರಿ ಹರ್ಷಗುಪ್ತ ರಥೋತ್ಸವಕ್ಕೆ ಚಾಲನೆ ಕೊಟ್ಟರು. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕರ್ಬಿಕರ್, ಉಪ ವಿಭಾಗಾಧಿಕಾರಿ ಭಾರತಿ, ದೇವಾಲಯದ ಇಓ ಎನ್.ರಾಮಮೂರ್ತಿ, ತಹಶೀಲ್ದಾರ್ ಎ.ನವೀನ್ ಜೋಸೆಫ್, ಮಾಜಿ ಸಚಿವ ಎಂ.ಮಹದೇವ್ ಹಾಜರಿದ್ದರು.ತೆಪ್ಪೋತ್ಸವ:
ದೊಡ್ಡ ಜಾತ್ರೆಯ ಮತ್ತೊಂದು ಪ್ರಮುಖ ಕಾರ್ಯಕ್ರಮವಾದ ತೆಪ್ಪೋತ್ಸವವು ದೇವಾಲಯಕ್ಕೆ ಸಮೀಪದ ಕಪಿಲಾ ನದಿಯಲ್ಲಿ ವಿದ್ಯುತ್ ದೀಪಾಲಂಕೃತ ತೇಲುವ (ಯಾಂತ್ರಿಕ ದೋಣಿ) ದೇವಾಲಯದಲ್ಲಿ ಮಾ.19  ಸಂಜೆ 7 ಗಂಟೆಗೆ  ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.