ನಂಜಪ್ಪ ನಟನಾ ಲೋಕ

7
ಯುವ ದಿನ ಎಂದರೆ...

ನಂಜಪ್ಪ ನಟನಾ ಲೋಕ

Published:
Updated:
ನಂಜಪ್ಪ ನಟನಾ ಲೋಕ

ರಂಗಭೂಮಿ ಹಿನ್ನೆಲೆಯ ಹುಡುಗ ಎಸ್.ನಂಜಪ್ಪ. `ಪಡುವಾರಳ್ಳಿ ಪಡ್ಡೆಗಳು' ಧಾರಾವಾಹಿಯ ಇಂಜು ಎಂಬ ಮುಸ್ಲಿಂ ಯುವಕನ ಪಾತ್ರದಲ್ಲಿ ನಟಿಸಿ ನಗಿಸಿದ ಖ್ಯಾತಿ ಅವರದು. ಇದೀಗ `ವಾರ್ ವಾರಗಿತ್ತಿಯರು' ಧಾರಾವಾಹಿಗೆ ಸಹಾಯಕ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ. ಕಿರುತೆರೆಯಿಂದ ಹಿರಿತೆರೆಗೂ ತಮ್ಮ ಕಾರ್ಯವ್ಯಾಪ್ತಿ ವಿಸ್ತರಿಸುವ ಆತ್ಮವಿಶ್ವಾಸ ಅವರದು.ತುಮಕೂರು ಜಿಲ್ಲೆಯ ದೊಡ್ಡಮದರೆ ಅವರ ಊರು. ನಂಜಪ್ಪ ಮೂಲತಃ ರಂಗಭೂಮಿ ಹಾಗೂ ಜಾನಪದ ಕಲಾವಿದ. ತಂದೆ ಕೃಷಿಕರಾದರೂ  ಘಟಂ ಕಲಾವಿದ ಹಾಗೂ ಪೌರಾಣಿಕ ನಾಟಕಗಳಲ್ಲಿ ಸ್ತ್ರೀಪಾತ್ರಗಳಲ್ಲಿ ಅಭಿನಯಿಸುತ್ತಿದ್ದರಂತೆ. ತಾಯಿ ಸೋಬಾನೆ ಪದಗಳನ್ನು ಹಾಡುವ ಕಲಾವಿದೆ. ಅದರಿಂದ ನಂಜಪ್ಪ ಅವರಲ್ಲಿ ಕಲೆ ರಕ್ತಗತವಾಗಿ ಬಂದಿದೆ. ಊರಿನ ಜಾತ್ರೆಯಲ್ಲಿ ನಡೆಯುತ್ತಿದ್ದ ರಂಗಗೀತೆ, ರಂಗಕುಣಿತ, ಜಾನಪದ ಗೀತೆ, ಕೋಲಾಟ, ಸೋಮನ ಕುಣಿತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಭಾವ ಅವರನ್ನು ಕಲೆಯತ್ತ ಸೆಳೆದಿದೆ.ಆದರೂ ಶಿಕ್ಷಣವನ್ನೂ ನಿಲ್ಲಿಸದೆ ಎಂ.ಕಾಂ ಪದವಿ ಪಡೆದಿರುವ ಅವರು ನಾಟಕ, ಜಾನಪದ ಲೋಕ ವಿಷಯಗಳಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ಬಣ್ಣಹಚ್ಚಿದ ಅವರು `ಕುಂಟಾ ಕುಂಟಾ ಕುಂಟಾ ಕುರುವತ್ತಿ', `ಪೊಲೀಸರಿದ್ದಾರೆ ಎಚ್ಚರಿಕೆ', `ಶೂದ್ರ ತಪಸ್ವಿ' ನಾಟಕಗಳಲ್ಲಿ ಅಭಿನಯಿಸಿದ್ದರು. ಅನೇಕ ಸ್ಪರ್ಧೆಗಳಲ್ಲಿ ಉತ್ತಮ ನಟ, ಹಾಸ್ಯ ನಟ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಅಲ್ಲದೆ `ಸಂಗ್ರಾಮದ ಆ ಘಳಿಗೆ' ನಾಟಕವನ್ನು ಸ್ವತಃ ನಿರ್ದೇಶಿಸಿದ್ದರು.ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಜಾನಪದ ಗೀತೆಯೊಂದಿಗೆ ಸೋಮನ ಕುಣಿತ ಪ್ರದರ್ಶಿಸಿ ರಾಜ್ಯ ಸರ್ಕಾರದಿಂದ ಚಿನ್ನದ ಪದಕ ಹಾಗೂ 1 ಲಕ್ಷವನ್ನು ಪ್ರಥಮ ಬಹುಮಾನವಾಗಿ ಪಡೆದುಕೊಂಡಿದ್ದಾರೆ.ನಟನೆ ಹಾಗೂ ನಿರ್ದೇಶನದ ನಡುವೆ ಮಾತೃಭೂಮಿ ಯುವಕ ಸಂಘ ಕಟ್ಟಿ, ಯುವ ಜನ ಸೇವಾ ಇಲಾಖೆಯ ಸಹಯೋಗದಲ್ಲಿ ಕ್ರೀಡೆ, ಸೇವೆ, ಜಾನಪದ ಕಲೆಗೆ ಸಂಬಂಧಿಸಿದಂತೆ ಗ್ರಾಮೀಣ ಹಾಗೂ ನಗರಪ್ರದೇಶಗಳಲ್ಲಿ ತರಬೇತಿ ಕಾರ್ಯ ನಿರ್ವಹಿಸುತ್ತಿರುವ ಅವರಿಗೆ ಇನ್ನಷ್ಟು ಸಾಧಿಸುವ ಛಲವಿದೆ.

`ಪಾಯಿಂಟ್ ಪರಿಮಳ', `ಕಿಲ ಕಿಲ', `ಪಾರ್ವತಿ ಪರಮೇಶ್ವರ', `ಪಾಂಡುರಂಗ ವಿಠ್ಠಲ', `ಪ್ರೊ.ಹುಚ್ಚೂರಾಯ' ಅವರು ಅಭಿನಯಿಸಿದ ಧಾರಾವಾಹಿಗಳು. `ಗುಬ್ಬಚ್ಚಿಗಳು', `ಪಿಯುಸಿ' ಸಿನಿಮಾಗಳಲ್ಲೂ ನಟಿಸಿರುವ ಅವರಿಗೆ ಜನರಿಗೆ ತಲುಪುವಂಥ ಸಿನಿಮಾ ನಿರ್ದೇಶಿಸುವಾಸೆ.ಇಂದು (ಜ.12) ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ. ಈ ದಿನವನ್ನು `ರಾಷ್ಟ್ರೀಯ ಯುವಕರ ದಿನ'ವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಯುವಶಕ್ತಿಯ ಸದ್ಬಳಕೆ ಹೇಗೆ ನಡೆಯಬೇಕು ಎಂಬುದಕ್ಕೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಯುವಕರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಹೀಗೆ.ಹಳ್ಳಿಗಳಿಗೆ ತಂತ್ರಜ್ಞಾನ ಹೋಗಲಿ

ನೂತನ ತಂತ್ರಜ್ಞಾನಗಳ ಆವಿಷ್ಕಾರ ನಡೆದಿದ್ದರೂ ಇಂತಹ ತಂತ್ರಜ್ಞಾನಗಳ ಬಳಕೆಯಲ್ಲಿ ಗ್ರಾಮೀಣ ಪ್ರದೇಶಗಳು ಇಂದಿಗೂ ಹಿಂದುಳಿದಿವೆ. ಈ ತಂತ್ರಜ್ಞಾನವನ್ನು ಹಳ್ಳಿಗಳಿಗೆ ಕೊಂಡೊಯ್ಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಯುವಸಮೂಹ ನಿರ್ವಹಿಸಬೇಕು.

ಸರ್ಕಾರ ಶಿಕ್ಷಣ, ಕೃಷಿ, ಕೈಗಾರಿಕೆ ಹಾಗೂ ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ರೂಪಿಸಿ, ಹಣಕಾಸು ಬಿಡುಗಡೆ ಮಾಡಿರುತ್ತದೆ. ಇಂತಹ ಯೋಜನೆಗಳ ಸದುಪಯೋಗ ಹೇಗೆ ಮಾಡಿಕೊಳ್ಳಬೇಕು ಎಂಬ ಅರಿವು ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಕಡಿಮೆಯೇ ಇದೆ. ಇವುಗಳ ಬಗ್ಗೆ ಜಾಗೃತಿ ಮೂಡಿಸಿದಾಗ ಜನರು ತಮ್ಮ ಹಕ್ಕುಗಳನ್ನು ಅರಿತು ಸೌಲಭ್ಯಗಳನ್ನು ಪಡೆಯಲು ಮುಂದಾಗುತ್ತಾರೆ. ಇದರಿಂದ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಯೋಜನೆಗಾಗಿ ಮೀಸಲಿರಿಸಿದ ಹಣದ ದುರುಪಯೋಗವಾಗುವುದನ್ನೂ ತಡೆಗಟ್ಟಬಹುದು.

-ಎನ್.ಚಂದ್ರಶೇಖರ್, ಸಾಫ್ಟ್‌ವೇರ್ ಎಂಜಿನಿಯರ್ಸಾಂಸ್ಕೃತಿಕ ಚಟುವಟಿಕೆಗಳ ದಾರಿದೀಪ

ಜೀವನದಲ್ಲಿ ಸಾಧನೆ ಮಾಡದಿದ್ದರೂ ಪರವಾಗಿಲ್ಲ. ಆದರೆ ಯಾರಿಗೂ ಕೆಟ್ಟದ್ದನ್ನು ಬಯಸಬಾರದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಇಂತಹ ಸಾಮಾನ್ಯ ನಡವಳಿಕೆಗಳ ಬಗ್ಗೆ ಯುವಕರು ಸದಾ ಎಚ್ಚರದಿಂದ ಇರಬೇಕು.

ನಾನು ಮೂಲತಃ ಜಾನಪದ ಕಲಾವಿದನಾಗಿದ್ದು, ಜಾನಪದ ಶೈಲಿಯನ್ನು ಬಳಸಿಕೊಂಡು ಅನೇಕ ಮಹಾತ್ಮರ ಆದರ್ಶ ಮತ್ತು ವಿಚಾರಗಳನ್ನು, ಮಕ್ಕಳು ಹಾಗೂ ಯುವಕರಿಗೆ ಮುಟ್ಟಿಸುವಂತಹ ಕೆಲಸ ಮಾಡುತ್ತಿದ್ದೇನೆ. ನಾವು ಕಟ್ಟಿರುವ ಯುವಕ ಸಂಘದಿಂದ ಚಿತ್ರಕಲಾ ಸ್ಪರ್ಧೆ, ದೇಶಭಕ್ತಿ ಗೀತೆ, ಚರ್ಚಾ ಸ್ಪರ್ಧೆಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಜನಸಮೂಹಕ್ಕೆ ಜಾಗೃತಿ ಮೂಡಿಸುವಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಪರಿಣಾಮಕಾರಿ ಅಸ್ತ್ರವಾಗಬಲ್ಲವು ಎಂಬುದು ನನ್ನ ನಂಬಿಕೆ.

-ಟಿ.ಎನ್.ಲಕ್ಷ್ಮಣ್, ಕಲಾವಿದಚಿಂತನಾಶೀಲರ ಕೊರತೆ

ನಮ್ಮ ಸುತ್ತಲಿನ ಪರಿಸರದ ಆಗುಹೋಗುಗಳಿಗೆ ಸ್ಪಂದಿಸುವಂತಹ ಗುಣವನ್ನು ಯುವಸಮೂಹ ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಕಾಣಸಿಗುತ್ತಿದ್ದ ಚಿಂತನಾಶೀಲ ಯುವಸಮೂಹದ ಕೊರತೆಯನ್ನು ನಾವಿಂದು ಎದುರಿಸುತ್ತಿದ್ದೇವೆ. ಜಾಗತಿಕ ಬದಲಾವಣೆಗಳಿಂದ ಪ್ರತಿಯೊಬ್ಬ ವ್ಯಕ್ತಿಯ ಆಯ್ಕೆಯಲ್ಲೂ ಅಪಾರ ವ್ಯತ್ಯಾಸಗಳು ಕಂಡುಬರುತ್ತಿವೆ. ನಮ್ಮಲ್ಲಿರುವ ಸಂಕುಚಿತ ಮನೋಭಾವವನ್ನು ತೊರೆದು ಉದಾರವಾಗಿ ಚಿಂತಿಸುವ ಅಗತ್ಯವಿದೆ.

-ಸಾಕ್ಷಿ, ಕಾನೂನು ವಿದ್ಯಾರ್ಥಿನಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ`ಜನಪ್ರತಿನಿಧಿಗಳ ಆಯ್ಕೆಗೆ ಪಣತೊಡಿ'

ಯುವಕರಿಗೆ ದೇಶದಲ್ಲಿ ಬದಲಾವಣೆ ತರುವ ಅಗಾಧ ಶಕ್ತಿ ಇದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಈ ಮಾತು ಅಕ್ಷರಶಃ ಸತ್ಯ. ಆದರೆ ಇಂದು ಯುವಶಕ್ತಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ. ಸಾಮಾಜಿಕ ಘಟನೆಗಳಿಗೆ ಯುವಜನಾಂಗ ಹೆಚ್ಚು ಹೆಚ್ಚು ಸ್ಪಂದಿಸುತ್ತಿರುವುದೇನೊ ನಿಜ. ಆದರೆ ವಿಷಯದಲ್ಲಿ ಸ್ಪಷ್ಟತೆ ಹಾಗೂ ಮಾರ್ಗದರ್ಶನ ಇದ್ದಲ್ಲಿ ಅವರ ಹೋರಾಟಗಳು ಇನ್ನೂ ಪರಿಣಾಮಕಾರಿಯಾಗಿರುತ್ತಿದ್ದವು.

ಯಾವುದೇ ಸಮಸ್ಯೆಗಳ ಬಗೆಗಿನ ಯುವಕರ ಧ್ವನಿ ಗುಂಪಲ್ಲಿ ಗೋವಿಂದ ಎಂಬಂತೆ ಆಗಬಾರದು. ನಿರ್ದಿಷ್ಟ ಗುರಿಯೊಂದಿಗೆ ಕಾರ್ಯ ನಿರ್ವಹಿಸಬೇಕು. ಚುನಾವಣೆ ಸಮೀಪಿಸುತ್ತಿದ್ದು, ಭ್ರಷ್ಟಾಚಾರರಹಿತ ವ್ಯಕ್ತಿಗಳನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಲು ಚಿಂತಿಸಬೇಕು. ಜಾತಿ ತಾರತಮ್ಯ ಭಾವನೆ, ಮಹಿಳೆಯರ ಬಗೆಗಿನ ಕೀಳರಿಮೆ ಮನೋಭಾವಗಳನ್ನು ತೊರೆಯಬೇಕು. ಎಲ್ಲರ ಅಭಿಪ್ರಾಯಗಳನ್ನು ಗೌರವಿಸುವಂತಹ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು.

-ಜನಾರ್ದನ,  ಕಾನೂನು ವಿದ್ಯಾರ್ಥಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry