ಸೋಮವಾರ, ಅಕ್ಟೋಬರ್ 21, 2019
24 °C

ನಂಜಿ ಮಗನಿಗೆ ಭಾರೀ ಡಿಮ್ಯಾಂಡ್

Published:
Updated:

ತುಮಕೂರು: ತಿಪಟೂರು ತಾಲ್ಲೂಕು ಕೊನೆಹಳ್ಳಿ ಅಮೃತ್‌ಮಹಲ್ ಕಾವಲ್‌ನಲ್ಲಿ ಬುಧವಾರ ಪಶು ಸಂಗೋಪನಾ ಇಲಾಖೆ ನಡೆಸಿದ ಅಮೃತ್‌ಮಹಲ್ ಹೋರಿಗಳ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 20 ಜೊತೆ ಹೋರಿಗಳು ರೂ. 15 ಲಕ್ಷಕ್ಕೆ ಮಾರಾಟ ವಾದವು.ನಂಜಿ ಮತ್ತು ಮರಿಗಿಡ್ಡ ತಳಿ ವಂಶಕ್ಕೆ ಸೇರಿದ ನಂಜಿಗಂಡು- ಮರಿಗಿಡ್ಡಗಂಡು ಜೋಡಿಯನ್ನು ಚಳ್ಳಕೆರೆ ತಾಲ್ಲೂಕು ನೆಲಗಿತ್ನಹಟ್ಟಿಯ ಓಬಪ್ಪ ಚಿನ್ನಯ್ಯ 1,20,120 ರೂಪಾಯಿಗೆ ಕೂಗಿ ಖರೀದಿಸಿದರು.ನಾರಾಯಣಿ ತಳಿಯ ಹೋರಿ ಜೊತೆಗೆ ರೂ. 90,500, ಚಿನ್ನಕ್ಕ ಮತ್ತು ಮದನಸರ ತಳಿಗೆ ಸೇರಿದ ಹೋರಿಕರುಗಳು ರೂ. 67,010ಕ್ಕೆ ಬಿಕರಿಯಾಗಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವು.ಅಮೃತ್‌ಮಹಲ್ ತಳಿಯನ್ನು ತಾಯಿಯ ವಂಶದಿಂದ ಗುರುತಿಸ ಲಾಗುತ್ತದೆ. ಕೆಲವು ನಿರ್ದಿಷ್ಟ ತಳಿವಂಶಕ್ಕೆ ಪ್ರತಿವರ್ಷ ಹೆಚ್ಚಿನ ಬೇಡಿಕೆ ಕಂಡು ಬರುತ್ತದೆ.ಖರೀದಿಗೆ ಬಂದಿದ್ದವರಲ್ಲಿ ಶೇ. 50ರಷ್ಟು ಜನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿಗೆ ಸೇರಿದವರು ಎನ್ನುವುದು ಗಮನಾರ್ಹ. ಉಳಿದಂತೆ ಹಾವೇರಿ, ಗದಗ, ಚಿತ್ರದುರ್ಗ, ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.ತಿಪಟೂರು ತಾಲ್ಲೂಕು ಸೂಬೂರು ಗ್ರಾಮದ ರೈತರು ಮೂರು ಜೊತೆ ಹೋರಿಗಳನ್ನು ಖರೀದಿಸಿದ್ದು ಮತ್ತೊಂದು ವಿಶೇಷ. ಒಟ್ಟಾರೆ ಬಿಡ್ ಧಾರಣೆ ಕಳೆದ ಬಾರಿಗಿಂತ ಮಂದವಾ ಗಿಯೇ ಇತ್ತು. ಬರದ ಹಿನ್ನೆಲೆಯಲ್ಲಿ ಹೋರಿಗಳ ಖರೀದಿಗೆ ರೈತರು ಹೆಚ್ಚು ಉತ್ಸಾಹ ತೋರಲಿಲ್ಲ.ಕಳೆದ ವರ್ಷ ಒಟ್ಟು 19 ಜೊತೆ ಹೋರಿ ಗಳನ್ನು ಮಾರಿದ್ದ ಪಶು ಸಂಗೋಪನಾ ಇಲಾಖೆ ರೂ. 12.58 ಲಕ್ಷ ಸಂಗ್ರಹಿಸಿತ್ತು. ಈ ಬಾರಿ 20 ಹೋರಿಗಳಿಗೆ ರೂ. 14.99 ಲಕ್ಷ ಗಳಿಸಿದೆ. ಸರಾಸರಿ ಲೆಕ್ಕಾಚಾರದಲ್ಲಿ ಒಂದು ಜೊತೆ ಹೋರಿಗೆ ರೂ. 74 ಸಾವಿರ ಸಿಕ್ಕಿದೆ.ಡಬಲ್ ಲಾಭ: ಕಳೆದ ವರ್ಷ ಬೀರೂರು ಅಮೃತ್‌ಮಹಲ್ ಕಾವಲ್‌ನಲ್ಲಿ ನಡೆದ ಹರಾಜಿ ನಲ್ಲಿ ರೂ. 85 ಸಾವಿರ ನೀಡಿ ಖರೀದಿಸಿದ್ದ ಜತೆ ಹೋರಿಯನ್ನು ಈ ಬಾರಿ ಕೊನೆಹಳ್ಳಿಯಲ್ಲಿ ರೂ. 1.58 ಲಕ್ಷಕ್ಕೆ ಮಾರಾಟ ಮಾಡಿದರು. ರೈತರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು.ಅಸಮಾಧಾನ: ಅಮೃತ್‌ಮಹಲ್ ತಳಿ ಅಭಿವೃದ್ಧಿ ಕುರಿತು ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. 2 ಹಲ್ಲಿರುವ ಎಳೆ ಕರುಗಳನ್ನೇ ಹರಾಜು ಮಾಡುತ್ತಿದ್ದಾರೆ. ಕೆಲವು ಕರುಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಕಾವಲ್‌ಗಳ ರಕ್ಷಣೆಗೆ ಹಾಗೂ ಪಶುಗಳ ಮೇವಿಗೆ ಸರ್ಕಾರ ಸೂಕ್ತ ಗಮನ ಹರಿಸುತ್ತಿಲ್ಲ. ಹೀಗಾಗಿ ರಾಸುಗಳಲ್ಲಿ ತಳಿ ವಂಶದ ಮೂಲ ಗುಣಗಳು ಕಂಡು ಬರುತ್ತಿಲ್ಲ. ಕಾವಲ್ ಸಮೃದ್ಧವಾಗಿದ್ದರೆ ಮಾತ್ರ ಒಳ್ಳೆ ಹೋರಿ ಸಿಗಲು ಸಾಧ್ಯ. ಆಗ ಬೀಜದ ಹೋರಿಗೆ ಒಳ್ಳೆ ಬೇಡಿಕೆ ಸಿಗುತ್ತೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ನೀರಸ ಪ್ರತಿಕ್ರಿಯೆ: ಹರಾಜಿಗಾಗಿ ತಿಪಟೂರು ತಾಲ್ಲೂಕಿನ ಕಾಟೇನಹಳ್ಳಿ, ಗಿಡ್ಡೇನಹಳ್ಳಿ, ಅಣ್ಣೇನಹಳ್ಳಿ ಹಾಗೂ ಗರೀಕೆರೆ ಗ್ರಾಮಗಳ ರೈತರು 128 ಜತೆ ಹೋರಿಗಳನ್ನು ಹೊಡೆದು ಕೊಂಡು ಬಂದಿದ್ದರು.ಕಾಕತಾಳೀಯವೆಂಬಂತೆ 128 ಹರಾಜುದಾರರು ನೋಂದಾಯಿಸಿಕೊಂಡಿ ದ್ದರು. ಆದರೆ ಕೇವಲ 38 ಹೋರಿಗಳು ಮಾತ್ರ ಮಾರಾಟವಾದವು.

`ಹಾಲು ಕೊಡೋ ಹಸುಗಳ ಹೊಟ್ಟೆಗೆ ಹಾಕೋ ಹೊತ್ಗೆ ಮೇಲೆ- ಕೆಳ್ಗೆ ನೋಡೋ ಹಂಗಾಗುತ್ತೆ. ಇನ್ನು ಎತ್ತುಗಳನ್ನು ನಿಭಾಯ್ಸಕ್ಕೆ ಆಗುತ್ತಾ? ಅದ್ಕೆ ಸಾಕೋರಿಗೆ ಮಾರಾಣ ಅಂತ ಹೊಡ್ಕೊಂಡು ಬಂದೆ~ ಎಂದು ರೈತರೊಬ್ಬರು ಪ್ರತಿಕ್ರಿಯಿಸಿದರು.

ಬರದ ಹಿನ್ನೆಲೆಯಲ್ಲಿ ಎತ್ತುಗಳನ್ನು ಕೊಳ್ಳಲು ರೈತರು ಹಿಂಜರಿಯುತ್ತಿದ್ದ ಕಾರಣ ಬಹಳಷ್ಟು ರಾಸುಗಳು ಮಾರಾಟವಾಗದೆ ಉಳಿದವು. ಸ್ಥಳೀಯ ರೈತರು ಸೇರಿದ್ದ ಸಂತೆಯಲ್ಲೂ ಅಮೃತ್‌ಮಹಲ್ ಮತ್ತು ಹಳ್ಳಿಕಾರ್ ತಳಿಯ ರಾಸು ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದವು.

Post Comments (+)