ಬುಧವಾರ, ಅಕ್ಟೋಬರ್ 23, 2019
24 °C

ನಂದವಾಡಗಿ ರಾಜಕೀಯ ಅಸ್ತ್ರ ಆಗದಿರಲಿ

Published:
Updated:

ಲಿಂಗಸುಗೂರ: ಈ ಭಾಗದ ಬಹುದಿನಗಳ ಕನಸಾದ ನಂದವಾಡಗಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲಿಸುತ್ತದೆ. ಆದರೆ, ಕಳೆದ ನಾಲ್ಕಾರು ವರ್ಷಗಳಿಂದ ಈ ಯೋಜನೆ ಹೆಸರು ಹೇಳಿಕೊಂಡು ಚುನಾವಣೆ ಪೂರ್ವದಲ್ಲಿ ಗಿಮಿಕ್ ಮಾಡುವ ಮೂಲಕ ಜನತೆಯನ್ನು ದಾರಿ ತಪ್ಪಿಸುವ ಯತ್ನ ಸರಿ ಅಲ್ಲ. ನಂದವಾಡಗಿ ಯೋಜನೆ ರಾಜಕೀಯ ಅಸ್ತ್ರವಾಗದಿರಲಿ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಾಮಯ್ಯ ಮುರಾರಿ ಎಚ್ಚರಿಕೆ ನೀಡಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸ್ಕಿ ಶಾಸಕ ಪ್ರತಾಪಗೌಡ ಮತ್ತು ಲಿಂಗಸುಗೂರ ಶಾಸಕ ಮಾನಪ್ಪ ವಜ್ಜಲ ವಿಧಾಸಭೆ ಅಧಿವೇಶನಗಳಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ಪ್ರಶ್ನಿಸದೆ, ಜನಸಾಮಾನ್ಯರ ಕಣ್ಣಿಗೆ ಮಣ್ಣೆರೆಚುವ ತಂತ್ರ ಬಳಸಿಕೊಂಡು ನಿಯೋಗದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ವಾಸ್ತವವಾಗಿ ಯೋಜನೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಸ್ಪಷ್ಟಪಡಿಸಲಿ ಎಂದು ನುಡಿದರು.ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನಂದವಾಡಗಿ ಏತ ನೀರಾವರಿ ಯೋಜನೆ ಸೇರಿದಂತೆ ಈ ಭಾಗದ ಅಭಿವೃದ್ಧಿ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತ ಬಂದಿದೆ. ನೀರಿನ ಹಂಚಿಕೆ ಆದೇಶ ಹೊರಡಿಸಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕಿದೆ. ರಾಜಕೀಯ ತಂತ್ರಗಾರಿಕೆಗೆ ರೈತರನ್ನು ಬಳಸಿಕೊಂಡರೆ ಕಾಂಗ್ರೆಸ್ ಸಹಿಸದು. ತಾವು ನಿಯೋಗ ಕೊಂಡೊಯ್ಯುವುದಿಲ್ಲ. ಶೀಘ್ರದಲ್ಲಿಯೆ ರೈತರ ಸಾರಥ್ಯದಲ್ಲಿ ಬೀದಿಗಿಳಿದು ಹೋರಾಟ ಮಾಡಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಭೂಪನಗೌಡ ಕರಡಕಲ್ಲ, ಮುಖಂಡರಾದ ಗುಂಡಪ್ಪ ನಾಯಕ, ಚೆನ್ನಾರೆಡ್ಡಿ, ಹನುಮಂತ ಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)