ಭಾನುವಾರ, ಆಗಸ್ಟ್ 18, 2019
23 °C

ನಂದಿಗಿರಿ ಪ್ರದಕ್ಷಿಣೆಗೆ ಜನವೋ ಜನ

Published:
Updated:

ಚಿಕ್ಕಬಳ್ಳಾಪುರ: ಥರಗುಟ್ಟುವ ಚಳಿ, ಜೋರಾಗಿ ಬೀಸುತ್ತಿದ್ದ ತಂಗಾಳಿ, ಆಗಾಗ್ಗೆ ಜಿನುಗುತ್ತಿದ್ದ ಮಳೆ, ಬರಿಗಾಲು ನಡಿಗೆ, ವಾಹನಗಳ ಸಂಚಾರ, ನಡುನಡುವೆ ಆಗುತ್ತಿದ್ದ ಆಯಾಸ, ಎಲ್ಲಿಯೂ ವಿಶ್ರಾಂತಿ ಪಡೆಯಲು ಬಯಸದ ಮನಸು, ರಾಮನ ಜಪ, ದೇವರ ಧ್ಯಾನ, ಒಂಟಿಯಾಗಿಯೇ ಮುನ್ನಡೆ, ಗುಂಪುಗುಂಪಿನಲ್ಲಿ ಭಜನೆ, ಏಳು ವರ್ಷದ ಪುಟಾಣಿಯಿಂದ ಎಪ್ಪತ್ತರ ಅಜ್ಜಿಯವರೆಗೆ ಉತ್ಸಾಹ...-ಇಂಥ ಭಾವ ಸಂಗಮದ ದೃಶ್ಯ ಗೋಚರಿಸಿದ್ದು ಸೋಮವಾರ ನಡೆದ ನಂದಿಗಿರಿ ಪ್ರದಕ್ಷಿಣೆಯಲ್ಲಿ. ಸುಮಾರು 14 ರಿಂದ 16 ಕಿ.ಮೀ.ವರೆಗಿನ ಈ ಪ್ರದಕ್ಷಿಣೆಯಲ್ಲಿ ಪಾಲ್ಗೊಂಡವರು 30 ಸಾವಿರಕ್ಕೂ ಹೆಚ್ಚು ಮಂದಿ. ಇವರೆಲ್ಲ ಬೇರೆ ಬೇರೆ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ಪ್ರದಕ್ಷಿಣೆಯಲ್ಲಿ ಪಾಲ್ಗೊಳ್ಳಲೆಂದೇ ಬಂದವರು.ಆಷಾಢ ಮಾಸದ ಕೊನೆಯ ಸೋಮವಾರದಂದು ಪ್ರತಿ ವರ್ಷ ನಡೆಯುವ ನಂದಿಗಿರಿ ಪ್ರದಕ್ಷಿಣೆಯಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಗ್ರಾಮಸ್ಥರಿಗಿಂತ ನಗರ ಮತ್ತು ಪಟ್ಟಣ ಪ್ರದೇಶದ ಜನರೇ ಹೆಚ್ಚಿದ್ದರು. ತಮ್ಮ ಎಲ್ಲ ಕೆಲಸ-ಜಂಜಾಟ ಎಲ್ಲವನ್ನೂ ಬದಿಗಿರಿಸಿ, ಅಪ್ಪಟ ದೈವಿಭಕ್ತರಾಗಿ ಭಾಗವಹಿಸಿದರು. ಕೆಲವರು ಒಂಟಿಯಾಗಿ ನಡೆದರೆ, ಇನ್ನೂ ಕೆಲವರು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ಹೆಜ್ಜೆ ಹಾಕಿದರು.ನಸುಕಿನ 6 ಗಂಟೆ ಸುಮಾರಿಗೆ ಆರಂಭಗೊಂಡ ಪ್ರದಕ್ಷಿಣೆ ಮಧ್ಯಾಹ್ನ 12 ಗಂಟೆಯವರೆಗೆ ಮುಂದುವರಿಯಿತು. ಕೆಲವರು ಲಗುಬಗನೆ ಪ್ರದಕ್ಷಿಣೆ ಪೂರ್ಣಗೊಳಿಸಿದರೆ, ಇನ್ನೂ ಕೆಲವರು ಭಜನಾ ತಂಡಗಳ ಜೊತೆ ರಾಮನ ಜಪ ಮಾಡುತ್ತ ನಿಧಾನವಾಗಿ ನಡೆದರು. ಚಳಿ, ಅಲ್ಲಲ್ಲಿ ಮಳೆ, ಮೋಡ ಕವಿದಿದ್ದರೂ ಅದ್ಯಾವುದರತ್ತ ಗಮನ ಕೊಡದೆ ದೇವರ ಕಡೆ ಲಕ್ಷ್ಯ ವಹಿಸಿದ್ದರು.ಇದು `ನಂದಿ' ಪ್ರದಕ್ಷಿಣೆಯಾದರೂ ಭಕ್ತರು ನಡೆಯುತ್ತ ನಂದಿಗಿರಿ ಸೇರಿದಂತೆ ಐದು ಗಿರಿಗಳ ದರ್ಶನ ಮಾಡುತ್ತಾರೆ. ನಂದಿ ಗ್ರಾಮದ ಭೋಗನಂದೀಶ್ವರ ದೇಗುಲದಿಂದ ಆರಂಭಗೊಳ್ಳುವ ಪ್ರದಕ್ಷಿಣೆ ಗೋಪಿನಾಥಗಿರಿ, ದಿಬ್ಬಗಿರಿ, ಬ್ರಹ್ಮಗಿರಿ ಮತ್ತು ಚನ್ನಗಿರಿ ದರ್ಶನದ ಮೂಲಕ ಸಾಗಿ ಹೋಗುತ್ತದೆ. ಭಕ್ತರು ಗಿರಿಗಳ ಸೊಬಗು ಸವಿಯುತ್ತ ಅಧ್ಯಾತ್ಮದಲ್ಲಿ ಲೀನರಾಗುತ್ತಾರೆ.ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಬೆಟ್ಟ ಸಮೀಪದ ಕಾರಹಳ್ಳಿ ಕ್ರಾಸ್ ಗಡಿಯನ್ನು ದೊಡ್ಡಬಳ್ಳಾಪುರ ತಾಲ್ಲೂಕು ಮೂಲಕ ಪ್ರವೇಶಿಸುವ ಭಕ್ತರು ಹೆಗ್ಗಡಹಳ್ಳಿ, ಗಾಂಧಿಪುರ, ಕಣಿವೆ ಬಸವಣ್ಣ, ಸುಲ್ತಾನ್‌ಪೇಟೆ ಮಾರ್ಗವಾಗಿ ಮಧ್ಯಾಹ್ನದ ವೇಳೆ ಪುನಃ ಭೋಗನಂದೀಶ್ವರ ದೇಗುಲಕ್ಕೆ ತಲುಪುತ್ತಾರೆ. ಅಲ್ಲಿ ಪೂಜೆ ಸಲ್ಲಿಸಿ, ಆವರಣದಲ್ಲಿ ಊಟ ಸೇವಿಸಿ ಮನೆಗೆ ಮರಳುತ್ತಾರೆ.ಭಕ್ತರಿಗೆ ಆಯಾಸವಾಗದಿರಲಿ ಎಂದೇ ದಾರಿಯುದ್ದಕ್ಕೂ ಅಲ್ಲಲ್ಲಿ ದಾನಿಗಳು ಪಾಕೆಟ್‌ಗಳಲ್ಲಿ ನೀರು ವಿತರಿಸುತ್ತಿದ್ದರು. ಕಾರಹಳ್ಳಿ ಕ್ರಾಸ್ ಬಳಿ ತಿಂಡಿ ವ್ಯವಸ್ಥೆ ಕೂಡ ಮಾಡಲಾಗಿತ್ತು. 14ರಿಂದ 16 ಕಿ.ಮೀ.ವರೆಗೆ ನಡೆಯುವುದು ಕಷ್ಟವೆನಿಸಿದರೂ ಭಕ್ತರು ಹಸನ್ಮುಖಿಯಾಗಿ, ಭಕ್ತಿಗೀತೆಗಳನ್ನು ಆಲಿಸುತ್ತ-ಹಾಡುತ್ತ ಸುತ್ತು ಪೂರ್ಣಗೊಳಿಸಿದರು.`ಈ ಪ್ರದಕ್ಷಿಣೆ ಇತ್ತೀಚಿನದ್ದಲ್ಲ. ಇದಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಹಿರಿಯರು ಹೇಳುವ ಪ್ರಕಾರ, 1938ರಿಂದ ನಂದಿಗಿರಿ ಪ್ರದಕ್ಷಿಣೆ ಎಂಬುದು ಆರಂಭಗೊಂಡಿತು. ಈಗಿನಂತೆ ಆಗ ಪ್ರಚಾರ ಮಾಡಲು ವ್ಯವಸ್ಥ ಇರಲಿಲ್ಲವಾದರೂ ಸುಮಾರು 30 ರಿಂದ 40 ಮಂದಿ ಭಕ್ತರು ಭಾಗವಹಿಸಿದ್ದರು. ನಂತರ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿತು.ಆದರೆ ಮತ್ತೆ 1992ರಲ್ಲಿ ಪ್ರದಕ್ಷಿಣೆ ಆರಂಭಗೊಂಡಿತು. ಆಗನಿಂದ ಈಗಿನವರೆಗೆ ನಿರಾತಂಕವಾಗಿ ಪ್ರಕ್ರಿಯೆ ನಡೆಯುತ್ತಿದೆ. ಈಗ ನಂದಿಗಿರಿ ಪ್ರದಕ್ಷಿಣೆ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಪ್ರದಕ್ಷಿಣೆ ನಡೆಯುತ್ತದೆ' ಎಂದು ನಂದಿ ಗ್ರಾಮದ ನಿವಾಸಿ ಸೋಮಶೇಖರ್ `ಪ್ರಜಾವಾಣಿ'ಗೆ ತಿಳಿಸಿದರು.

Post Comments (+)