ನಂದಿತಾ ರಂಗಪ್ರೀತಿ

5

ನಂದಿತಾ ರಂಗಪ್ರೀತಿ

Published:
Updated:

ರಂಗಭೂಮಿಯಿಂದ ಸಿನಿಮಾ ಲೋಕಕ್ಕೆ ಕಾಲಿಟ್ಟವರು ಮತ್ತೆ ಅದರತ್ತ ವಾಲುವುದು ಕಡಿಮೆ. ಅಂಥದ್ದರಲ್ಲಿ ಬಾಲಿವುಡ್ ನಟಿ ನಂದಿತಾ ದಾಸ್ ಅವರಿಗೆ ಈಗ ನಾಟಕದಲ್ಲಿ ಒಲವು ಮೂಡಿದೆಯಂತೆ.

`ಬಿಟ್ವೀನ್ ದಿ ಲೈನ್ಸ್' ಎಂಬ ನಾಟಕವನ್ನು ರಚಿಸಿ, ನಿರ್ದೇಶಿಸುತ್ತಿರುವ ನಂದಿತಾಗೆ ನಾಟಕ ಹೊಚ್ಚ ಹೊಸ ಅನುಭವಗಳನ್ನೇ ತೆರೆದಿಟ್ಟಿದೆಯಂತೆ.ವಿನೂತನ, ವಿಭಿನ್ನ ಪಾತ್ರಗಳನ್ನು ನಿರ್ವಹಿಸುವಲ್ಲಿ ಹಿಂದೇಟು ಹಾಕದ ನಂದಿತಾ `ಫೈರ್', `1947: ಅರ್ಥ್' ಮತ್ತು `ಪ್ರೊವೋಕ್ಡ್' ಸಿನಿಮಾಗಳಲ್ಲಿ ಅತಿ ಪರಿಣಾಮಕಾರಿ ನಟನೆಯಿಂದ ಗಮನ ಸೆಳೆದ ನಟಿ. ಬಾಲಿವುಡ್‌ನ ಮೈ ಕುಣಿಸುವ ನೃತ್ಯದಿಂದಾಚೆಗೂ ತಮ್ಮ ನಟನಾ ಶೈಲಿಯಿಂದಲೇ ಹೆಚ್ಚು ಗುರುತಿಸಿಕೊಂಡವರು.

ನಟನೆಯನ್ನು ಹೊರತುಪಡಿಸಿ `ಫಿರಾಖ್' ಚಿತ್ರದ ನಿರ್ದೇಶನದೊಂದಿಗೆ ಸಿನಿಮಾ ಚೌಕಟ್ಟನ್ನು ಮತ್ತಷ್ಟು ವಿಸ್ತರಿಸಿಕೊಂಡ ನಂದಿತಾ ಇದೀಗ ನಾಟಕದತ್ತಲೂ ಚಿತ್ತ ಹರಿಸಿದ್ದಾರೆ.ನಾಟಕ, ಸಿನಿಮಾಗಿಂತ ಭಿನ್ನ ಮಾಧ್ಯಮ ಎನ್ನುವ ಅವರು `ಫಿರಾಕ್' ನಿರ್ದೇಶನಕ್ಕೂ, `ಬಿಟ್ವೀನ್ ದಿ ಲೈನ್ಸ್' ನಿರ್ದೇಶನಕ್ಕೂ ಸಾಕಷ್ಟು ವ್ಯತ್ಯಾಸ ಕಂಡುಕೊಂಡಿದ್ದಾರಂತೆ. ತಮ್ಮದೇ ಅನುಭವಗಳನ್ನು ತಂದರೆ ನಾಟಕ ಇನ್ನಷ್ಟು ಪರಿಣಾಮಕಾರಿಯಾಗಿರುತ್ತದೆ ಎನ್ನುವ ಅಂಶವೂ ಅವರ ಗಮನಕ್ಕೆ ಬಂದಿದೆಯಂತೆ. ಈ ಅಂಶಗಳಿಂದಲೇ ಸಿನಿಮಾ, ನಾಟಕದ ನಡುವಿನ ಹೋಲಿಕೆ ಅತಿ ಕ್ಲಿಷ್ಟಕರವೆನಿಸುತ್ತದೆ ಎನ್ನುವ ನಂದಿತಾ ಎರಡಕ್ಕೂ ಸಮಾನ ಆದ್ಯತೆ ನೀಡುತ್ತಾರೆ.

`ನಾನು ಯಾವುದೇ ಪೂರ್ವತಯಾರಿ ಮಾಡಿಕೊಳ್ಳದೇ ಹೊಸ ದಾರಿ ಹಿಡಿಯುತ್ತಿರುತ್ತೇನೆ. ಹೊಸ ಕ್ಷೇತ್ರಕ್ಕೆ ಹೋಗುತ್ತಿರುತ್ತೇನೆ. ಆದ್ದರಿಂದ ಇದೇ ನನ್ನ ಮೊದಲ ಆದ್ಯತೆ ಎಂದು ಪ್ರತ್ಯೇಕವಾಗಿ ಹೇಳಲು ಸಾಧ್ಯವಿಲ್ಲ. ಈ ಕ್ಷಣ ನನಗೆ ನಾಟಕ ಸುಲಭ ಮಾಧ್ಯಮ ಎನಿಸುತ್ತಿದೆ, ಆದರೆ ಅದೂ ಸ್ವಂತ ಅನುಭವದಿಂದ ತೆರೆದುಕೊಳ್ಳಬೇಕಷ್ಟೆ.ನಾನು ಊಹಿಸಿದಷ್ಟು ನಾಟಕ ಸರಳವಲ್ಲ ಎಂಬುದೂ ಗೊತ್ತಿದೆ. ಆದರೆ ಅದು ಜೀವಂತ ಮಾಧ್ಯಮ, ದಿನದಿನವೂ ಕ್ರಿಯಾಶೀಲತೆಗೆ ತೆರೆದುಕೊಳ್ಳುವ ಅವಕಾಶ ಇದರಲ್ಲೇ ಹೆಚ್ಚು ಎಂದಷ್ಟೇ ಹೇಳಬಲ್ಲೆ. ಸಿನಿಮಾ ಸ್ವರೂಪವೇ ಬೇರೆಯದ್ದು. ಒಮ್ಮೆ ಮಾಡಿ ಮುಗಿಸಿದ ಮೇಲೆ ಅಲ್ಲಿ ಬದಲಾವಣೆ ಅಸಾಧ್ಯ' ಎಂದು ತಮ್ಮದೇ ವ್ಯಾಖ್ಯಾನವನ್ನು ನಗುತ್ತಾ ನೀಡುತ್ತಿದ್ದರು.ಬಾಲಿವುಡ್‌ನಲ್ಲಿ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಆ ಕುರಿತು ನಂದಿತಾ ನೀಡುವ ಪ್ರತಿಕ್ರಿಯೆ ಹೀಗಿದೆ:  `ಸಿನಿಮಾ ಕ್ಷೇತ್ರ ಬದಲಾಗುತ್ತಲೇ ಇರುತ್ತದೆ. 80ರ ದಶಕದಲ್ಲಿದ್ದ ಯೋಚನಾ ಲಹರಿಯೇ ಬೇರೆ. ಈಗಿರುವುದೇ ಬೇರೆ. ಬದಲಾವಣೆ ಎಂದಿಗೂ ಸತ್ಯ. ಇಂದಿನ ಚಿತ್ರಕ್ಕೆ ಹೋಲಿಸಿದರೆ ತುಂಬಾ ಹಳೆಯ ಸಿನಿಮಾಗಳಲ್ಲಿ ಪ್ರಗತಿಯ ಅಂಶಗಳು ಹೆಚ್ಚಿದ್ದವು ಎನಿಸುತ್ತದೆ. ಈಗ ಎಲ್ಲವೂ ಕಮರ್ಷಿಯಲ್. ಚಿಕ್ಕ ಚಿಕ್ಕ ಸಿನಿಮಾಗಳೂ ದೈತ್ಯರೊಂದಿಗೆ ಸೆಣೆಸಾಡುವ ಸಂದರ್ಭ ಇದು. ಹೀಗಿದ್ದ ಮೇಲೆ ಇಲ್ಲಿ ಉಳಿಗಾಲ ಹೇಗೆ ಸಾಧ್ಯ?'ನಿರ್ಮಾಣ ಸಂಸ್ಥೆಯನ್ನೂ ಕಟ್ಟಿರುವ ನಂದಿತಾ ಅವರ ಮನಸ್ಸಿನಲ್ಲೂ ಕಮರ್ಷಿಯಲ್ ಉದ್ದೇಶ ಇರಬಹುದೇ ಎಂಬ ಪ್ರಶ್ನೆ ಮೂಡುತ್ತದೆ. ಈ ಕುರಿತು ಅವರು ಹೇಳುವುದು: `ನನ್ನ ಆಸೆ ನಾಟಕವನ್ನು ಜೀವಂತವಾಗಿರಿಸಬೇಕೆಂಬುದು. ಈಗ ಹಲವು ನಾಟಕ ಕಂಪೆನಿಗಳು ತಮ್ಮ ಉಳಿವಿಗಾಗಿ ಒದ್ದಾಡುತ್ತಿವೆ. ಇನ್ನಿತರ ಕಂಪೆನಿಗಳು ಅದನ್ನು ಪ್ರವೃತ್ತಿಯಾಗಿಯಷ್ಟೇ ಮುಂದುವರಿಸಿಕೊಂಡು ಹೋಗುತ್ತಿವೆ. ನಾನು ನಾಟಕವನ್ನು ಪ್ರೀತಿಯಿಂದಷ್ಟೇ ಕಾಣುತ್ತಿದ್ದೇನೆ. ಅದರಲ್ಲಿ ಕಮರ್ಷಿಯಲ್ ಉದ್ದೇಶವಿದ್ದರೂ ಗುಣಮಟ್ಟದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿಲ್ಲ' ಎಂದು ಉತ್ತರಿಸಿದರು.ಸಿನಿಮಾ ಇರಲಿ, ನಾಟಕ ಇರಲಿ, ಉದ್ದೇಶ ನಿಖರವಾಗಿದ್ದರೆ ಅದು ಉತ್ತಮವಾಗಿ ಮೂಡಿಬರುತ್ತದೆ ಎಂಬ ಸಲಹೆ ನೀಡಿದ ನಂದಿತಾ, `ಒಂದು ಸಿನಿಮಾದಲ್ಲಿ ಪ್ರೇಕ್ಷಕನನ್ನು ನಗಿಸುವುದಷ್ಟೇ ಮುಖ್ಯವಲ್ಲ. ಆ ಪಾತ್ರದಲ್ಲೇ ಅವನನ್ನು ಒಂದಾಗಿಸಬೇಕು. ಅದರಲ್ಲೇ ನಮ್ಮ ವಿಭಿನ್ನತೆ ಇರುವುದು' ಎಂದೂ ಮಾತು ಸೇರಿಸುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry